ಪದ್ಯ ೫೫: ಭೀಮನು ಶತ್ರುಸೈನ್ಯವನ್ನು ಹೇಗೆ ನಾಶ ಮಾಡಿದನು?

ಜನಪ ಕೇಳೈ ಜಡಿವ ತುಂತು
ರ್ವನಿಗಳನು ಬಿರುಗಾಳಿ ಮೊಗೆವವೊ
ಲನಿತು ಸೆಲ್ಲೆಹ ಶರವಳೆಯ ಗದೆಯಿಂದ ಘಟ್ಟಿಸಿದ
ಜಿನುಗುವಳೆಯಲಿ ಪರ್ವತದ ಶಿಲೆ
ನೆನೆವುದೇ ಗಜಸೇನೆ ಕದಳೀ
ವನವಲೇ ಕಲಿಭೀಮದಿಗ್ಗಜ ಗಾಢ ಪದಹತಿಗೆ (ಗದಾ ಪರ್ವ, ೧ ಸಂಧಿ, ೫೫ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಬಿರುಗಳಿಯು ತುಂತುರು ಹನಿಯನ್ನು ತೆಗೆದೆಸೆದಂತೆ ತನ್ನ ಮೇಲೆ ಬಂದ ಬಾಣಗಳನ್ನು ಉಳಿದ ಈಟಿಯೇ ಮೊದಲಾದವನ್ನೂ ತನ್ನ ಗದೆಯಿಂದ ಭೀಮನು ಹೊಡೆದು ಹಾಕಿದನು. ತುಂತುರು ಮಳೆಯಿಂದ ಪರ್ವತಶಿಲೆಯು ನೆನೆದೀತೇ? ಭೀಮನೆಂಬ ದಿಗ್ಗಜದ ಕಾಲ್ತುಳಿತಕ್ಕೆ ಗಜಸೈನ್ಯವು ಬಾಳೆಯ ವನದಂತೆ ನಾಶವಾಯಿತು.

ಅರ್ಥ:
ಜನಪ: ರಾಜ; ಕೇಳು: ಆಲಿಸು; ಜಡಿ: ಗದರಿಸು, ಬೆದರಿಸು; ತುಂತುರ್ವನಿ: ಹನಿ ಹನಿಯಾದ ನೀರು; ಬಿರುಗಾಳ: ರಭಸವಾದ ಗಾಳಿ, ಸುಂಟರಗಾಳಿ; ಮೊಗೆ: ತುಂಬಿಕೊಳ್ಳು; ಸೆಲ್ಲೆಹ: ಈಟಿ, ಭರ್ಜಿ; ಶರವಳೆ: ಬಾಣಗಳ ಮಳೆ; ಗದೆ: ಮುದ್ಗರ; ಘಟ್ಟಿಸು: ಹೊಡೆ, ಅಪ್ಪಳಿಸು; ಜಿನುಗು: ಸೋನೆ ಮಳೆ, ಜಡಿ ಮಳೆ; ಪರ್ವತ: ಬೆಟ್ಟ; ಶಿಲೆ: ಕಲ್ಲು; ನೆನೆ: ತೋಯು; ಗಜಸೇನೆ: ಆನೆಗಳ ಸೈನ್ಯ; ಕದಳೀ: ಬಾಳೆ; ವನ: ಕಾಡು; ಕಲಿ: ಶೂರ; ದಿಗ್ಗಜ: ಅತಿಶ್ರೇಷ್ಠ; ಪದಹತಿ: ಕಾಲ್ತುಳಿತ;

ಪದವಿಂಗಡಣೆ:
ಜನಪ +ಕೇಳೈ +ಜಡಿವ +ತುಂತು
ರ್ವನಿಗಳನು +ಬಿರುಗಾಳಿ+ ಮೊಗೆವವೊಲ್
ಅನಿತು +ಸೆಲ್ಲೆಹ +ಶರವಳೆಯ+ ಗದೆಯಿಂದ +ಘಟ್ಟಿಸಿದ
ಜಿನುಗುವಳೆಯಲಿ +ಪರ್ವತದ+ ಶಿಲೆ
ನೆನೆವುದೇ +ಗಜಸೇನೆ +ಕದಳೀ
ವನವಲೇ+ ಕಲಿಭೀಮ+ದಿಗ್ಗಜ +ಗಾಢ +ಪದಹತಿಗೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಜಡಿವ ತುಂತುರ್ವನಿಗಳನು ಬಿರುಗಾಳಿ ಮೊಗೆವವೊಲ್
(೨) ಉಪಮಾನದ ಪ್ರಯೋಗ – ಜಿನುಗುವಳೆಯಲಿ ಪರ್ವತದ ಶಿಲೆ ನೆನೆವುದೇ
(೩) ರೂಪಕದ ಪ್ರಯೋಗ – ಗಜಸೇನೆ ಕದಳೀವನವಲೇ ಕಲಿಭೀಮದಿಗ್ಗಜ ಗಾಢ ಪದಹತಿಗೆ

ಪದ್ಯ ೩೪: ಶಲ್ಯನನ್ನು ಯಾರು ಆವರಿಸಿದರು?

ದೊರೆಗೆ ಬಲುಹೋ ಸಮರ ಶಲ್ಯನ
ಶರವಳೆಗೆ ಹಿಡಿ ಕೊಡೆಯನೆನಲ
ಬ್ಬರದೊಳಗೆ ಗಬ್ಬರಿಸೆ ನೆಲ ಗಾಲಿಗಳ ಘಲ್ಲಣೆಗೆ
ಸರಳ ಹೊದೆಗಳ ತುಂಬಿ ರಥ ಸಾ
ವಿರದಲಾ ಪಾಂಚಾಲಬಲವು
ಪ್ಪರಗುಡಿಯ ಸಿಂಧದ ಸಘಾಡದಲೈದಿತರಿಭಟನ (ಶಲ್ಯ ಪರ್ವ, ೨ ಸಂಧಿ, ೩೪ ಪದ್ಯ)

ತಾತ್ಪರ್ಯ:
ಅರಸನಿಗೆ ಯುದ್ಧವು ಅಸಾಧ್ಯವಾಗುತ್ತಿದೆ, ಶಲ್ಯನ ಬಾಣಗಳ ಮಳೆಗೆ ಕೊಡೆಯನ್ನು ಹಿಡಿಯಿರಿ ಎಂದು ಕೂಗುತ್ತಾ ಪಾಂಚಾಲ ಸೇನೆಯು ಬಾಣಗಳನ್ನು ಸಾವಿರ ರಥಗಳಲ್ಲಿ ತುಂಬಿ, ಗಾಲಿಗಳು ಚೀತ್ಕರಿಸುತ್ತಿರಲು ಶಲ್ಯನನ್ನು ಮುತ್ತಿತು.

ಅರ್ಥ:
ದೊರೆ: ರಾಜ; ಬಲುಹು: ಪರಾಕ್ರಮ; ಸಮರ: ಯುದ್ಧ; ಶರವಳೆ: ಬಾಣಗಳ ಮಳೆ; ಹಿಡಿ: ಗ್ರಹಿಸು; ಕೊಡೆ: ಛತ್ರಿ; ಅಬ್ಬರ: ಗರ್ಜಿಸು; ಗಬ್ಬರಿಸು: ತೋಡು, ಬಿಗಿ; ನೆಲ: ಭೂಮಿ; ಗಾಲಿ: ಚಕ್ರ; ಘಲ್ಲಣೆ: ಘಲ್ ಘಲ್ ಎಂಬ ಶಬ್ದ; ಸರಳ: ಬಾಣ; ಹೊದೆ: ಬಾಣಗಳನ್ನಿಡುವ ಕೋಶ, ಬತ್ತಳಿಕೆ; ತುಂಬ: ಭರ್ತಿ; ರಥ: ಬಂಡಿ; ಸಾವಿರ: ಸಹಸ್ರ; ಬಲ: ಸೈನ್ಯ; ಉಪ್ಪರ: ಅತಿಶಯ; ಸಿಂಧ: ಬಾವುಟ; ಸಘಾಡ:ರಭಸ, ವೇಗ; ಐದು: ಬಂದು ಸೇರು; ಅರಿ: ವೈರಿ; ಭಟ: ಸೈನಿಕ;

ಪದವಿಂಗಡಣೆ:
ದೊರೆಗೆ +ಬಲುಹೋ +ಸಮರ +ಶಲ್ಯನ
ಶರವಳೆಗೆ +ಹಿಡಿ+ ಕೊಡೆಯನ್+ಎನಲ್
ಅಬ್ಬರದೊಳಗೆ +ಗಬ್ಬರಿಸೆ +ನೆಲ +ಗಾಲಿಗಳ +ಘಲ್ಲಣೆಗೆ
ಸರಳ+ ಹೊದೆಗಳ +ತುಂಬಿ +ರಥ +ಸಾ
ವಿರದಲ್+ಆ+ ಪಾಂಚಾಲ+ಬಲವ್
ಉಪ್ಪರಗುಡಿಯ+ ಸಿಂಧದ +ಸಘಾಡದಲ್+ಐದಿತ್+ಅರಿ+ಭಟನ

ಅಚ್ಚರಿ:
(೧) ರಕ್ಷಿಸು ಎಂದು ಹೇಳಲು – ಶರವಳೆಗೆ ಹಿಡಿ ಕೊಡೆಯ
(೨) ಅಬ್ಬರ, ಗಬ್ಬರ – ಪ್ರಾಸ ಪದಗಳು

ಪದ್ಯ ೪೬: ಭೀಮನು ಮಹಾರಥರನ್ನು ಹೇಗೆ ಸಂಹರಿಸಿದನು?

ಪವನಸುತನೆಚ್ಚಂಬ ಹರೆಗಡಿ
ದವಿರಳಾಸ್ತ್ರವನೀತ ಕವಿಸಿದ
ನಿವನ ಬಳಿಯ ಮಹಾರಥರು ಸೂಸಿದರು ಶರವಳೆಯ
ರವಿಯ ಕೈಕತ್ತಲೆಯ ಹೊರಳಿಯ
ತಿವಿಗುಳಿಗೆ ತೆರಳುವುದೆ ರಿಪು ಶರ
ನಿವಹವನು ಕಡಿಯೆಚ್ಚು ಕೆಡಹಿದನಾ ಮಹಾರಥರ (ಕರ್ಣ ಪರ್ವ, ೧೦ ಸಂಧಿ, ೪೬ ಪದ್ಯ)

ತಾತ್ಪರ್ಯ:
ದುಶ್ಯಾಸನನು ಭೀಮನ ಬಾಣಗಳನ್ನು ಕತ್ತರಿಸಿ ಮೇಲಿಂದ ಮೇಲೆ ಬಾಣಗಳನ್ನು ಹೊಡೆದನು. ಅವನ ಸುತ್ತಲ್ಲಿದ್ದ ಮಹಾರಥರೂ ಭೀಮನ ಮೇಲೆ ಬಾಣಗಳ ಮಳೆಗರೆದರು. ಸೂರ್ಯಕಿರಣವು ಕತ್ತಲೆಯ ತಿವಿತಕ್ಕೆ ಬೆದರೀತೇ? ಭೀಮನು ಶತ್ರುಗಳ ಬಾಣಗಳನ್ನು ಮುರಿದು ಮಹಾರಥರನ್ನು ಸಂಹರಿಸಿದನು.

ಅರ್ಥ:
ಪವನಸುತ: ವಾಯುವಿನ ಮಗ(ಭೀಮ); ಹರೆಗಡಿ: ಚೆಲ್ಲಾಪಿಲ್ಲಿಯಾಗುವಂತೆ ಕತ್ತರಿಸು; ಅವಿರಳ: ದಟ್ಟವಾದ; ಅಸ್ತ್ರ: ಶಸ್ತ್ರ; ಕವಿಸು: ಆವರಿಸು, ಮುಚ್ಚು; ಬಳಿ: ಸಮೀಪ; ಮಹಾರಥ: ಪರಾಕ್ರಮಿ; ಸೂಸು: ಹೊರಹಾಕು; ಶರವಳೆ: ಬಾಣಗಳ ಮಳೆ; ರವಿ: ಸೂರ್ಯ; ಕೈ: ಕರ; ಕತ್ತಲೆ: ತಿಮಿರ; ಹೊರಳು: ತಿರುಗು, ಚಲಿಸು, ಜಾರು; ತಿವಿ: ಹೊಡೆತ, ಗುದ್ದು; ತೆರಳು: ಹಿಂದಿರುಗು; ರಿಪು: ವೈರಿ; ಶರ: ಬಾಣ; ನಿವಹ: ಗುಂಪು, ಸಮೂಹ; ಕಡಿ: ಸೀಳು; ಕೆಡಹು: ಹೊಡೆ;

ಪದವಿಂಗಡಣೆ:
ಪವನಸುತನ್+ಎಚ್ಚ್+ಅಂಬ+ ಹರೆಗಡಿದ್
ಅವಿರಳ+ ಅಸ್ತ್ರವನ್+ಈತ +ಕವಿಸಿದನ್
ಇವನ +ಬಳಿಯ +ಮಹಾರಥರು +ಸೂಸಿದರು +ಶರವಳೆಯ
ರವಿಯ +ಕೈ+ಕತ್ತಲೆಯ +ಹೊರಳಿಯ
ತಿವಿಗುಳಿಗೆ +ತೆರಳುವುದೆ +ರಿಪು +ಶರ
ನಿವಹವನು +ಕಡಿಯೆಚ್ಚು+ ಕೆಡಹಿದನಾ +ಮಹಾರಥರ

ಅಚ್ಚರಿ:
(೧) ಉಪಮಾನದ ಪ್ರಯೋಗ – ರವಿಯ ಕೈಕತ್ತಲೆಯ ಹೊರಳಿಯ ತಿವಿಗುಳಿಗೆ ತೆರಳುವುದೆ
(೨) ಶರವಳೆ, ಶರನಿವಹ – ಪದಬಳಕೆ
(೩) ಭೀಮನು ಯುದ್ಧ – ಕಡಿಯೆಚ್ಚು ಕೆಡಹಿದನಾ ಮಹಾರಥರ