ಪದ್ಯ ೫೯: ಅಶ್ವತ್ಥಾಮನು ಏನು ಪ್ರತಿಜ್ಞೆ ಮಾಡಿದನು?

ಶೋಕವಡಗಿದುದವರಿಗಂತ
ರ್ವ್ಯಾಕುಳತೆ ಬೀಳ್ಕೊಂಡುದಹುದಿ
ನ್ನೇಕೆ ಸಂವೇಶಾನುಭೂತಾನುಭವ ದುರ್ವ್ಯಸನ
ಸಾಕದಂತಿರಲಿನ್ನು ಬಿಡು ನೀ
ಸಾಕಿತಕೆ ಫಲವೆನಿಸಿ ರಜನಿಯೊ
ಳಾ ಕುಠಾರರ ತಲೆಗಲನು ತಹೆನೆಂದನಾ ದ್ರೌಣಿ (ಗದಾ ಪರ್ವ, ೮ ಸಂಧಿ, ೫೯ ಪದ್ಯ)

ತಾತ್ಪರ್ಯ:
ಅಶ್ವತ್ಥಾಮಾದಿಗಳ ದುಃಖವು ಅಡಗಿತು. ಮನಸ್ಸಿನ ವ್ಯಾಕುಲತೆಯು ಇಲ್ಲವಾಯಿತು. ಇನ್ನೇಕೆ ಆಗಿ ಹೋದುದನ್ನು ನೆನೆಸಿ ದುಃಖಿಸಬೇಕು? ಅದು ಹಾಗಿರಲಿ, ನೀನು ನಮ್ಮನ್ನು ಸಾಕಿದುದು ಸಾರ್ಥಕವೆನ್ನಿಸಲು, ಈ ರಾತ್ರಿ ಆ ಕುಠಾರರ ತಲೆಗಳನ್ನು ಕಡಿದು ತರುತ್ತೇನೆ ಎಂದು ಅಶ್ವತ್ಥಾಮನು ಹೇಳಿದನು.

ಅರ್ಥ:
ಶೋಕ: ದುಃಖ; ಅಡಗು: ಮುಚ್ಚು; ವ್ಯಾಕುಲ: ದುಃಖ, ವ್ಯಥೆ; ಬೀಳ್ಕೊಡು: ತೆರಳು; ಸಂವೇಶ: ಒಳಹೊಕ್ಕು; ಅನುಭೂತ: ಕಂಡು ಕೇಳಿದ, ಅನುಭವಿಸಿದ; ದುರ್ವ್ಯಸನ: ಕೆಟ್ಟ ಚಟ, ದುರಭ್ಯಾಸ; ಸಾಕು: ಸಲಹು; ಬಿಡು: ತೊರೆ; ಫಲ: ಪ್ರಯೋಜನ; ರಜನಿ: ರಾತ್ರಿ; ಕುಠಾರ: ಕೊಡಲಿ, ಗುದ್ದಲಿ; ತಲೆ: ಶಿರ; ತಹೆ: ತರುವೆ; ದ್ರೌಣಿ: ಅಶ್ವತ್ಥಾಮ;

ಪದವಿಂಗಡಣೆ:
ಶೋಕವ್+ಅಡಗಿದುದ್+ಅವರಿಗ್+ಅಂತ
ರ್ವ್ಯಾಕುಳತೆ +ಬೀಳ್ಕೊಂಡುದ್+ಅಹುದ್
ಇನ್ನೇಕೆ +ಸಂವೇಶ+ಅನುಭೂತ+ಅನುಭವ +ದುರ್ವ್ಯಸನ
ಸಾಕ್+ಅದಂತಿರಲ್+ಇನ್ನು+ ಬಿಡು +ನೀ
ಸಾಕಿತಕೆ+ ಫಲವೆನಿಸಿ +ರಜನಿಯೊಳ್
ಆ+ ಕುಠಾರರ +ತಲೆಗಳನು +ತಹೆನೆಂದನಾ +ದ್ರೌಣಿ

ಅಚ್ಚರಿ:
(೧) ಸಾಕು, ಸಾಕಿತಕೆ – ಪದಗಳ ಪ್ರಯೋಗ
(೨) ಅಶ್ವತ್ಥಾಮನ ಪ್ರಮಾಣ – ನೀ ಸಾಕಿತಕೆ ಫಲವೆನಿಸಿ ರಜನಿಯೊಳಾ ಕುಠಾರರ ತಲೆಗಲನು ತಹೆನೆಂದನಾ ದ್ರೌಣಿ

ಪದ್ಯ ೫೨: ಅರ್ಜುನನ ಬಾಣವನ್ನು ಎದುರಿಸಲು ಯಾರು ಬಂದರು?

ನೂಕಿದರು ಶಲ್ಯಂಗೆ ಪಡಿಬಲ
ದಾಕೆವಾಳರು ಗುರುಸುತಾದ್ಯರು
ತೋಕಿದರು ಶರಜಾಳವರ್ಜುನನಂಬಿನಂಬುಧಿಯ
ಬೀಕಲಿನ ಭಟರುಬ್ಬಿದರೆ ಸು
ವ್ಯಾಕುಲರು ತುಬ್ಬಿದರೆ ತಪ್ಪೇ
ನೀ ಕಳಂಬವ ಕಾಯುಕೊಳ್ಳೆನುತೆಚ್ಚನಾ ಪಾರ್ಥ (ಶಲ್ಯ ಪರ್ವ, ೨ ಸಂಧಿ, ೫೨ ಪದ್ಯ)

ತಾತ್ಪರ್ಯ:
ಶಲ್ಯನಿಗೆ ಸಹಾಯಮಾಡಲು ಅಶ್ವತ್ಥಾಮನೇ ಮೊದಲಾದ ವೀರರು ಅರ್ಜುನನ ಬಾಣಗಳ ಸಮುದ್ರವನ್ನು ತಮ್ಮ ಬಾಣಗಳಿಂದ ಇದಿರಿಸಿದರು. ದುರ್ಬಲ ಯೋಧರು ಉಬ್ಬಿದರೆ, ನೊಂದವರು ಉತ್ಸಾಹದಿಂದ ಮುಂದೆ ಬಂದರೆ, ತಪ್ಪೇನು? ಈ ಬಾಣದಿಂದ ನಿನ್ನನ್ನು ರಕ್ಷಿಸಿಕೋ ಎಂದು ಅರ್ಜುನನು ಹೊಡೆದನು.

ಅರ್ಥ:
ನೂಕು: ತಳ್ಳು; ಪಡಿಬಲ: ವೈರಿಸೈನ್ಯ; ಆಕೆವಾಳ: ಪರಾಕ್ರಮಿ; ಸುತ: ಮಗ; ಆದಿ: ಮುಂತಾದ; ತೋಕು: ಎಸೆ, ಪ್ರಯೋಗಿಸು, ಚೆಲ್ಲು; ಶರ: ಬಾಣ; ಜಾಲ: ಗುಂಪು; ಅಂಬು: ಬಾಣ; ಅಂಬುಧಿ: ಸಾಗರ; ಬೀಕಲು: ಕೊನೆ, ಅಂತ್ಯ; ಭಟ: ಸೈನಿಕ; ಉಬ್ಬು: ಅತಿಶಯ, ಉತ್ಸಾಹ; ವ್ಯಾಕುಲ: ದುಃಖ, ವ್ಯಥೆ; ತುಬ್ಬು: ಪತ್ತೆ ಮಾಡು, ಶೋಧಿಸು; ಕಳಂಬ: ಬಾಣ, ಅಂಬು; ಕಾಯ್ದು: ಕಾಪಾಡು; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ನೂಕಿದರು +ಶಲ್ಯಂಗೆ +ಪಡಿಬಲದ್
ಆಕೆವಾಳರು +ಗುರುಸುತಾದ್ಯರು
ತೋಕಿದರು +ಶರಜಾಳವ್+ಅರ್ಜುನನ್+ಅಂಬಿನ್+ಅಂಬುಧಿಯ
ಬೀಕಲಿನ+ ಭಟರ್+ಉಬ್ಬಿದರೆ+ ಸು
ವ್ಯಾಕುಲರು +ತುಬ್ಬಿದರೆ +ತಪ್ಪೇನ್
ಈ+ ಕಳಂಬವ+ ಕಾಯ್ದುಕೊಳ್ಳೆನುತ್+ಎಚ್ಚನಾ +ಪಾರ್ಥ

ಅಚ್ಚರಿ:
(೧) ಶರಜಾಳವರ್ಜುನನಂಬಿನಂಬುಧಿಯ – ಅಂಬು ಪದದ ಬಳಕೆ
(೨) ಉಬ್ಬಿದರೆ, ತುಬ್ಬಿದರೆ – ಪ್ರಾಸ ಪದಗಳು
(೩) ಕಳಂಬ, ಅಂಬು, ಶರ – ಸಮಾನಾರ್ಥಕ ಪದ

ಪದ್ಯ ೨೦: ಕೌರವ ಸೈನ್ಯ ಹೇಗೆ ತನ್ನ ಪ್ರತಾಪವನ್ನು ತೋರಿತು?

ನೂಕಿದರು ನಿನ್ನವರು ಹಿನ್ನಲೆ
ಯಾಕೆವಾಳರ ಜೋಕೆಯಲಿ ರಣ
ವೋಕರಿಸಿತರುಣಾಂಬುವನು ಗಜಹಯದ ಮೈಗಳಲಿ
ವ್ಯಾಕುಲರ ಬಯ್ಬಯ್ದು ಚಪಲಾ
ನೀಕ ಬಂಡಿಸಿ ಚಂಡಪಾತ ನಿ
ರಾಕರಿಷ್ಣುಗಳೊಕ್ಕಲಿಕ್ಕಿತು ದಳದ ಮಧ್ಯದಲಿ (ಶಲ್ಯ ಪರ್ವ, ೨ ಸಂಧಿ, ೨೦ ಪದ್ಯ)

ತಾತ್ಪರ್ಯ:
ಎಲೈ ರಾಜನೇ, ನಿನ್ನ ಸುಭಟರು ವೀರರ ಬೆಂಬಲದಿಂದ ಮುನ್ನುಗ್ಗಿ ಸಮರದಲ್ಲಿ ಆನೆ ಕುದುರೆಗಳ ರಕ್ತವನ್ನು ಸುರಿಸಿದರು. ಯುದ್ಧ ವ್ಯಾಕುಲರನ್ನು ಬೈದು, ಸೈನ್ಯವನ್ನು ಬಡಿದು, ರಣರಂಗದಲ್ಲಿ ಅತಿಶಯ ಪರಾಕ್ರಮದಿಂದ ವೀರರನ್ನು ಹೊಡೆದು ಹಾಕಿದರು.

ಅರ್ಥ:
ನೂಕು: ತಳ್ಳು; ಆಕೆವಾಳ: ವೀರ, ಪರಾಕ್ರಮಿ; ಜೋಕೆ: ಎಚ್ಚರಿಕೆ; ರಣ: ಯುದ್ಧ; ಓಕರಿಸು: ಹೊರಹಾಕು; ಅರುಣಾಂಬು: ಕೆಂಪಾದ ನೀರು (ರಕ್ತ); ಗಜ: ಆನೆ; ಹಯ: ಕುದುರೆ; ಮೈ: ತನು, ದೇಹ; ವ್ಯಾಕುಲ: ದುಃಖ, ವ್ಯಥೆ; ಬೈದು: ಜರೆದು; ಚಪಲ: ಚಂಚಲ ಸ್ವಭಾವದವನು; ಆನೀಕ: ಗುಂಪು; ಬಂಡಿಸು: ಹೊಡೆ; ಚಂಡ: ಶೂರ, ಪರಾಕ್ರಮಿ; ನಿರಾಕರಿಷ್ಣು: ನಿರಾಕರಿಸಿ ಬಯಸಿದವನು; ದಳ: ಸೈನ್ಯ; ಮಧ್ಯ: ನಡುವೆ;

ಪದವಿಂಗಡಣೆ:
ನೂಕಿದರು +ನಿನ್ನವರು +ಹಿನ್ನಲೆ
ಆಕೆವಾಳರ+ ಜೋಕೆಯಲಿ +ರಣ
ಓಕರಿಸಿತ್+ಅರುಣಾಂಬುವನು +ಗಜ+ಹಯದ +ಮೈಗಳಲಿ
ವ್ಯಾಕುಲರ +ಬಯ್ಬಯ್ದು+ ಚಪಲ
ಆನೀಕ +ಬಂಡಿಸಿ+ ಚಂಡಪಾತ+ ನಿ
ರಾಕರಿಷ್ಣುಗಳ್+ಒಕ್ಕಲಿಕ್ಕಿತು +ದಳದ +ಮಧ್ಯದಲಿ

ಅಚ್ಚರಿ:
(೧) ರಕ್ತಹರಿಯಿತು ಎಂದು ಹೇಳುವ ಪರಿ – ರಣವೋಕರಿಸಿತರುಣಾಂಬುವನು ಗಜಹಯದ ಮೈಗಳಲಿ

ಪದ್ಯ ೧೪: ದುರ್ಯೋಧನನು ಭೀಮನನ್ನು ಹೇಗೆ ಕೆಣಕಿದನು?

ಏಕೆ ಕೆಣಕಿದೆ ಕರ್ಣ ಬೂತಿನ
ಬೀಕಲಿನ ಬದಗಿಯನು ಸಮರದೊ
ಳೀಕೆಯನಿಲಜ ಮುರಿವನೆನುತವೆ ತನ್ನ ಮುಂಜೆರಗ
ನೂಕಿ ತೊಡೆಗಳ ತೋರಿಸುತ ಲೋ
ಕೈಕ ವೀರನನೇಡಿಸಿದರ
ವ್ಯಾಕುಲನ ಮನ ಖಂಡಿಯೋದುದು ಖತಿಯ ಹೊಯ್ಲಿನಲಿ (ಸಭಾ ಪರ್ವ, ೧೬ ಸಂಧಿ, ೧೪ ಪದ್ಯ)

ತಾತ್ಪರ್ಯ:
ಕರ್ಣ ನೀನೇಕೆ ಇವಳನ್ನು ಕೆಣಕಿದೆ, ನಾಚಿಕೆಯಿಲ್ಲದ ದಾಸಿ ಇವಳು, ಇವಳ ಭೀಮನು ನನ್ನನ್ನು ಯುದ್ಧರಂಗದಲ್ಲಿ ಕೊಲ್ಲುತ್ತಾನಂತೆ, ಕೇಳಿದೆಯಾ ಕರ್ಣಾ ಎಂದು ಹೇಳುತ್ತಾ ತನ್ನ ಬಟ್ಟೆಯನ್ನು ಸರಸಿ ತೊಡೆಗಳನ್ನು ತೋರಿಸಿ ಭೀಮನನ್ನು ಅಣಕಿಸಿದನು. ಭೀಮನ ಮನಸ್ಸು ಕೋಪದ ಆವೇಗದಿಂದ ಛಿದ್ರಛಿದ್ರವಾಯಿತು.

ಅರ್ಥ:
ಕೆಣಕು: ರೇಗಿಸು; ಬೂತು: ಕುಚೋದ್ಯ, ಕುಚೇಷ್ಟೆ; ಬೀಕಲು: ಕೊನೆ, ಅಂತ್ಯ, ಒಣಗು; ಬದಗು: ಹಾದರ, ವ್ಯಭಿಚಾರ, ದಾಸ; ಸಮರ: ಯುದ್ಧ; ಅನಿಲಜ: ವಾಯುಪುತ್ರ (ಭೀಮ); ಮುರಿ: ಸೀಳು; ಮುಂಜೆರಗು: ಸೆರಗಿನ ತುದಿ, ಹೊದ್ದ ವಸ್ತ್ರದ ಅಂಚು; ನೂಕು: ತಳ್ಳು; ತೊಡೆ: ಊರು; ತೋರಿಸು: ಪ್ರದರ್ಶಿಸು; ಲೋಕೈಕವೀರ: ಜಗದೇಕ ವೀರ, ಶೂರ; ಏಡಿಸು: ಕೆಣಕು; ವ್ಯಾಕುಲ: ದುಃಖ, ವ್ಯಥೆ; ಮನ: ಮನಸ್ಸು; ಖಂಡಿಯೋಗು: ತುಂಡು ತುಂಡಾಗು; ಖತಿ: ಕೋಪ; ಹೊಯ್ಲು: ಮಿಡಿತ, ತುಡಿತ;

ಪದವಿಂಗಡಣೆ:
ಏಕೆ +ಕೆಣಕಿದೆ +ಕರ್ಣ +ಬೂತಿನ
ಬೀಕಲಿನ +ಬದಗಿಯನು +ಸಮರದೊಳ್
ಈಕೆಯ+ಅನಿಲಜ +ಮುರಿವನ್+ಎನುತವೆ+ ತನ್ನ+ ಮುಂಜೆರಗ
ನೂಕಿ +ತೊಡೆಗಳ +ತೋರಿಸುತ+ ಲೋ
ಕೈಕ+ ವೀರನನ್+ಏಡಿಸಿದರ
ವ್ಯಾಕುಲನ +ಮನ +ಖಂಡಿಯೋದುದು +ಖತಿಯ+ ಹೊಯ್ಲಿನಲಿ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬೂತಿನ ಬೀಕಲಿನ ಬದಗಿಯನು
(೨) ಖ ಕಾರದ ಜೋಡಿ ಪದ – ಖಂಡಿಯೋದುದು ಖತಿಯ
(೩) ಭೀಮನನ್ನು ಕೆಣಕುವ ಪರಿ – ತನ್ನ ಮುಂಜೆರಗ ನೂಕಿ ತೊಡೆಗಳ ತೋರಿಸುತ ಲೋ
ಕೈಕ ವೀರನನೇಡಿಸಿ

ಪದ್ಯ ೭೪: ಸಭೆಯಲ್ಲಿದ್ದ ಪಂಡಿತರು ಹೇಗೆ ದುಃಖಿಸಿದರು?

ವ್ಯಾಕುಲವನಿದ ಕಾಂಬ ಕಣ್ಣುಗ
ಳೇಕೆ ರಾಜಕುಮಾರಿಯೀಕೆಯ
ಶೋಕರಸವನು ಕುಡಿವ ಕರ್ಣದ್ವಯವಿದೇಕೆಮಗೆ
ಏಕೆ ವಿಧಿ ನಿರ್ಮಿಸಿದನೋ ನಾ
ವೇಕೆ ಸಪ್ರಾಣರೊ ಶಿವಾಯೆಂ
ದಾಕುಠಾರರ ಬೈದುದಾ ಸಭೆಯಲಿ ಬುಧವ್ರಾತ (ಸಭಾ ಪರ್ವ, ೧೫ ಸಂಧಿ, ೭೪ ಪದ್ಯ)

ತಾತ್ಪರ್ಯ:
ದ್ರೌಪದಿಯ ಈ ದುಃಖವನ್ನು ನೋಡುವ ಈ ಕಣ್ಣುಗಳೇಕೆ? ಅವಳ ಶೋಕಭರಿತ ಹಾಹಾಕಾರವನ್ನು ಕೇಳುವ ಈ ಕಿವಿಗಳೇಕೆ? ಬ್ರಹ್ಮನು ನಮ್ಮನ್ನೇಕೆ ಹುಟ್ಟಿಸಿದನೋ? ನಮಗೇಕೆ ಈ ಜೀವವು ಇನ್ನು ಉಳಿದಿದೆ? ಅಯ್ಯೋ ಶಿವ ಶಿವಾ ಎಂದು ದುಃಖಿಸುತ್ತಾ, ಕುಲಕ್ಕೆ ಕೊಡಲಿಯಂತಿರುವ ದುಷ್ಟ್ರರಾದ ಶಕುನಿ, ದುರ್ಯೋಧನಾದಿಗಳನ್ನು ಸಭೆಯಲ್ಲಿದ್ದ ಪಂಡಿತರು ಜರೆದರು.

ಅರ್ಥ:
ವ್ಯಾಕುಲ: ದುಃಖ, ವ್ಯಥೆ; ಕಾಂಬ: ನೋಡುವ; ಕಣ್ಣು: ನಯನ; ರಾಜಕುಮಾರಿ: ಅರಸಿ; ಶೋಕ: ದುಃಖ; ರಸ: ದ್ರವ; ಕುಡಿ: ಹೀರು, ಪಾನ ಮಾಡು; ಕರ್ಣ: ಕಿವಿ; ದ್ವಯ: ಎರಡು; ವಿಧಿ: ಬ್ರಹ್ಮ, ನಿಯಮ; ನಿರ್ಮಿಸು: ರಚಿಸು; ಪ್ರಾಣ: ಜೀವ; ಕುಠಾರ: ಕೊಡಲಿ; ಬೈದು: ಜರಿ; ಸಭೆ: ಓಲಗ; ಬುಧ: ಪಂಡಿತ; ವ್ರಾತ: ಗುಂಪು;

ಪದವಿಂಗಡಣೆ:
ವ್ಯಾಕುಲವನಿದ+ ಕಾಂಬ+ ಕಣ್ಣುಗ
ಳೇಕೆ +ರಾಜಕುಮಾರಿ+ಈಕೆಯ
ಶೋಕರಸವನು+ ಕುಡಿವ+ ಕರ್ಣದ್ವಯವ್+ಇದೇಕ್+ಎಮಗೆ
ಏಕೆ +ವಿಧಿ +ನಿರ್ಮಿಸಿದನೋ +ನಾ
ವೇಕೆ +ಸಪ್ರಾಣರೊ +ಶಿವಾಯೆಂದ್
ಆ+ಕುಠಾರರ +ಬೈದುದಾ +ಸಭೆಯಲಿ +ಬುಧ+ವ್ರಾತ

ಅಚ್ಚರಿ:
(೧) ಕೇಳುವುದನ್ನು ವಿವರಿಸಿರುವ ಪರಿ – ಶೋಕರಸವನು ಕುಡಿವ ಕರ್ಣದ್ವಯವಿದೇಕೆಮಗೆ