ಪದ್ಯ ೪೩: ಶಲ್ಯನ ಬಾಣ ಪ್ರಯೋಗ ಹೇಗಿತ್ತು?

ಏನ ಹೇಳುವೆ ಭಟನ ಶರ ಸಂ
ಧಾನವನು ಪುಂಖಾನುಪುಂಖವಿ
ಧಾನವನು ಝೇಂಕಾರಶರಜಾಳಪ್ರಸಾರಣವ
ಆ ನಿರಂತರ ಸರಳ ಸಾರದ
ಸೋನೆ ಸದೆದುದು ಧರ್ಮಸುತನ ರ
ಣಾನುರಾಗವ ತೊಳೆದುದದ್ಭುತವಾಯ್ತು ನಿಮಿಷದಲಿ (ಶಲ್ಯ ಪರ್ವ, ೩ ಸಂಧಿ, ೪೩ ಪದ್ಯ)

ತಾತ್ಪರ್ಯ:
ಶಲ್ಯನ ಬಾಣ ಸಂಧಾನವನ್ನು ಏನೆಂದು ಹೊಗಳಲಿ, ಅವನ ಬಾಣಗಳು ಒಂದರ ಹಿಂದೊಂದು ಸದ್ದುಮಾಡುತ್ತಾ ಧರ್ಮಜನನ್ನು ನಿರಂತರವಾಗಿ ಘಾತಿಸಲು, ಯುದ್ಧಮಾಡುವ ಆಸಕ್ತಿಯೇ ಅವನಿಗಿಲ್ಲವಾಯಿತು.

ಅರ್ಥ:
ಹೇಳು: ತಿಳಿಸು; ಭಟ: ಸೈನಿಕ; ಶರ: ಬಾಣ; ಸಂಧಾನ: ಸೇರಿಸುವುದು, ಹೊಂದಿಸುವುದು; ಪುಂಖಾನುಪುಂಖ: ಒಂದು ಬಾಣದ ಹಿಳುಕನ್ನನುಸರಿಸಿ ಮತ್ತೊಂದು; ವಿಧಾನ: ರೀತಿ; ಝೇಂಕಾರ: ದುಂಬಿಗಳ ಮೊರೆತ, ಧ್ವನಿ; ಶರಜಾಳ: ಬಾಣದ ಗುಂಪು; ಪ್ರಸಾರಣ: ಪ್ರಸಾರ, ಹರಡುವಿಕೆ; ನಿರಂತರ: ಯಾವಾಗಲು; ಸರಳ: ಬಾಣ; ಸಾರ: ಸತ್ವ; ಸೋನೆ: ಮಳೆ; ಸದೆ: ಹೊಡಿ; ಸುತ: ಮಗ; ರಣ: ಯುದ್ಧ; ಅನುರಾಗ: ಪ್ರೀತಿ; ತೊಳೆ: ಸ್ವಚ್ಛಮಾಡು; ಅದ್ಭುತ: ಆಶ್ಚರ್ಯ; ನಿಮಿಷ: ಕ್ಷಣ;

ಪದವಿಂಗಡಣೆ:
ಏನ+ ಹೇಳುವೆ +ಭಟನ +ಶರ +ಸಂ
ಧಾನವನು +ಪುಂಖಾನುಪುಂಖ +ವಿ
ಧಾನವನು +ಝೇಂಕಾರ+ಶರಜಾಳ+ಪ್ರಸಾರಣವ
ಆ +ನಿರಂತರ+ ಸರಳ+ ಸಾರದ
ಸೋನೆ +ಸದೆದುದು +ಧರ್ಮಸುತನ +ರಣ
ಅನುರಾಗವ+ ತೊಳೆದುದ್+ಅದ್ಭುತವಾಯ್ತು +ನಿಮಿಷದಲಿ

ಅಚ್ಚರಿ:
(೧) ಸ ಕಾರದ ಸಾಲು ಪದ – ಸರಳ ಸಾರದ ಸೋನೆ ಸದೆದುದು
(೨) ಶರ, ಸರಳ – ಸಮಾನಾರ್ಥಕ ಪದ
(೩) ಯುದ್ಧದ ಆಸಕ್ತಿ ಕಳೆಯಿತು ಎಂದು ಹೇಳಲು – ಧರ್ಮಸುತನ ರಣಾನುರಾಗವ ತೊಳೆದುದ್
(೪) ಶರಸಂಧಾನ, ಶರಜಾಳ, ಸರಳ ಸಾರದ ಸೋನೆ – ಬಾಣಗಳನ್ನು ವಿವರಿಸುವ ಪದಗಳು

ಪದ್ಯ ೫೨: ಅರ್ಜುನನ ಬಾಣವನ್ನು ಎದುರಿಸಲು ಯಾರು ಬಂದರು?

ನೂಕಿದರು ಶಲ್ಯಂಗೆ ಪಡಿಬಲ
ದಾಕೆವಾಳರು ಗುರುಸುತಾದ್ಯರು
ತೋಕಿದರು ಶರಜಾಳವರ್ಜುನನಂಬಿನಂಬುಧಿಯ
ಬೀಕಲಿನ ಭಟರುಬ್ಬಿದರೆ ಸು
ವ್ಯಾಕುಲರು ತುಬ್ಬಿದರೆ ತಪ್ಪೇ
ನೀ ಕಳಂಬವ ಕಾಯುಕೊಳ್ಳೆನುತೆಚ್ಚನಾ ಪಾರ್ಥ (ಶಲ್ಯ ಪರ್ವ, ೨ ಸಂಧಿ, ೫೨ ಪದ್ಯ)

ತಾತ್ಪರ್ಯ:
ಶಲ್ಯನಿಗೆ ಸಹಾಯಮಾಡಲು ಅಶ್ವತ್ಥಾಮನೇ ಮೊದಲಾದ ವೀರರು ಅರ್ಜುನನ ಬಾಣಗಳ ಸಮುದ್ರವನ್ನು ತಮ್ಮ ಬಾಣಗಳಿಂದ ಇದಿರಿಸಿದರು. ದುರ್ಬಲ ಯೋಧರು ಉಬ್ಬಿದರೆ, ನೊಂದವರು ಉತ್ಸಾಹದಿಂದ ಮುಂದೆ ಬಂದರೆ, ತಪ್ಪೇನು? ಈ ಬಾಣದಿಂದ ನಿನ್ನನ್ನು ರಕ್ಷಿಸಿಕೋ ಎಂದು ಅರ್ಜುನನು ಹೊಡೆದನು.

ಅರ್ಥ:
ನೂಕು: ತಳ್ಳು; ಪಡಿಬಲ: ವೈರಿಸೈನ್ಯ; ಆಕೆವಾಳ: ಪರಾಕ್ರಮಿ; ಸುತ: ಮಗ; ಆದಿ: ಮುಂತಾದ; ತೋಕು: ಎಸೆ, ಪ್ರಯೋಗಿಸು, ಚೆಲ್ಲು; ಶರ: ಬಾಣ; ಜಾಲ: ಗುಂಪು; ಅಂಬು: ಬಾಣ; ಅಂಬುಧಿ: ಸಾಗರ; ಬೀಕಲು: ಕೊನೆ, ಅಂತ್ಯ; ಭಟ: ಸೈನಿಕ; ಉಬ್ಬು: ಅತಿಶಯ, ಉತ್ಸಾಹ; ವ್ಯಾಕುಲ: ದುಃಖ, ವ್ಯಥೆ; ತುಬ್ಬು: ಪತ್ತೆ ಮಾಡು, ಶೋಧಿಸು; ಕಳಂಬ: ಬಾಣ, ಅಂಬು; ಕಾಯ್ದು: ಕಾಪಾಡು; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ನೂಕಿದರು +ಶಲ್ಯಂಗೆ +ಪಡಿಬಲದ್
ಆಕೆವಾಳರು +ಗುರುಸುತಾದ್ಯರು
ತೋಕಿದರು +ಶರಜಾಳವ್+ಅರ್ಜುನನ್+ಅಂಬಿನ್+ಅಂಬುಧಿಯ
ಬೀಕಲಿನ+ ಭಟರ್+ಉಬ್ಬಿದರೆ+ ಸು
ವ್ಯಾಕುಲರು +ತುಬ್ಬಿದರೆ +ತಪ್ಪೇನ್
ಈ+ ಕಳಂಬವ+ ಕಾಯ್ದುಕೊಳ್ಳೆನುತ್+ಎಚ್ಚನಾ +ಪಾರ್ಥ

ಅಚ್ಚರಿ:
(೧) ಶರಜಾಳವರ್ಜುನನಂಬಿನಂಬುಧಿಯ – ಅಂಬು ಪದದ ಬಳಕೆ
(೨) ಉಬ್ಬಿದರೆ, ತುಬ್ಬಿದರೆ – ಪ್ರಾಸ ಪದಗಳು
(೩) ಕಳಂಬ, ಅಂಬು, ಶರ – ಸಮಾನಾರ್ಥಕ ಪದ