ಪದ್ಯ ೩: ಸುಯೋಧನನು ಎಂತಹ ವ್ಯಕ್ತಿ ಎಂದು ವ್ಯಾಸರು ತಿಳಿಸಿದರು?

ನಿನ್ನ ಸುತನುದ್ದಂಡತನದಲಿ
ನಿನ್ನ ತಮ್ಮನ ತನುಜರನು ಪರಿ
ಖಿನ್ನರನು ಮಾಡಿದನು ಕಪಟದ್ಯೂತಕೇಳಿಯಲಿ
ನಿನ್ನ ಮತ ವಿದುರೋಕ್ತಿಗಳ ಮೇಣ್
ಮನ್ನಿಸಿದನೇ ಜಗವರಿಯೆ ಸಂ
ಪನ್ನ ಶಠನಹನೈ ಸುಯೊಧನನೆಂದನಾ ಮುನಿಪ (ಗದಾ ಪರ್ವ, ೧೧ ಸಂಧಿ, ೩ ಪದ್ಯ)

ತಾತ್ಪರ್ಯ:
ನಿನ್ನ ಮಗನು ದರ್ಪ ಅಹಮ್ಕಾರಗಳಿಂದ ಪಾಂಡವರನ್ನು ಕಪಟ ದ್ಯೂತದಲ್ಲಿ ನೋಯಿಸಿದನು. ನಿನ್ನ ಅಥವ ವಿದುರನ ನುಡಿಗಳನ್ನು ಕೇಳಿದನೇ? ಅದನ್ನು ಒಪ್ಪಿಕೊಂಡನೇ? ನಿನ್ನ ಮಗನು ಸಂಪೂರ್ಣವಾಗಿ ದುಷ್ಟನು, ಧೂರ್ತ ಎಂದು ವೇದವ್ಯಾಸ ಮುನಿಗಳು ಧೃತರಾಷ್ಟ್ರನಿಗೆ ಹೇಳಿದರು.

ಅರ್ಥ:
ಸುತ: ಮಗ; ಉದ್ದಂಡ: ದರ್ಪ, ಗರ್ವ; ತಮ್ಮ: ಅನುಜ; ತನುಜ: ಮಕ್ಕಳು; ಖಿನ್ನ: ಖೇದ, ವಿಷಾದ; ಕಪಟ: ಮೋಸ; ದ್ಯೂತ: ಜೂಜು; ಕೇಳಿ: ಆಟ, ಕ್ರೀಡೆ; ಮತ: ವಿಚಾರ, ಅಭಿಪ್ರಾಯ; ಉಕ್ತಿ: ಮಾತು, ಹೇಳಿಕೆ; ಮೇಣ್: ಅಥವಾ; ಮನ್ನಿಸು: ಗೌರವಿಸು; ಜಗ: ಪ್ರಪಂಚ; ಅರಿ: ತಿಳಿ; ಸಂಪನ್ನ: ಪರಿಪೂರ್ಣ; ಶಠ: ದುಷ್ಟ, ಧೂರ್ತ; ಮುನಿ: ಋಷಿ;

ಪದವಿಂಗಡಣೆ:
ನಿನ್ನ +ಸುತನ್+ಉದ್ದಂಡತನದಲಿ
ನಿನ್ನ+ ತಮ್ಮನ +ತನುಜರನು +ಪರಿ
ಖಿನ್ನರನು +ಮಾಡಿದನು +ಕಪಟದ್ಯೂತ+ಕೇಳಿಯಲಿ
ನಿನ್ನ+ ಮತ +ವಿದುರೋಕ್ತಿಗಳ+ ಮೇಣ್
ಮನ್ನಿಸಿದನೇ +ಜಗವ್+ಅರಿಯೆ +ಸಂ
ಪನ್ನ+ ಶಠನಹನೈ +ಸುಯೊಧನನ್+ಎಂದನಾ +ಮುನಿಪ

ಅಚ್ಚರಿ:
(೧) ಮತ, ಉಕ್ತಿ – ಸಾಮ್ಯಾರ್ಥ ಪದ
(೨) ನಿನ್ನ, ಖಿನ್ನ, ಸಂಪನ್ನ – ಪ್ರಾಸ ಪದಗಳು
(೩) ಸುಯೋಧನನನ್ನು ವಿವರಿಸುವ ಪರಿ – ಸಂಪನ್ನ ಶಠ

ಪದ್ಯ ೫೫: ವ್ರತಿ, ಮುಮುಕ್ಷು, ಕೃತಘ್ನನ ಲಕ್ಷಣಗಳೇನು?

ಕೃತಕವಲ್ಲದೆ ದ್ವಂದ್ವಸಹನೇ
ವ್ರತಿ ಮುಮುಕ್ಷು ವಿಚಾರಯುಕ್ತನು
ಕೃತಕನೇ ಶಠಗಪ್ರಗಲ್ಭ ಕೃತಘ್ನನೇ ಕ್ರೂರ
ಕ್ಷಿತಿಗೆ ಲೋಭಿಯೆ ಕಷ್ಟನಾತ್ಮ ನಿ
ರತನೆ ಮುಕ್ತನು ವೇದ ಮಾರ್ಗ
ಚ್ಯುತನೆ ಲೋಕದ್ವಯಕೆ ದೂರನು ಫಣಿಪ ಕೇಳೆಂದ (ಅರಣ್ಯ ಪರ್ವ, ೧೪ ಸಂಧಿ, ೫೫ ಪದ್ಯ)

ತಾತ್ಪರ್ಯ:
ಸುಖ ದುಃಖ ಶೀತೋಷ್ಣ ಮೊದಲಾದ ದ್ವಂದ್ವಗಳನ್ನು ಸಹಜವಾಗಿ ಸಹಿಸುವವನೇ ವ್ರತಿ, ಮುಮುಕ್ಷುವೇ ವಿಚಾರಯುಕ್ತನು. ಕೃತಕ ಆಚಾರನು ಶಠ, ಹೇಡಿಯಾದ ಕೃತಘ್ನನು ಕ್ರೂರ. ಲೋಭಿಯೇ ಕಷ್ಟ, ಆತ್ಮನಲ್ಲಿ ನಿಂತವನೇ ಮುಕ್ತ, ವೇದಮಾರ್ಗವನ್ನು ಬಿಟ್ಟವನಿಗೆ ಇಹವೂ ಇಲ್ಲ ಪರವೂ ಇಲ್ಲ.

ಅರ್ಥ:
ಕೃತಕ: ಕಪಟ; ದ್ವಂದ್ವ: ಎರಡು ಜೊತೆ, ಪರಸ್ಪರ ವಿರುದ್ಧ; ಸಹನೆ: ಸಹಿಸು, ತಾಳ್ಮೆ; ವ್ರತಿ: ನಿಯಮಬದ್ಧವಾದ ನಡವಳಿಕೆಯುಳ್ಳವನು; ಮುಮುಕ್ಷು: ಮುಕ್ತಿಯನ್ನು ಬಯಸುವವನು; ವಿಚಾರ: ಪರ್ಯಾಲೋಚನೆ; ಯುಕ್ತ: ಕೌಶಲ, ನೈಪುಣ್ಯ; ಶಠ: ದುಷ್ಟ, ಧೂರ್ತ; ಅಪ್ರಗಲ್ಭ: ಅಜ್ಞಾನಿ, ಮೂರ್ಖ; ಕೃತಘ್ನ: ಉಪಕಾರವನ್ನು ಮರೆಯುವವನು; ಕ್ರೂರ: ನಿರ್ದಯಿ, ನಿಷ್ಕರುಣಿ; ಕ್ಷಿತಿ: ಭೂಮಿ; ಲೋಭಿ: ಕೃಪಣ, ಜಿಪುಣ; ಕಷ್ಟ: ಕಠಿಣ, ಶ್ರಮ; ಆತ್ಮ: ಜೀವ, ಪರಬ್ರಹ್ಮ; ನಿರತ: ಆಸಕ್ತ, ಮಗ್ನ; ಮುಕ್ತ: ಬಿಡುಗಡೆ ಹೊಂದಿದವನು; ವೇದ: ಶೃತಿ; ಮಾರ್ಗ: ದಾರಿ; ಚ್ಯುತ: ಕಳೆದುಕೊಂಡವನು, ಜಾರಿದ; ಲೋಕ: ಜಗತ್ತು; ದ್ವಯ: ಎರಡು; ದೂರ: ಹತ್ತಿರವಲ್ಲದುದು; ಫಣಿಪ: ಹಾವಿನ ಒಡೆಯ; ಕೇಳು: ಆಲಿಸು;

ಪದವಿಂಗಡಣೆ:
ಕೃತಕವಲ್ಲದೆ +ದ್ವಂದ್ವ+ಸಹನೇ
ವ್ರತಿ +ಮುಮುಕ್ಷು +ವಿಚಾರ+ಯುಕ್ತನು
ಕೃತಕನೇ +ಶಠಗ+ಪ್ರಗಲ್ಭ+ ಕೃತಘ್ನನೇ +ಕ್ರೂರ
ಕ್ಷಿತಿಗೆ +ಲೋಭಿಯೆ +ಕಷ್ಟನ್+ಆತ್ಮ +ನಿ
ರತನೆ +ಮುಕ್ತನು +ವೇದ +ಮಾರ್ಗ
ಚ್ಯುತನೆ +ಲೋಕದ್ವಯಕೆ +ದೂರನು +ಫಣಿಪ +ಕೇಳೆಂದ

ಅಚ್ಚರಿ:
(೧) ಕೃತಕ – ೧, ೩ ಸಾಲಿನ ಮೊದಲ ಪದ

ಪದ್ಯ ೫೩: ನಹುಷನು ಯಾವ ಪ್ರಶ್ನೆಗಳನ್ನು ಕೇಳಿದನು?

ಧೀರನಾವನು ದಿಟ್ಟನಾರು ವಿ
ಕಾರಿಯಾರು ವಿನೀತನಾರಾ
ಚಾರ ಹೀನನದಾರು ಸುವ್ರತಿ ಯಾರು ಶಠನಾರು
ಕ್ರೂರನಾರತಿಕಷ್ಟನಾರು ವಿ
ಚಾರಿಯಾರು ವಿಮುಕ್ತನಾರು ವಿ
ದೂರನಾರಿಹಪರಕೆ ಭೂಮೀಪಾಲ ಹೇಳೆಂದ (ಅರಣ್ಯ ಪರ್ವ, ೧೪ ಸಂಧಿ, ೫೩ ಪದ್ಯ)

ತಾತ್ಪರ್ಯ:
ನಹುಷನು ತನ್ನ ಪ್ರಶ್ನಮಾಲಿಕೆಯನ್ನು ಮುಂದುವರೆಸುತ್ತಾ, ಧೀರನಾರು, ದಿಟ್ಟನಾರು, ಯಾರು ವಿಕಾರಿ, ವಿನೀತನ ಗುಣವಾವುದು, ಆಚಾರ ಹೀನನಾರು, ಸುವ್ರತಿಯಾರು, ಯಾರು ದುಷ್ಟ, ಯಾರು ಕ್ರೂರಿ, ಯಾರು ಕಠಿಣರಾದವರು, ಯಾರು ಮುಕ್ತ ಇಹಪರಗಳೆರಡಕ್ಕೂ ಹೊರಗಿನವನಾರು ಎಂದು ನಹುಷನು ಕೇಳಿದನು.

ಅರ್ಥ:
ಧೀರ: ಶೂರ, ಪರಾಕ್ರಮಿ; ದಿಟ್ಟ: ಧೈರ್ಯಶಾಲಿ, ಸಾಹಸಿ, ಗಟ್ಟಿಗ; ವಿಕಾರ: ಮನಸ್ಸಿನ ವಿಕೃತಿ;ವಿನೀತ: ಸೌಜನ್ಯದಿಂದ ಕೂಡಿದ ವ್ಯಕ್ತಿ; ಆಚಾರ: ಕಟ್ಟುಪಾಡು, ಸಂಪ್ರದಾಯ; ಹೀನ: ಕೆಟ್ಟ, ದುಷ್ಟ; ವ್ರತಿ: ನಿಯಮಬದ್ಧವಾದ ನಡವಳಿಕೆಯುಳ್ಳವನು; ಶಠ: ದುಷ್ಟ, ಧೂರ್ತ; ಕ್ರೂರ: ದುಷ್ಟ; ಕಷ್ಟ: ಕಠಿಣವಾದದ್ದು; ವಿಚಾರ: ಪರ್ಯಾಲೋಚನೆ, ವಿಮರ್ಶೆ, ವಿವೇಕ; ವಿಮುಕ್ತ: ಬಿಡುಗಡೆಯಾದವನು, ಮುಕ್ತ; ವಿದೂರ: ಪಡೆಯಲಸಾಧ್ಯವಾದ; ಇಹಪರ: ಈ ಲೋಕ ಮತ್ತು ಪರಲೋಕ; ಭೂಮೀಪಾಲ: ರಾಜ; ಹೇಳು: ತಿಳಿಸು;

ಪದವಿಂಗಡಣೆ:
ಧೀರನಾವನು +ದಿಟ್ಟನಾರು +ವಿ
ಕಾರಿಯಾರು +ವಿನೀತನಾರ್
ಆಚಾರ +ಹೀನನದಾರು +ಸುವ್ರತಿ+ ಯಾರು +ಶಠನಾರು
ಕ್ರೂರನಾರ್+ಅತಿಕಷ್ಟನಾರು +ವಿ
ಚಾರಿಯಾರು +ವಿಮುಕ್ತನಾರು +ವಿ
ದೂರನಾರ್+ಇಹಪರಕೆ+ ಭೂಮೀಪಾಲ+ ಹೇಳೆಂದ

ಅಚ್ಚರಿ:
(೧) ಮನುಷ್ಯರ ಗುಣಗಳು – ವಿಕಾರಿ, ದಿಟ್ಟ, ಧೀರ, ಆಚಾರಹೀನ, ಸುವ್ರತಿ, ಶಠ, ಕ್ರೂರ, ಕಷ್ಟ, ವಿಚಾರಿ, ವಿಮುಕ್ತ, ವಿದೂರ

ಪದ್ಯ ೪೮: ಧರ್ಮರಾಯನು ದುರ್ಯೋಧನನಿಗೆ ಏನು ಹೇಳಿದ?

ಎನ್ನ ಲೆಕ್ಕಕೆ ಶಕುನಿ ಭೂಪತಿ
ನಿನ್ನೊಡನೆ ಕೈಹೊದ್ಯನೊಡ್ಡವ
ನೆನ್ನೊಡನೆ ಹೇಳೆಂದು ನುಡಿದನು ಕೌರವರರಾಯ
ನಿನ್ನೊಳಾಗಲಿ ನಿನ್ನ ಮಾವನೆ
ಮುನ್ನಬರಲಿದಕೇನೆನುತೆ ಸಂ
ಪನ್ನ ಶಠರೊಡನಳವಿಗೊಟ್ಟವನೀಶನಿಂತೆಂದ (ಸಭಾ ಪರ್ವ, ೧೪ ಸಂಧಿ, ೪೮ ಪದ್ಯ)

ತಾತ್ಪರ್ಯ:
ನನ್ನ ಪರವಾಗಿ ಗಂಧಾರದ ದೊರೆ ಶಕುನಿಯು ನಿನ್ನೊಡನೆ ಕಣಕ್ಕಿಳಿದಿದ್ದಾನೆ. ಪಣವನ್ನು ನನಗೇ ಹೇಳು, ಎಂದು ದುರ್ಯೋಧನನು ಹೇಳಲು, ಯುಧಿಷ್ಠಿರನು, ನೀನಾದರೂ ಬಾ, ಇಲ್ಲವೇ ನಿನ್ನ ಮಾವನೇ ಬರಲಿ ಅದರಿಂದೇನಾಯಿತು ಎಂದು ಧೂರ್ತರಾದ ಶಕುನಿ, ದುರ್ಯೋಧನನನ್ನು ಪಣಕ್ಕೆ ಆಹ್ವಾನಿಸಿದನು.

ಅರ್ಥ:
ಲೆಕ್ಕ: ಎಣಿಕೆ; ಭೂಪತಿ: ರಾಜ; ಕೈಹೊಯ್ದ: ಸೆಣಸು, ಆಡು; ಕೈ: ಹಸ್ತ; ಹೊಯ್ದು: ಹೊಡೆದು; ಒಡ್ಡ: ಜೂಜಿನಲ್ಲಿ ಪಣಕ್ಕೆ ಇಡುವ ದ್ರವ್ಯ; ಹೇಳು: ತಿಳಿಸು; ನುಡಿ: ಮಾತು; ರಾಯ: ದೊರೆ; ಮಾವ: ತಾಯಿಯ ಸಹೋದರ; ಮುನ್ನ: ಮುಂದೆ; ಬರಲಿ: ಆಗಮಿಸು; ಸಂಪನ್ನ: ಸಮೃದ್ಧವಾದ; ಶಠ: ದುಷ್ಟ, ಧೂರ್ತ; ಅಳವಿ: ಯುದ್ಧ, ಹತ್ತಿರ; ಅವನೀಶ: ರಾಜ;

ಪದವಿಂಗಡಣೆ:
ಎನ್ನ+ ಲೆಕ್ಕಕೆ+ ಶಕುನಿ+ ಭೂಪತಿ
ನಿನ್ನೊಡನೆ +ಕೈಹೊಯ್ದನ್+ಒಡ್ಡವನ್
ಎನ್ನೊಡನೆ+ ಹೇಳೆಂದು +ನುಡಿದನು +ಕೌರವರರಾಯ
ನಿನ್ನೊಳಾಗಲಿ+ ನಿನ್ನ +ಮಾವನೆ
ಮುನ್ನಬರಲ್+ಇದಕೇನ್+ಎನುತೆ +ಸಂ
ಪನ್ನ +ಶಠರೊಡನ್+ಅಳವಿಗೊಟ್ಟ್+ಅವನೀಶನ್+ಇಂತೆಂದ

ಅಚ್ಚರಿ:
(೧) ರಾಯ, ಅವನೀಶ, ಭೂಪತಿ – ಸಮನಾರ್ಥಕ ಪದ
(೨) ದುರ್ಯೋಧನನನ್ನು ಸಂಪನ್ನ ಶಠರೊಡನ ಪದದ ಬಳಕೆ