ಪದ್ಯ ೧೮: ಕುಂತಿಯು ಯಾರ ಬಳಿ ಬಂದಳು?

ಏನಿದೆತ್ತಣ ರಭಸ ಮಾದ್ರೀ
ಮಾನಿನಿಯೊ ಹಾ ರಾಯನಾವೆಡೆ
ಹಾನಿ ಹಿರಿದುಂಟರಿವೆನಂಗಸ್ಫುರಿತ ಶಕುನದಲಿ
ಏನು ಮಾರಿಯೋ ಶಿವಶಿವಾಯೆನು
ತಾ ನಿತಂಬಿನಿ ಗಾಢ ಗತಿಯಲಿ
ಕಾನನದೊಳೈ ತಂದಳಕ್ಕೆಯ ಸರದ ಬಳಿವಿಡಿದು (ಆದಿ ಪರ್ವ, ೫ ಸಂಧಿ, ೧೮ ಪದ್ಯ)

ತಾತ್ಪರ್ಯ:
ಕುಂತಿಯು, ಇದೇನು? ಯಾವ ಕಡೆಯಿಂದ ಈ ಕೂಗು ಕೇಳಿಸುತ್ತಿದೆ, ಒರಲಿದವಳು ಮಾದ್ರಿಯೇ? ಅಯ್ಯೋ ಪಾಂಡು ಎಲ್ಲಿರುವನು? ನನಗುಂಟಾಗುತ್ತಿರುವ ದೇಹಸ್ಫುರಣದ ಅಪಶಕುನದಿಂದ ಬಹು ಹೆಚ್ಚಿನ ಕೇಡು ಕಾದಿದೆ ಎಂದು ತಿಳಿಯುತ್ತೇನೆ, ಯಾವ ಅಪಾಯವೋ ಶಿವಶಿವಾ ಎನ್ನುತ್ತಾ ಆ ಕಾಡಿನಲ್ಲಿ ಜೋರಾಗಿ ಅಳುತ್ತಾ ಅಲ್ಲಿಗೆ ಬಂದಳು.

ಅರ್ಥ:
ಎತ್ತಣ: ಎಲ್ಲಿ; ರಭಸ: ವೇಗ; ಮಾನಿನಿ: ಹೆಣ್ಣು; ರಾಯ: ರಾಜ; ಹಾನಿ: ಹಾಳು, ನಾಶ; ಹಿರಿ: ದೊಡ್ಡದು; ಅರಿ: ತಿಳಿ; ಅಂಗ: ದೇಹದ ಭಾಗ; ಸ್ಫುರಿತ: ಹೊಳೆವ, ಪ್ರಕಾಶಿಸುವ; ಶಕುನ: ಶುಭಾಶುಭಗಳನ್ನು ಸೂಚಿಸುವ ನಿಮಿತ್ತ; ಮಾರಿ: ಅಪಾಯ, ಕ್ಷುದ್ರ ದೇವತೆ; ನಿತಂಬಿನಿ: ಹೆಣ್ಣು; ಗಾಢ: ಹೆಚ್ಚಳ, ಅತಿಶಯ; ಗತಿ: ವೇಗ; ಕಾನನ: ಕಾಡು; ಐತಂದು: ಬಂದು ಸೇರು; ಅಕ್ಕೆ: ಅಳುವಿಕೆ; ಸರ: ಶಬ್ದ, ಸ್ವರ; ಬಳಿ: ಹತ್ತಿರ;

ಪದವಿಂಗಡಣೆ:
ಏನಿದ್+ಎತ್ತಣ +ರಭಸ +ಮಾದ್ರೀ
ಮಾನಿನಿಯೊ +ಹಾ +ರಾಯನ್+ಆವೆಡೆ
ಹಾನಿ +ಹಿರಿದುಂಟ್+ಅರಿವೆನ್+ಅಂಗಸ್ಫುರಿತ +ಶಕುನದಲಿ
ಏನು +ಮಾರಿಯೋ +ಶಿವಶಿವಾ+ಎನುತ್
ಆ+ ನಿತಂಬಿನಿ +ಗಾಢ +ಗತಿಯಲಿ
ಕಾನನದೊಳ್+ಐತಂದಳ್+ಅಕ್ಕೆಯ+ ಸರದ +ಬಳಿವಿಡಿದು

ಅಚ್ಚರಿ:
(೧) ರಭಸ, ಗಾಢಗತಿ – ಸಾಮ್ಯಾರ್ಥ ಪದ
(೨) ಮಾನಿನಿ, ನಿತಂಬಿನಿ – ಹೆಣ್ಣನ್ನು ಸೂಚಿಸುವ ಪದಗಳು

ಪದ್ಯ ೪: ಯುಧಿಷ್ಠಿರನಿಗೆ ಯಾವ ಶಕುನವುಂಟಾಯಿತು?

ಆ ಶರತ್ಕಾಲವನು ತದ್ವನ
ವಾಸದಲಿ ನೂಕಿದನು ಘನ ಪರಿ
ತೋಷ ಸೂಚಕ ಶಕುನವಂಗಸ್ಫುರಣೆ ಮೊದಲಾದ
ಮೀಸಲಳಿಯದ ಹರುಷರಸದಾ
ವೇಶದಲಿ ಮನವುಕ್ಕಿ ಹಿಗ್ಗಿದ
ನೀ ಶಕುನ ಸುಮ್ಮಾನವಿದಕೇನಹುದು ಫಲವೆಂದ (ಅರಣ್ಯ ಪರ್ವ, ೧೫ ಸಂಧಿ, ೪ ಪದ್ಯ)

ತಾತ್ಪರ್ಯ:
ಕಾಮ್ಯಕವನದಲ್ಲೇ ಶರತ್ಕಾಲವು ಕಳೆಯಿತು. ಆಗ ಯುಧಿಷ್ಠಿರನಿಗೆ ಶುಭಶಕುನ ಅಂಗಸ್ಫುರಣೆ (ಬಲಭುಜ, ಬಲಗಣ್ಣು ಅದಿರುವುದು) ಗಳಾಗಲು ಅವನಿಗೆ ಅತೀವ ಸಂತೋಷವಾಯಿತು, ಈ ಶುಭ ಶಕುನಕ್ಕೇನು ಫಲ ಎಂದು ಯೋಚಿಸಿದನು.

ಅರ್ಥ:
ಕಾಲ: ಸಮಯ; ವನ: ಕಾಡು; ವಾಸ: ಸ್ಥಾನ; ನೂಕು: ತಳ್ಳು; ಘನ: ಶ್ರೇಷ್ಠ; ಪರಿತೋಷ: ಆಸೆಯಿಲ್ಲದಿರುವಿಕೆ, ವಿರಕ್ತಿ; ಸೂಚಕ: ಸುಳಿವು, ಸೂಚನೆ; ಶಕುನ: ಶುಭಾಶುಭಗಳನ್ನು ಸೂಚಿಸುವ ನಿಮಿತ್ತ; ಅಂಗ: ದೇಹದ ಭಾಗ; ಸ್ಫುರಣ: ನಡುಗುವುದು; ಮೀಸಲು: ಮುಡಿಪು; ಅಳಿ:ನಾಶ; ಹರುಷ: ಸಂತಸ; ರಸ: ಸಾರ; ಆವೇಶ: ಆಗ್ರಹ; ಮನ: ಮನಸ್ಸು; ಉಕ್ಕು: ಹಿಗ್ಗುವಿಕೆ; ಸುಮ್ಮಾನ: ಸುಮನ, ಸಂತಸ; ಫಲ: ಪ್ರಯೋಜನ;

ಪದವಿಂಗಡಣೆ:
ಆ +ಶರತ್ಕಾಲವನು + ತದ್+ವನ
ವಾಸದಲಿ +ನೂಕಿದನು+ ಘನ +ಪರಿ
ತೋಷ +ಸೂಚಕ +ಶಕುನವ್+ಅಂಗಸ್ಫುರಣೆ+ ಮೊದಲಾದ
ಮೀಸಲ್+ಅಳಿಯದ +ಹರುಷ+ರಸದ್
ಆವೇಶದಲಿ +ಮನವುಕ್ಕಿ+ ಹಿಗ್ಗಿದನ್
ಈ +ಶಕುನ +ಸುಮ್ಮಾನವ್+ಇದಕೇನಹುದು+ ಫಲವೆಂದ

ಅಚ್ಚರಿ:
(೧) ಅತೀವ ಸಂತಸವಾಯಿತೆನಲು – ಅಳಿಯದ ಹರುಷರಸದಾವೇಶದಲಿ ಮನವುಕ್ಕಿ ಹಿಗ್ಗಿದನ್

ಪದ್ಯ ೨೨: ಬೇಡರು ಅಡವಿಯಲ್ಲಿ ಹೇಗೆ ಸಾಗಿದರು?

ಬಗೆಯನವ ಶಕುನವ ಮೃಗವ್ಯದ
ಸೊಗಡಿನಲಿ ಸಿಲುಕಿದ ಮನೋ ವೃ
ತ್ತಿಗಳೊಳುಂಟೆ ವಿವೇಕ ಧರ್ಮ ವಿಚಾರ ವಿಸ್ತಾರ
ಹೊಗರೊಗುವ ಹೊಂಗರಿಯ ಬಿಲುಸರ
ಳುಗಳ ಹೊದೆಗಳ ನಡೆದುದಡವಿಯ
ಬೆಗಡುಗೊಳಿಸುತ ಮುಂದೆ ಮುಂದೆ ಪುಳಿಂದ ಸಂದೋಹ (ಅರಣ್ಯ ಪರ್ವ, ೧೪ ಸಂಧಿ, ೨೨ ಪದ್ಯ)

ತಾತ್ಪರ್ಯ:
ಬೇಟೆಯ ವ್ಯಸನದಲ್ಲಿ ಸಿಕ್ಕ ಮನೋವೃತ್ತಿಯುಳ್ಳವರಿಗೆ ಯಾವುದು ಸರಿ, ಯಾವುದು ತಪ್ಪು ಎನ್ನುವು ವಿವೇಕೆ ಜ್ಞಾನ ಇರುವುದೇ? ಭೀಮನು ಶುಭ ಅಶುಭಗಳನ್ನು ಲೆಕ್ಕಿಸಲಿಲ್ಲ. ಬಂಗಾರದ ಕಾಂತಿಯುಳ್ಳ ರೆಕ್ಕೆಗಳಿಂದ ಅಲಂಕೃತಗೊಂಡು, ಬಿಲ್ಲು ಬಾಣಗಳನ್ನು ಹಿಡಿದ ಬೇಡರು ಅಡವಿಯನ್ನು ಬೆರಗುಗೊಳಿಸುತ್ತಾ ಅಡವಿಯಲ್ಲಿ ಭೀಮನ ಮುಂದೆ ನಡೆದರು.

ಅರ್ಥ:
ಬಗೆ: ಆಲೋಚನೆ, ಯೋಚನೆ; ಶಕುನ: ಶುಭಾಶುಭಗಳನ್ನು ಸೂಚಿಸುವ ನಿಮಿತ್ತ; ಮೃಗವ್ಯ: ಬೇಟೆ; ಸೊಗಡು: ತೀಕ್ಷ್ಣವಾದ ಗಂಧ; ಸಿಲುಕು: ಬಂಧನ; ಮನ: ಮನಸ್ಸು; ವೃತ್ತಿ: ನಡವಳಿಕೆ, ಸ್ಥಿತಿ; ವಿವೇಕ: ಯುಕ್ತಾಯುಕ್ತ ವಿಚಾರ; ಧರ್ಮ: ಧಾರಣೆ ಮಾಡಿದುದು; ವಿಚಾರ: ಪರ್ಯಾಲೋಚನೆ, ವಿಮರ್ಶೆ; ವಿಸ್ತಾರ: ಹರಹು; ಹೊಗರು: ಪ್ರಕಾಶಿಸು, ಕಾಂತಿ; ಒಗು: ಹೊರಹೊಮ್ಮುವಿಕೆ; ಹೊಂಗರಿ: ಚಿನ್ನದ ರೆಕ್ಕೆ; ಬಿಲು: ಚಾಪ; ಸರಳ: ಬಾಣ; ಹೊದೆ: ಬಾಣಗಳನ್ನಿಡುವ ಕೋಶ; ನಡೆ: ಚಲಿಸು; ಅಡವಿ: ಕಾಡು; ಬೆಗಡು: ಆಶ್ಚರ್ಯ, ಬೆರಗು; ಮುಂದೆ: ಮುನ್ನ, ಎದುರು; ಪುಳಿಂದ: ಬೇಡ; ಸಂದೋಹ: ಗುಂಪು;

ಪದವಿಂಗಡಣೆ:
ಬಗೆಯನವ+ ಶಕುನವ +ಮೃಗವ್ಯದ
ಸೊಗಡಿನಲಿ +ಸಿಲುಕಿದ+ ಮನೋ +ವೃ
ತ್ತಿಗಳೊಳ್+ಉಂಟೆ +ವಿವೇಕ +ಧರ್ಮ +ವಿಚಾರ+ ವಿಸ್ತಾರ
ಹೊಗರೊಗುವ+ ಹೊಂಗರಿಯ+ ಬಿಲು+ಸರ
ಳುಗಳ +ಹೊದೆಗಳ+ ನಡೆದುದ್+ಅಡವಿಯ
ಬೆಗಡುಗೊಳಿಸುತ +ಮುಂದೆ +ಮುಂದೆ +ಪುಳಿಂದ +ಸಂದೋಹ

ಅಚ್ಚರಿ:
(೧) ವ್ಯಸನಕ್ಕೀಡಾದ ಮನಸ್ಸಿನ ಸ್ಥಿತಿ – ಮೃಗವ್ಯದಸೊಗಡಿನಲಿ ಸಿಲುಕಿದ ಮನೋ ವೃ
ತ್ತಿಗಳೊಳುಂಟೆ ವಿವೇಕ ಧರ್ಮ ವಿಚಾರ ವಿಸ್ತಾರ

ಪದ್ಯ ೨೧: ಯಾವ ಶಕುನಗಳನ್ನು ಭೀಮನು ಕಂಡನು?

ಹೆಸರ ನಾಯ್ಗಳ ಹಾಸ ಹರಿದು
ಬ್ಬಸದ ಲುಳಿಗದವರ್ದಿರ ಹಿಡಿಮೃಗ
ಮಸಗಿದವು ಹದವಿಲುಗಳೊದೆದವು ಹೆದೆಯ ಹರಿವಿನಲಿ
ನುಸುಳಿದವು ಮೊಲನುರಿಯ ಹೊಗೆಗಳ
ದೆಸೆವಿಡಿದು ಕೆದರಿದವು ಹೊಲದಲಿ
ಹಸುಬ ಹರಡೆಗಳೇನನೆಂಬೆನು ಶಕುನ ಸೂಚಕವ (ಅರಣ್ಯ ಪರ್ವ, ೧೪ ಸಂಧಿ, ೨೧ ಪದ್ಯ)

ತಾತ್ಪರ್ಯ:
ಬೇಟೆಗೆ ಬಹು ಪ್ರಸಿದ್ಧವೂ ಪ್ರಶಸ್ತವೂ ಆದ ನಾಯಿಗಳ ಸಾಲಿನ ನಡುವೆ ಬೇಟೆಗೆ ಬಳಸುವ ಸಾಕು ಪ್ರಾಣಿಗಳು ನುಗ್ಗಿದವು. ಬೇಟೆಗೆ ಹದಗೊಳಿಸಿದ್ದ ಬಿಲ್ಲುಗಳ ಹೆದೆಗಳು ಹರಿದು ಹೋದವು. ಮೊಲಗಳು ಮೇಲೆ ಬಂದವು, ಉರಿ ಹೊಗೆಗಳು ಕಂಡವು, ಹಸುಬ ಹರಡೆಗಳು ಆ ದಿಕ್ಕಿಗೆ ಹಾರಿದವು. ಅಶುಭಸೂಚಕಗಳನ್ನು ನಾನೇನೆಂದು ಹೇಳಲಿ.

ಅರ್ಥ:
ಹೆಸರ: ಪ್ರಸಿದ್ಧ; ನಾಯಿ: ಶ್ವಾನ; ಹಾಸ: ಬಂಧನ, ಹಗ್ಗ; ಹರಿ: ಓಡು, ಧಾವಿಸು, ಪ್ರವಹಿಸು; ಉಬ್ಬಸ: ಕಷ್ಟ, ಸಂಕಟ; ಲುಳಿ: ರಭಸ; ಹಿಡಿ: ಬಂಧಿಸು; ಮೃಗ: ಪ್ರಾಣಿ; ಮಸಗು: ಹರಡು; ಹದ: ಸರಿಯಾದ ಸ್ಥಿತಿ; ಒದೆ: ತುಳಿ, ಮೆಟ್ಟು, ತಳ್ಳು; ಹೆದೆ: ಬಿಲ್ಲಿಗೆ ಹೂಡುವ ಬಾಣಕ್ಕೆ ಆಧಾರವಾದ ಸೂತ್ರ; ಹರಿವು: ದಾಳಿ, ಮುತ್ತಿಗೆ; ನುಸುಳು: ತೂರುವಿಕೆ; ಉರಿ:ಸಂಕಟ; ಹೊಗೆ: ಧೂಮ; ದೆಸೆ: ದಿಕ್ಕು; ಕೆದರು: ಹರಡು; ಹೊಲ: ಬೆಳೆ ಬೆಳೆಯುವ ಭೂಮಿ; ಹಸುಬ: ಒಂದು ಬಗೆಯ ಹಕ್ಕಿ; ಹರಡೆ: ಶಕುನದ ಹಕ್ಕಿ, ಹಾಲಕ್ಕಿ; ಶಕುನ: ಶುಭಾಶುಭಗಳನ್ನು ಸೂಚಿಸುವ ನಿಮಿತ್ತ, ಹಕ್ಕಿ; ಸೂಚಕ: ತೋರಿಸು;

ಪದವಿಂಗಡಣೆ:
ಹೆಸರ+ ನಾಯ್ಗಳ +ಹಾಸ +ಹರಿದ್
ಉಬ್ಬಸದ +ಲುಳಿಗದ್+ಅವದಿರ +ಹಿಡಿ+ಮೃಗ
ಮಸಗಿದವು +ಹದವಿಲುಗಳ್+ಒದೆದವು +ಹೆದೆಯ +ಹರಿವಿನಲಿ
ನುಸುಳಿದವು +ಮೊಲನ್+ಉರಿಯ +ಹೊಗೆಗಳ
ದೆಸೆವಿಡಿದು +ಕೆದರಿದವು +ಹೊಲದಲಿ
ಹಸುಬ +ಹರಡೆಗಳ್+ಏನನೆಂಬೆನು +ಶಕುನ +ಸೂಚಕವ

ಅಚ್ಚರಿ:
(೧) ಹ ಕಾರದ ಸಾಲು ಪದಗಳು – ಹೊಲದಲಿ ಹಸುಬ ಹರಡೆಗಳ್, ಹೆದೆಯ ಹರಿವಿನಲಿ

ಪದ್ಯ ೨೩: ಶುಭಶಕುನಗಳನ್ನು ಕಂಡ ವಿಪ್ರರು ಏನೆಂದು ಯೋಚಿಸಿದರು?

ಚಾರು ಶಕುನವಿದುತ್ತರೋತ್ತರ
ವಾರಿಗಿದು ಫಲಿಸುವುದೊ ನಮ್ಮೊಳು
ಹಾರುವರ ಹುಲುಮೊತ್ತ ಕನ್ಯಾಲಾಭ ಫಲವಿದಕೆ
ಭೂರಿಭಾಗ್ಯನು ನಮ್ಮ ವಿಪ್ರರೊ
ಳಾರೆನುತ ತತ್ ಶಕುನಫಲ ವಿ
ಸ್ತಾರವನು ನೆರೆ ವಿವರಿಸುತ ನಡೆದುದು ಬುಧಸ್ತೋಮ (ಆದಿ ಪರ್ವ, ೧೧ ಸಂಧಿ, ೨೩ ಪದ್ಯ)

ತಾತ್ಪರ್ಯ:
ಇವೆಲ್ಲವೂ ಒಳ್ಳೆಯ ಲಕ್ಷಣಗಳು ಕನ್ಯಾಲಾಭವನ್ನು ಸೂಚಿಸುತ್ತವೆ, ನಾವಾದರೋ ಬ್ರಾಹ್ಮಣರು, ನಮ್ಮಲ್ಲಿರುವ ಯಾವ ಭಾಗ್ಯಶಾಲಿಗಿದೆ ಈ ಅದೃಷ್ಟ ಎಂದು ಮಾತಾನಾಡಿಕೊಳ್ಳುತ್ತಾ ಆ ಬ್ರಾಹ್ಮಣರ ಗುಂಪು ಸಾಗಿತು.

ಅರ್ಥ:
ಚಾರು: ಸುಂದರ, ಒಳ್ಳೆಯ; ಶಕುನ: ಸೂಚನೆ; ಉತ್ತರೋತ್ತರ: ಮೇಲಿಂದ ಮೇಲೆ ಅಭಿವೃದ್ಧಿ; ಆರಿಗೆ: ಯಾರಿಗೆ; ಫಲ: ಲಾಭ, ಪ್ರಯೋಜನ; ಹಾರುವ:ಬ್ರಾಹ್ಮಣ; ಹುಲು:ಅಲ್ಪ; ಕನ್ಯ: ಹುಡುಗಿ; ಲಾಭ: ದೊರಕಿದುದು, ಪ್ರಾಪ್ತಿ; ಭೂರಿ: ಹೆಚ್ಚು; ಭಾಗ್ಯ: ಅದೃಷ್ಟ; ವಿಪ್ರ: ಬ್ರಾಹ್ಮಣ; ವಿಸ್ತಾರ: ವ್ಯಾಪ್ತಿ, ವಿವರ; ನಡೆ: ಚಲಿಸು, ಕ್ರಮಿಸು; ಬುಧ: ಬ್ರಾಹ್ಮಣ;

ಪದವಿಂಗಡನೆ:
ಚಾರು +ಶಕುನವಿದ್+ಉತ್ತರೋತ್ತರವ್
ಆರಿಗಿದು +ಫಲಿಸುವುದೊ +ನಮ್ಮೊಳು
ಹಾರುವರ+ ಹುಲುಮೊತ್ತ +ಕನ್ಯಾಲಾಭ +ಫಲವಿದಕೆ
ಭೂರಿಭಾಗ್ಯನು+ ನಮ್ಮ +ವಿಪ್ರರೊಳ್
ಆರೆನುತ +ತತ್ +ಶಕುನಫಲ+ ವಿ
ಸ್ತಾರವನು +ನೆರೆ +ವಿವರಿಸುತ+ ನಡೆದುದು +ಬುಧಸ್ತೋಮ

ಅಚ್ಚರಿ:
(೧) ಬ್ರಾಹ್ಮಣ ಪದದ ಸಮಾನಾರ್ಥಕ ಪದಗಳು: ಬುಧ, ವಿಪ್ರ, ಹಾರುವ
(೨) ಫಲ – ಫಲಿಸುವುದೊ, ಫಲವಿದಕೆ, ಶಕುನಫಲ – ೩ ಬಾರಿ ಪ್ರಯೋಗ
(೩) ಆರಿಗಿದು, ಆರೆನುತ – ೨, ೫ ಸಾಲಿನ ಮೊದಲ ಪದಗಳು
(೪) ಶಕುನ – ೨ ಬಾರಿ ಪ್ರಯೋಗ, ೧, ೫ ಸಾಲು