ಪದ್ಯ ೨೮: ಭೀಮನು ಹೇಗೆ ಕೌರವನನ್ನು ಪ್ರಚೋದಿಸಿದನು – ೫?

ಜಲವಹೊಕ್ಕನ ಹುಲ್ಲ ಕಚ್ಚಿದ
ಖಳನ ತರುಗಿರಿಶಿಖರದಲಿ ಕಾ
ಲ್ದೊಳಸಿದನ ವಲ್ಮೀಕಸಂಗತನನು ನಿರಾಯುಧನ
ಕೊಲುವುದನುಚಿತವೆಂಬ ಶಾಸ್ತ್ರವ
ತಿಳಿದು ನಂಬಿದೆ ನಿನ್ನನೊಬ್ಬನ
ಕೊಲುವುದಕೆ ಶ್ರುತಶಾಸ್ತ್ರರಾವಲ್ಲೆಂದನಾ ಭೀಮ (ಗದಾ ಪರ್ವ, ೫ ಸಂಧಿ, ೨೮ ಪದ್ಯ)

ತಾತ್ಪರ್ಯ:
ನೀರನ್ನು ಹೊಕ್ಕವನನ್ನು, ಹುಲ್ಲನ್ನು ಕಚ್ಚಿದ ನೀಚನನ್ನು, ಮರದ ಮೇಲೆ ಬೆಟ್ಟದ ಕೋಡುಗಲ್ಲಿನ ಮೇಲೆ ಕಾಲನ್ನು ಸಿಕ್ಕಿಸಿದವನನ್ನು, ಹುತ್ತವನ್ನೇರಿದವನನ್ನು, ಆಯುಧವಿಲ್ಲದವನನ್ನು ಕೊಲ್ಲುವುದು ಉಚಿತವಲ್ಲೆವೆಂಬ ಶಾಸ್ತ್ರವನ್ನು ನಂಬಿದ್ದರೆ ಕೇಳು, ನಿನ್ನನ್ನು ಕೊಲ್ಲುವುದಕ್ಕೆ ನಾವು ಶಾಸ್ತ್ರವನ್ನು ಕೇಳಿಲ್ಲ, ಅರಿತಿಲ್ಲ ಎಂದು ಭೀಮನು ಗರ್ಜಿಸಿದನು.

ಅರ್ಥ:
ಜಲ: ನೀರು; ಹೊಕ್ಕು: ಸೇರು; ಹುಲ್ಲು: ತೃಣ; ಕಚ್ಚು: ಕಡಿ, ನೋಯು; ಖಳ: ದುಷ್ಟ; ತರು: ಮರ; ಗಿರಿ: ಬೆಟ್ಟ; ಶಿಖರ: ತುದಿ; ಕಾಲು: ಪಾದ; ತೊಳಸಿದ: ಸಿಕ್ಕಿಸಿದ; ವಲ್ಮೀಕ: ಹುತ್ತ; ಸಂಗ: ಜೊತೆ; ನಿರಾಯುಧ: ಶಸ್ತ್ರವಿಲ್ಲದ ಸ್ಥಿತಿ; ಕೊಲು: ಸಾಯಿಸು; ಅನುಚಿತ: ಸರಿಯಲ್ಲದ; ಶಾಸ್ತ್ರ: ಧರ್ಮ ಗ್ರಂಥ; ತಿಳಿ: ಗೊತ್ತುಮಾಡು; ನಂಬು: ವಿಶ್ವಾಸವಿಡು; ಕೊಲು: ಸಾಯಿಸು; ಶ್ರುತ: ಕೇಳಿದ, ಆಲಿಸಿದ;

ಪದವಿಂಗಡಣೆ:
ಜಲವ+ಹೊಕ್ಕನ +ಹುಲ್ಲ +ಕಚ್ಚಿದ
ಖಳನ +ತರು+ಗಿರಿ+ಶಿಖರದಲಿ +ಕಾ
ಲ್ದೊಳಸಿದನ +ವಲ್ಮೀಕ+ಸಂಗತನನು+ ನಿರಾಯುಧನ
ಕೊಲುವುದ್+ಅನುಚಿತವೆಂಬ +ಶಾಸ್ತ್ರವ
ತಿಳಿದು +ನಂಬಿದೆ +ನಿನ್ನನೊಬ್ಬನ
ಕೊಲುವುದಕೆ+ ಶ್ರುತ+ಶಾಸ್ತ್ರರಾವಲ್ಲ್+ಎಂದನಾ +ಭೀಮ

ಅಚ್ಚರಿ:
(೧) ಶಾಸ್ತ್ರದ ಪ್ರಕಾರ ಯಾರನ್ನು ಕೊಲುವುದು ಅನುಚಿತ – ಜಲವಹೊಕ್ಕನ, ಹುಲ್ಲ ಕಚ್ಚಿದ ಖಳನ, ತರು ಗಿರಿ ಶಿಖರದಲಿ ಕಾಲ್ದೊಳಸಿದನ ವಲ್ಮೀಕಸಂಗತನನು ನಿರಾಯುಧನ ಕೊಲುವುದನುಚಿತ

ಪದ್ಯ ೩: ಅರ್ಜುನನು ಕಿರಾತನನ್ನು ಏಕೆ ಬಯ್ದನು?

ಏಕೆ ನಿನಗೀ ತಪದ ಚಿಂತೆ ವಿ
ವೇಕ ಶಾಸ್ತ್ರ ವಿಚಾರವಿದು ವಿಪಿ
ನೌಕಸರ ಸಂಹಾರ ವಿದ್ಯಾವೃತ್ತಿ ನಿನ್ನದಲೆ
ಆಕೆವಾಳರ ಕರೆಸು ನೀನೇ
ಕಾಕಿ ನಿನ್ನಲಿ ಹರಿಯದಾಹವ
ವೇಕೆ ನಿನಗೀಗೆಂದು ಕಪಟ ಕಿರಾತನನು ಜರೆದ (ಅರಣ್ಯ ಪರ್ವ, ೭ ಸಂಧಿ, ೩ ಪದ್ಯ)

ತಾತ್ಪರ್ಯ:
ಎಲೈ ಕಿರಾತಕ, ನಿನಗೆ ತಪಸ್ಸಿನ ವಿಚಾರದ ತಂಟೆಯೇಕೆ? ಇದು ವಿವೇಕ, ಶಾಸ್ತ್ರಗಳ ವಿಚಾರಕ್ಕೆ ಸಂಬಂಧಿಸಿದ್ದು, ನೀನು ಕಾಡಿನಲ್ಲಿ ಬೇಟೆಗಾಗಿ ಮೃಗಗಳನ್ನು ಕೊಲ್ಲುವವನು. ನಿನಗೆ ನನ್ನೊಡನೆ ಯುದ್ಧ ಮಾಡುವುದು ಆಗದ ಕೆಲಸ. ಯಾರಾದರೂ ವೀರರಿದ್ದರೆ ಕರೆಸು, ನನ್ನೊಡನೆ ನಿನಗೆ ಈಗ ಯುದ್ಧವೇಕೆ ಎಂದು ಕೇಳಿದನು.

ಅರ್ಥ:
ತಪ: ತಪಸ್ಸು, ಧ್ಯಾನ; ಚಿಂತೆ: ಯೋಚನೆ; ವಿವೇಕ: ಯುಕ್ತಾಯುಕ್ತ ವಿಚಾರ; ಶಾಸ್ತ್ರ: ತತ್ವ; ವಿಚಾರ: ಪರ್ಯಾಲೋಚನೆ, ವಿಮರ್ಶೆ; ವಿಪಿನ: ಕಾಡು; ಔಕು: ಹೊಕ್ಕು; ಸರ: ಹಾರ, ಹಗ್ಗ, ಬಾಣ; ಸಂಹಾರ: ಸಾಯಿಸು; ವಿದ್ಯ: ಜ್ಞಾನ; ವೃತ್ತಿ: ಕೆಲಸ; ಆಕೆವಾಳ: ವೀರ, ಪರಾಕ್ರಮಿ; ಕರೆಸು: ಬರೆಮಾಡು; ಏಕಾಕಿ: ಒಬ್ಬನೆ; ಹರಿ: ಕಡಿ; ಆಹವ: ಯುದ್ಧ; ಕಪಟ: ಮೋಸ; ಕಿರಾತ: ಬೇಡ; ಜರಿ: ಬಯ್ಯುವಿಕೆ;

ಪದವಿಂಗಡಣೆ:
ಏಕೆ +ನಿನಗೀ +ತಪದ +ಚಿಂತೆ +ವಿ
ವೇಕ +ಶಾಸ್ತ್ರ +ವಿಚಾರವಿದು +ವಿಪಿ
ನೌಕ+ಸರ+ ಸಂಹಾರ +ವಿದ್ಯಾವೃತ್ತಿ +ನಿನ್ನದಲೆ
ಆಕೆವಾಳರ +ಕರೆಸು +ನೀನ್
ಏಕಾಕಿ +ನಿನ್ನಲಿ +ಹರಿಯದ್+ಆಹವವ್
ಏಕೆ +ನಿನಗೀಗ್+ಎಂದು +ಕಪಟ +ಕಿರಾತನನು +ಜರೆದ

ಅಚ್ಚರಿ:
(೧) ಬೇಡರ ವಿದ್ಯೆಯನ್ನು ಹೇಳುವ ಪರಿ – ವಿಪಿನೌಕಸರ ಸಂಹಾರ ವಿದ್ಯಾವೃತ್ತಿ ನಿನ್ನದಲೆ