ಪದ್ಯ ೨: ಶ್ರೀಕೃಷ್ಣನು ಯಾರನ್ನು ಯಾವ ಸ್ಥಾನಕ್ಕೆ ನೇಮಿಸಲು ಹೇಳಿದನು?

ಮಾಡು ವಿಶ್ವೇದೇವರಿಬ್ಬರ
ರೂಢರೀ ದೂರ್ವಾಸಧೌಮ್ಯರ
ನೋಡಿ ಮಾಡೈ ಮುಖ್ಯಕ್ಷಣದಲಿ ವ್ಯಾಸಕೌಶಿಕರ
ಮಾಡು ಪ್ರಪಿತಾಮಹರ ಠಾವಿಗೆ
ಬೇಡಿಕೊಳ್ ಜೈಮಿನಿಯನತಿಥಿಗೆ
ಮಾಡು ನಮ್ಮನು ಶ್ರಾದ್ಧರಕ್ಷೆಗೆ ಭೂಪ ಕೇಳೆಂದ (ಅರಣ್ಯ ಪರ್ವ, ೩ ಸಂಧಿ, ೨ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಯುಧಿಷ್ಠಿರನಿಗೆ ಶ್ರಾದ್ಧದ ಕಾರ್ಯಕ್ಕೆ ಯಾರನ್ನು ಆಹ್ವಾನಿಸಲು ತಿಳಿಸಿದನು. ದೂರ್ವಾಸರು ಮತ್ತು ಧೌಮ್ಯರನ್ನು ವಿಶ್ವೇದೇವ ಸ್ಥಾನಕ್ಕೆ ಬೇಡಿಕೊಳ್ಳಲು, ವ್ಯಾಸ ಮತ್ತು ಕೌಶಿಕರನ್ನು ಪಿತೃ, ಪಿತಾಮಹ ಸ್ಥಾನಕ್ಕೆ, ಪ್ರಪಿತಾಮಹಸ್ಥಾನಕ್ಕೆ ಜೈಮಿನಿ ಮುನಿಗಳನ್ನು ಬೇಡಿಕೋ, ಹಾಗು ನನ್ನನ್ನು ವಿಷ್ಣು ಸ್ಥಾನಕ್ಕೆ ಕರೆ ಎಂದು ಕೃಷ್ಣನು ತಿಳಿಸಿದನು.

ಅರ್ಥ:
ಮಾಡು: ನೆರವೇರಿಸು; ರೂಢ: ಬಳಕೆಯಲ್ಲಿರುವ; ನೋಡು: ವೀಕ್ಷಿಸು; ಮುಖ್ಯ: ಪ್ರಮುಖ; ಪ್ರಪಿತಾಮಹ: ಅಜ್ಜನ ತಂದೆ, ಮುತ್ತಾತ; ಠಾವು: ಸ್ಥಳ; ಬೇಡು: ಕೇಳು; ಅತಿಥಿ: ಆಮಂತ್ರಣವನ್ನು ವಿಲ್ಲದ ಬರುವ ವ್ಯಕ್ತಿ; ರಕ್ಷೆ: ಕಾಪು, ಕಾಯುವಿಕೆ; ಭೂಪ: ರಾಜ;

ಪದವಿಂಗಡಣೆ:
ಮಾಡು +ವಿಶ್ವೇದೇವರ್+ಇಬ್ಬರ
ರೂಢರ್+ಈ+ ದೂರ್ವಾಸ+ಧೌಮ್ಯರ
ನೋಡಿ ಮಾಡೈ ಮುಖ್ಯ+ಕ್ಷಣದಲಿ+ ವ್ಯಾಸ+ಕೌಶಿಕರ
ಮಾಡು +ಪ್ರಪಿತಾಮಹರ+ ಠಾವಿಗೆ
ಬೇಡಿಕೊಳ್+ ಜೈಮಿನಿಯನ್+ಅತಿಥಿಗೆ
ಮಾಡು +ನಮ್ಮನು +ಶ್ರಾದ್ಧರಕ್ಷೆಗೆ+ ಭೂಪ +ಕೇಳೆಂದ

ಅಚ್ಚರಿ:
(೧) ಮುನಿಗಳ ಹೆಸರನ್ನು ಹೇಳಿರುವ ಪರಿ – ದೂರ್ವಾಸ, ಧೌಮ್ಯ, ವ್ಯಾಸ, ಕೌಶಿಕ, ಜೈಮಿನಿ

ಪದ್ಯ ೨೭: ದುರ್ಯೋಧನನು ಯಾವ ರಾಶಿಯವನೆಂದು ಹೇಳಿದನು?

ವ್ಯಾಸ ವಚನವನಾ ವಸಿಷ್ಠ ಮು
ನೀಶನೊಳುನುಡಿಗಳನು ಕೋವಿದ
ಕೌಶಿಕನ ಕಥನವನು ಕೈಕೊಳ್ಳದೆ ಸುಯೋಧನನು
ದೇಶವನು ಪಾಂಡವರಿಗೀವ
ಭ್ಯಾಸವೆಮ್ಮೊಳಗಿಲ್ಲನೀತಿಯ
ರಾಶಿಯಾನಹೆನೆನ್ನನೊಡಬಡಿಸುವಿರಿ ನೀವೆಂದ (ಉದ್ಯೋಗ ಪರ್ವ, ೯ ಸಂಧಿ, ೨೭ ಪದ್ಯ)

ತಾತ್ಪರ್ಯ:
ವ್ಯಾಸರ ಮಾತು, ವಸಿಷ್ಠರ ಹಿತವಚನ, ವಿದ್ವಾಂಸರಾದ ಕೌಶಿಕ ಮುನಿಗಳ ವಿಚಾರ ಯಾವುದು ಸುಯೋಧನನ ಕಿವಿಗೆ ಬೀಳಲಿಲ್ಲ, ಅವರ ಮಾತನ್ನೊಪ್ಪದೆ ಪಾಂಡವರಿಗೆ ಭೂಮಿಯನ್ನು ಕೊಡವ ಅಭ್ಯಾಸ ನನಗಿಲ್ಲ, ನಾನು ಅನೀತಿಯ ರಾಶಿಯವನು, ನನ್ನನ್ನೇಕೆ ಒಪ್ಪಿಸಲು ಬರುತ್ತಿರುವಿರಿ ಎಂದು ಪ್ರಶ್ನಿಸಿದನು.

ಅರ್ಥ:
ವಚನ: ಮಾತು; ಮುನಿ: ಋಷಿ; ಮುನೀಶ: ಮುನಿಗಳಲ್ಲಿ ಶ್ರೇಷ್ಠನಾದವ; ಒಳು: ಒಳಿತು; ನುಡಿ: ಮಾತು; ಕೋವಿದ: ವಿದ್ವಾಂಸ; ಕಥನ: ವಿಚಾರ; ಕೈಕೊಳ್ಳು: ಒಪ್ಪಿಕೊ; ದೇಶ: ರಾಷ್ಟ್ರ; ಅಭ್ಯಾಸ: ರೂಢಿ; ಅನೀತಿ: ಕೆಟ್ಟ ಮಾರ್ಗ; ರಾಶಿ:ಗುಂಪು; ಒಡಬಡಿಸು: ಒಪ್ಪಿಸು;

ಪದವಿಂಗಡಣೆ:
ವ್ಯಾಸ+ ವಚನವನ್+ಆ+ ವಸಿಷ್ಠ+ ಮು
ನೀಶನ್+ಒಳುನುಡಿಗಳನು +ಕೋವಿದ
ಕೌಶಿಕನ +ಕಥನವನು +ಕೈಕೊಳ್ಳದೆ +ಸುಯೋಧನನು
ದೇಶವನು +ಪಾಂಡವರಿಗ್+ಈವ್
ಅಭ್ಯಾಸವ್+ಎಮ್ಮೊಳಗ್+ಇಲ್ಲ್+ಅನೀತಿಯ
ರಾಶಿಯಾನಹೆನ್+ಎನ್ನನೊಡಬಡಿಸುವಿರಿ+ ನೀವೆಂದ

ಅಚ್ಚರಿ:
(೧) ‘ಕ’ ಕಾರದ ಸಾಲು ಪದಗಳು – ಕೋವಿದ ಕೌಶಿಕನ ಕಥನವನು ಕೈಕೊಳ್ಳದೆ
(೨) ‘ವ’ಕಾರದ ತ್ರಿವಳಿ ಪದ – ವ್ಯಾಸ ವಚನವನಾ ವಸಿಷ್ಠ
(೩) ವಚನ, ನುಡಿ – ಸಮನಾರ್ಥಕ ಪದ

ಪದ್ಯ ೪: ಮುನಿವರ್ಯರು ಭೀಷ್ಮನ ಮಾತಿಗೆ ಏನು ಹೇಳಿದರು?

ವ್ಯಾಸ ನಾರದ ರೋಮಶಾದಿಗ
ಳೀ ಸಮಸ್ತ ಮುನೀಂದ್ರರಿದೆಯೀ
ಕೇಶವನು ಪೂಜಾರುಹನೆಯೆಂದಿವರ ಬೆಸಗೊಳ್ಳೈ
ಲೇಸನಾಡಿದೆ ಭೀಷ್ಮ ಬಳಿಕೇ
ನೀ ಸಮಸ್ತ ಚರಾಚರದೊಳೀ
ವಾಸುದೇವನೆ ಪೂಜ್ಯನೆಂದುದು ಸಕಲ ಮುನಿನಿಕರ (ಸಭಾ ಪರ್ವ, ೯ ಸಂಧಿ, ೪ ಪದ್ಯ)

ತಾತ್ಪರ್ಯ:
ಭೀಷ್ಮರು ತಮ್ಮ ಮಾತನ್ನು ಮುಂದುವರಿಸುತ್ತಾ, ಮುನಿಶ್ರೇಷ್ಠರಲ್ಲಿ ಹಿರಿಯರಾದ ವ್ಯಾಸ, ನಾರದ, ರೋಮಶ ಮೊದಲಾದವರು ಇಲ್ಲೇ ಇರುವರು, ಅವರಲ್ಲೇ ಕೇಳು ಶ್ರೀಕೃಷ್ಣನು ಪೂಜಾರ್ಹನೇ ಎಂದು ಹೇಳಲು, ಅಲ್ಲಿ ನೆರೆದಿದ್ದ ಸಮಸ್ತ ಮುನಿಸಮೂಹವು, ಭೀಷ್ಮನು ಆಡಿದ ಮಾತು ಸಮಂಜಸವಾಗಿದೆ, ಈ ಸಮಸ್ತ ಚರಾಚರವಸ್ತುಗಳಲ್ಲೂ ವಾಸುದೇವನೇ ಪೂಜೆಗೆ ಅರ್ಹನಾದವನು ಎಂದರು.

ಅರ್ಥ:
ಆದಿ: ಮೊದಲಾದ; ಸಮಸ್ತ: ಎಲ್ಲಾ; ಮುನಿ: ಋಷಿ; ಅರುಹ: ಅರ್ಹ, ಯೋಗ್ಯ; ಬೆಸ: ಕೇಳುವುದು, ಅಪ್ಪಣೆ; ಲೇಸ: ಸರಿ; ಆಡಿದೆ: ಮಾತಾಡಿದೆ; ಬಳಿಕ: ನಂತರ; ಚರ: ಚಲಿಸುವವನು; ಅಚರ: ಚಲಿಸದಲ್ಲದ; ಪೂಜ್ಯ: ಅದರಣೀಯವಾದುದು; ಸಕಲ: ಎಲ್ಲಾ; ನಿಕರ: ಗುಂಪು;

ಪದವಿಂಗಡಣೆ:
ವ್ಯಾಸ +ನಾರದ +ರೋಮಶ+ಆದಿಗಳ್
ಈ+ ಸಮಸ್ತ+ ಮುನೀಂದ್ರರಿದೆ+ಯೀ
ಕೇಶವನು +ಪೂಜಾರುಹನೆ+ಯೆಂದ್+ಇವರ+ ಬೆಸಗೊಳ್ಳೈ
ಲೇಸನಾಡಿದೆ+ ಭೀಷ್ಮ +ಬಳಿಕ+ಏನ್
ಈ +ಸಮಸ್ತ +ಚರಾಚರದೊಳ್+ಈ
ವಾಸುದೇವನೆ +ಪೂಜ್ಯನೆಂದುದು +ಸಕಲ+ ಮುನಿನಿಕರ

ಅಚ್ಚರಿ:
(೧) ಈ ಕಾರದಿಂದ ಶುರು ಮತ್ತು ಕೊನೆಗೊಳ್ಳುವ ೨, ೫ ಸಾಲು
(೨) ವ್ಯಾಸ, ವಾಸುದೇವ – ೧, ೬ ಸಾಲಿನ ಮೊದಲ ಪದ
(೩) ಸಮಸ್ತ, ಸಕಲ – ಸಮನಾರ್ಥಕ ಪದ
(೪) ಸಮಸ್ತ – ೨, ೫ ಸಾಲಿನ ೨ ಪದ

ಪದ್ಯ ೭: ಗಾಂಧಾರಿ ಏನನ್ನು ಮಾಡಲು ನಿರ್ಧರಿಸಿದಳು?

ಕೇಳು ಜನಮೇಜಯ ಧರಿತ್ರೀ
ಪಾಲ ಐರಾವತದ ನೋಂಪಿಯ
ಹೇಳಿದನು ಧೃತರಾಷ್ಟ್ರನರಸಿಗೆ ವ್ಯಾಸ ಮುನಿರಾಯ
ಕೇಳಿದಳು ಹರುಷದಲಿ ಪುತ್ರಕ
ರೇಳಿಗೆಯ ಮುತ್ತೈದೆತನದಲಿ
ಬಾಳುವೆಯ ಕೈಕೊಂಡೆನೆಂದಳು ನಗುತ ಗಾಂಧಾರಿ (ಆದಿ ಪರ್ವ, ೨೧ ಸಂಧಿ, ೭ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ವ್ಯಾಸನು ಐರಾವತ ವ್ರತವನ್ನು ಗಾಂಧಾರಿಗೆ ಹೇಳಿದನು. ಇದರಿಂದ ಮುತ್ತೈದೆತನದ ಬಾಳೂ, ಮಕ್ಕಳ ಏಳಿಗೆಯೂ ದೊರಕುವುವೆಂದು ಕೇಳಿ ಗಾಂಧಾರಿಯು ವ್ರತವನ್ನು ಮಾಡಲು ನಿರ್ಧರಿಸಿದಳು.

ಅರ್ಥ:
ಕೇಳು: ಆಲಿಸು; ಧರಿತ್ರಿ: ಭೂಮಿ; ಧರಿತ್ರೀಪಾಲ: ರಾಜ; ನೋಂಪಿ: ವ್ರತ; ಅರಸಿ: ರಾಣಿ; ಮುನಿ: ಋಷಿ; ಹರುಷ: ಸಂತೋಷ; ಪುತ್ರ: ಮಕ್ಕಳು, ಸುತ; ಏಳಿಗೆ: ಏರಿಕೆ; ಮುತ್ತೈದೆ: ಸುಮಂಗಲಿ; ಬಾಳು: ಜೀವನ; ನಗು: ಹರುಷ;

ಪದವಿಂಗಡಣೆ:
ಕೇಳು +ಜನಮೇಜಯ+ ಧರಿತ್ರೀ
ಪಾಲ +ಐರಾವತದ+ ನೋಂಪಿಯ
ಹೇಳಿದನು+ ಧೃತರಾಷ್ಟ್ರನ್+ಅರಸಿಗೆ +ವ್ಯಾಸ +ಮುನಿರಾಯ
ಕೇಳಿದಳು +ಹರುಷದಲಿ+ ಪುತ್ರಕರ್
ಏಳಿಗೆಯ +ಮುತ್ತೈದೆ+ತನದಲಿ
ಬಾಳುವೆಯ +ಕೈಕೊಂಡೆನೆಂದಳು+ ನಗುತ+ ಗಾಂಧಾರಿ

ಅಚ್ಚರಿ:
(೧) ಕೇಳು, ಕೇಳಿ – ೧, ೪ ಸಾಲಿನ ಮೊದಲ ಪದ
(೨) ಹೇಳಿ, ಕೇಳಿ – ಪ್ರಾಸ ಪದ – ೩, ೪ ಸಾಲಿನ ಮೊದಲ ಪದ
(೩) ಗಾಂಧಾರಿ, ಧೃತರಾಷ್ಟ್ರನರಸಿ – ೨ ರೀತಿಯ ಸಂಭೋದನೆ

ಪದ್ಯ ೭:ಅಂಬಿಕೆಯ ನಂತರ ಯಾವ ಇಬ್ಬರು ವ್ಯಾಸರನ್ನು ಕಂಡರು?

ಬಳಿಕಲಂಬಾಲಿಕೆಯನಲ್ಲಿಗೆ
ಕಳುಹಲಾಕೆಗೆ ಭಯದಿ ಮುಖದಲಿ
ಬಿಳುಪು ಮಸಗಿತು ಮುನಿಯ ರೌದ್ರಾಕಾರದರ್ಶನದಿ
ಲಲನೆ ಮರಳಿದಳೊಬ್ಬ ಸತಿಯನು
ಕಳುಹಲಾ ವಧು ಚಪಲದೃಷ್ಟಿಯೊ
ಳಳುಕದೀಕ್ಷಿಸಲಾಯ್ತು ಗರ್ಭಾದಾನವನಿಬರಿಗೆ (ಆದಿ ಪರ್ವ ೩ ಸಂಧಿ ೭ ಪದ್ಯ)

ತಾತ್ಪರ್ಯ:
ಅಂಬಿಕೆಯ ಬಳಿಕ ಅಂಬಾಲಿಕೆಯು ವ್ಯಾಸರಿದ್ದ ಭವನಕ್ಕೆ ಬಂದು ಅವರ ದರ್ಶನವನ್ನು ಪಡೆದಳು. ಅವರ ದರ್ಶನ ಮಾತ್ರಕ್ಕೆ ಭಯದಿಂದ ಅವಳ ಮುಖ ಬಿಳಿಚಿತು. ನಂತರ ಆಕೆ ಮರಳಿದಳು. ನಂತರ ಯೋಜನಗಂಧಿ ಒಬ್ಬ ದಾಸಿ (ಸತಿ)ಯನ್ನು ಕಳುಹಿದಳು. ಆಕೆ ಭಯಗೊಳ್ಳದೆ ವ್ಯಾಸರನ್ನು ನೋಡಿದಳು. ಮೂವರಿಗೂ ಗರ್ಭಧಾರ ವಾಯಿತು.

ಅರ್ಥ:
ಭಯ: ಅಂಜಿಕೆ, ಹೆದರಿಕೆ;
ಮಸಗು: ಹೆಚ್ಚಾಗು, ಪ್ರಕಟವಾಗು, ಹೊರಹೊಮ್ಮು,ವ್ಯಾಪಿಸು
ಚಪಲ: ತೀವ್ರವಾದ ಆಸೆ, ಬಯಕೆ , ಚಂಚಲ ಸ್ವಭಾವ
ಈಕ್ಷಿಸು: ನೋಡು, ದ್ರಷ್ಟಿ; ಗರ್ಭ: ಬಸಿರು, ಭ್ರೂಣ

ಪದವಿಂಗಡನೆ:
ಬಳಿಕ+ಅಂಬಾಲಿಕೆಯನ್ +ಅಲ್ಲಿಗೆ +ಕಳುಹಲ್ +ಆಕೆಗೆ ;ಕಳುಹಲ್ + ಆ; ಚಪಲದೃಷ್ಟಿಯೊಳ್+ಅಳುಕದೆ+ಈಕ್ಷಿಸಲ್ +ಆಯ್ತು

ಅಚ್ಚರಿ :
(೧) ೨ ಮತ್ತು ೫ ಸಾಲು “ಕಳುಹಲಾ” ಪದದಿಂದ ಪ್ರಾರಂಭ
(೨) ೪ ಮತ್ತು ೬ ಸಾಲಿನ ಮೊದಲ ೨ ಅಕ್ಷರಗಳು, “ಲಲ”, “ಳಳು”
(೩) ಹೆಂಗಸನ್ನು ವರ್ಣಿಸಲು ಉಪಯೋಗಿಸಿದ ಪದಗಳು, “ಲಲನೆ, ವಧು, ಸತಿ”, ಕೇವಲ ೨ ಸಾಲಿನಲ್ಲಿ ಈ ಮೂರು ಪದಗಳನ್ನ ಬಳಸಿರುವುದು
(೪) ಮೊದಲನೇ ಸಾಲು: ಒಂದೇ ಪದ (೩ ಪದ ಗಳಿದ್ದರು) ಎಲ್ಲವನ್ನು ಒಂದೇ ಪದವಾಗಿ ಸೇರಿಸಿರುವುದು

ಪದ್ಯ ೬: ಅಂಬಿಕೆಯು ವ್ಯಾಸರನ್ನು ನೋಡಿ ಏನು ಮಾಡಿದಳು?

ಎಂದು ಬಳಿಕೇಕಾಂತ ಭವನದೊ
ಳಂದು ಮುನಿಯಿರಲಂಬಿಕೆಯನರ
ವಿಂದ ಮುಖಿಯಟ್ಟಿದಳು ಸೊಸೆಯನು ಮುನಿಯ ಪೊರೆಗಾಗಿ
ಬಂದು ಮುನಿಪನ ದಿವ್ಯರೂಪವ
ನಿಂದುಮುಖಿ ಕಂಡಕ್ಷಿಗಳ ಭಯ
ದಿಂದ ಮುಚ್ಚಿದಳಾಕೆ ತಿರುಗಿದಳರಸ ಕೇಳೆಂದ (ಆದಿ ಪರ್ವ, ೩ ಸಂಧಿ, ೬ ಪದ್ಯ)

ತಾತ್ಪರ್ಯ:
ತಾಯಿ ಸತ್ಯವತಿಯ ಆಜ್ಞೆಯನ್ನು ಪಾಲಿಸುವುದಾಗಿ ವೇದವ್ಯಾಸರು ಏಕಾಂತ ಭವನದಲ್ಲಿದ್ದರು. ಸತ್ಯವತಿಯು ಮೊದಲಿಗೆ ಅಂಬಿಕೆಯನ್ನು ಆ ಭವನಕ್ಕೆ ಹೋಗೆಂದು ಅಟ್ಟಿದಳು. ಅಂಬಿಕೆಯು ಆ ಮುನಿಯ ದಿವ್ಯ ರೂಪ ನೋಡಿ ಭಯದಿಂದ ತನ್ನ ಕಣ್ಣನ್ನು ಮುಚ್ಚಿದಳು. ಅನಂತರ ಆ ಭವನದಿಂದ ಹಿಂದಿರುಗಿದಳು.

ಅರ್ಥ:
ಏಕಾಂತ: ಒಬ್ಬೊಂಟಿಗ; ಭವನ: ಮನೆ, ವಾಸಸ್ಥಳ
ಪೊರೆ: ಸೇರು, ರಕ್ಷಿಸು, ಕಾಪಾಡು, ಕೂಡು ; ಅರವಿಂದ: ಕಮಲ, ತಾವರೆ
ದಿವ್ಯ: ಶ್ರೇಷ್ಠವಾದ, ದೈವ; ರೂಪ: ಆಕಾರ, ಚೆಲುವು, ಸೌಂದರ್ಯ
ಇಂದು: ಚಂದ್ರ, ಶಶಿ; ಅಕ್ಷಿ: ಕಣ್ಣು, ನೇತ್ರ, ನಯನ
ಭಯ: ಹೆದರಿಕೆ, ಭೀತಿ; ಮುಚ್ಚು: ಮರೆಮಾಡು, ಮರೆಸು, ಅಡಗಿಸು

ಪದವಿಂಗಡನೆ:
ಬಳಿಕ+ಏಕಾಂತ;ಭವನದೊಳ್+ಅಂದು; ಮುನಿಯಿರಲ್+ಅಂಬಿಕೆಯನ್+ಅರವಿಂದಮುಖಿ+ಅಟ್ಟಿದಳು; ದಿವ್ಯರೂಪವನ್+ ಇಂದುಮುಖಿ; ಕಂಡು+ಅಕ್ಷಿಗಳ; ಮುಚ್ಚಿದಳ್+ ಆಕೆ; ತಿರುಗಿದಳ್+ಅರಸ

ಅಚ್ಚರಿ:
(೧) ಅರಸ ಕೇಳೆಂದ: ಎಂದು ಹೇಳುವ ಮೂಲಕ ಈ ಕಾವ್ಯವು ಜನಮೇಜಯ ರಾಜನಿಗೆ ಹೇಳುತ್ತಿರುವುದು ಎಂದು ಆಗಾಗ ತಿಳಿಸುವುದು
(೨) ಮುನಿ (೩ ಬಾರಿ), ಮುಖಿ (೨ ಬಾರಿ) ಎಂಬ ಎರಡು ಪದಗಳು ಮೊದಲ ಮತ್ತು ಕೊನೆ ಸಾಲನ್ನು ಬಿಟ್ಟು ಉಳಿದ ಸಾಲುಗಳಲ್ಲಿ ಕಾಣಬಹುದು
(೩) ಸ್ತ್ರೀಯರ ಮುಖ ವನ್ನು ತಾವರೆ, ಚಂದ್ರ ನಿಗೆ ಹೋಲಿಸುವುದನ್ನು ಒಂದೇ ಪದ್ಯದಲ್ಲಿ ಕಾಣಬಹುದು (ಅರವಿಂದ ಮುಖಿ – ೩ ಸಾಲು, ಇಂದು ಮುಖಿ- ೫ ಸಾಲು)
(೪) ಅಟ್ಟಿದಳು ಸೊಸೆಯನು: ಅಪ್ಪಟ ಕನ್ನಡ ಆಡು ಮಾತಿನ ಪದ ಪ್ರಯೋಗ

ಪದ್ಯ ೫: ಯೋಜನಗಂಧಿಯು ವ್ಯಾಸರಿಗೆ ಏನೆಂದು ಹೇಳಿದಳು ಮತ್ತು ಅವರ ಉತ್ತರವೇನಿತ್ತು ?

ನೆನೆದಿರೇನೌ ತಾಯೆ ಕೃತ್ಯವ
ನೆನಗೆ ಬೆಸಸೆನೆ ಮಗನೆ ಭಾರತ
ವಿನುತಕುಲಜಲರಾಶಿಯೆಡೆವರಿತುದು ವಿಚಿತ್ರನಲಿ
ತನುಜ ನೀನೇ ಬಲ್ಲೆಯೆನೆ ಕೇಳ್
ಜನನಿ ನಿಮ್ಮಡಿಯಾಜ್ಞೆಯಲಿ ಸಂ
ಜನಿಸುವೆನು ವೈಚಿತ್ರವೀರ್ಯಕ್ಷೇತ್ರದಲಿ ಸುತರ (ಆದಿ ಪರ್ವ, ೩ ಸಂಧಿ, ೫ ಪದ್ಯ)

ತಾತ್ಪರ್ಯ:
ತಾಯೆ ನನ್ನನ್ನು ನೆನೆದರಿ ಏನು? ಹೇಳಿ ಏನು ಕೆಲಸ ನನ್ನಿಂದ ಆಗಬೇಕಿದೆ ಎನಲು, ಯೋಜನಗಂಧಿಯು ಈ ಭರತ ವಂಶವನ್ನು ಮುನ್ನೆಡೆಸಬೇಕಿದೆ. ವಿಚಿತ್ರವೀರ್ಯನ ಸಾವಿನಿಂದ ಈ ಕುಲ ಸಮುದ್ರವು ಬರಡಾಗಿದೆ, ಇದಕ್ಕೆ ಉಪಾಯ ನೀನೆ ಬಲ್ಲೆ ಎನಲು, ವ್ಯಾಸ ಮಹರ್ಷಿಗಳು ತಾಯೆ, ನಿಮ್ಮ ಆಜ್ಞೆಯಂತೆ ವಿಚಿತ್ರವೀರ್ಯನ ಪರವಾಗಿ ಮಕ್ಕಳನ್ನು ಜನಿಸುವೆನು ಎಂದರು.

ಅರ್ಥ:
ನೆನೆ: ಜ್ಞಾಪಿಸಿಕೊ, ಸ್ಮರಣೆ, ಮನಸ್ಸಿಗೆ ತಂದುಕೊ; ಕೃತ್ಯ: ಕೆಲಸ, ಕಾಯಕ
ಬೆಸಸು: ಆಜ್ಞಾಪಿಸು, ಅಪ್ಪಣೆ ಮಾಡು, ಹೇಳು, ನಿರೂಪಿಸು
ವಿನುತ: ಹೆಸರುವಾಸಿ, ಶ್ರೇಷ್ಠವಾದ, ಪ್ರಸಿದ್ಧವಾದ
ಎಡವರಿಸು: ನಡುವೆ ಬರಮಾಡು, ಹಿಮ್ಮೆಟ್ಟಿಸು,
ಕುಲ: ವಂಶ, ಮನೆತನ ; ಜಲರಾಶಿ: ಸಮುದ್ರ
ತನುಜ: ಮಗ, ಸುತ, ಪುತ್ರ; ಬಲ್ಲೆ: ತಿಳಿದಿರುವ (ಇತರ ಅರ್ಥ: ಈಟಿ)
ಆಜ್ಞೆ: ಅಪ್ಪಣೆ, ಅನುಮತಿ,ನಿರ್ದೇಶನ ; ಸಂಜನಿಸು: ಸಂಭವಿಸು, ಉಂಟಾಗು
ಕ್ಷೇತ್ರ: ಪ್ರದೇಶ, ಪುಣ್ಯಸ್ಥಳ, (ಇತರ ಅರ್ಥ: ಹೆಂಡತಿ, ದೇಹ)

ಪದವಿಂಗಡನೆ:
ಕೃತ್ಯವನ್+ಎನಗೆ; ಬೇಸಸು+ಎನೆ

ಅಚ್ಚರಿ:
(೧) ಇಬ್ಬರು ಮಾತನಾಡುವ ರೀತಿಯಲ್ಲಿ ಪದ್ಯದ ರಚನೆ:
ವ್ಯಾಸರು: ನೆನೆದಿರೇನೌ ತಾಯೆ, ಕೃತ್ಯವನ್ ಎನಗೆ ಬೇಸಸು
ಸತ್ಯವತಿ: ಮಗನೆ, ಭಾರತ ವಂಶ ಎಡವರಿತುದು ವಿಚಿತ್ರವೀರ್ಯನಲಿ,
ವ್ಯಾಸರು: ಕೇಳ್ ಜನನಿ, ನಿಮ್ಮಡಿಯಾಜ್ಞೆಯಲಿ ಸಂಜನಿಸುವೆನು ಸುತರ ವಿಚಿತ್ರವೀರ್ಯನ ಕ್ಷೇತ್ರದಲಿ

(೨) ಪದಗಳ ರಚನೆ:
(೧) ನೆನೆದಿರೆನೌ ತಾಯೆ – ಅಪ್ಪಟ ಕನ್ನಡ ಶಬ್ದ, ಆಡುಮಾತಿನ ಪ್ರಯೋಗ
(೨) ವಿನುತಕುಲಜಲರಾಶಿಯೆಡವರಿತು – ಭಾರತ ವಂಶವೆಂಬ ಕುಲ ಸಮುದ್ರವೇ ಬತ್ತಿತು. ಸಮುದ್ರ ಬತ್ತಲು ಸಾಧ್ಯವೇ? ಒಮ್ಮೆ ಬತ್ತಿದರು ಅದರ ಪರಿಸ್ಥಿತಿ ಹೇಗಿರಬೇಕು ಎಂದು ವರ್ಣಿಸಲು ಉಪಯೋಗಿಸಿದ ಉಪಮಾನ

(೩) ತಾಯೆ, ಜನನಿ – ತಾಯಿಯನ್ನು ಸಂಭೋದಿಸಲು ಉಪಯೋಗಿಸಿದ ಪದ
(೪) ಮಗ, ತನುಜ,ಸುತ – ಮಗನನ್ನು ಸಂಭೋದಿಸಲು ಉಪಯೋಗಿಸಿದ ಪದಗಳು
(೫) ವಿಚಿತ್ರ, ವೈಚಿತ್ರವೀರ್ಯ – ಒಬ್ಬನ ಎರಡು ರೀತಿಯ ಹೆಸರು ಬಳಕೆ
(೬) ಸಾಲಿನ ಪದಗಳ ರಚನೆ:
(೧) ೧ ಮತ್ತು ೨ ಸಾಲಿನ ಮೊದಲ ಪದಗಳು (ನೆನೆ, ನೆನ)
(೨) ೫ ಮತ್ತು ೬ ಸಾಲಿನ ಮೊದಲ ಪದಗಳು (ಜನನಿ, ಜನಿಸು)
(೩) ೩ ಮತ್ತು ೪ ಸಾಲಿನ ಮೊದಲ ಪದಗಳು (ವಿನುತ, ತನುಜ)
(೭) “ನ” ಕಾರಗಳ ಪದ ಪ್ರಯೋಗ: ನೆನೆ, ನೆನಗೆ, ನೀನೇ, ನಿಮ್ಮಡಿ