ಪದ್ಯ ೪: ಶಿವನು ಅರ್ಜುನನಿಗೆ ಹೇಗೆ ಉತ್ತರಿಸಿದನು?

ನೀವು ಬಲ್ಲಿರಿ ಶಾಸ್ತ್ರದಲಿ ಶ
ಸ್ತ್ರಾವಳಿಯಲಾವಿಂದು ಪಕ್ಷಿ ಮೃ
ಗಾವಳಿಯ ಬೇಂಟೆಯಲಿ ಬಲ್ಲೆವು ಜಾತಿಧರ್ಮವಿದು
ನೀವು ಬಲುಹುಳ್ಳವರು ನಿಮ್ಮೊಡ
ನಾವು ಸೆಣಸುವರಲ್ಲ ನಿಮ್ಮ ವೊ
ಲಾವ ಋಷಿ ಶಸ್ತ್ರಜ್ಞನಾತನ ಬಿರುದ ತಡೆಯೆಂದ (ಅರಣ್ಯ ಪರ್ವ, ೭ ಸಂಧಿ, ೪ ಪದ್ಯ)

ತಾತ್ಪರ್ಯ:
ಅರ್ಜುನನ ಮಾತಿಗೆ ಶಿವನು ಉತ್ತರಿಸುತ್ತಾ, ನಿಮಗೆ ಶಾಸ್ತ್ರ ಗೊತ್ತು,ಬೇಟೆಯಾಡುವ ನಮಗೆ ಶಸ್ತ್ರಗಳು ತಿಳಿದಿವೆ. ಇದು ಜಾತಿ ಧರ್ಮ. ಮಹಾ ಪರಾಕ್ರಮಿಯೆಂದು ಹೇಳಿಕೊಳ್ಳುವ ನಿಮ್ಮ ಜೊತೆಗೆ ನಮಗೆ ಯುದ್ಧ ಮಾಡಲು ಸಾಧ್ಯವೇ ಇಲ್ಲ. ಆದರೂ ನಿಮ್ಮ ಹಾಗೆ ಇನ್ನಾವ ಋಷಿಯಿದ್ದಾನೆ? ಅವನ ಬಿರುದನ್ನು ಬಿಟ್ಟು ಬಿಡಲು ಹೇಳಿಬಿಡು ಎಂದು ಉತ್ತರಿಸಿದನು.

ಅರ್ಥ:
ಬಲ್ಲಿರಿ: ತಿಳಿದಿರುವಿರಿ; ಶಾಸ್ತ್ರ: ತತ್ವ; ಶಸ್ತ್ರ: ಆಯುಧ; ಆವಳಿ: ಗುಂಪು; ಪಕ್ಷಿ: ಖಗ; ಮೃಗ: ಪ್ರಾಣಿ; ಬೇಂಟೆ: ಪ್ರಾಣಿಗಳನ್ನು ಕೊಲ್ಲವ ಕ್ರೀಡೆ; ಬಲ್ಲೆ: ತಿಳಿ; ಜಾತಿ: ವರ್ಗ; ಧರ್ಮ: ಧಾರಣೆ ಮಾಡಿದುದು; ಬಲುಹು: ಬಲ, ಶಕ್ತಿ; ನಿಮ್ಮೊಡ: ನಿಮ್ಮ ಜೊತೆ; ಸೆಣಸು: ಕಾದು, ಯುದ್ಧ; ವೊಲು: ತರಹ; ಋಷಿ: ಮುನಿ; ಶಸ್ತ್ರಜ್ಞ: ಶಸ್ತ್ರಜ್ಞಾನವನ್ನು ತಿಳಿದವ; ಬಿರುದು: ಗೌರವಸೂಚಕವಾಗಿ ಕೊಡುವ ಹೆಸರು, ಪ್ರಶಸ್ತಿ; ತಡೆ: ನಿಲ್ಲಿಸು;

ಪದವಿಂಗಡಣೆ:
ನೀವು+ ಬಲ್ಲಿರಿ +ಶಾಸ್ತ್ರದಲಿ +ಶ
ಸ್ತ್ರಾವಳಿಯಲಾವ್+ಇಂದು +ಪಕ್ಷಿ +ಮೃ
ಗಾವಳಿಯ +ಬೇಂಟೆಯಲಿ +ಬಲ್ಲೆವು +ಜಾತಿಧರ್ಮವಿದು
ನೀವು +ಬಲುಹುಳ್ಳವರು +ನಿಮ್ಮೊಡ
ನಾವು +ಸೆಣಸುವರಲ್ಲ+ ನಿಮ್ಮವೊಲ್
ಆವ+ ಋಷಿ +ಶಸ್ತ್ರಜ್ಞನ್+ಆತನ+ ಬಿರುದ +ತಡೆಯೆಂದ

ಅಚ್ಚರಿ:
(೧) ನೀವು ನಾವು – ಜೋಡಿ ಪದಗಳು
(೨) ಶಾಸ್ತ್ರ, ಶಸ್ತ್ರ – ಪ್ರಾಸ ಪದಗಳ ಬಳಕೆ