ಪದ್ಯ ೧೪: ಊರ್ವಶಿಯು ಮಣಿಮಂಚದ ಮೇಲೆ ಯಾರನ್ನು ಕಂಡಳು?

ಬಾಗಿಲಲಿ ಬಾಗಿಲಲಿ ನಿಂದರು
ಸೋಗೆಗಣ್ಣಬಲೆಯರು ಸೆಜ್ಜೆಯ
ಬಾಗಿಲಲಿ ಚಾಮರದ ಹಡಪದ ಚಪಲೆಯರು ಸಹಿತ
ಆ ಗರುವೆ ಹೊಕ್ಕಳು ಮಹಾಹಿಯ
ಭೋಗತಲ್ಪದ ಹರಿಯೊಲಿಹ ಶತ
ಯಾಗಸುತನನು ಕಂಡಳಂಗನೆ ಮಣಿಯಮಂಚದಲಿ (ಅರಣ್ಯ ಪರ್ವ, ೯ ಸಂಧಿ, ೧೪ ಪದ್ಯ)

ತಾತ್ಪರ್ಯ:
ಅರ್ಜುನನ ಅರಮನೆಯ ಬಾಗಿಲು ಬಾಗಿಲುಗಳಲ್ಲಿಯೂ ಕಡೆಗಣ್ಣಿನಿಂದ ನೋಡುತ್ತಿರುವ ಸುಂದರಿಯರು ಕಾವಲು ನಿಂತಿದ್ದರು. ಅರ್ಜುನನು ಮಲಗುವ ಮನೆಯ ಬಾಗಿಲಿನಲ್ಲಿ ಚಾಮರ ಬೀಸುವ ತಾಂಬೂಲದ ಚೀಲವನ್ನು ಹೊತ್ತ ತರುಣಿಯರು ನಿಂತಿದ್ದರು, ಮಹಾಸ್ವಾಭಿಮಾನಿಯಾದ ಊರ್ವಶಿಯು ಶಯ್ಯಾಗೃಹವನ್ನು ಹೊಕ್ಕು ಆದಿಶೇಷನ ಮೇಲೆ ಮಲಗಿದ ವಿಷ್ಣುವಿನಂತೆ ಮಣಿಮಂಚದ ಮೇಲೆ ಮಲಗಿದ್ದ ಅರ್ಜುನನನ್ನು ಕಂಡಳು.

ಅರ್ಥ:
ಬಾಗಿಲು: ಕದ; ನಿಂದು: ನಿಲ್ಲು; ಸೋಗೆ: ಕಣ್ಣಿನ-ತುದಿ, ಕುಡಿ, ಕಡೆ ಗಣ್ಣು; ಕಣ್ಣು: ನಯನ; ಅಬಲೆ: ಹೆಣ್ಣು; ಸೆಜ್ಜೆ: ಮಲಗುವ ಮನೆ, ಶಯ್ಯಾಗೃಹ; ಚಾಮರ: ಚಮರ ಮೃಗದ ಬಾಲದ ಕೂದಲಿನಿಂದ ತಯಾರಿಸಿದ ಕುಂಚ; ಹಡಪ: ಅಡಕೆ ಎಲೆಯ ಚೀಲ; ಚಪಲೆ: ಚಂಚಲೆ; ಸಹಿತ: ಜೊತೆ; ಗರುವೆ: ಸೊಗಸುಗಾತಿ, ಚೆಲುವೆ; ಹೊಕ್ಕು: ಸೇರು; ಮಹಾ: ದೊಡ್ಡ, ಶ್ರೇಷ್ಠ; ಅಹಿ: ಹಾವು; ಭೋಗ: ಸುಖವನ್ನು ಅನುಭವಿಸುವುದು; ಹರಿ: ವಿಷ್ಣು; ಶತಯಾಗ: ನೂರು ಯಾಗ ಮಾಡಿದವನು-ಇಂದ್ರ; ಸುತ: ಮಗ; ಕಂಡಳು: ನೋಡು; ಮಣಿ: ರತ್ನ; ಮಂಚ: ಪರ್ಯಂಕ;

ಪದವಿಂಗಡಣೆ:
ಬಾಗಿಲಲಿ +ಬಾಗಿಲಲಿ+ ನಿಂದರು
ಸೋಗೆಗಣ್ಣ್+ಅಬಲೆಯರು +ಸೆಜ್ಜೆಯ
ಬಾಗಿಲಲಿ +ಚಾಮರದ +ಹಡಪದ +ಚಪಲೆಯರು +ಸಹಿತ
ಆ +ಗರುವೆ +ಹೊಕ್ಕಳು +ಮಹ+ಅಹಿಯ
ಭೋಗತಲ್ಪದ +ಹರಿಯೊಲಿಹ +ಶತ
ಯಾಗಸುತನನು +ಕಂಡಳ್+ಅಂಗನೆ+ ಮಣಿಯ+ಮಂಚದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಆ ಗರುವೆ ಹೊಕ್ಕಳು ಮಹಾಹಿಯ ಭೋಗತಲ್ಪದ ಹರಿಯೊಲಿಹ ಶತಯಾಗಸುತನನು ಕಂಡಳಂಗನೆ