ಪದ್ಯ ೨೩: ಶಿವನು ಅಶ್ವತ್ಥಾಮನನ್ನು ಹೇಗೆ ರಕ್ಷಿಸಿದನು?

ಮೆಚ್ಚಿದನು ಮದನಾರಿ ಹೋಮದ
ಕಿಚ್ಚು ತುಡುಕದ ಮುನ್ನ ತೆಗೆದನು
ಬಿಚ್ಚು ಜಡೆಗಳ ಜಹ್ನು ಸುತೆಯಲಿ ನಾದಿದನು ಭಟನ
ಎಚ್ಚ ಶರವಿದೆ ಖಡ್ಗವಿದೆ ಕೋ
ಮುಚ್ಚು ಮರೆಯೇಕಿನ್ನು ಸುತರಲಿ
ಚೊಚ್ಚಿಲವ ನೀನೆಂದು ಮೈದಡವಿದನು ಶಶಿಮೌಳಿ (ಗದಾ ಪರ್ವ, ೯ ಸಂಧಿ, ೨೩ ಪದ್ಯ)

ತಾತ್ಪರ್ಯ:
ಶಿವನು ಮೆಚ್ಚಿ ಅವನ ದೇಹವನ್ನು ಬೆಂಕಿ ಸುಡುವ ಮೊದಲೇ ಮೇಲಕ್ಕೆತ್ತಿ ಗಂಗಾಜಲದಿಂದ ದೇಹವನ್ನು ತೊಳೆದನು. ನೀನು ಬಿಟ್ಟ ಬಾಣವಿದು, ನಿನ್ನ ಕತ್ತಿ ಇಲ್ಲಿದೆ ತೆಗೆದುಕೋ ಎಂದು ಅವನಿಗೆ ನೀಡಿದನು. ನೀನು ನನ್ನ ಮೊದಲ ಮಗ, ನಿನ್ನನ್ನು ಮೆಚ್ಚಿದ್ದೇನೆ ಎಂದು ಹೇಳಿ ಅಶ್ವತ್ಥಾಮನ ಮೈಯನ್ನು ಸವರಿದನು.

ಅರ್ಥ:
ಮೆಚ್ಚು: ಹೊಗಳು; ಮದನಾರಿ: ಶಿವ; ಹೋಮ: ಯಜ್ಞ; ಕಿಚ್ಚು: ಬೆಂಕಿ, ಅಗ್ನಿ; ತುಡುಕು: ಬೇಗನೆ ಹಿಡಿಯುವುದು, ಹೋರಾಡು; ಮುನ್ನ: ಮೊದಲು; ತೆಗೆ: ಹೊರತರು; ಬಿಚ್ಚು: ಹರಡು; ಜಡೆ: ಜಟೆ; ಜಹ್ನುಸುತೆ: ಗಂಗೆ; ನಾದು: ಕಲಸು, ಒದ್ದೆ ಮಾಡು; ಭಟ: ಪರಾಕ್ರಮಿ; ಎಚ್ಚ: ಬಾಣ ಪ್ರಯೋಗ ಮಾಡು; ಶರ: ಬಾಣ; ಖಡ್ಗ: ಕತ್ತಿ; ಕೋ: ನೀಡು, ಪಡೆ; ಮುಚ್ಚು: ಅಡಗು; ಸುತ: ಮಕ್ಕಳು; ಚೊಚ್ಚಿಲ: ಮೊದಲನೆಯ; ಮೈದಡವು: ದೇಹವನ್ನು ತಟ್ಟು, ಪ್ರೀತಿಯಿಂದ ಸವರು; ಶಶಿಮೌಳಿ: ಶಿವ; ಶಶಿ: ಚಂದ್ರ; ಮೌಳಿ: ಶಿರ;

ಪದವಿಂಗಡಣೆ:
ಮೆಚ್ಚಿದನು+ ಮದನಾರಿ +ಹೋಮದ
ಕಿಚ್ಚು+ ತುಡುಕದ +ಮುನ್ನ+ ತೆಗೆದನು
ಬಿಚ್ಚು +ಜಡೆಗಳ +ಜಹ್ನುಸುತೆಯಲಿ +ನಾದಿದನು +ಭಟನ
ಎಚ್ಚ+ ಶರವಿದೆ +ಖಡ್ಗವಿದೆ +ಕೋ
ಮುಚ್ಚುಮರೆ+ ಏಕಿನ್ನು +ಸುತರಲಿ
ಚೊಚ್ಚಿಲವ +ನೀನೆಂದು +ಮೈದಡವಿದನು +ಶಶಿಮೌಳಿ

ಅಚ್ಚರಿ:
(೧) ಮದನಾರಿ, ಶಶಿಮೌಳಿ – ಶಿವನನ್ನು ಕರೆದ ಪರಿ
(೨) ಕಿಚ್ಚು, ಬಿಚ್ಚು,ಮುಚ್ಚು – ಪ್ರಾಸ ಪದಗಳು
(೩) ಗಂಗೆಯನ್ನು ಜಹ್ನುಸುತೆ ಎಂದು ಕರೆದಿರುವುದು

ಪದ್ಯ ೬೭: ಶಿವನು ಅರ್ಜುನನ ಮನಸ್ತಾಪವನ್ನು ಹೇಗೆ ಹೋಗಲಾಡಿಸಿದನು?

ಈ ಪರಿಯಲರ್ಜುನನ ಮನದನು
ತಾಪವನು ಕಾಣುತಾ ಶಾಬರ
ರೂಪರಚನೆಯ ತೆರೆಯ ಮರೆಯಲಿ ಮೆರೆವ ಚಿನ್ಮಯದ
ರೂಪನವ್ಯಾಹತ ನಿಜೋನ್ನತ
ರೂಪರಸದಲಿ ನರನ ಚಿತ್ತದ
ತಾಪವಡಗಲು ತಂಪನೆರೆದನು ತರುಣ ಶಶಿಮೌಳಿ (ಅರಣ್ಯ ಪರ್ವ, ೭ ಸಂಧಿ, ೬೭ ಪದ್ಯ)

ತಾತ್ಪರ್ಯ:
ಈ ರೀತಿ ಅರ್ಜುನನು ಶಿವನ ಬಗ್ಗೆ ತನ್ನ ಮನಸ್ಸಿನಲ್ಲಿದ್ದುದನ್ನು ತೋಡಿಕೊಂಡು ದುಃಖಪಡುವುದನ್ನು ಕಂಡು, ಅವನ ಮನಸ್ಸಿನ ಅನುತಾಪವನ್ನು ತಿಳಿದು, ಕಿರಾತರೂಪಿನ ಮರೆಯಲ್ಲಿದ್ದ ತನ್ನ ಉನ್ನತವಾದ ನಾಶವಿಲ್ಲದ ತರುಣ ರೂಪವನ್ನು ಶಿವನು ತೋರಿಸಿ ಅರ್ಜುನನ ಮನಸ್ಸಿನ ತಾಪವನ್ನು ಹೋಗಲಾಡಿಸಿದನು.

ಅರ್ಥ:
ಪರಿ: ರೀತಿ; ಮನ: ಮನಸ್ಸು; ಅನುತಾಪ: ಪಶ್ಚಾತ್ತಾಪ, ದುಃಖ; ಕಾಣು: ತೋರು; ಶಾಬರ: ಬೇಡ; ರೂಪ: ಆಕಾರ; ರಚನೆ: ನಿರ್ಮಾಣ; ತೆರೆ: ಬಿಚ್ಚುವಿಕೆ; ಮರೆ: ಗುಟ್ಟು, ರಹಸ್ಯ; ಮೆರೆ: ಹೊಳೆ, ಪ್ರಕಾಶಿಸು; ಚಿನ್ಮಯ: ಶುದ್ಧಜ್ಞಾನದಿಂದ ಕೂಡಿದ; ಅವ್ಯಾಹತ: ತಡೆಯಿಲ್ಲದ, ಎಡೆಬಿಡದ; ನಿಜ: ದಿಟ; ಉನ್ನತ: ಶ್ರೇಷ್ಠ; ರಸ: ಸಾರ; ನರ: ಅರ್ಜುನ; ಚಿತ್ತ: ಮನಸ್ಸು; ತಾಪ: ಬಿಸಿ, ಉಷ್ಣತೆ; ಅಡಗು: ಅವಿತುಕೊಳ್ಳು, ಮರೆಯಾಗು; ತಂಪು: ತಣಿವು, ಶೈತ್ಯ; ಎರೆ: ಸುರಿ; ತರುಣ: ಹರೆಯದವನು, ಯುವಕ ; ಶಶಿ: ಚಂದ್ರ; ಮೌಳಿ: ಶಿರ;

ಪದವಿಂಗಡಣೆ:
ಈ ಪರಿಯಲ್+ಅರ್ಜುನನ +ಮನದ್+ಅನು
ತಾಪವನು +ಕಾಣುತಾ +ಶಾಬರ
ರೂಪರಚನೆಯ+ ತೆರೆಯ+ ಮರೆಯಲಿ +ಮೆರೆವ +ಚಿನ್ಮಯದ
ರೂಪನ್+ಅವ್ಯಾಹತ +ನಿಜೋನ್ನತ
ರೂಪ+ರಸದಲಿ+ ನರನ +ಚಿತ್ತದ
ತಾಪವ್+ಅಡಗಲು +ತಂಪನ್+ಎರೆದನು +ತರುಣ +ಶಶಿಮೌಳಿ

ಅಚ್ಚರಿ:
(೧) ರೂಪ – ೩ ಸಾಲಿನ ಮೊದಲ ಪದ
(೨) ರೂಪ, ತಾಪ – ಪ್ರಾಸ ಪದಗಳು
(೩) ಶಿವನ ತೋರಿದ ಪರಿ – ನರನ ಚಿತ್ತದ ತಾಪವಡಗಲು ತಂಪನೆರೆದನು ತರುಣ ಶಶಿಮೌಳಿ

ಪದ್ಯ ೨೬: ಪರಮೇಶ್ವರನು ಮುನಿಗಳಿಗೆ ಏನು ಹೇಳಿದನು?

ಅರಿದೆ ನಾನಂಜದಿರಿ ಹುಯ್ಯಲ
ಬರಿದೆ ತಂದಿರಿ ನಿಮ್ಮ ಗೆಲವಿಂ
ಗೆರಗುವವನವನಲ್ಲ ಬೇರಿಹುದಾತನಂಗವಣೆ
ಅರುಹಲೇಕೆ ಭವತ್ತಪೋವನ
ನೆರೆ ನಿಮಗೆ ನಾನವನನೆಬ್ಬಿಸಿ
ತೆರಹ ಮಾಡಿಸಿ ಕೊಡುವೆನೆಂದನು ನಗುತ ಶಶಿಮೌಳಿ (ಅರಣ್ಯ ಪರ್ವ, ೬ ಸಂಧಿ, ೨೬ ಪದ್ಯ)

ತಾತ್ಪರ್ಯ:
ಶಿವನು ಮುನಿಗಳಿಗೆ, ಅವನಾರೆಂದು ತಿಳಿಯಿತು. ನೀವು ಹೆದರಬೇಡಿ, ನಿಮ್ಮ ತಪಸ್ಸನ್ನು ನಿರ್ವಿಘ್ನವಾಗಿ ಮಾಡಬಿಡುವವನು ಅವನಲ್ಲ. ಅವನ ರೀತಿಯೇ ಬೇರೆ. ಹೆಚ್ಚೇನು ಹೇಳಲಿ, ನಿಮ್ಮ ತಪೋವನದಲ್ಲಿಯೇ ನೀವು ತಪಸ್ಸು ಮಾಡಿರಿ, ನಾನು ಅವನನ್ನೆಬ್ಬಿಸಿ ತಪೋಭೂಮಿಯನ್ನು ನಿಮಗೆ ತೆರವು ಮಾಡಿಸಿಕೊಡುತ್ತೇನೆ ಎಂದು ಹೇಳಿದನು.

ಅರ್ಥ:
ಅರಿ: ತಿಳಿ; ಅಂಜು: ಹೆದರು; ಹುಯ್ಯಲು: ಪೆಟ್ಟು, ಹೊಡೆತ; ಬರಿ: ಸುಮ್ಮನೆ, ಕೇವಲ; ಗೆಲವು: ಜಯ; ಎರಗು: ಬೀಳು, ನಮಸ್ಕರಿಸು; ಬೇರೆ: ಅನ್ಯ; ಅಂಗವಣೆ: ರೀತಿ, ವಿಧಾನ; ಅರುಹ: ಅರ್ಹ; ಭವತ್: ನಿಮ್ಮ; ತಪೋವನ: ತಪಸ್ಸು ಮಾಡುವ ಸ್ಥಳ; ನೆರೆ: ಪಕ್ಕ; ಎಬ್ಬಿಸು: ಮೇಲೇಳಿಸು; ತೆರವು: ಖಾಲಿ,ಬರಿದಾದುದು; ಕೊಡು: ನೀಡು; ನಗು: ಸಂತಸ; ಶಶಿ: ಚಂದ್ರ; ಮೌಳಿ: ಶಿರ; ಶಶಿಮೌಳಿ: ಶಂಕರ;

ಪದವಿಂಗಡಣೆ:
ಅರಿದೆ +ನಾನ್+ಅಂಜದಿರಿ+ ಹುಯ್ಯಲ
ಬರಿದೆ +ತಂದಿರಿ+ ನಿಮ್ಮ +ಗೆಲವಿಂಗ್
ಎರಗುವವನವನಲ್ಲ+ ಬೇರಿಹುದ್+ಆತನ್+ಅಂಗವಣೆ
ಅರುಹಲೇಕೆ +ಭವತ್+ತಪೋವನ
ನೆರೆ +ನಿಮಗೆ +ನಾನ್+ಅವನನ್+ಎಬ್ಬಿಸಿ
ತೆರಹ +ಮಾಡಿಸಿ +ಕೊಡುವೆನ್+ಎಂದನು +ನಗುತ +ಶಶಿಮೌಳಿ

ಅಚ್ಚರಿ:
(೧) ಅರ್ಜುನನ ಸಾಮರ್ಥ್ಯವನ್ನು ಹೇಳುವ ಪರಿ – ನಿಮ್ಮ ಗೆಲವಿಂಗೆರಗುವವನವನಲ್ಲ ಬೇರಿಹುದಾತನಂಗವಣೆ

ಪದ್ಯ ೨೫: ಶಿವನು ತಪಸ್ವಿಯನ್ನು ಹೇಗೆ ನೋಡಿದನು?

ಕೇಳುತವನಾರೋಯೆನುತ ಶಶಿ
ಮೌಳಿ ವಿಮಲಜ್ಞಾನ ದೃಷ್ಟಿಯೊ
ಳಾಳನರಿದನು ಮನದೊಳಗೆ ನಮ್ಮವನಲಾಯೆನುತ
ಬಾಲಹಿಮಕರಕಿರಣನೊಡನೆ ಸ
ಮೇಳವಹ ನಗೆ ಮಿನುಗೆ ಮುನಿಜನ
ಜಾಲವನು ನೋಡಿದನು ಕರೆದನು ಕೃಪೆಯ ತನಿಮಳೆಯ (ಅರಣ್ಯ ಪರ್ವ, ೬ ಸಂಧಿ, ೨೫ ಪದ್ಯ)

ತಾತ್ಪರ್ಯ:
ಶಿವನು ಋಷಿಗಳ ಮಾತನ್ನು ಕೇಳಿ, ಆ ತಪಸ್ವಿಯು ಯಾರಿರಬಹುದೆಂದು ತನ್ನ ದಿವ್ಯದೃಷ್ಟಿಯಿಂದ ನೋಡಿ, ಅವನು ನಮ್ಮವನೇ ಎಂದು ತಿಳಿದು ತಾನು ಹೊತ್ತಿರುವ ಬಾಲಚಂದ್ರನ ಬೆಳುದಿಂಗಳಿಗೆ ಹೊಂದುವ ಮಿನುಗುನಗೆಯನ್ನು ನಕ್ಕು, ಋಷಿಗಳನ್ನು ನೋಡಿ ಕೃಪಾವೃಷ್ಟಿಯನ್ನು ಸುರಿಸಿದನು.

ಅರ್ಥ:
ಕೇಳು: ತಿಳಿ; ಶಶಿ: ಚಂದ್ರ; ಮೌಳಿ: ತಲೆ, ಶಿರ; ಶಶಿಮೌಳಿ: ಶಂಕರ; ವಿಮಲ: ನಿರ್ಮಲ; ಜ್ಞಾನ: ಅರಿವು; ದೃಷ್ಟಿ: ನೋಟ; ಅರಿ: ತಿಳಿ; ಮನ: ಮನಸ್ಸು; ಬಾಲ: ಚಿಕ್ಕವ; ಹಿಮಕರ: ಚಂದ್ರ; ಕಿರಣ: ಕಾಂತಿ, ಪ್ರಕಾಶ; ಸಮೇಳ:ಜೊತೆ; ನಗೆ: ಮಂದಸ್ಮಿತ; ಮಿನುಗು: ಕಾಂತಿ, ಹೊಳೆ; ಮುನಿ: ಋಷಿ; ಜಾಲ: ಸಮೂಹ; ನೋಡು: ವೀಕ್ಷಿಸು; ಕರೆ: ಬರೆಮಾಡು; ಕೃಪೆ: ಕರುಣೆ; ತನಿ: ಹೆಚ್ಚಾಗು, ಅತಿಶಯವಾಗು; ಮಳೆ: ವರ್ಷ;

ಪದವಿಂಗಡಣೆ:
ಕೇಳುತ್+ಅವನಾರೋ+ಎನುತ +ಶಶಿ
ಮೌಳಿ+ ವಿಮಲ+ಜ್ಞಾನ +ದೃಷ್ಟಿಯೊಳ್
ಆಳನ್+ಅರಿದನು +ಮನದೊಳಗೆ +ನಮ್ಮವನಲಾ+ಎನುತ
ಬಾಲಹಿಮಕರ+ಕಿರಣನೊಡನೆ+ ಸ
ಮೇಳವಹ +ನಗೆ+ ಮಿನುಗೆ +ಮುನಿಜನ
ಜಾಲವನು +ನೋಡಿದನು +ಕರೆದನು +ಕೃಪೆಯ +ತನಿಮಳೆಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬಾಲಹಿಮಕರಕಿರಣನೊಡನೆ ಸಮೇಳವಹ ನಗೆ ಮಿನುಗೆ

ಪದ್ಯ ೧೯: ಮುನಿಗಳು ಶಿವನಲ್ಲಿ ಏನು ಹೇಳಿದರು?

ನೀಲಲೋಹಿತ ಚಿತ್ತವಿಸು ಶಶಿ
ಮೌಳಿ ಬಿನ್ನಹ ನಿಗಮ ಮಹಿಳಾ
ಮೌಳಿಮಣಿ ನೀರಾಜಿತಾಂಘ್ರಿಸರೋಜನವಧಾನ
ಪಾಲಿಸುವುದಾರ್ತರನು ಪರಮಕೃ
ಪಾಳು ನೀನತಿದೀನರಾವುವಿ
ಟಾಳ ಸಂಗತಿಯಾದುದೆಮ್ಮಯ ಜಪತಪಸ್ಥಿತಿಗೆ (ಅರಣ್ಯ ಪರ್ವ, ೬ ಸಂಧಿ, ೧೯ ಪದ್ಯ)

ತಾತ್ಪರ್ಯ:
ಎಲೈ ನೀಲಲೋಹಿತನೇ, ನಮ್ಮ ಮೊರೆಗೆ ಗಮನನೀಡು, ಶಶಿಮೌಳಿಯೇ, ನಮ್ಮ ಕೋರಿಕೆಯನ್ನು ಮನ್ನಿಸು, ಶ್ರುತಿ ಕನ್ಯೆಯರ ಸೀಮಂತ ಮಣಿಗಳಿಂದ ನೀರಾಜನವನ್ನರ್ಪಿಸಿಕೊಳ್ಳುವ ಪಾದಪದ್ಮಗಳುಳ್ಳವನೇ, ನಮ್ಮ ಮಾತನ್ನು ಕೇಳು. ಆರ್ತರಾದ ನಮ್ಮನ್ನು ಕಾಪಾಡು, ನೀನು ಕರುಣಾ ಸಾಗರ, ನಾವು ಅತಿ ದೀನರು, ನಮ್ಮ ಜಪ ತಪಗಳು ಕೆಟ್ಟು ಹೋಗುವ ಪರಿಸ್ಥಿತಿ ನಮಗೆ ಬಂದಿದೆ ಎಂದು ತಮ್ಮ ನೋವನ್ನು ಹೇಳಿಕೊಂಡರು.

ಅರ್ಥ:
ನೀಲಲೋಹಿತ: ಕಪ್ಪು ನೆತ್ತರುಳ್ಳವ, ಈಶ್ವರ; ಚಿತ್ತವಿಸು: ಮನವಿಟ್ಟು ಕೇಳು; ಶಶಿ: ಚಂದ್ರ; ಮೌಳಿ: ಶಿರ; ಶಶಿಮೌಳಿ: ಚಂದ್ರನನ್ನು ತಲೆಯ ಮೇಲೆ ಧರಿಸಿದವ; ಬಿನ್ನಹ: ಕೋರಿಕೆ; ನಿಗಮ: ವೇದ, ಶ್ರುತಿ; ಮಹಿಳ: ಸ್ತ್ರೀ; ಮಣಿ: ಬೆಲೆಬಾಳುವ ರತ್ನ; ನೀರಾಜಿತ: ಆರತಿ; ಅಂಘ್ರಿ: ಪಾದ; ಸರೋಜ: ಕಮಲ ಅವಧಾನ: ಸ್ತುತಿ ಮಾಡುವುದು; ಪಾಲಿಸು: ರಕ್ಷಿಸು, ಕಾಪಾಡು; ಆರ್ತ: ಕಷ್ಟ, ಸಂಕಟ; ಪರಮ: ಶ್ರೇಷ್ಠ; ಕೃಪಾಳು: ದಯೆಯುಳ್ಳವ; ಅತಿ: ಹೆಚ್ಚು; ದೀನ:ಬಡವ, ದರಿದ್ರ, ದುಃಖ; ವಿಟಾಳ: ಅಪವಿತ್ರತೆ, ಮಾಲಿನ್ಯ; ಸಂಗತಿ: ವಿಚಾರ; ಜಪತಪ: ಧ್ಯಾನ, ತಪಸ್ಸು; ಸ್ಥಿತಿ: ಅವಸ್ಥೆ;

ಪದವಿಂಗಡಣೆ:
ನೀಲಲೋಹಿತ +ಚಿತ್ತವಿಸು +ಶಶಿ
ಮೌಳಿ +ಬಿನ್ನಹ +ನಿಗಮ +ಮಹಿಳಾ
ಮೌಳಿಮಣಿ +ನೀರಾಜಿತ+ಅಂಘ್ರಿ+ಸರೋಜನ್+ಅವಧಾನ
ಪಾಲಿಸುವುದ್+ಆರ್ತರನು +ಪರಮ+ಕೃ
ಪಾಳು +ನೀನ್+ಅತಿ+ದೀನರ್+ಆವು+ವಿ
ಟಾಳ +ಸಂಗತಿಯಾದುದ್+ಎಮ್ಮಯ +ಜಪತಪ+ಸ್ಥಿತಿಗೆ

ಅಚ್ಚರಿ:
(೧) ಶಿವನನ್ನು ಕರೆದ ಬಗೆ – ನೀಲಲೋಹಿತ, ಶಶಿಮೌಳಿ, ನಿಗಮ ಮಹಿಳಾಮೌಳಿಮಣಿ ನೀರಾಜಿತಾಂಘ್ರಿಸರೋಜ, ಪರಮಕೃಪಾಳು

ಪದ್ಯ ೩೦: ಅರ್ಜುನನಿಗೆ ಕರ್ಣನು ಯಾವ ಬಾಣಪ್ರಯೋಗ ಮಾಡಲು ಹೇಳಿದನು?

ಬೇರೆ ಕೆಲವಂಬುಗಳು ಗಡ ಮೈ
ದೋರಿದವು ನಿನಗೆಂಬರವ ನೀ
ತೋರಿಸಾ ನಿನಗಾಯ್ತು ಗಡ ಶಶಿಮೌಳಿಯುಪದೇಶ
ಹಾರುಗಣೆಗಳ ಹರಸಿ ಹೆಮ್ಮೆಯ
ಬೀರಿ ಚದುರಿಗತನವ ಮೆರೆದರೆ
ನೀರನೆಂಬರೆ ನಿನ್ನನೆನುತೆಚ್ಚನು ಧನಂಜಯನ (ಕರ್ಣ ಪರ್ವ, ೨೨ ಸಂಧಿ, ೩೦ ಪದ್ಯ)

ತಾತ್ಪರ್ಯ:
ಹಾರಿ ಹೋಗುವ ಬಾಣಗಳನ್ನು ಬಿಟ್ಟು, ಹೆಮ್ಮೆಯಿಂದ ಚದುರನೆಂದು ಹೇಳಿಕೊಂಡರೆ ನೀನು ದೊಡ್ಡವನಾಗುವುದಿಲ್ಲ. ಇದಕ್ಕೆ ಯಾರೂ ಹೆದರುವುದಿಲ್ಲ. ಶಿವನು ನಿನಗೆ ಏನೇನೋ ಅಸ್ತ್ರಗಳನ್ನು ಕೊಟ್ಟನೆನ್ನುತ್ತಾರಲ್ಲಾ ಅವನ್ನು ತೆಗೆದು ಯುದ್ಧಮಾಡು ಎಂದು ಕರ್ಣನು ಹೇಳಿ ಅರ್ಜುನನ ಮೇಲೆ ಬಾಣಪ್ರಯೋಗ ಮಾಡಿದನು.

ಅರ್ಥ:
ಬೇರೆ: ಅನ್ಯ; ಕೆಲ: ಸ್ವಲ್ಪ; ಅಂಬು: ಬಾಣ; ಗಡ: ಅಲ್ಲವೆ; ಮೈದೋರು: ಕಾಣಿಸಿಕೋ; ತೋರು: ಪ್ರದರ್ಶಿಸು; ಶಶಿ: ಚಂದ್ರ; ಮೌಳಿ: ಶಿರ; ಶಶಿಮೌಳಿ: ಶಿವ; ಉಪದೇಶ: ಬೋಧಿಸುವುದು; ಹಾರುಗಣೆ: ಹಾರುವ ಬಾಣ; ಹರಸಿ: ಬಾಣ ಬಿಟ್ಟು; ಹೆಮ್ಮೆ: ಹಿಗ್ಗು, ಅಭಿಮಾನ; ಬೀರು: ತೋರು; ಚದುರ: ಜಾಣ, ಬುದ್ಧಿವಂತ; ಮೆರೆ: ಶೋಭಿಸು; ನೀರ: ಸುಂದರ, ಚೆಲುವ; ನೀರತನ: ಗಂಡಸುತನ; ಎಚ್ಚು: ಬಾಣಬಿಡು;

ಪದವಿಂಗಡಣೆ:
ಬೇರೆ +ಕೆಲವ್+ಅಂಬುಗಳು +ಗಡ +ಮೈ
ದೋರಿದವು +ನಿನಗ್+ಇಂಬರವ+ ನೀ
ತೋರಿಸಾ+ ನಿನಗಾಯ್ತು+ ಗಡ+ ಶಶಿಮೌಳಿ+ಉಪದೇಶ
ಹಾರುಗಣೆಗಳ+ ಹರಸಿ+ ಹೆಮ್ಮೆಯ
ಬೀರಿ +ಚದುರಿಗತನವ +ಮೆರೆದರೆ
ನೀರನೆಂಬರೆ+ ನಿನ್ನನೆನುತೆಚ್ಚನು ಧನಂಜಯನ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹಾರುಗಣೆಗಳ ಹರಸಿ ಹೆಮ್ಮೆಯ
(೨) ಅರ್ಜುನನನ್ನು ಹಂಗಿಸುವ ಪರಿ – ಹಾರುಗಣೆಗಳ ಹರಸಿ ಹೆಮ್ಮೆಯ ಬೀರಿ ಚದುರಿಗತನವ ಮೆರೆದರೆ ನೀರನೆಂಬರೆ

ಪದ್ಯ ೨೧: ಶಿವನು ಹೇಗೆ ದೇವತೆಗಳನ್ನು ಕಂಡನು?

ಪರಮಕರುಣ ಕಟಾಕ್ಷರಸದಲಿ
ಹೊರೆದು ಕಮಳಾಸನನ ಹತ್ತಿರೆ
ಕರೆದು ಮನ್ನಿಸಿ ನಿಖಿಳ ನಿರ್ಜರ ಜನವ ಸಂತೈಸಿ
ಬರವಿದೇನಿದ್ದಂತೆ ವಿಶ್ವಾ
ಮರ ಕದಂಬಕ ಸಹಿತ ಎಂದಂ
ಬುರುಹಭವನನು ನಸುನಗುತ ನುಡಿದನು ಶಶಿಮೌಳಿ (ಕರ್ಣ ಪರ್ವ, ೬ ಸಂಧಿ, ೨೧ ಪದ್ಯ)

ತಾತ್ಪರ್ಯ:
ಶಂಕರನು ಅತ್ಯಂತ ಕರುಣಾಪೂರಕನಾಗಿ, ತನ್ನ ಕೃಪೆಯನ್ನು ತೋರಿ ಬ್ರಹ್ಮನನ್ನು ನೋಡಿ ಹತ್ತಿರ ಕರೆದು ಕೂಡಿಸಿ ಮನ್ನಿಸಿ, ದೇವತೆಗಳೆಲ್ಲರನ್ನೂ ಮನ್ನಿಸಿ ನಸುನಗುತಾ, ಇದೇನು ಇದ್ದಕ್ಕಿದ್ದಂತೆ ಸಮಸ್ತ ದೇವಗಣಗಳೊಡನೆ ಎಲ್ಲರೂ ಇಲ್ಲಿ ಬಂದಿದ್ದೀರಿ ಎಂದು ಕೇಳುತ್ತಾ ಬ್ರಹ್ಮನನ್ನು ಮಾತನಾಡಿಸಲು ಚಂದ್ರಶೇಖರನು ಪ್ರಾರಂಭಿಸಿದನು.

ಅರ್ಥ:
ಪರಮ: ಶ್ರೇಷ್ಠ, ಬಹಳ; ಕರುಣ: ದಯೆ, ಕಾರುಣ್ಯ; ಕಟಾಕ್ಷ: ಅನುಗ್ರಹ; ರಸ: ಸಾರ; ಹೊರೆ: ರಕ್ಷಣೆ, ಆಶ್ರಯ; ಕಮಳಾಸನ: ಕಮಲದಮೇಳೆ ಕುಳಿತಿರುವ (ಬ್ರಹ್ಮ); ಹತ್ತಿರ: ಬಳಿ; ಕರೆದು: ಬರೆಮಾಡಿ; ಮನ್ನಿಸು: ಗೌರವಿಸು, ಮರ್ಯಾದೆ ಮಾಡು; ನಿಖಿಳ: ಎಲ್ಲಾ, ಸರ್ವ; ನಿರ್ಜರ: ದೇವತೆ; ಜನವ: ಗುಂಪು; ಸಂತೈಸು: ಸಾಂತ್ವನಗೊಳಿಸು; ಬರವು: ಆಗಮನ; ವಿಶ್ವ: ಜಗತ್ತು; ಅಮರ: ದೇವತೆ; ಕದಂಬಕ: ಗುಂಪು, ಸಮೂಹ; ಸಹಿತ: ಜೊರೆ; ಅಂಬು: ನೀರು; ಅಂಬುರುಹ: ನೀರಿನಲ್ಲಿ ಹುಟ್ಟುವ (ಕಮಲ) ಅಂಬುರುಹಭವ: ಕಮಲದಿಂದ ಹುಟ್ಟಿದ (ಬ್ರಹ್ಮ); ನಸುನಗುತ: ಸಂತಸ; ನುಡಿಸು: ಮಾತನಾಡಿಸು; ಶಶಿ: ಚಂದ್ರ; ಮೌಳಿ; ಶಿರ; ಶಶಿಮೌಳಿ: ಚಂದ್ರನನ್ನು ತಲೆಯಮೇಲೆ ಧರಿಸಿದವ (ಶಿವ);

ಪದವಿಂಗಡಣೆ:
ಪರಮಕರುಣ +ಕಟಾಕ್ಷ+ರಸದಲಿ
ಹೊರೆದು +ಕಮಳಾಸನನ +ಹತ್ತಿರೆ
ಕರೆದು+ ಮನ್ನಿಸಿ +ನಿಖಿಳ +ನಿರ್ಜರ +ಜನವ +ಸಂತೈಸಿ
ಬರವಿದೇನ್+ಇದ್ದಂತೆ +ವಿಶ್ವ
ಅಮರ +ಕದಂಬಕ+ ಸಹಿತ+ ಎಂದ್
ಅಂಬುರುಹಭವನನು +ನಸುನಗುತ +ನುಡಿದನು +ಶಶಿಮೌಳಿ

ಅಚ್ಚರಿ:
(೧) ಅಂಬುರುಹಭವ, ಕಮಳಾಸನನ – ಬ್ರಹ್ಮನನ್ನು ಕರೆಯಲು ಬಳಸಿದ ಪದ
(೨) ನ ಕಾರದ ಜೋಡಿ ಪದ – ನಿಖಿಳ ನಿರ್ಜರ; ನಸುನಗುತ ನುಡಿದನು

ಪದ್ಯ ೨೨: ಪುರುಷಾಮೃಗನು ಶಿವನನ್ನು ಹೇಗೆ ಅರ್ಚಿಸಿದನು?

ಕಂಡು ಪುರುಷಾಮೃಗ ಶರೀರವ
ದಿಂಡುಗೆಡಹಿತು ಜಯ ತ್ರಿಪುರಹರ
ರುಂಡಮಾಲಾಧರನೆ ಜಯ ತ್ರೈಲೋಕ್ಯಮುನಿವಂದ್ಯ
ಖಂಡ ಶಶಿಮೌಳಿ ಪ್ರಭಾಕರ
ಚಂಡತೇಜೋಭಾನು ತಿಮಿರದ
ಗಂಡ ಜಯ ಜಯ ಜಯತು ಜಯಯೆಂದೆನುತ ಬೀಳ್ಕೊಂಡ (ಸಭಾ ಪರ್ವ, ೭ ಸಂಧಿ, ೨೨ ಪದ್ಯ)

ತಾತ್ಪರ್ಯ:
ಪುರುಷಾಮೃಗವು ಶಿವಲಿಂಗವನ್ನು ಕಂಡು ಅರ್ಚಿಸಿ, ‘ತ್ರಿಪುರಹರನೇ, ರುಂಡಮಾಲಾಧರ, ಮೂರುಲೋಕಗಳ ಮುನಿಗಳಿಂದ ವಂದಿತನೇ ಬಾಲಚಂದ್ರಧರನೇ, ಪ್ರಚಂಡಸೂರ್ಯ ಪ್ರಕಾಶನೆ, ಅಜ್ಞಾನವೆಂಬ ಕತ್ತಲನ್ನು ನಾಶಪಡಿಸುವವನೇ, ನಿನಗೆ ಜಯವಾಗಲಿ ಎಂದು ಭೀಮನನ್ನು ಬೆನ್ನತಿದನು.

ಅರ್ಥ:
ಕಂಡು: ನೋಡಿ; ಶರೀರ: ದೇಹ; ದಿಂಡುಗೆಡೆ: ಅಡ್ಡಬೀಳು; ಜಯ: ಯಶಸ್ಸು; ರುಂಡ: ತಲೆಬುರುಡೆ; ಮಾಲ: ಹಾರ; ಧರ:ಧರಿಸಿದ; ಮುನಿ: ಋಷಿ; ವಂದ್ಯ: ಪೂಜಿಸಲ್ಪಡುವ; ಖಂಡ: ತುಂಡು; ಶಶಿ: ಚಂದ್ರ; ಪ್ರಭಾ: ಕಾಂತಿ; ತೇಜಸ್ಸು: ಪ್ರಕಾಶ; ಭಾನು: ಸೂರ್ಯ; ತಿಮಿರ: ರಾತ್ರಿ, ಕತ್ತಲು;

ಪದವಿಂಗಡಣೆ:
ಕಂಡು +ಪುರುಷಾಮೃಗ+ ಶರೀರವ
ದಿಂಡುಗೆಡಹಿತು+ ಜಯ+ ತ್ರಿಪುರಹರ
ರುಂಡಮಾಲಾಧರನೆ+ ಜಯ+ ತ್ರೈಲೋಕ್ಯ+ಮುನಿವಂದ್ಯ
ಖಂಡ +ಶಶಿಮೌಳಿ +ಪ್ರಭಾಕರ
ಚಂಡ+ತೇಜೋ+ಭಾನು +ತಿಮಿರದ
ಗಂಡ+ ಜಯ+ ಜಯ+ ಜಯತು+ ಜಯ+ಎಂದೆನುತ +ಬೀಳ್ಕೊಂಡ

ಅಚ್ಚರಿ:
(೧) ಬಾಲಚಂದ್ರ ನನ್ನು ಖಂಡ ಶಶಿಮೌಳಿ ಎಂದು ಕರೆದಿರುವುದು
(೨) ಜಯ – ೬ ಬಾರಿ ಪ್ರಯೋಗ