ಪದ್ಯ ೩: ಕರ್ಣನು ಯಾವ ಕೀರ್ತಿಯನ್ನು ಕಳೆದುಕೊಳ್ಳುವುದಿಲ್ಲನೆಂದ?

ಆಡಿದರೆ ಚಿತ್ತದಲಿ ಖತಿಯನು
ಮಾಡಬೇಡೆಲೆ ತಾತ ತನಗೀ
ಗೂಡಿನಲಿ ಸುಖವಿಲ್ಲ ಕಾಮಾದಿಗಳಿಗಾಶ್ರಯದ
ಮಾಡಿ ದೃಢವನು ಶಿಬಿದಧೀಚಿಯ
ಕೂಡಿದೀ ಜೀಮೂತವಾಹನ
ರೂಢಿಗಿವರೊಳಗಿರ್ದ ಕೀರ್ತಿಯನಳಿವನಲ್ಲೆಂದ (ಅರಣ್ಯ ಪರ್ವ, ೨೩ ಸಂಧಿ, ೩ ಪದ್ಯ)

ತಾತ್ಪರ್ಯ:
ತಂದೆ, ನನ್ನ ಮಾತನ್ನು ಕೇಳಿ ನೀನು ಸಿಟ್ಟಾಗಬೇಡ. ಕಾಮಾದಿಗಳಿಗೆ ಆಶ್ರಯವಾದ ಈ ದೇಹವೆಂಬ ಗೂಡಿನಲ್ಲಿ ಸುಖವಿಲ್ಲ. ಶಿಬಿ, ದಧೀಚಿ, ಜೀಮೂತವಾಹನರು ಈ ಲೋಕದಲ್ಲಿ ದಾನಶೂರರೆಂದು ಪ್ರಸಿದ್ಧಿಯಾಗಿರುವರಷ್ಟೇ, ಅಂತಹ ಕೀರ್ತಿಯನ್ನು ನಾನು ಕಳೆದುಕೊಳ್ಳುವುದಿಲ್ಲ.

ಅರ್ಥ:
ಆಡು: ಮಾತಾಡು; ಚಿತ್ತ: ಮನಸ್ಸು; ಖತಿ: ಕೋಪ; ತಾತ: ತಮ್ದೆ; ಗೂಡು: ಮನೆ; ಸುಖ: ಸಂತಸ; ಕಾಮ: ಆಸೆ; ಆದಿ: ಮುಂತಾದ; ಆಶ್ರಯ: ನೆಲೆ; ದೃಢ: ಗಟ್ಟಿಯಾದ; ಕೀರ್ತಿ: ಯಶಸ್ಸು; ಅಳಿ: ನಾಶ;

ಪದವಿಂಗಡಣೆ:
ಆಡಿದರೆ +ಚಿತ್ತದಲಿ +ಖತಿಯನು
ಮಾಡಬೇಡ್+ಎಲೆ +ತಾತ+ ತನಗೀ
ಗೂಡಿನಲಿ+ ಸುಖವಿಲ್ಲ+ ಕಾಮಾದಿಗಳಿಗ್+ಆಶ್ರಯದ
ಮಾಡಿ +ದೃಢವನು +ಶಿಬಿ+ದಧೀಚಿಯ
ಕೂಡಿದ್+ಈ +ಜೀಮೂತವಾಹನ
ರೂಢಿಗ್+ಇವರೊಳಗಿರ್ದ +ಕೀರ್ತಿಯನ್+ಅಳಿವನಲ್ಲೆಂದ

ಅಚ್ಚರಿ:
(೧) ಕರ್ಣನು ನೆನೆದ ಆದರ್ಶ ವ್ಯಕ್ತಿಗಳು – ಶಿಬಿ, ದಧೀಚಿ, ಜೀಮೂತವಾಹನ

ಪದ್ಯ ೧೮: ಲೋಮಶನು ಧರ್ಮಜನಿಗೆ ಯಾವ ಕಥೆಗಳನ್ನು ಹೇಳಿದನು?

ಸೋಮಕನ ಚರಿತವ ಮರುತ್ತಮ
ಹಾಮಹಿಮಾನಾಚಾರ ಧರ್ಮ
ಸ್ತೋಮವನು ವಿರಚಿಸಿ ಯಯಾತಿಯ ಸತ್ಕಥಾಂತರವ
ಭೂಮಿಪತಿ ಕೇಳಿದನು ಶಿಬಿಯು
ದ್ದಾಮತನವನು ತನ್ನ ಮಾಂಸವ
ನಾ ಮಹೇಂದ್ರಾದಿಗಳಿಗಿತ್ತ ವಿಚಿತ್ರ ವಿಸ್ತರವ (ಅರಣ್ಯ ಪರ್ವ, ೧೦ ಸಂಧಿ, ೧೮ ಪದ್ಯ)

ತಾತ್ಪರ್ಯ:
ಸೋಮಕನ ಚರಿತ್ರೆ, ಮರುತ್ತನ ಆಚಾರ, ಧರ್ಮದ ಆಚರಣೆ, ಯಯಾತಿಯ ಸತ್ಕಥೆ, ಶಿಖಿಯು ದೇವೆಂದ್ರನಿಗೆ ಮಾಂಸವನ್ನೇ ದಾನ ಮಾಡಿದ್ದು, ಮೊದಲಾದ ಅನೇಕ ವಿಚಿತ್ರ ಕಥೆಗಳ ಪ್ರಸಂಗವನ್ನು ಲೋಮಶನು ಧರ್ಮಜನಿಗೆ ಹೇಳಿದನು.

ಅರ್ಥ:
ಚರಿತ: ಕಥೆ; ಮಹಿಮ: ಹಿರಿಮೆ ಯುಳ್ಳವನು, ಮಹಾತ್ಮ; ಆಚಾರ: ಕಟ್ಟುಪಾಡು, ಸಂಪ್ರದಾಯ; ಸ್ತೋಮ: ಗುಂಪು, ಸಮೂಹ; ವಿರಚಿಸು: ನಿರ್ಮಿಸು; ಭೂಮಿಪತಿ: ರಾಜ; ಭೂಮಿ: ಇಳೆ; ಉದ್ಧಾಮ: ಶ್ರೇಷ್ಠ; ಮಾಂಸ: ಅಡಗು; ಮಹೇಂದ್ರ: ಇಂದ್ರ; ವಿಚಿತ್ರ: ಆಶ್ಚರ್ಯಕರವಾದ; ವಿಸ್ತರ:ಹಬ್ಬುಗೆ, ವಿಸ್ತಾರ;

ಪದವಿಂಗಡಣೆ:
ಸೋಮಕನ+ ಚರಿತವ +ಮರುತ್ತ+ಮ
ಹಾಮಹಿಮನ್+ಆಚಾರ +ಧರ್ಮ
ಸ್ತೋಮವನು +ವಿರಚಿಸಿ +ಯಯಾತಿಯ +ಸತ್ಕಥಾಂತರವ
ಭೂಮಿಪತಿ +ಕೇಳಿದನು +ಶಿಬಿ
ಉದ್ದಾಮ+ತನವನು +ತನ್ನ +ಮಾಂಸವನ್
ಆ+ಮಹೇಂದ್ರಾದಿಗಳಿಗಿತ್ತ+ ವಿಚಿತ್ರ +ವಿಸ್ತರವ

ಅಚ್ಚರಿ:
(೧) ಸೋಮಕ, ಮರುತ್ತ, ಯಯಾತಿ, ಶಿಬಿ – ಕಥಾನಾಯಕರ ಹೆಸರುಗಳು

ಪದ್ಯ ೧೯: ಕುಂತಿ ಯಾವ ಉದಾಹರಣೆ ನೀಡಿ ತನ್ನ ಮಗನನ್ನು ಕಳುಹಿಸಲು ಒಪ್ಪಿಸಿದಳು?

ಏನನಿತ್ತು ದಧೀಚಿ ಲೋಗರ
ಹಾನಿಯನು ಕಾಯಿದನು ಶಿಬಿತಾ
ನೇನನಿತ್ತನು ಕೇಳಿದೈ ಜೀಮೂತವಾಹನನು
ಏನ ಮಾಡಿದನೆಂದು ನೀನಿದ
ನೇನುವನು ಕೇಳ್ದರಿಯಲಾ ಮ
ತ್ಸೂನುವನು ನಿನ್ನವಸರಕೆ ಕೊಳ್ಳೆಂದಳಾ ಕುಂತಿ (ಆದಿ ಪರ್ವ, ೧೦ ಸಂಧಿ, ೧೯ ಪದ್ಯ)

ತಾತ್ಪರ್ಯ:
ಬ್ರಾಹ್ಮಣನು ಕುಂತಿ ನೀವು ದೇವತೆಯೆ ಸರಿ ಎಂದು ವಿನಮ್ರದಿಂದ ಹೇಳಲು, ಕುಂತಿ ಆ ಬ್ರಾಹ್ಮಣನಿಗೆ ಅರ್ಥಮಾಡಿಸಲು ಕೆಲ ಉದಾಹರಣೆಗಳನ್ನು ನೀಡಿದಳು, ಏನನ್ನು ನೀಡಿ ದಧೀಚಿಯು ಲೋಕದ ಹಾನಿಯನ್ನು ತಪ್ಪಿಸಿದನು (ದಧೀಚಿಯು ತನ್ನ ಮೂಳೆಗಳನ್ನೇ ನೀಡಿ ದೇವತೆಗಳಿಗೆ ಆಯುಧಗಳನ್ನು ಒದಗಿಸಿದನು), ಶಿಬಿಯು ಏನನಿತ್ತನು? (ಶಿಬಿಯು ತನ್ನ ಮಾಂಸವನ್ನೇ ನೀಡಿ ಪಾರಿವಾಳವನ್ನು ರಕ್ಷಿಸಿದನು), ಜೀಮೂತವಾಹನನು ಏನನ್ನು ನೀಡಿದನು (ಜೀಮೂತವಾಹನನು ತನ್ನ ದೇಹವನ್ನೇ ನೀಡಿ ನಾಗಗಳನ್ನು ರಕ್ಷಿಸಿದನು). ಹೀಗೆ ಈ ಮಹಾಪುರುಷರು ತಮ್ಮ ದೇಹವನ್ನೆ ಲೋಕಕಲ್ಯಾಣಕ್ಕಾಗಿ ನೀಡಿರುವಾಗ, ನನ್ನ ಮಗ ನಿಮ್ಮ ಸಹಾಯಕ್ಕೆ ಬರುವುದು ಒಳಿತೆ, ಇದನ್ನು ನೀವು ಸ್ವೀಕರಿಸಿ ಎಂದು ಹೇಳಿದಳು.

ಅರ್ಥ:
ಏನು: ಪ್ರಶ್ನಾರ್ಥಕ ಪದ; ಲೋಗ: ಲೋಕ, ಜಗತ್ತು; ಹಾನಿ: ಕೆಡಕು; ಕಾಯಿ: ರಕ್ಷಿಸು; ಸೂನು: ಮಗ;ಅವಸರ: ಸನ್ನಿವೇಶ, ಸಮಯ; ಕೊಳ್ಳು: ತೆಗೆದುಕೊ

ಪದವಿಂಗಡನೆ:
ಏನನ್+ಇತ್ತು +ದಧೀಚಿ +ಲೋಗರ
ಹಾನಿಯನು +ಕಾಯಿದನು +ಶಿಬಿ+ತಾನ್
ಏನನ್+ಇತ್ತನು+ ಕೇಳಿದೈ +ಜೀಮೂತವಾಹನನು
ಏನ+ ಮಾಡಿದನೆಂದು +ನೀನ್+ಇದನ್
ನಏನುವನು +ಕೇಳ್ದರಿಯಲಾ+ ಮತ್
ಸೂನುವನು+ ನಿನ್ನ್+ಅವಸರಕೆ+ ಕೊಳ್ಳ್+ಎಂದಳಾ +ಕುಂತಿ

ಅಚ್ಚರಿ:
(೧) ಏನ್- ೧,೩,೪,೫ ಸಾಲಿನ ಮೊದಲ ಪದ
(೨) ದಧೀಚಿ, ಶಿಬಿ, ಜೀಮೂತವಾಹನ ಬಗ್ಗೆ – ಉಪಮಾನವಾಗಿ ವರ್ಣಿಸಿರುವುದು