ಪದ್ಯ ೩೪: ಭೀಮ ದುರ್ಯೋಧನರು ಹೇಗೆ ಹೋರಾಡಿದರು?

ಮತ್ತೆ ಹೊಕ್ಕರು ದಿಗ್ಗಜಕೆ ಮದ
ಮತ್ತ ದಿಗ್ಗಜ ಮಲೆತವೊಲು ಮಿಗೆ
ಹತ್ತಿದರು ಶತಮನ್ಯು ಜಂಭನ ಜೋಡಿಯಂದದಲಿ
ತತ್ತರಿಬ್ಬರು ಮೂಕದನುಜನ
ಕೃತ್ತಿವಾಸನವೋಲು ರಣಧೀ
ರೋತ್ತಮರು ಕಯ್ಯಿಕ್ಕಿದರು ಕೌರವ ವೃಕೋದರರು (ಗದಾ ಪರ್ವ, ೬ ಸಂಧಿ, ೩೪ ಪದ್ಯ)

ತಾತ್ಪರ್ಯ:
ಯಾವ ರೀತಿ ದಿಗ್ಗಜವು ದಿಗ್ಗಜವನ್ನಿದಿರಿಸುವಂತೆ, ಇಂದ್ರ ಜಂಭಾಸುರನನ್ನು ಹೋರಾಡಿದಂತೆ, ಮೂಕಾಸುರನೂ ಶಿವನೂ ಹೋರಾಡಿದಂತೆ, ರಣಧೀರರಾದ ಭೀಮ ದುರ್ಯೋಧನರು ಎದುರಾದರು.

ಅರ್ಥ:
ಮತ್ತೆ: ಪುನಃ; ಹೊಕ್ಕು: ಸೇರು; ದಿಗ್ಗಜ: ಶೂರ, ಪರಾಕ್ರಮಿ; ಮದ: ಅಹಂಕಾರ, ಅಮಲು; ಮಲೆತ: ಗರ್ವಿಸಿದ, ಸೊಕ್ಕಿದ; ಮಿಗೆ: ಹೆಚ್ಚು; ಹತ್ತು: ಮೇಲೇರು; ಶತಮನ್ಯು: ಇಂದ್ರ; ಜೋಡಿ: ಜೊತೆ; ತತ್ತರಿ: ತುಂಡಾಗಿ ಮಾಡು; ಅನುಜ: ತಮ್ಮ; ಕೃತ್ತಿವಾಸ: ಜಿಂಕೆಯ ಚರ್ಮ ಹೊದ್ದವ-ಶಿವ; ರಣಧೀರ: ಪರಾಕ್ರಮಿ; ಕಯ್ಯಿಕ್ಕು: ಹೋರಾಡು;

ಪದವಿಂಗಡಣೆ:
ಮತ್ತೆ +ಹೊಕ್ಕರು+ ದಿಗ್ಗಜಕೆ+ ಮದ
ಮತ್ತ+ ದಿಗ್ಗಜ+ ಮಲೆತವೊಲು +ಮಿಗೆ
ಹತ್ತಿದರು +ಶತಮನ್ಯು+ ಜಂಭನ +ಜೋಡಿಯಂದದಲಿ
ತತ್ತರಿಬ್ಬರು+ ಮೂಕದ್+ಅನುಜನ
ಕೃತ್ತಿವಾಸನವೋಲು +ರಣಧೀ
ರೋತ್ತಮರು +ಕಯ್ಯಿಕ್ಕಿದರು +ಕೌರವ +ವೃಕೋದರರು

ಅಚ್ಚರಿ:
(೧) ಉಪಮಾನಗಳ ಪ್ರಯೋಗ – ದಿಗ್ಗಜಕೆ ಮದಮತ್ತ ದಿಗ್ಗಜ ಮಲೆತವೊಲು, ಶತಮನ್ಯು ಜಂಭನ ಜೋಡಿಯಂದದಲಿ, ತತ್ತರಿಬ್ಬರು ಮೂಕದನುಜನಕೃತ್ತಿವಾಸನವೋಲು

ಪದ್ಯ ೬೬: ಕಾಶ್ಮೀರ ರಾವುತರು ಹೇಗೆ ಹೋರಾಡಿದರು?

ಅರರೆ ಕವಿದರು ಕದಳಿಯನು ಮದ
ಕರಿಯು ತೊತ್ತಳದುಳಿದವೊಲು ದಿಂ
ಡುರುಳಿಚಿದರಗಕೋಟಿಯನು ಶತಮನ್ಯುವಂದದಲಿ
ಶಿರವೊಡೆಯೆ ತೊಡೆಯುಡಿಯೆ ಕೈ ಕ
ತ್ತರಿಸೆ ಕೋಳಾಹಳ ಮಹಾಸಂ
ಗರದೊಳಗೆ ಹೊಯ್ದಾಡಿದರು ಕಾಶ್ಮೀರರಾವುತರು (ಭೀಷ್ಮ ಪರ್ವ, ೪ ಸಂಧಿ, ೬೬ ಪದ್ಯ)

ತಾತ್ಪರ್ಯ:
ಮದ್ದಾನೆಯು ಬಾಳೆಯ ವನವನ್ನು ತುಳಿದು ಮುರಿಯುವಂತೆ, ಇಮ್ದ್ರನು ಪರ್ವತಗಳನ್ನು ಮುರಿಯುವಂತೆ ಶತ್ರುಗಳ ತಲೆಗಳನ್ನೊಡೆದು, ತೊಡೆಗಳನ್ನು ಖಂಡಿಸಿ ಕೈಗಳನ್ನು ಕತ್ತರಿಸಿ, ಕೋಲಾಹಲ ಮಾಡುತ್ತಾ ಕಾಶ್ಮೀರ ರಾವುತರು ಹೊಯ್ದಾಡಿದರು.

ಅರ್ಥ:
ಕವಿ: ಆವರಿಸು; ಕದಳಿ: ಬಾಳೆ; ಮದಕರಿ: ಸೊಕ್ಕಿದ ಆನೆ; ತೊತ್ತಳ: ನುಗ್ಗುನುರಿ, ರಭಸ; ಉಳಿದ: ಮಿಕ್ಕ; ಉರುಳು: ಕೆಳಕ್ಕೆ ಬೀಳು; ಅಗ: ಬೆಟ್ಟ; ಕೋಟಿ: ಲೆಕ್ಕವಿಲ್ಲದ; ಶತಮನ್ಯು: ದೇವೇಂದ್ರ; ಶಿರ: ತಲೆ; ಒಡೆ: ಸೀಳು; ತೊಡೆ:ಊರು; ಕತ್ತರಿಸು: ಸೀಳು; ಕೋಲಾಹಲ: ಗೊಂದಲ; ಮಹಾಸಂಗರ: ಮಹಾಯುದ್ಧ; ಹೊಯ್ದಾಡು: ಹೋರಾಡು; ರಾವುತ: ಕುದುರೆ ಸವಾರ, ಅಶ್ವಾರೋಹಿ; ಉಡಿ: ಮುರಿ;

ಪದವಿಂಗಡಣೆ:
ಅರರೆ +ಕವಿದರು +ಕದಳಿಯನು +ಮದ
ಕರಿಯು +ತೊತ್ತಳದ್+ಉಳಿದವೊಲು +ದಿಂಡ್
ಉರುಳಿಚಿದರ್+ಅಗ+ಕೋಟಿಯನು +ಶತಮನ್ಯುವಂದದಲಿ
ಶಿರವೊಡೆಯೆ+ ತೊಡೆ+ಉಡಿಯೆ +ಕೈ +ಕ
ತ್ತರಿಸೆ +ಕೋಳಾಹಳ +ಮಹಾ+ಸಂ
ಗರದೊಳಗೆ +ಹೊಯ್ದಾಡಿದರು+ ಕಾಶ್ಮೀರ+ರಾವುತರು

ಅಚ್ಚರಿ:
(೧) ಉಪಮಾನದ ಪ್ರಯೋಗ – ಅರರೆ ಕವಿದರು ಕದಳಿಯನು ಮದಕರಿಯು ತೊತ್ತಳದುಳಿದವೊಲು ದಿಂ
ಡುರುಳಿಚಿದರಗಕೋಟಿಯನು ಶತಮನ್ಯುವಂದದಲಿ

ಪದ್ಯ ೮೩: ಇಂದ್ರನು ಅರ್ಜುನನನ್ನು ಹೇಗೆ ಬರಮಾಡಿಕೊಂಡನು?

ಇಳಿದು ರಥವನು ದಿವಿಜರಾಯನ
ನಿಳಯವನು ಹೊಕ್ಕನು ಕಿರೀಟಿಯ
ನಳವಿಯಲಿ ಕಂಡಿದಿರು ಬಂದನು ನಗುತ ಶತಮನ್ಯು
ಸೆಳೆದು ಬಿಗಿದಪ್ಪಿದನು ಕರದಲಿ
ತಳುಕಿ ಕರವನು ತಂದು ತನ್ನಯ
ಕೆಲದೊಳಗೆ ಕುಳ್ಳಿರಿಸಿದನು ಸಿಂಹಾಸನಾರ್ಧದಲಿ (ಅರಣ್ಯ ಪರ್ವ, ೮ ಸಂಧಿ, ೮೩ ಪದ್ಯ)

ತಾತ್ಪರ್ಯ:
ಅರ್ಜುನನು ರಥವನ್ನಿಳಿದು ದೇವೇಂದ್ರನ ಮನೆಯನ್ನು ಹೊಕ್ಕನು. ಹತ್ತಿರದಲ್ಲೇ ಅವನನ್ನು ಕಂಡು ಇಂದ್ರನು ನಗುತ್ತಾ ಎದುರುಬಂದನು. ಮಗನನ್ನು ಬರಸೆಳೆದು ಬಿಗಿದಪ್ಪಿ ಕೈಗೆ ಕೈಯನ್ನು ಜೋಡಿಸಿ, ಕರೆದೊಯ್ದು ತನ್ನ ಸಿಂಹಾಸನದಲ್ಲಿ ದೇವೇಂದ್ರನು ಅರ್ಜುನನನ್ನು ಕುಳ್ಳಿರಿಸಿಕೊಂಡನು.

ಅರ್ಥ:
ಇಳಿ: ಕೆಳಕ್ಕೆ ಬಾ; ರಥ: ಬಂಡಿ; ದಿವಿಜ: ದೇವತೆ; ರಾಯ: ಒಡೆಯ; ನಿಳಯ: ಮನೆ; ಹೊಕ್ಕು: ಸೇರು; ಕಿರೀಟಿ: ಅರ್ಜುನ; ಅಳವಿ: ಹತ್ತಿರ; ಕಂಡು: ನೋಡು, ಭೇಟಿ; ಇದಿರು: ಎದುರು; ಬಂದು: ಆಗಮಿಸು; ನಗುತ: ಸಂತಸ; ಶತಮನ್ಯು: ದೇವೇಂದ್ರ; ಸೆಳೆ: ಆಕರ್ಷಿಸು; ಬಿಗಿ: ಭದ್ರವಾಗಿ; ಅಪ್ಪು: ಆಲಂಗಿಸು; ಕರ: ಹಸ್ತ; ತಳುಕು: ಜೋಡಣೆ; ಕರ: ಹಸ್ತ; ತಂದು: ಬರೆಮಾಡು; ಕೆಲ: ಹತ್ತಿರ; ಕುಳ್ಳಿರಿಸು: ಆಸೀನನಾಗು; ಸಿಂಹಾಸನ: ರಾಜರ ಆಸನ; ಅರ್ಧ: ಎರಡು ಸಮಪಾಲುಗಳಲ್ಲಿ ಒಂದು;

ಪದವಿಂಗಡಣೆ:
ಇಳಿದು+ ರಥವನು +ದಿವಿಜ+ರಾಯನ
ನಿಳಯವನು +ಹೊಕ್ಕನು +ಕಿರೀಟಿಯ
ನಳವಿಯಲಿ+ ಕಂಡ್+ಇದಿರು +ಬಂದನು +ನಗುತ +ಶತಮನ್ಯು
ಸೆಳೆದು +ಬಿಗಿದಪ್ಪಿದನು +ಕರದಲಿ
ತಳುಕಿ +ಕರವನು +ತಂದು +ತನ್ನಯ
ಕೆಲದೊಳಗೆ +ಕುಳ್ಳಿರಿಸಿದನು +ಸಿಂಹಾಸನ+ಅರ್ಧದಲಿ

ಅಚ್ಚರಿ:
(೧) ಪ್ರೀತಿ, ಮಮಕಾರ, ವಾತ್ಸಲ್ಯವನ್ನು ತೋರುವ ಪರಿ – ಸೆಳೆದು ಬಿಗಿದಪ್ಪಿದನು ಕರದಲಿ
ತಳುಕಿ ಕರವನು ತಂದು ತನ್ನಯ ಕೆಲದೊಳಗೆ ಕುಳ್ಳಿರಿಸಿದನು ಸಿಂಹಾಸನಾರ್ಧದಲಿ

ಪದ್ಯ ೩೭: ಬಾಣವನ್ನು ನೋಡಿದ ಇಂದ್ರನ ಸ್ಥಿತಿ ಹೇಗಿತ್ತು?

ಕೆಟ್ಟು ಸುರರೋಡಿದರು ಕಂಬದಿ
ನೆಟ್ಟ ಬಾಣವ ಕಂಡು ಬೆರಗಿನ
ದೃಷ್ಟಿಯಲಿ ಶರದೆಸುಗೆ ಲಿಖಿತವಿದಾವನೆಸುಗೆಗಳು
ಕೆಟ್ಟೆನೋ ಶಿವ ಎನುತಲೋಲೆಯ
ಬಿಟ್ಟು ತಂದರು ಬಹಳ ತವಕದಿ
ಕೊಟ್ಟನಾಗಳೆ ಕರೆದು ಕರಣಿಕಪತಿಗೆ ಶತಮನ್ಯು (ಆದಿ ಪರ್ವ, ೨೧ ಸಂಧಿ, ೩೭ ಪದ್ಯ)

ತಾತ್ಪರ್ಯ:
ಬಾಣವು ಕಂಬವನ್ನು ನಾಟಿದುದನ್ನು ಕಂಡು ದೇವತೆಗಳು ನಾವು ಕೆಟ್ಟೆವು ಎಂದು ಭಯಭೀತರಾಗಿ ಓಡಿದರು, ಆ ಬಾಣವನ್ನು ಕಂಡ ಇಂದ್ರನು ಬೆರಗಾಗಿ, ಆಶ್ಚರ್ಯದ ಕಣ್ಣುಗಳಿಂದ ಬಾಣಕ್ಕೆ ಹೊಂದಿದ ಪತ್ರವನ್ನು ನೋಡಿ ಶಿವ ಶಿವಾ ನಾನು ಕೆಟ್ಟೆ ಎಂದು ಕಳವಳಗೊಂಡನು. ದೂತರು ಆ ಪತ್ರವನ್ನು ದೇವೇಂದ್ರನಿಗೆ ಕೊಡಲು ಅವನು ಕರಣಿಕರಿಗೆ ಆ ಪತ್ರವನ್ನು ಕೊಟ್ಟು ಓದಲು ಹೇಳಿದನು.

ಅರ್ಥ:
ಕೆಟ್ಟು: ಕೆಡು, ಹಾಳು; ಸುರರು: ದೇವತೆಗಳು; ಓಡು: ಪಲಾಯನ; ಕಂಬ: ಮಾಡಿನ ಆಧಾರಕ್ಕೆ ನಿಲ್ಲಿಸುವ ಮರ ಕಲ್ಲು; ನೆಟ್ಟ: ನೇರವಾದ, ಸೇರಿದ; ಬಾಣ: ಅಂಬು; ಕಂಡು: ನೋಡಿ; ಬೆರಗು: ಆಶ್ಚರ್ಯ; ದೃಷ್ಟಿ: ವೀಕ್ಷಿಸು; ಶರ: ಬಾಣ;ಎಸು: ಬಾಣ ಪ್ರಯೋಗ ಮಾಡು; ಲಿಖಿತ: ಬರೆದ; ಓಲೆ: ಪತ್ರ; ತವಕ: ಕಾತುರ, ಕುತೂಹಲ; ಕರಣಿಕ: ಲೆಕ್ಕಬರೆಯುವವನು; ಶತಮನ್ಯು: ದೇವೇಂದ್ರ;

ಪದವಿಂಗಡಣೆ:
ಕೆಟ್ಟು +ಸುರರ್+ಓಡಿದರು +ಕಂಬದಿ
ನೆಟ್ಟ +ಬಾಣವ +ಕಂಡು +ಬೆರಗಿನ
ದೃಷ್ಟಿಯಲಿ +ಶರದೆಸುಗೆ+ ಲಿಖಿತವ್+ಇದಾವನ್+ಎಸುಗೆಗಳು
ಕೆಟ್ಟೆನೋ +ಶಿವ+ ಎನುತಲ್+ಓಲೆಯ
ಬಿಟ್ಟು +ತಂದರು +ಬಹಳ +ತವಕದಿ
ಕೊಟ್ಟನಾಗಳೆ +ಕರೆದು +ಕರಣಿಕಪತಿಗೆ+ ಶತಮನ್ಯು

ಅಚ್ಚರಿ:
(೧) ಇಂದ್ರನನ್ನು ಶತಮನ್ಯು ಎಂದು ಕರೆದಿರುವುದು
(೨) ಕೆಟ್ಟು, ಬಿಟ್ಟು, ನೆಟ್ಟ, ಕೊಟ್ಟ – ಪ್ರಾಸ ಪದ
(೩) ಬಾಣ, ಶರ – ಸಮನಾರ್ಥಕ ಪದ