ಪದ್ಯ ೮: ವಿರಾಟನು ಏಕೆ ಚಿಂತಿಸಿದ?

ಜೀಯ ಸಿಂಹಾಸನಕೆ ದಿವಿಜರ
ರಾಯನೋ ಶಂಕರನೊ ಮೇಣ್ ನಾ
ರಾಯಣನೊ ನರರಲ್ಲ ದೇವರು ಬಂದು ನೋಡುವುದು
ಕಾಯಲಸದಳವೆಮಗೆನಲು ನಿ
ರ್ದಾಯದಲಿ ನೆಲೆಗೊಂಡ ನಿರ್ಜರ
ರಾಯನಾರೆಂದೆನುತಲಾಗ ವಿರಾಟ ಚಿಂತಿಸಿದ (ವಿರಾಟ ಪರ್ವ, ೧೧ ಸಂಧಿ, ೮ ಪದ್ಯ)

ತಾತ್ಪರ್ಯ:
ದ್ವಾರಪಾಲಕರು, ಅಂತಃಪುರದ ಅಧಿಕಾರಿಗಳು ವಿರಾಟನಲ್ಲಿಗೆ ಬಂದು, ಜೀಯಾ ಸಿಂಹಾಸನದ ಮೇಲೆ ಇಂದ್ರನೋ, ಶಿವನೋ, ವಿಷ್ಣುವೋ, ಯಾರೋ ಬಂದು ಕುಳಿತಿದ್ದಾರೆ, ಅವರು ಮಾನವರಲ್ಲ, ಕಾವಲು ಕಾಯುವುದು ಅಸಾಧ್ಯ, ಎಂದು ಬಿನ್ನವಿಸಲು; ಹೀಗೆ ಬಂದು ಕುಳಿತ ದೇವರಾಜನು ಯಾರು ಎಂದು ವಿರಾಟನು ಚಿಂತಿಸಿದನು.

ಅರ್ಥ:
ಜೀಯ: ಒಡೆಯ; ಸಿಂಹಾಸನ: ಕೇಸರಿ ಪೀಠ; ದಿವಿಜ: ದೇವತೆ; ದಿವಿಜರಾಯ: ಇಂದ್ರ; ಶಂಕರ: ಶಿವ; ಮೇಣ್: ಅಥವ; ನಾರಾಯಣ: ವಿಷ್ಣು; ನರ: ಮನುಷ್ಯ; ದೇವರು: ಭಗವಮ್ತ; ನೋಡು: ವೀಕ್ಷಿಸು; ಕಾಯು: ಕಾಪಾಡು,ಕಾವಲಿರು; ಅಸದಳ: ಅಸಾಧ್ಯ; ನಿರ್ದಾಯದ: ಅಖಂಡ; ನೆಲೆ: ಆಶ್ರಯ, ಆಧಾರ; ನಿರ್ಜರರಾಯ: ಇಂದ್ರ; ಚಿಂತಿಸು: ಯೋಚಿಸು; ನಿರ್ಜರ: ದೇವತೆ;

ಪದವಿಂಗಡಣೆ:
ಜೀಯ +ಸಿಂಹಾಸನಕೆ +ದಿವಿಜರ
ರಾಯನೋ +ಶಂಕರನೊ+ ಮೇಣ್+ ನಾ
ರಾಯಣನೊ +ನರರಲ್ಲ+ ದೇವರು +ಬಂದು +ನೋಡುವುದು
ಕಾಯಲ್+ಅಸದಳವ್+ಎಮಗೆನಲು +ನಿ
ರ್ದಾಯದಲಿ +ನೆಲೆಗೊಂಡ +ನಿರ್ಜರ
ರಾಯನ್+ಆರೆಂದ್+ಎನುತಲ್+ಆಗ +ವಿರಾಟ +ಚಿಂತಿಸಿದ

ಅಚ್ಚರಿ:
(೧) ದ್ವಾರಪಾಲಕರು ಧರ್ಮಜನನನ್ನು ಯಾರಿಗೆ ಹೋಲಿಸಿದರು – ಜೀಯ ಸಿಂಹಾಸನಕೆ ದಿವಿಜರ
ರಾಯನೋ ಶಂಕರನೊ ಮೇಣ್ ನಾರಾಯಣನೊ ನರರಲ್ಲ ದೇವರು ಬಂದು ನೋಡುವುದು

ಪದ್ಯ ೨೯: ಕರ್ಣನ ಸಾವಿಗೆ ತ್ರಿಮೂರ್ತಿಗಳು ಏನೆಂದರು?

ಅರಸ ನೀ ಸೈರಿಸಿದೆಲಾ ಶಂ
ಕರ ವಿರಿಂಚಾದಿಗಳು ಕರ್ಣನ
ಪರಮಸತ್ಯವ್ರತವ ಕೊಂಡಾಡಿದರು ಅಕಟೆನುತ
ಎರಡು ಥಟ್ಟಿನ ದುಃಖಮಯಸಾ
ಗರವ ಹವಣಿಸಲರಿಯೆನರ್ಜುನ
ತಿರುಗಿದನು ದುಮ್ಮಾನದಲಿ ಪಾಳೆಯಕೆ ಹರಿಸಹಿತ (ಕರ್ಣ ಪರ್ವ, ೨೭ ಸಂಧಿ, ೨೯ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ನೀನು ಕರ್ಣನ ಸಾವಿನ ವೃತ್ತಾಂತವನ್ನು ಕೇಳಿ ಸಹಿಸಿಕೊಂಡಿರುವುದು ಆಶ್ಚರ್ಯ, ಶಿವ ಬ್ರಹ್ಮ ಮೊದಲಾದವರು ಕರ್ಣನ ಸಾವನ್ನು ಕಂಡು ಅಯ್ಯೋ ಎಂದು ಮರುಗಿದರು, ಕರ್ಣನ ಸತ್ಯವ್ರತವನ್ನು ಹೊಗಳಿದರು. ಎರಡು ಸೇನೆಗಳ ದುಃಖಸಾಗರದಲ್ಲಿ ಮುಳುಗಿದ್ದುದನ್ನು ನಾನು ವರ್ಣಿಸಲು ಅಶಕ್ತ, ಅರ್ಜುನನು ಅತೀವ ದುಃಖಭರಿತನಾಗಿ ಕೃಷ್ಣನೊಡನೆ ತನ್ನ ಪಾಳೆಯಕ್ಕೆ ಹಿಂದಿರುಗಿದನು.

ಅರ್ಥ:
ಅರಸ: ರಾಜ; ಸೈರಿಸು: ಸಹಿಸು; ಶಂಕರ: ಶಿವ, ಮಹಾದೇವ; ವಿರಿಂಚಿ: ಬ್ರಹ್ಮ; ಆದಿ: ಮುಂತಾದ; ಪರಮ: ಶ್ರೇಷ್ಠ; ಸತ್ಯವ್ರತ: ಸತ್ಯವಂತ; ಕೊಂಡಾಡು: ಹೊಗಳು; ಅಕಟ: ಅಯ್ಯೋ; ಥಟ್ಟು: ಗುಂಪು, ಸೇನೆ; ದುಃಖ: ಶೋಕ; ಸಾಗರ: ಸಮುದ್ರ; ಹವಣಿಸು: ಅಳತೆ ಮಾಡು, ತೂಗು; ಅರಿ: ತಿಳಿ; ತಿರುಗು: ಮರಳು; ದುಮ್ಮಾನ: ದುಃಖ; ಪಾಳೆ: ಬಿಡಾರ; ಹರಿ: ಕೃಷ್ಣ; ಸಹಿತ; ಜೊತೆ;

ಪದವಿಂಗಡಣೆ:
ಅರಸ+ ನೀ +ಸೈರಿಸಿದೆಲಾ+ ಶಂ
ಕರ+ ವಿರಿಂಚಾದಿಗಳು +ಕರ್ಣನ
ಪರಮ+ಸತ್ಯವ್ರತವ+ ಕೊಂಡಾಡಿದರು +ಅಕಟೆನುತ
ಎರಡು+ ಥಟ್ಟಿನ+ ದುಃಖಮಯ+ಸಾ
ಗರವ +ಹವಣಿಸಲ್+ಅರಿಯೆನ್+ಅರ್ಜುನ
ತಿರುಗಿದನು +ದುಮ್ಮಾನದಲಿ+ ಪಾಳೆಯಕೆ+ ಹರಿಸಹಿತ

ಅಚ್ಚರಿ:
(೧) ದುಃಖ, ದುಮ್ಮಾನ – ಸಮನಾರ್ಥಕ ಪದ
(೨) ದುಃಖದ ತೀವ್ರತೆ – ಅರಸ ನೀ ಸೈರಿಸಿದೆಲಾ, ದುಃಖಮಯಸಾಗರವ ಹವಣಿಸಲರಿಯೆ

ಪದ್ಯ ೪೬: ಶಿವನು ಯಾವ ರೀತಿ ಉರಿಯನ್ನು ಶಾಂತಗೊಳಿಸಿದನು?

ಕರುಣರಸದಲಿ ನನೆದು ನಗೆಯಂ
ಕುರಿಸಲಾಜ್ಞಾಹಸ್ತದಲಿ ಶಂ
ಕರನ ಹೂಂಕರಣೆಯಲಿ ತಳಿತುರಿ ತಗ್ಗಿತಲ್ಲಲ್ಲಿ
ಶಿರವ ತಡಹುತ ದೇವತತಿ ಪುರ
ಹರನ ಬೀಳ್ಕೊಂಡರು ಮಹಾರಥ
ಹರಿದು ನಿಜ ಸಂಸ್ಥಾನ ಸಂಗತವಾಯ್ತು ನಿಮಿಷದಲಿ (ಕರ್ಣ ಪರ್ವ, ೭ ಸಂಧಿ, ೪೬ ಪದ್ಯ)

ತಾತ್ಪರ್ಯ:
ಭುವನಜನರ ಅಳಲನ್ನು ಕೇಳಿದ ಪರಮೇಶ್ವರನು ಲೋಕಗಳ ಮೇಲಿನ ಕರುಣೆಯಿಂದ ಶಿವನು ನಸುನಕ್ಕು ಹೂಂಕಾರ ಮಾಡಿ ಆಜ್ಞಾಹಸ್ತವನ್ನು ತೋರಿಸಲು ಉರಿಯು ಅಲ್ಲಲ್ಲೇ ಶಾಂತವಾಯಿತು. ದೇವತೆಗಳು ತಮ್ಮ ತಲೆಯನ್ನು ಮುಟ್ಟಿ ಕೊಳ್ಳುತ್ತಾ ಶಿವನನ್ನು ಬೀಳ್ಕೊಂಡರು. ಮಹಾರಥದ ಅಂಗಗಳು ಸ್ವಸ್ಥಾನಕ್ಕೆ ತಿರುಗಿದವು.

ಅರ್ಥ:
ಕರುಣ: ದಯೆ; ರಸ: ಸಾರ; ನನೆ: ಮನನ, ಜ್ಞಾಪಿಸು; ನಗೆ: ಸಂತೋಷ; ಅಂಕುರ: ಚಿಗುರು, ಹುಟ್ಟು; ಹಸ್ತ: ಕೈ, ಕರ; ಶಂಕರ: ಶಿವ; ಹೂಂಕರ: ಶಬ್ದ; ತಳಿತ:ಚಿಗುರಿದ; ಉರಿ: ಬೆಂಕಿ; ತಗ್ಗು: ಕಡಿಮೆಯಾಗು; ಶಿರ: ತಲೆ; ತಡಹುತ: ಸವರುತ್ತಾ; ದೇವ: ಸುರರು; ತತಿ:ಗುಂಪು; ಪುರಹರ: ಶಿವ (ತ್ರಿಪುರ ಊರನ್ನು ದಹನ ಮಾಡಿದವ); ಬೀಳ್ಕೊಂಡು: ಹೊರಹೋಗು; ಮಹಾರಥ: ಪರಾಕ್ರಮಿ; ಹರಿ: ಗತಿ, ನಡೆ; ನಿಜ: ಸ್ವಂತ; ಸಂಸ್ಥಾನ: ರಾಜ್ಯ; ಸಂಗತ:ಯೋಗ್ಯವಾದುದು; ನಿಮಿಷ: ಕ್ಷಣ ಮಾತ್ರ;

ಪದವಿಂಗಡಣೆ:
ಕರುಣ+ರಸದಲಿ +ನನೆದು +ನಗೆಯಂ
ಕುರಿಸಲ್+ ಆಜ್ಞಾಹಸ್ತದಲಿ +ಶಂ
ಕರನ +ಹೂಂಕರಣೆಯಲಿ +ತಳಿತ್+ಉರಿ +ತಗ್ಗಿತಲ್ಲಲ್ಲಿ
ಶಿರವ+ ತಡಹುತ +ದೇವತತಿ+ ಪುರ
ಹರನ+ ಬೀಳ್ಕೊಂಡರು +ಮಹಾರಥ
ಹರಿದು +ನಿಜ +ಸಂಸ್ಥಾನ +ಸಂಗತವಾಯ್ತು +ನಿಮಿಷದಲಿ

ಅಚ್ಚರಿ:
(೧) ಶಂಕರ, ಪುರಹರ, ಹರ – ಶಿವನನ್ನು ಕರೆದ ಬಗೆ

ಪದ್ಯ ೪೫: ಭುವನಜನ ಶಿವನನ್ನು ಹೇಗೆ ಆರಾಧಿಸಿದರು?

ತ್ರಾಹಿ ಮದನಾಂತಕ ಪುರತ್ರಯ
ದಾಹ ಹರ ಶಂಕರ ಮಹೇಶ
ತ್ರಾಹಿ ಮೃತ್ಯುಂಜಯ ಪಿನಾಕಿ ತ್ರಾಹಿ ಲೋಕೇಶ
ದ್ರೋಹಿಗಳು ಧೂಳಾಯ್ತು ಬಳಿಕಿನೊ
ಳೀ ಹದನು ಬಂದಿದೆ ಜಗತ್ರಯ
ರೂಹುಗೆಡುತಿದೆ ದೇವ ಎಂದುದು ಸಕಲ ಭುವನಜನ (ಕರ್ಣ ಪರ್ವ, ೭ ಸಂಧಿ, ೪೫ ಪದ್ಯ)

ತಾತ್ಪರ್ಯ:
ಎಲೈ ಮನ್ಮಥನನ್ನು ಸಂಹರಿಸಿದವನೇ, ತ್ರಿಪುರಗಳನ್ನು ಸಂಹಾರಮಾಡಿದವನೇ, ಹರ ಶಂಕರ, ಮಹೇಶ್ವರ, ಪಿನಾಕಧರ, ಮೃತ್ಯುಂಜಯ, ಲೋಕೇಶ್ವರನೇ, ಮಹೇಶ್ವರನೇ ನಮ್ಮನ್ನು ಈ ಸಂಕಟದಿಂದ ಪಾರುಮಾಡು. ದ್ರೋಹಿಗಳು ಬೆಂದು ಹೋದರು. ಆಅರೀಗ ಈ ವಿಪತ್ತು ಮೂರು ಲೋಕಗಳ ರೂಪವನ್ನು ಕೆಡಿಸುತ್ತಿದೆ, ದೇವ ನಮ್ಮನ್ನು ಪಾರು ಮಾಡೆಂದು ಸಕಲ ಲೋಕಗಳ ಜನರು ಬೇಡಿಕೊಂಡರು.

ಅರ್ಥ:
ತ್ರಾಹಿ:ರಕ್ಷಿಸು, ಕಾಪಾಡು; ಮದನಾಂತಕ: ಕಾಮನನ್ನು ಸಂಹರಿಸಿದವ; ಪುರ: ಊರು; ತ್ರಯ: ಮೂರು; ದಾಹ: ಉರಿ, ಕಿಚ್ಚು; ಹರ: ನಿವಾರಣೆ, ಪರಿಹಾರ, ಶಿವ; ಶಂಕರ: ಒಳ್ಳೆಯದನ್ನು ಮಾಡುವವ (ಶಿವ); ಮಹೇಶ: ಶ್ರೇಷ್ಠನಾದ ಒಡೆಯ; ಮೃತ್ಯುಂಜಯ: ಮೃತ್ಯುವನ್ನು ಗೆದ್ದವ; ಪಿನಾಕಿ: ತ್ರಿಶೂಲವನ್ನು ಹಿಡಿದವ; ಲೋಕೇಶ: ಲೋಕಕ್ಕೆ ಒಡೆಯನಾದವ; ದ್ರೋಹಿ: ವೈರಿ; ಧೂಳು: ಮಣ್ಣಿನ ಪುಡಿ; ಬಳಿಕ: ನಂತರ; ಹದನು:ಸಂಗತಿ; ಬಂದಿದೆ: ಆಗಮಿಸು; ಜಗತ್ರಯ: ಮೂರುಲೋಕ; ರೂಹು: ರೂಪ; ಕೆಡು: ಹಾಳಾಗು; ದೇವ: ಭಗವಂತ; ಸಕಲ: ಎಲ್ಲಾ; ಭುವನಜನ: ಲೋಕದ ಜೀವಿಗಳು;

ಪದವಿಂಗಡಣೆ:
ತ್ರಾಹಿ+ ಮದನಾಂತಕ+ ಪುರತ್ರಯ
ದಾಹ +ಹರ +ಶಂಕರ +ಮಹೇಶ
ತ್ರಾಹಿ +ಮೃತ್ಯುಂಜಯ +ಪಿನಾಕಿ +ತ್ರಾಹಿ +ಲೋಕೇಶ
ದ್ರೋಹಿಗಳು +ಧೂಳಾಯ್ತು +ಬಳಿಕಿನೊಳ್
ಈ+ ಹದನು +ಬಂದಿದೆ +ಜಗತ್ರಯ
ರೂಹುಗೆಡುತಿದೆ+ ದೇವ+ ಎಂದುದು+ ಸಕಲ +ಭುವನಜನ

ಅಚ್ಚರಿ:
(೧) ತ್ರಾಹಿ – ಮೂರು ಬಾರಿ ಪ್ರಯೋಗ
(೨) ಮದನಾಂತಕ, ಪುರತ್ರಯದಾಹ, ಶಂಕರ, ಹರ, ಮಹೇಶ, ಮೃತ್ಯುಂಜಯ, ಪಿನಾಕಿ, ಲೋಕೇಶ, ದೇವ – ಶಿವನ ಹೆಸರುಗಳು

ಪದ್ಯ ೧೨೦: ಯಾರು ಎಪ್ಪತ್ತೇಳುಕೋಟಿ ನರಕದಲ್ಲಿ ಸೇರುತ್ತಾರೆ?

ಹರಿಭಕುತಿ ಲೋಲುಪನೆನಿಸಿ ಶಂ
ಕರನ ಬದ್ಧ ದ್ವೇಷಿಯಹ ಶಂ
ಕರನ ಭಕ್ತಿಯೊಳಧಿಕನಾಗಿಯು ವಿಷ್ಣುವಿನ ಮೇಲೆ
ಎರಕವಿಲ್ಲದ ಕರ್ಮಚಂಡಾ
ಲರುಗಳೆಪ್ಪತ್ತೇಳು ಕೋಟಿಯ
ನರಕದೊಳಗೋಲಾಡುತಿಹರೆಲೆ ರಾಯ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೧೨೦ ಪದ್ಯ)

ತಾತ್ಪರ್ಯ:
ಶಿವ ಮತ್ತು ವಿಷ್ಣು ಇಬ್ಬರು ಒಂದೇ ಎಂದು ಹೇಳುವ ಪದ್ಯ. ವಿಷ್ಣುವಿನ ಭಕ್ತಿಯಲ್ಲೇ ಮಗ್ನನಾಗಿ ಶಿವನ ಬದ್ಧ ದ್ವೇಷಿಯಾದವನೂ, ಮಹಾಶಿವಭಕ್ತನಾಗಿ ವಿಷ್ಣುವಿನಲ್ಲಿ ಪ್ರೀತಿಯಿಲ್ಲದವನೂ ಕರ್ಮ ಚಂಡಾಲರೆನ್ನಿಸಿಕೊಂಡು ಎಪ್ಪತ್ತೇಳು ಕೋಟಿ ನರಕಗಳನ್ನು ಸೇರುತ್ತಾರೆ ಎಂದು ವಿದುರ ಹೇಳಿದ.

ಅರ್ಥ:
ಹರಿ: ವಿಷ್ಣು; ಭಕುತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಲೋಲುಪ:ಗುರುಹಿರಿಯರಲ್ಲಿ ತೋರುವ ನಿಷ್ಠೆ, ಆಸಕ್ತ; ಶಂಕರ: ಶಿವ; ಬದ್ಧ: ಕಡು; ದ್ವೇಷಿ: ವೈರಿ; ಅಧಿಕ: ಹೆಚ್ಚು; ಎರಕ: ಪ್ರೀತಿ, ಅನುರಾಗ; ಕರ್ಮ: ಕಾರ್ಯ; ಚಂಡಾಲ: ಕ್ರೂರ ಕೆಲಸ ಮಾಡುವವ; ನರಕ: ಅಧೋಲೋಕ; ಓಲಾಡು: ಹೊರಳಾಡು; ರಾಯ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಹರಿ+ಭಕುತಿ +ಲೋಲುಪನೆನಿಸಿ +ಶಂ
ಕರನ +ಬದ್ಧ +ದ್ವೇಷಿಯಹ +ಶಂ
ಕರನ +ಭಕ್ತಿಯೊಳ್+ಅಧಿಕನಾಗಿಯು +ವಿಷ್ಣುವಿನ +ಮೇಲೆ
ಎರಕವಿಲ್ಲದ+ ಕರ್ಮ+ಚಂಡಾ
ಲರುಗಳ್+ಎಪ್ಪತ್ತೇಳು +ಕೋಟಿಯ
ನರಕದೊಳಗ್ +ಓಲಾಡುತಿಹರ್+ಎಲೆ +ರಾಯ +ಕೇಳೆಂದ

ಅಚ್ಚರಿ:
(೧) ಶಂ – ೧, ೨ ಸಾಲಿನ ಕೊನೆ ಪದ
(೨) ಕರನ – ೨, ೩ ಸಾಲಿನ ಮೊದಲ ಪದ
(೩) ಹರಿ, ವಿಷ್ಣು – ಸಮನಾರ್ಥಕ ಪದ
(೪) ಎರಕ, ನರಕ – ಪ್ರಾಸ ಪದಗಳ ಪ್ರಯೋಗ

ಪದ್ಯ ೪೯: ದ್ರೌಪದಿಯು ಶಂಕರನಲ್ಲಿ ಏನು ವರವನ್ನು ಬೇಡಿದಳು?

ರಮಣಿ ಮೈಯಿಕ್ಕಿದಳು ಕರದಲಿ
ಶಿರವ ನೆಗಹಿದಳ ಬುಜಲೋಚನೆ
ವರವ ಕೊಟ್ಟೆನು ಬೇಡಿಕೊಳ್ಳೆನೆ ತರುಣಿ ತಲೆವಾಗಿ
ಹರ ಪತಿಂ ದೇಹಿ ಪ್ರಭೋ ಶಂ
ಕರ ಪತಿಂ ದೇಹಿ ಪ್ರಭೋಯೆಂ
ದರಸಿ ಬೇಡಿದಳೈದು ಬಾರಿ ಮಹೇಶನಲಿ ವರವ (ಆದಿ ಪರ್ವ, ೧೬ ಸಂಧಿ, ೪೯ ಪದ್ಯ)

ತಾತ್ಪರ್ಯ:
ನಾರಾಯಣಿಯ ತಪಸ್ಸಿಗೆ ಮೆಚ್ಚಿ ಆಕೆಯ ಬಳಿ ಬಂದ ಶಂಕರನು ನೋಡಿ ಭಕ್ತಿಭಾವದಿಂದ ದೀರ್ಘದಂಡ ನಮಸ್ಕಾರವನ್ನು ಮಾಡಿ, ತಲೆಯನ್ನು ಕೈಯಲ್ಲಿಟ್ಟು ತಲೆಯೆತ್ತಿ ನೋಡಿದಳು, ಶಿವನು ನಿನಗೆ ವರವನ್ನು ನೀಡುವೆನು ಬೇಡಿಕೋ ಎಂದು ಹೇಳಲು ಆಕೆ ಐದು ಬಾರಿ “ಪತಿಂ ದೇಹಿ” ಎಂದು ಬೇಡಿದಳು

ಅರ್ಥ:
ರಮಣಿ: ಚೆಲುವೆ, ಹೆಂಡತಿ; ಮೈ: ದೇಹ; ಕರ: ಕೈ; ಶಿರ: ತಲೆ; ನೆಗಹು: ಮೇಲಕ್ಕೆ ಎತ್ತು; ಲೋಚನ: ಕಣ್ಣು; ಲೋಚನೆ: ಸುಂದರ ಕಣ್ಣುಳ್ಳವಳು; ವರ: ಬೇಡಿಕೆ; ಕೊಡು: ನೀಡು; ಬೇಡಿಕೊ: ಕೇಳು; ತರುಣಿ: ಹುಡುಗಿ; ತಲೆ: ಶಿರ; ಹರ: ಶಿವ; ಪತಿ: ಗಂಡ; ಪ್ರಭೋ: ದೇವ; ಅರಸಿ: ರಾಣಿ;

ಪದವಿಂಗಡಣೆ:
ರಮಣಿ +ಮೈಯಿಕ್ಕಿದಳು +ಕರದಲಿ
ಶಿರವ+ ನೆಗಹಿದಳ+ ಬುಜ+ಲೋಚನೆ
ವರವ +ಕೊಟ್ಟೆನು +ಬೇಡಿಕೊಳ್ಳ್+ಎನೆ+ ತರುಣಿ+ ತಲೆವಾಗಿ
ಹರ +ಪತಿಂ +ದೇಹಿ +ಪ್ರಭೋ +ಶಂ
ಕರ+ ಪತಿಂ +ದೇಹಿ +ಪ್ರಭೋ+ಯೆಂದ್
ಅರಸಿ+ ಬೇಡಿದಳ್+ಐದು +ಬಾರಿ +ಮಹೇಶನಲಿ+ ವರವ

ಅಚ್ಚರಿ:
(೧) ದ್ರೌಪದಿಯನ್ನು ಕರೆದಿರುವ ಬಗೆ: ರಮಣಿ,ಲೋಚನೆ, ತರುಣಿ, ಅರಸಿ
(೨) ಶಿವನನ್ನು ಕರೆದಿರುವ ಬಗೆ: ಪ್ರಭೋ, ಮಹೇಶ, ಶಂಕರ
(೩) ೩, ೪ ಸಾಲಿನ ೨,೩, ೪ ಪದಗಳು ಒಂದೇ ಆಗಿರುವುದು
(೪) ವರವ – ೩ ಸಾಲಿನ ಮೊದಲ ಪದ, ೬ ಸಾಲಿನ ಕೊನೆ ಪದ
(೫) ದೇಹದ ಅಂಗಗಳ ಪದಗಳು: ಮೈ, ಶಿರ, ಕರ, ಲೋಚನೆ, ತಲೆ

ಪದ್ಯ ೭: ಸ್ವಯಂವರದಲ್ಲಿದ್ದ ರಾಜರು ಏತಕ್ಕೆ ಕಾತುರಗೊಂಡರು?

ಅಂಕೆಯಿದು ಪಾರ್ಥಿವರ ವಿಭವಾ
ಲಂಕೃತಿಯನದನೇನಹೇಳುವೆ
ನಂಕವಿದು ಕಳನೇರಿತಾಹವವೆನಗೆ ತನಗೆನುತ
ಶಂಕರಾರಿಯ ಮಸೆದಲಗು ಮಾ
ರಂಕದುಬ್ಬಿನ ಜಂಕೆಯಂಕೆಯ
ಬಿಂಕವನು ವಿಸ್ತರಿಸುವೆನು ನರನಾಥ ಕೇಳೆಂದ (ಆದಿ ಪರ್ವ, ೧೩ ಸಂಧಿ, ೭ ಪದ್ಯ)

ತಾತ್ಪರ್ಯ:
ರಾಜರ ದರ್ಪ, ವೈಭವ, ಅಲಂಕೃತರಾದ ಅವರ ಸೊಬಗು ಏನೆಂದು ಹೇಳಲಿ, ಇದೊಂದು ಸ್ಪರ್ಧೆ, ಈ ಯುದ್ಧದಲ್ಲಿ ಜಯವು ನನಗೆ ಇರಲಿ ಎಂದು ಎಲ್ಲರು ಸಿದ್ಧರಾಗಿದ್ದರು, ಮನ್ಮಥನ ಯುದ್ಧವು ಹತ್ತಿರವಾಗುತ್ತಿದ್ದಂತೆ, ಕಾತರಗೊಂಡ ರಾಜರು ಮನದ ಬಾಣಗಳಿಂದ ಆರ್ತರಾಗಿ ಕುಳಿತಿದ್ದರು, ಇವರ ವಿವರವನ್ನು ಹೇಳುತ್ತೇನೆ, ಕೇಳು ಜನಮೇಜಯ…

ಅರ್ಥ:
ಅಂಕೆ: ದರ್ಪ, ಠೀವಿ, ಗುರುತು; ಪಾರ್ಥಿವ: ರಾಜ; ವಿಭವ: ಸಿರಿ, ಸಂಪತ್ತು, ಹಿರಿಮೆ; ಅಲಂಕೃತ: ಸಿಂಗರಿಸಲ್ಪಟ್ಟ; ಅಂಕ: ಬಿರುದು, ಹೆಸರು, ಸ್ಪರ್ಧೆ; ಕಳ:ಕಳೆ,ಕಾಂತಿ; ಆಹವ: ಯುದ್ಧ, ಕಾಳಗ; ಎನಗೆ: ನನಗೆ; ಶಂಕರ: ಈಶ್ವರ; ಅರಿ: ವೈರಿ; ಶಂಕರಾರಿ: ಮದನ, ಮನ್ಮಥ, ರತೀಶ; ಮಸೆ: ದ್ವೇಷಿಸು, ಹರಿತವಾದ; ಮಾರ: ಕಾಮ, ಮನ್ಮಥ; ಬಿಂಕ: ಜಂಬ, ಠೀವಿ; ಜಂಕೆ: ಗರ್ಜನೆ, ಕೂಗು; ವಿಸ್ತರ: ವಿವರವಾಗಿ; ನರ: ಮನುಷ್ಯ; ನರನಾಥ: ರಾಜ (ಜನಮೇಜಯ);

ಪದವಿಂಗಡಣೆ:
ಅಂಕೆ+ಯಿದು +ಪಾರ್ಥಿವರ +ವಿಭವ
ಅಲಂಕೃತಿಯನದನ್+ಏನ+ಹೇಳುವೆನ್
ಅಂಕ+ವಿದು+ ಕಳನೇರಿತ್+ಆಹವವ್+ಎನಗೆ+ ತನಗೆನುತ
ಶಂಕರಾರಿಯ+ ಮಸೆದಲಗು +ಮಾ
ರಂಕದ್+ಉಬ್ಬಿನ +ಜಂಕೆ+ಯಂಕೆಯ
ಬಿಂಕವನು+ ವಿಸ್ತರಿಸುವೆನು +ನರನಾಥ+ ಕೇಳೆಂದ

ಅಚ್ಚರಿ:
(೧) ಅಂಕೆ, ಅಂಕ – ೪ ಬಾರಿ ಪ್ರಯೋಗ – ಅಂಕೆಯಿದು, ಅಂಕವಿದು, ಯಂಕೆಯ; ಅಂಕದುಬ್ಬಿನ
(೨) ರಾಜನಿಗೆ – ನರನಾಥ; ಮನ್ಮಥನಿಗೆ – ಶಂಕರಾರಿ, ಮಾರ – ಪದಗಳ ಬಳಕೆ
(೩) ಅಂಕೆ, ಬಿಂಕ – ಸಮಾನಾರ್ಥಕ ಪದಗಳು
(೪) ಅಂಕೆ, ಅಲಂಕೃತ, ಶಂಕರ, ಮಾರಂಕ, ಬಿಂಕ, ಅಂಕ – ಅನುಸ್ವಾರದ ಜೊತೆಗೆ “ಕ” ಕಾರದ ಪದಗಳು