ಪದ್ಯ ೮: ಪಾಂಡವರ ಸೇನೆಯಲ್ಲಿ ಏನು ಉಳಿದಿತ್ತು?

ವೈರಿಬಲದೊಳಗಾರು ಸಾವಿರ
ತೇರು ಗಜಘಟೆ ಮೂರು ಸಾವಿರ
ವಾರುವಂಗಳನೆಣಿಸಿ ತೆಗೆದರು ಹತ್ತು ಸಾವಿರವ
ವೀರಭಟರಾಯ್ತೊಂದು ಕೋಟಿ ಮ
ಹೀರಮಣ ಕೇಳುಭಯಬಲ ವಿ
ಸ್ತಾರ ಹದಿನೆಂಟೆನಿಸಿದಕ್ಷೋಹಿಣಿಯ ಶೇಷವಿದು (ಶಲ್ಯ ಪರ್ವ, ೨ ಸಂಧಿ, ೮ ಪದ್ಯ)

ತಾತ್ಪರ್ಯ:
ಪಾಂಡವರ ಸೇನೆಯಲ್ಲಿ ಆರುಸಾವಿರ ರಥಗಳು, ಮೂರು ಸಾವಿರ ಆನೆಗಳು, ಹತ್ತು ಸಾವಿರ ಕುದುರೆಗಳು, ಒಂದು ಕೋಟಿ ಕಾಲಾಳುಗಳು, ಉಳಿದಿದ್ದರು. ಎರಡೂ ಸೇನೆಗಳಲ್ಲಿ ಆರಂಭದಲ್ಲಿದ್ದ ಹದಿನೆಂಟು ಅಕ್ಷೋಹಿಣಿಗಳಲ್ಲಿ ಉಳಿದುದು ಇಷ್ಟೆ.

ಅರ್ಥ:
ವೈರಿ: ಶತ್ರು; ಬಲ: ಸೈನ್ಯ; ಸಾವಿರ: ಸಹಸ್ರ; ತೇರು: ಬಂಡಿ; ಗಜಘಟೆ: ಆನೆಯ ಗುಂಪು; ವಾರುವ: ಕುದುರೆ; ಅಂಗಳ: ಬಯಲು; ಎಣಿಸು: ಲೆಕ್ಕ ಹಾಕು; ತೆಗೆ: ಹೊರತರು; ವೀರ: ಶೂರ; ಭಟ: ಸೈನಿಕ; ಮಹೀರಮಣ: ರಾಜ; ಉಭಯ: ಎರಡು; ವಿಸ್ತಾರ: ವಿಶಾಲ; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ಶೇಷ: ಉಳಿದ;

ಪದವಿಂಗಡಣೆ:
ವೈರಿಬಲದೊಳಗ್+ಆರು +ಸಾವಿರ
ತೇರು +ಗಜಘಟೆ +ಮೂರು +ಸಾವಿರ
ವಾರುವಂಗಳನ್+ಎಣಿಸಿ +ತೆಗೆದರು +ಹತ್ತು +ಸಾವಿರವ
ವೀರಭಟರಾಯ್ತೊಂದು+ ಕೋಟಿ +ಮ
ಹೀರಮಣ +ಕೇಳ್+ಉಭಯಬಲ +ವಿ
ಸ್ತಾರ +ಹದಿನೆಂಟೆನಿಸಿದ್+ಅಕ್ಷೋಹಿಣಿಯ +ಶೇಷವಿದು

ಅಚ್ಚರಿ:
(೧) ಸಾವಿರ – ೧-೩ ಸಾಲಿನ ಕೊನೆಯ ಪದ

ಪದ್ಯ ೨೬: ದ್ರೋಣನು ಪಾಂಡವರ ಸೈನ್ಯವನ್ನು ಹೇಗೆ ಧ್ವಂಸ ಮಾಡಿದನು?

ಹೊಕ್ಕ ಸಾಲರುಣಾಂಬುಮಯ ಕೈ
ಯಿಕ್ಕಿದತ್ತಲು ಖಂಡಮಯ ಮೊಗ
ವಿಕ್ಕಿದತ್ತಲು ಮೊರೆವ ಹೆಣಮಯವೇನನುಸುರುವೆನು
ಇಕ್ಕಡಿಯ ಬಸುರುಚ್ಚುಗಳ ನರ
ಸೊಕ್ಕು ಡೊಳ್ಳಾಸದ ಮಹಾಭಯ
ವೆಕ್ಕಸರದಲಿ ಕಾಣಲಾದುದು ವೈರಿಬಲದೊಳಗೆ (ದ್ರೋಣ ಪರ್ವ, ೧೭ ಸಂಧಿ, ೨೬ ಪದ್ಯ)

ತಾತ್ಪರ್ಯ:
ದ್ರೋಣನು ಹೊಕ್ಕ ದಾರಿಯೆಲ್ಲಾ ರಕ್ತಮಯವಾಯಿತು. ಕೈಯಿಟ್ಟಲ್ಲಿ ಮಾಂಸ ಖಂಡಮಯವಾಯಿತು. ಅವನು ನೋಡಿದ ದಿಕ್ಕಿನಲ್ಲಿ ಹೆಣಗಳು ಬಿದ್ದವು. ಎರಡು ಸಾಲುಗಳಲ್ಲೂ ಕಡಿದು ಬಿದ್ದ ಸೈನಿಕರು, ಸೊಕ್ಕಿದವರೆಲ್ಲಾ ಮಹಾ ಭಯಗ್ರಸ್ತರಾದರು.

ಅರ್ಥ:
ಹೊಕ್ಕು: ಸೇರು; ಸಾಲು: ಆವಳಿ; ಅರುಣ: ಕೆಂಪು; ಅಂಬು: ನೀರು; ಅರುಣಾಂಬು: ಕೆಂಪಾದ ನೀರು; ಮಯ: ತುಂಬು; ಕೈ: ಹಸ್ತ; ಖಂಡ: ತುಂಡು; ಮೊಗ: ಮುಖ; ಮೊರೆ: ಧ್ವನಿ ಮಾಡು; ಹೆಣ: ಜೀವವಿಲ್ಲದ ಶರೀರ; ಉಸುರು: ಹೇಳು, ಮಾತನಾಡು; ಇಕ್ಕಡಿ: ಎರಡೂ ಕಡೆಯಲ್ಲಿ; ಬಸುರು: ಹೊಟ್ಟೆ; ಉಚ್ಚು: ಹೊರಕ್ಕೆ ತೆಗೆ; ನರ: ಮನುಷ್ಯ; ಸೊಕ್ಕು: ಅಮಲು, ಮದ; ಡೊಳ್ಳು: ಬೊಜ್ಜು ಬೆಳೆದ ಹೊಟ್ಟೆ; ಮಹಾ: ಬಹಳ, ದೊಡ್ಡ; ಭಯ: ಅಂಜಿಕೆ; ಕಾಣು: ತೋರು; ವೈರಿ: ಶತ್ರು; ಬಲ: ಸೈನ್ಯ;

ಪದವಿಂಗಡಣೆ:
ಹೊಕ್ಕ +ಸಾಲ್+ಅರುಣಾಂಬುಮಯ+ ಕೈ
ಯಿಕ್ಕಿದತ್ತಲು +ಖಂಡಮಯ +ಮೊಗ
ವಿಕ್ಕಿದತ್ತಲು +ಮೊರೆವ +ಹೆಣಮಯವ್+ಏನನ್+ಉಸುರುವೆನು
ಇಕ್ಕಡಿಯ+ ಬಸುರ್+ಉಚ್ಚುಗಳ +ನರ
ಸೊಕ್ಕು +ಡೊಳ್ಳಾಸದ +ಮಹಾಭಯವ್
ಎಕ್ಕಸರದಲಿ +ಕಾಣಲಾದುದು +ವೈರಿಬಲದೊಳಗೆ

ಅಚ್ಚರಿ:
(೧) ಅರುಣಾಂಬುಮಯ, ಖಂಡಮಯ, ಹೆಣಮಯ – ಪದದ ಬಲಕೆ

ಪದ್ಯ ೬೭: ಆದಿಶೇಷನ ಕೊರಳೇಕೆ ನೆಟ್ಟಗೆ ನಿಂತಿತು?

ರಥಚಯವ ನುಗ್ಗೊತ್ತಿದನು ಸಾ
ರಥಿಗಳನು ಸೀಳಿದನು ಸುಮಹಾ
ರಥರ ಬಿಂಕದ ಬಿಗುಹ ಮುರಿದನು ಹೊಕ್ಕು ಬೀದಿಯಲಿ
ಶಿಥಿಲವಾಯಿತು ವೈರಿಬಲವತಿ
ಮಥನವಾಯಿತು ದೈತ್ಯನೂಳಿಗ
ಪೃಥುವಿ ಲಘುತರವಾಯ್ತು ಫಣಿಪನ ಕೊರಳು ಸೈನಿಮಿರೆ (ದ್ರೋಣ ಪರ್ವ, ೧೫ ಸಂಧಿ, ೬೭ ಪದ್ಯ)

ತಾತ್ಪರ್ಯ:
ಬಕಾಸುರನ ಮಗನ ಸೇನೆಯ ರಥಗಳನ್ನು ಪುಡಿಯಾಗುವಂತೆ ಕುಕ್ಕಿದನು. ಸಾರಥಿಗಳನ್ನು ಸೀಳಿದನು. ಮಹಾರಥರ ನಡುವೆ ನುಗ್ಗಿ ಅವರ ಬಿಂಕವನ್ನು ಮುರಿದನು. ವೈರಿ ಸೈನ್ಯವು ಬಲಹೀನವಾಯಿತು. ಘಟೋತ್ಕಚನ ಹಾವಳಿ ಮಿತಿ ಮೀರಿತು. ಭೂಮಿಯ ಭಾರವು ಕುಗ್ಗಿದುದರಿಂದ ಆದಿಶೇಷನ ಕೊರಳು ನೆಟ್ಟನೆ ನಿಂತಿತು.

ಅರ್ಥ:
ರಥ: ಬಂಡಿ; ಚಯ: ಸಮೂಹ, ರಾಶಿ; ನುಗ್ಗು: ತಳ್ಳು; ಒತ್ತು: ಆಕ್ರಮಿಸು, ಮುತ್ತು; ಸಾರಥಿ: ಸೂತ; ಸೀಳು: ಕಡಿದು ಹಾಕು; ಮಹಾರಥ: ಪರಾಕ್ರಮಿ; ಬಿಂಕ: ಗರ್ವ, ಜಂಬ; ಬಿಗುಹು: ಗಟ್ಟಿ; ಮುರಿ: ಸೀಳು; ಹೊಕ್ಕು: ಸೇರು; ಬೀದಿ: ಮಾರ್ಗ; ಶಿಥಿಲ: ದೃಢವಲ್ಲದ; ವೈರಿ: ಶತ್ರು; ಬಲ: ಶಕ್ತಿ; ಮಥನ: ನಾಶ; ದೈತ್ಯ: ರಾಕ್ಷಶ; ಊಳಿಗ: ಕೆಲಸ, ಕಾರ್ಯ; ಪೃಥು: ಭೂಮಿ; ಲಘು: ಭಾರವಿಲ್ಲದ; ಫಣಿ: ಹಾವು; ಕೊರಳು: ಕಂಠ; ನಿಮಿರು: ನೆಟ್ಟಗಾಗು;

ಪದವಿಂಗಡಣೆ:
ರಥ+ಚಯವ +ನುಗ್+ಒತ್ತಿದನು +ಸಾ
ರಥಿಗಳನು +ಸೀಳಿದನು +ಸುಮಹಾ
ರಥರ +ಬಿಂಕದ +ಬಿಗುಹ +ಮುರಿದನು +ಹೊಕ್ಕು +ಬೀದಿಯಲಿ
ಶಿಥಿಲವಾಯಿತು +ವೈರಿಬಲವ್+ಅತಿ
ಮಥನವಾಯಿತು +ದೈತ್ಯನ್+ಊಳಿಗ
ಪೃಥುವಿ +ಲಘುತರವಾಯ್ತು +ಫಣಿಪನ+ ಕೊರಳು +ಸೈನಿಮಿರೆ

ಅಚ್ಚರಿ:
(೧) ರೂಪಕದ ಪ್ರಯೋಗ – ಪೃಥುವಿ ಲಘುತರವಾಯ್ತು ಫಣಿಪನ ಕೊರಳು ಸೈನಿಮಿರೆ
(೨) ರಥ, ರಥಿ, ರಥ – ೧-೩ ಸಾಲಿನ ಪದಗಳ ರಚನೆ

ಪದ್ಯ ೬೫: ಹಮ್ಮೀರ ದೇಶದ ರಾವುತರು ಹೇಗೆ ಯುದ್ಧ ಮಾಡಿದರು?

ಬೀಸುನೇಣಿನ ಸೆಳೆವ ನೇಗಿಲ
ಸೂಸುಗಣೆಗಳ ಕಡಿವ ಕೊಡಲಿಯ
ಕೈಸುರುಗಿ ಸೂನಗೆಯ ನಾನಾಯುಧದ ಗಡಣೆಗಳ
ಓಸರಣೆಗೊಡದತಿಬಳರು ದಿವ
ದಾಸೆಗಾರರು ವೈರಿಬಲವನು
ಘಾಸಿಮಾಡಿದರೊಗ್ಗಿನಲಿ ಹಮ್ಮೀರರಾವುತರು (ಭೀಷ್ಮ ಪರ್ವ, ೪ ಸಂಧಿ, ೬೫ ಪದ್ಯ)

ತಾತ್ಪರ್ಯ:
ಹಮ್ಮೀರ ದೇಶದ ರಾವುತರು ಬೀಸು ನೇಣುಗಳನ್ನು ಶತ್ರುಗಳನ್ನೆಳೆದುಕೊಳ್ಳಲು ನೇಗಿಲುಗಳನ್ನು ಕಡಿಯಲು ಕೊಡಲಿ, ತಿವಿಯಲು ಈಟಿ ಸೂನಗೆ ಮೊದಲಾದ ಆಯುಧಗಳನ್ನು ಹಿಡಿದು ಹಿಂಜರಿಯದೆ, ಸ್ವರ್ಗದ ಆಶೆಯಿಂದ ವೈರಿ ಸೈನ್ಯಗಳನ್ನು ಘಾಸಿ ಮಾಡಿದರು.

ಅರ್ಥ:
ಬೀಸು: ತೂಗುವಿಕೆ; ಸೆಳೆ: ಎಳೆತ, ಸೆಳೆತ; ನೇಗಿಲು: ಭೂಮಿಯನ್ನು ಉಳುವ ಸಾಧನ; ಸೂಸು: ಎರಚುವಿಕೆ; ಕಣೆ: ಬಾಣ; ಕಡಿ: ಕತ್ತರಿಸು; ಕೊಡಲಿ: ಪರಶು; ಸುರಗಿ: ಕತ್ತಿ; ಸೂನ: ವಿಕಸಿಸಿದ; ನಾನಾ: ಹಲವಾರು; ಆಯುಧ: ಶಸ್ತ್ರ; ಗಡಣೆ: ಸರಣಿ; ಓಸರಣೆ: ಹಿಂಜರಿಯುವುದು; ಅತಿಬಲ: ಪರಾಕ್ರಮಿ; ದಿವ: ದೇವತೆ; ಆಸೆ: ಇಚ್ಛೆ; ವೈರಿ: ಶತ್ರು; ಬಲ: ಶಕ್ತಿ; ಘಾಸಿ: ಆಯಾಸ, ದಣಿವು; ಒಗ್ಗು: ಗುಂಪು, ಸಮೂಹ; ಹಮ್ಮೀರ: ಶೂರ, ಒಂದು ದೇಶದ ಹೆಸರು;

ಪದವಿಂಗಡಣೆ:
ಬೀಸುನೇಣಿನ+ ಸೆಳೆವ +ನೇಗಿಲ
ಸೂಸು+ಕಣೆಗಳ+ ಕಡಿವ +ಕೊಡಲಿಯ
ಕೈಸುರುಗಿ +ಸೂನಗೆಯ +ನಾನಾಯುಧದ +ಗಡಣೆಗಳ
ಓಸರಣೆಗೊಡದ್+ಅತಿಬಳರು +ದಿವ
ದಾಸೆಗಾರರು +ವೈರಿಬಲವನು
ಘಾಸಿಮಾಡಿದರ್+ಒಗ್ಗಿನಲಿ +ಹಮ್ಮೀರ+ರಾವುತರು

ಅಚ್ಚರಿ:
(೧) ಮರಣವನ್ನು ಬಯಸಿದರು ಎಂದು ಹೇಳಲು – ದಿವದಾಸೆಗಾರರು ವೈರಿಬಲವನು ಘಾಸಿಮಾಡಿದರೊಗ್ಗಿನಲಿ