ಪದ್ಯ ೩೨: ಧೃತರಾಷ್ಟ್ರನ ಮನವು ಹೇಗಿತ್ತು?

ಹಾಸಗರ್ವದ ಮೋನದಲಿ ಸಂ
ತೋಷಗರ್ವದ ದುಗುಡದಲಿ ಸುವಿ
ಳಾಸ ಗರ್ವದ ಖೇದದಲಿ ಮದಗರ್ವ ಚಿಂತೆಯಲಿ
ವೈಸಿಕದ ಕಣಿ ಕುಟಿಲ ಮಂತ್ರದ
ಮೀಸಲಳಿಯದ ಕುಹಕ ವಿದ್ಯಾ
ವಾಸ ಗೃಹ ಧೃತರಾಷ್ಟ್ರನಿದ್ದನು ವಿಕೃತಭಾವದಲಿ (ಸಭಾ ಪರ್ವ, ೧೫ ಸಂಧಿ, ೩೨ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನ ಮನಸ್ಸಿನ ಚಿತ್ರಣದ ಸೊಗಸಾಗಿ ಇಲ್ಲಿ ವರ್ಣಿಸಲಾಗಿದೆ. ಮೌನದಿಂದ ಒಳಗೇ ನಗುತ್ತಾ, ನೋಟಕ್ಕೆ ದುಃಖಿಸುತ್ತಾ ಒಳಗೇ ಸಂತೋಷಪಡುತ್ತಾ ಖೇದದಲ್ಲಿ ಸಂಭ್ರಮದ ಗರ್ವವನ್ನು ಮುಚ್ಚಿಟ್ಟು ಚಿಂತೆಯಲ್ಲಿ ತನ್ನ ಮಕ್ಕಳೀಗ ಏಕಚತ್ರಾಧಿಪತಿಗಳೆಂಬ ಆನಂದದಲ್ಲಿ, ಪಾಂಡವರ ಒಡೆಯರಾದರೆಂಬ ಗರ್ವವನ್ನು ಮನದೊಳಗೆ ಹುದುಗಿಸಿ, ಠಕ್ಕಿನ ಗಣಿಯೂ, ಕುಟಿಲೋಪಾಯದ ಕುಹಕದ ವಾಸಗೃಹವೂ ಆಗಿದ್ದ ಧೃತರಾಷ್ಟ್ರನು ಮನೋವಿಕಾರದಲ್ಲಿ ಮುಳುಗಿದ್ದನು.

ಅರ್ಥ:
ಹಾಸ: ಸಂತೋಷ, ಪಾಶ; ವರ್ಗ: ಗುಂಫು; ಮೋನ: ಮೌನ; ಸಂತೋಷ: ಹರ್ಷ; ದುಗುಡ: ದುಃಖ; ವಿಲಾಸ: ಕ್ರೀಡೆ, ವಿಹಾರ, ಅಂದ; ಗರ್ವ: ಅಹಂಕಾರ; ಖೇದ: ದುಃಖ, ಉಮ್ಮಳ; ಮದ: ಮತ್ತು, ಅಮಲು; ಚಿಂತೆ: ಯೋಚನೆ; ವೈಸಿಕ: ಠಕ್ಕು, ಮೋಸ; ಕಣಿ: ನೋಟ, ಕಾಣ್ಕೆ; ಕುಟಿಲ: ಮೋಸ, ವಂಚನೆ; ಮಂತ್ರ: ವಿಚಾರ, ಆಲೋಚನೆ; ಮೀಸಲು: ಮುಡಿಪು, ಪ್ರತ್ಯೇಕ; ಕುಹಕ: ಮೋಸ, ವಂಚನೆ; ವಿದ್ಯಾ: ಜ್ಞಾನ; ವಾಸ: ಮನೆ, ವಾಸಸ್ಥಳ; ಗೃಹ: ಮನೆ; ವಿಕೃತ: ಬದಲಾದವನು; ಭಾವ: ಭಾವನೆ, ಚಿತ್ತವೃತ್ತಿ; ಅಳಿ: ಕೊನೆ;

ಪದವಿಂಗಡಣೆ:
ಹಾಸ+ಗರ್ವದ+ ಮೋನದಲಿ+ ಸಂ
ತೋಷ+ಗರ್ವದ +ದುಗುಡದಲಿ +ಸುವಿ
ಳಾಸ +ಗರ್ವದ +ಖೇದದಲಿ+ ಮದಗರ್ವ +ಚಿಂತೆಯಲಿ
ವೈಸಿಕದ +ಕಣಿ +ಕುಟಿಲ +ಮಂತ್ರದ
ಮೀಸಲಳಿಯದ +ಕುಹಕ+ ವಿದ್ಯಾ
ವಾಸ +ಗೃಹ +ಧೃತರಾಷ್ಟ್ರನಿದ್ದನು +ವಿಕೃತ+ಭಾವದಲಿ

ಅಚ್ಚರಿ:
(೧) ದ್ವಂದ್ವ ಭಾವವನ್ನು ವಿವರಿಸುವ ಪರಿ – ಹಾಸಗರ್ವದ ಮೋನದಲಿ ಸಂತೋಷಗರ್ವದ ದುಗುಡದಲಿ ಸುವಿಳಾಸ ಗರ್ವದ ಖೇದದಲಿ ಮದಗರ್ವ ಚಿಂತೆಯಲಿ
(೨) ಧೃತರಾಷ್ಟ್ರನ ಮನೋವಿಕಾರವನ್ನು ವಿವರಿಸುವ ಪರಿ – ವೈಸಿಕದ ಕಣಿ ಕುಟಿಲ ಮಂತ್ರದ
ಮೀಸಲಳಿಯದ ಕುಹಕ ವಿದ್ಯಾವಾಸ ಗೃಹ ಧೃತರಾಷ್ಟ್ರನಿದ್ದನು ವಿಕೃತಭಾವದಲಿ