ಪದ್ಯ ೫: ಕೀಚಕನ ಮೇಲೆ ಕೌರವರ ಆಕ್ರಮಣ ಹೇಗಿತ್ತು?

ಎರಡು ಶರದಲಿ ಕರದ ಚಾಪವ
ತರಿದನಾ ರವಿಸೂನು ತುರಗವ
ವರ ರಥವ ಹುಡಿಮಾಡಿದನು ಗಂಗಾಕುಮಾರಕನು
ಶರತತಿಯಲವನುರವನುದರವ
ಬಿರಿಯ ಕೆತ್ತಿದ ದ್ರೋಣನಿದಿರಿನ
ಲಿರದೆ ಹಾಯ್ದನು ಕೀಚಕನು ಪರಿಭವನದ ಸೂರೆಯಲಿ (ಅರಣ್ಯ ಪರ್ವ, ೨೫ ಸಂಧಿ, ೫ ಪದ್ಯ)

ತಾತ್ಪರ್ಯ:
ಎರಡು ಬಾಣಗಳಿಂದ ಕರ್ಣನು ಕೀಚಕನ ಕೈಯಲ್ಲಿದ್ದ ಬಿಲ್ಲನ್ನು ಕತ್ತರಿಸಿದನು. ಭೀಷ್ಮನು ಕೀಚಕನ ರಥ ಮತ್ತು ಕುದುರೆಗಳನ್ನು ಪುಡಿ ಮಾಡಿದನು. ಕೀಚಕನ ಎದೆ ಹೊಟ್ಟೆಗಳನ್ನು ದ್ರೋಣನು ಬಾಣಗಳಿಂದ ಕೆತ್ತಿದನು. ಕೀಚಕನು ಎದುರಿನಲ್ಲಿರಲಾರದೆ ಪಲಾಯನ ಮಾಡಿದನು.

ಅರ್ಥ:
ಶರ: ಬಾಣ; ಕರ: ಹಸ್ತ; ಚಾಪ: ಬಿಲ್ಲು; ತರಿ: ಕಡಿ, ಕತ್ತರಿಸು; ರವಿಸೂನು: ಸೂರ್ಯನ ಮಗ (ಕರ್ಣ); ತುರಗ: ಕುದುರೆ; ವರ: ಶ್ರೇಷ್ಠ; ರಥ: ಬಂಡಿ; ಹುಡಿಮಾಡು: ಪುಡಿಮಾಡು; ಗಂಗಾಕುಮಾರ: ಭೀಷ್ಮ; ಶರ: ಬಾಣ; ತತಿ: ಗುಂಪು, ರಾಶಿ; ಉರು: ಎದೆ, ಉದರ: ಹೊಟ್ಟೆ; ಬಿರಿ: ಒಡೆ, ಬಿರುಕುಂಟಾಗು; ಕೆತ್ತು: ಕತ್ತರಿಸು; ಇದಿರು: ಎದುರು; ಹಾಯ್ದು: ಚಾಚು, ತೆರಳು; ಪರಿಭವ: ಸೋಲು; ಪರಿಭವನ: ವೈರಿಯ ಮನೆ; ಸೂರು: ಮನೆಯ ಮೇಲ್ಛಾವಣಿ; ಸೂರೆ: ಲೂಟಿ;

ಪದವಿಂಗಡಣೆ:
ಎರಡು +ಶರದಲಿ +ಕರದ +ಚಾಪವ
ತರಿದನ್+ಆ+ ರವಿಸೂನು +ತುರಗವ
ವರ +ರಥವ +ಹುಡಿಮಾಡಿದನು+ ಗಂಗಾಕುಮಾರಕನು
ಶರತತಿಯಲ್+ಅವನ್+ಉರವನ್+ಉದರವ
ಬಿರಿಯ +ಕೆತ್ತಿದ +ದ್ರೋಣನ್+ಇದಿರಿನಲ್
ಇರದೆ +ಹಾಯ್ದನು +ಕೀಚಕನು+ ಪರಿಭವನದ +ಸೂರೆಯಲಿ

ಅಚ್ಚರಿ:
(೧) ಕೀಚಕನ ಮೇಲಾದ ನೋವು – ಶರತತಿಯಲವನುರವನುದರವ ಬಿರಿಯ
(೨) ೪ ಸಾಲು ಒಂದೇ ಪದವಾಗಿರುವುದು – ಶರತತಿಯಲವನುರವನುದರವ

ಪದ್ಯ ೪: ಕೀಚಕನ ಮೇಲೆ ಯಾರು ಬಾಣಗಳನ್ನು ತೂರಿದರು?

ಎಲವೊ ಕೀಚಕ ಹೋಗದಿರು ನಿ
ಲ್ಲೆಲವೊ ಹುಲು ಮಂಡಳಿಕ ನಿನ್ನಯ
ಬಲುಗಡಿಯ ತೋರುವುದು ನಿನ್ನಂತರದ ರಾಯರಲಿ
ತೊಲಗು ಸೈರಿಸೆನುತ್ತಲುರೆ ಬಿಲು
ಬಲುಸರಳ ಸರಿವಳೆಯ ಸುರಿಯ
ಲ್ಕಲಘು ವಿಕ್ರಮ ಕೀಚಕನು ಸವರಿದನು ಶರತತಿಯ (ಅರಣ್ಯ ಪರ್ವ, ೨೪ ಸಂಧಿ, ೪ ಪದ್ಯ)

ತಾತ್ಪರ್ಯ:
ಕೌರವ ವೀರರು, ಎಲವೋ ಕೀಚಕ ಹೋಗ ಬೇಡ, ನೀನು ಹುಲು ಮಂಡಲಿಕ. ನಿನ್ನ ಪರಾಕ್ರಮವನ್ನು ನಿನ್ನ ಸಮಾನ ರಾಜರೊಡನೆ ತೋರಿಸು, ಎಂದು ಕೌರವ ವೀರರು ಹೇಳಿ ಬಾಣಗಳ ಮಳೆಯನ್ನು ಸುರಿಸಲು, ಪರಾಕ್ರಮಿಯಾದ ಕೀಚಕನು ಆ ಬಾಣಗಳನ್ನು ಕಡಿದೆಸೆದನು.

ಅರ್ಥ:
ಹೋಗು: ತೆರಳು; ನಿಲ್ಲು: ತಡೆ; ಹುಲು: ಕ್ಷುಲ್ಲಕ; ಮಂಡಳಿಕ: ಒಂದು ಪ್ರಾಂತ್ಯದ ಅಧಿಪತಿ; ಬಲುಗಡಿ: ಮಹಾಪರಾಕ್ರಮ; ತೋರು: ಪ್ರದರ್ಶಿಸು; ರಾಯ: ರಾಜ; ತೊಲಗು: ತೆರಳು; ಸೈರಿಸು: ತಾಳು; ಬಿಲು: ಬಿಲ್ಲು; ಉರು: ವಿಶೇಷವಾದ; ಸರಳು: ಬಾಣ; ಸರಿವಳೆ: ಒಂದೇ ಸಮನಾಗಿ ಸುರಿವ ಮಳೆ; ಸುರಿ: ವರ್ಷಿಸು; ವಿಕ್ರಮ: ಪರಾಕ್ರಮಿ; ಸವರು: ನಾಶಗೊಳಿಸು; ಶರ: ಬಾಣ; ತತಿ: ಗುಂಪು; ಅಲಘು: ಭಾರವಾದ;

ಪದವಿಂಗಡಣೆ:
ಎಲವೊ +ಕೀಚಕ +ಹೋಗದಿರು +ನಿಲ್
ಎಲವೊ +ಹುಲು +ಮಂಡಳಿಕ +ನಿನ್ನಯ
ಬಲುಗಡಿಯ +ತೋರುವುದು +ನಿನ್ನಂತರದ+ ರಾಯರಲಿ
ತೊಲಗು +ಸೈರಿಸೆನುತ್ತಲ್+ಉರೆ +ಬಿಲು
ಬಲುಸರಳ+ ಸರಿವಳೆಯ+ ಸುರಿಯಲ್ಕ್
ಅಲಘು ವಿಕ್ರಮ +ಕೀಚಕನು +ಸವರಿದನು +ಶರತತಿಯ

ಅಚ್ಚರಿ:
(೧) ಕೀಚಕನನ್ನು ಹಂಗಿಸುವ ಪರಿ – ಎಲವೊ ಹುಲು ಮಂಡಳಿಕ
(೨) ಕೀಚಕನ ಪರಾಕ್ರಮ – ಅಲಘು ವಿಕ್ರಮ ಕೀಚಕನು ಸವರಿದನು ಶರತತಿಯ