ಪದ್ಯ ೧೦: ಬಲರಾಮನು ಎಲ್ಲಿ ಏನನ್ನು ದಾನ ಮಾಡಿದನು?

ರಾಮ ಕಳುಹಿಸಿಕೊಂಡು ವಿಪ್ರ
ಸ್ತೋಮಸಹಿತ ಸಮಸ್ತ ಋಷಿಗಳು
ರಾಮಣಿಯದವಸ್ತು ದಾನವ್ಯಯದ ವೈಭವಕೆ
ಸೌಮನಸ್ಯನು ರಾಗಹರದ ಮ
ಹಾಮಹಿಮ ತೀರ್ಥಾಭಿರತಿಯಲಿ
ಗೋ ಮಹಿಷ ಧನ ವಸ್ತ್ರದಿಂ ದ್ವಿಜವರರನರ್ಚಿಸಿದ (ಗದಾ ಪರ್ವ, ೬ ಸಂಧಿ, ೧೦ ಪದ್ಯ)

ತಾತ್ಪರ್ಯ:
ರಾಮನು ಶ್ರೀಕೃಷ್ಣನಿಂದ ಬೀಳ್ಕೊಂಡು ಬ್ರಾಹ್ಮಣರು, ಋಷಿಗಳೊಡನೆ ಮನಸ್ಸಿನ ಇಂದ್ರಿಯಾಸಕ್ತಿಗಳನ್ನು ನಾಶಮಾಡುವ ಮಹಾತೀರ್ಥಕ್ಷೇತ್ರಗಳಲ್ಲಿ ಬ್ರಾಹ್ಮಣರನ್ನರ್ಚಿಸಿ ಗೋವುಗಳು, ಎಮ್ಮೆಗಳು, ಧನ, ವಸ್ತ್ರಗಲನ್ನು ದಾನಮಾಡಿದನು.

ಅರ್ಥ:
ಕಳುಹಿಸು: ಹೊರಡು, ಬೀಳ್ಕೊಡು; ವಿಪ್ರಸ್ತೋಮ: ಬ್ರಾಹ್ಮಣ; ಸ್ತೋಮ: ಗುಂಪು; ಸಹಿತ: ಜೊತೆ; ಸಮಸ್ತ: ಎಲ್ಲಾ; ಋಷಿ: ಮುನಿ; ರಾಮಣೀಯಕ: ಸುಂದರ; ದಾನ: ಚತುರೋಪಾಯಗಳಲ್ಲಿ ಒಂದು; ವ್ಯಯ: ನಷ್ಟ, ನಾಶ; ವೈಭವ: ಶಕ್ತಿ, ಸಾಮರ್ಥ್ಯ; ಮನ: ಮನಸ್ಸು; ಸೌಮನ: ಒಳ್ಳೆಯ ಮನಸ್ಸು; ರಾಗ: ಒಲಮೆ, ಪ್ರೀತಿ; ಮಹಾಮಹಿಮ: ಶ್ರೇಷ್ಠ; ತೀರ್ಥ: ಪವಿತ್ರಕ್ಷೇತ್ರ; ಗೋ: ಹಸು; ಮಹಿಷ: ಎಮ್ಮೆ; ಧನ: ಸಿರಿ, ಸಂಪತ್ತು; ವಸ್ತ್ರ: ಬಟ್ಟೆ; ದ್ವಿಜ: ಬ್ರಾಹ್ಮಣ; ಅರ್ಚಿಸು: ಪೂಜಿಸು; ವರ: ಶ್ರೇಷ್ಠ;

ಪದವಿಂಗಡಣೆ:
ರಾಮ +ಕಳುಹಿಸಿಕೊಂಡು +ವಿಪ್ರ
ಸ್ತೋಮ+ಸಹಿತ +ಸಮಸ್ತ+ ಋಷಿಗಳು
ರಾಮಣಿಯದ+ವಸ್ತು+ ದಾನವ್ಯಯದ +ವೈಭವಕೆ
ಸೌಮನಸ್ಯನು+ ರಾಗಹರದ +ಮ
ಹಾಮಹಿಮ +ತೀರ್ಥಾಭಿರತಿಯಲಿ
ಗೋ +ಮಹಿಷ +ಧನ +ವಸ್ತ್ರದಿಂ+ ದ್ವಿಜವರರನ್+ಅರ್ಚಿಸಿದ

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸ್ತೋಮ ಸಹಿತ ಸಮಸ್ತ
(೨) ವಿಪ್ರ, ದ್ವಿಜ – ಸಮಾನಾರ್ಥಕ ಪದ

ಪದ್ಯ ೧೭: ಧರ್ಮಜನು ಎಂತಹವನು ಎಂದು ದುಃಖದಲ್ಲಿ ಸುಭದ್ರೆ ನುಡಿದಳು?

ಧುರವ ಹೊಗತಕ್ಕವನೆ ಚಿಕ್ಕವ
ನಿರಿಯಲಾಪನೆ ಬಹನೆ ಮರಳಿದು
ಧರೆಯ ವೈಭವಕಳುಪಿ ಕಳುಹಿದಿರೆನ್ನ ಕಂದನನು
ವರ ಯುಧಿಷ್ಠಿರಜನಪ ಲೋಕದ
ಕರುಣೆಯೆಂಬರು ಕುನ್ನಿಗಳು ಮರೆ
ಗೊರಳುಗೊಯ್ಯನನರಿಯರೆಂದಳು ಫಲುಗುಣನ ರಾಣಿ (ದ್ರೋಣ ಪರ್ವ, ೭ ಸಂಧಿ, ೧೭ ಪದ್ಯ)

ತಾತ್ಪರ್ಯ:
ಸುಭದ್ರೆಯು ತನ್ನ ನೋವನ್ನು ಹೇಳುತ್ತಾ, ಅಭಿಮನ್ಯುವಿಗೆ ಯುದ್ಧಕ್ಕೆ ಹೋಗುವ ವಯಸ್ಸೇ? ಈ ಚಿಕ್ಕವನು ಯುದ್ಧ ಮಾಡಿಯಾನೇ? ಯುದ್ಧಕ್ಕೆ ಹೋದವನು ಮರಳಿ ಬಂದಾನೇ ಎಂಬುದೇನನ್ನೂ ಚಿಂತಿಸದೆ, ಭೂಮಿಯ ಒಡೆತನವನ್ನು ಬಯಸಿ ಮಗನನ್ನು ಕಳಿಸಿದಿರಿ, ಜನರೆಲ್ಲರೂ ಯುಧಿಷ್ಠಿರನು ಕರುಣಿಯೆಂದು ಹೊಗಳುತ್ತದೆ, ನಾಯಿಗಳು ಅವರು, ಧರ್ಮಜನು ಕೊರಳು ಕೊಯ್ಯುವವನೆಂಬುದು ಅವರಿಗೆ ತಿಳಿದಿಲ್ಲ ಎಂದು ತನ್ನ ಅಳಲನ್ನು ಹೊರಹಾಕಿದಳು.

ಅರ್ಥ:
ಧುರ: ಯುದ್ಧ; ಹೊಗು: ತೆರಳು; ಚಿಕ್ಕವ: ತರುಣ; ಇರಿ: ಚುಚ್ಚು; ಬಹನೆ: ಆಗಮಿಸು; ಮರಳು: ಹಿಂದಿರುಗು; ಧರೆ: ಭೂಮಿ; ವೈಭವ: ಶಕ್ತಿ, ಸಾಮರ್ಥ್ಯ; ಅಳುಪು: ಬಯಸು; ಕಳುಹಿಸು: ತೆರಳು; ಕಂದ: ಮಗ; ವರ: ಶ್ರೇಷ್ಠ; ಜನಪ: ರಾಜ; ಲೋಕ: ಜಗತ್ತು; ಕರುಣೆ: ದಯೆ; ಕುನ್ನಿ: ನಾಯಿ; ಮರೆ: ಗುಟ್ಟು; ಕೊರಳು: ಕಂಠ; ಕೊಯ್ಯು: ಸೀಳು; ಅರಿ: ತಿಳಿ; ರಾಣಿ: ಅರಸಿ;

ಪದವಿಂಗಡಣೆ:
ಧುರವ +ಹೊಗತಕ್ಕವನೆ+ ಚಿಕ್ಕವನ್
ಇರಿಯಲಾಪನೆ +ಬಹನೆ +ಮರಳಿದು
ಧರೆಯ +ವೈಭವಕ್+ಅಳುಪಿ +ಕಳುಹಿದಿರ್+ಎನ್ನ +ಕಂದನನು
ವರ+ ಯುಧಿಷ್ಠಿರ+ಜನಪ+ ಲೋಕದ
ಕರುಣೆಯೆಂಬರು +ಕುನ್ನಿಗಳು+ ಮರೆ
ಕೊರಳು+ಕೊಯ್ಯನನ್+ಅರಿಯರ್+ಎಂದಳು +ಫಲುಗುಣನ +ರಾಣಿ

ಅಚ್ಚರಿ:
(೧) ಯುಧಿಷ್ಠಿರನನ್ನು ಕರೆದ ಪರಿ – ವರ ಯುಧಿಷ್ಠಿರಜನಪ ಲೋಕದ ಕರುಣೆಯೆಂಬರು ಕುನ್ನಿಗಳು ಮರೆ
ಗೊರಳುಗೊಯ್ಯನನರಿಯರೆಂದಳು

ಪದ್ಯ ೧೫: ಯಾವ ಗುಣಗಿಳಿಂದ ನಾವು ಮುನ್ನಡೆಯಬೇಕು?

ಧನಮದವ ಸತ್ಕುಲಮದವ ಯೌ
ವನಮದವ ವಿದ್ಯಾಮದವ ಪರಿ
ಜನಮದವ ವೈಭವಮದವನಾಚಾರಪದ ಮದವ
ಮನನದಿಂ ಶ್ರವಣದಿ ನಿಧಿ ಧ್ಯಾ
ಸನದಿನಿವುಗಳನೊತ್ತಿ ವಿದ್ಯಾ
ವಿನಯ ಸೌಶೀಲ್ಯದಲಿ ನಡೆವುದು ವಿಪ್ರ ಕೇಳೆಂದ (ಅರಣ್ಯ ಪರ್ವ, ೧೬ ಸಂಧಿ, ೧೫ ಪದ್ಯ)

ತಾತ್ಪರ್ಯ:
ಧರ್ಮವ್ಯಾಧನು ಬ್ರಹ್ಮಚಾರಿಗೆ, ಧನಮದ, ಕುಲಮದ, ಯೌವನಮದ, ವಿದ್ಯಾಮದ, ಪರಿಜನಮದ, ವೈಭವಮದ, ನಾನು ಸದಾಚಾರಿಯೆಂಬ ಮದ ಇವುಗಳನ್ನು ಶ್ರವಣ, ಮನನ, ನಿಧಿಧ್ಯಾಸನಗಳಿಂದ ಗೆದ್ದು, ವಿದ್ಯೆ, ವಿನಯ, ಸುಶೀಲಗಳಿಂದ ನಡೆಯಬೇಕು ಎಂದು ಹೇಳಿದನು.

ಅರ್ಥ:
ಧನ: ಐಶ್ವರ್ಯ; ಮದ: ಅಹಂಕಾರ; ಕುಲ: ವಂಶ; ಸತ್ಕುಲ: ಒಳ್ಳೆಯ ವಂಶ; ಯೌವನ: ತಾರುಣ್ಯ; ವಿದ್ಯ: ಜ್ಞಾನ; ಪರಿಜನ: ಬಂಧುಬಳಗ; ವೈಭವ: ಶ್ರೇಷ್ಠತೆ, ಆಡಂಬರ; ಆಚಾರ: ಒಳ್ಳೆಯ ನಡತೆ; ಮನನ: ಧ್ಯಾನ; ಶ್ರವಣ: ಕೇಳು; ನಿಧಿಧ್ಯಾಸನ: ಏಕಾಗ್ರತೆ; ಒತ್ತು: ಆಕ್ರಮಿಸು, ಮುತ್ತು; ವಿನಯ: ಒಳ್ಳೆಯತನ, ಸೌಜನ್ಯ; ಸೌಶೀಲ್ಯ: ಒಳ್ಳೆಯ ನಡತೆ, ಸದಾಚಾರ; ನಡೆ: ಮುನ್ನಡೆ, ಚಲಿಸು; ವಿಪ್ರ: ಬ್ರಾಹ್ಮಣ;

ಪದವಿಂಗಡಣೆ:
ಧನ+ಮದವ +ಸತ್ಕುಲ+ಮದವ +ಯೌ
ವನ+ಮದವ +ವಿದ್ಯಾ+ಮದವ+ ಪರಿ
ಜನ+ಮದವ+ ವೈಭವ+ಮದವನ್+ಆಚಾರಪದ +ಮದವ
ಮನನದಿಂ+ ಶ್ರವಣದಿ+ ನಿಧಿಧ್ಯಾ
ಸನದಿನ್+ಇವುಗಳನ್+ಒತ್ತಿ +ವಿದ್ಯಾ
ವಿನಯ +ಸೌಶೀಲ್ಯದಲಿ+ ನಡೆವುದು +ವಿಪ್ರ +ಕೇಳೆಂದ

ಅಚ್ಚರಿ:
(೧) ಮದವ – ೭ ಬಾರಿ ಪ್ರಯೋಗ
(೨) ಯಾವ ಮದವನ್ನು ಹೊರಗಿಡಬೇಕು – ಧನ, ಸತ್ಕುಲ, ಯೌವನ, ವಿದ್ಯ, ಪರಿಜನ, ವೈಭವ, ಆಚಾರಪದ

ಪದ್ಯ ೧೦: ಕರ್ಣನ ವೈಭವವನ್ನು ಕೃಷ್ಣನು ಹೇಗೆ ಕೊಂಡಾಡಿದನು?

ಶೌರಿಯದೊಳಿದಿರಿಲ್ಲ ಕುಲದೊಳು
ಸೂರಿಯನ ಸುತನೊಡನೆ ಹುಟ್ಟಿದ
ವೀರರಗ್ಗದ ಪಾಂಡುತನಯರು ನಿನ್ನ ವೈಭವಕೆ
ಆರು ಸರಿಯೈ ಕರ್ಣ ನಡೆ ನಡೆ
ಧಾರಿಣೀಪತಿಯಾಗಿ ನೀನಿರೆ
ವೈರವಿತ್ತಂಡಕ್ಕೆ ಬಳಿಕಿಲ್ಲೆಂದನಸುರಾರಿ (ಉದ್ಯೋಗ ಪರ್ವ, ೧೧ ಸಂಧಿ, ೧೦ ಪದ್ಯ)

ತಾತ್ಪರ್ಯ:
ಕರ್ಣನನ್ನು ಉತ್ತೇಜಿಸುವ ಸಲುವಾಗಿ ಕೃಷ್ಣನು ಆತನ ಧನಾತ್ಮಕ ಅಂಶಗಳನ್ನು ವಿವರಿಸ ತೊಡಗಿದನು. ಕರ್ಣ, ನೀನು ಶೌರ್ಯದಲ್ಲಿ ಅದ್ವಿತೀಯನು, ನಿನಗೆ ಎದುರ ಯಾರು ನಿಲ್ಲಬಲ್ಲರು, ಸೂರ್ಯನ ಮಗನಾದುದರಿಂದ ನಿನ್ನದು ಅತ್ಯಂತ ಶ್ರೇಷ್ಠವಂಶ, ನಿನ್ನ ಸಹೋದರರೂ ಮಹಾ ಪರಾಕ್ರಮಿಗಳಾದ ಪಾಂಡವರು. ನಿನ್ನ ವೈಭವವಿನ್ನಾರಿಗುಂಟು, ಬಾ ಬಾ ನೀನು ರಾಜನಾದರೆ ಎರಡು ಪಕ್ಷಗಳಿಗೂ ಯುದ್ಧವೇ ಆಗುವುದಿಲ್ಲ ಎಂದು ಕೃಷ್ಣನು ಕರ್ಣನಿಗೆ ಹೇಳಿದನು.

ಅರ್ಥ:
ಶೌರಿಯ: ಪರಾಕ್ರಮ; ಇದಿರು: ಎದುರು; ಕುಲ: ವಂಶ; ಸೂರಿಯ: ಭಾನು, ಸೂರ್ಯ; ಸುತ: ಮಗ; ಒಡನೆ: ಜೊತೆ; ಹುಟ್ಟು: ಜನನ; ವೀರ: ಶೌರ್ಯ, ಪರಾಕ್ರಮ; ಅಗ್ಗ: ಶ್ರೇಷ್ಠ; ತನಯ: ಮಗ; ವೈಭವ: ಸಾಮರ್ಥ್ಯ, ಶ್ರೇಷ್ಠತೆ; ಸರಿ: ಸಮಾನರು; ನಡೆ: ಬಾ; ಧಾರಿಣಿ: ಭೂಮಿ; ಧಾರಿಣೀಪತಿ: ರಾಜ; ವೈರ: ಶತ್ರು; ತಂಡ: ಗುಂಪು; ಅಸುರ: ರಾಕ್ಷಸ; ಅರಿ: ವೈರಿ; ಅಸುರಾರಿ: ಕೃಷ್ಣ;

ಪದವಿಂಗಡಣೆ:
ಶೌರಿಯದೊಳ್+ಇದಿರಿಲ್ಲ +ಕುಲದೊಳು
ಸೂರಿಯನ +ಸುತನೊಡನೆ +ಹುಟ್ಟಿದ
ವೀರರ್+ಅಗ್ಗದ +ಪಾಂಡುತನಯರು +ನಿನ್ನ +ವೈಭವಕೆ
ಆರು +ಸರಿಯೈ +ಕರ್ಣ +ನಡೆ +ನಡೆ
ಧಾರಿಣೀಪತಿಯಾಗಿ +ನೀನಿರೆ
ವೈರವಿತ್ತಂಡಕ್ಕೆ +ಬಳಿಕಿಲ್ಲೆಂದನ್+ಅಸುರಾರಿ

ಅಚ್ಚರಿ:
(೧)ಶೌರಿ, ಸೂರಿ – ಪ್ರಾಸ ಪದಗಳು
(೨) ಸುತ, ತನಯ – ಸಮನಾರ್ಥಕ ಪದ

ಪದ್ಯ ೩೭: ಬೃಹದ್ರಥನು ವಿರಾಗಿಯಾಗಲು ಕಾರಣವೇನು?

ಅವರೊಡನೆ ಸುಖ ಸತ್ಕಥಾ ಸಂ
ಭವ ವಿನೋದದಲಿದ್ದನೀ ವೈ
ಭವಫಲವಪುತ್ರರಿಗೆ ಬಹುದುಃಖೋಪಚಯವೆಂದು
ಅವನಿಪತಿ ವೈರಾಗ್ಯದಲಿ ರಾ
ಜ್ಯವನು ಬಿಸುಟು ತಪಃಪ್ರಭಾವ
ವ್ಯವಹರಣೆಯಲಿ ತನುವ ನೂಕುವೆನೆನುತ ಹೊರವಂಟ (ಸಭಾ ಪರ್ವ, ೨ ಸಂಧಿ, ೩೭ ಪದ್ಯ)

ತಾತ್ಪರ್ಯ:
ಬೃಹದ್ರಥನು ರಾಣಿಯರೊಡನೆ ಸಂತೋಷದಿಂದ ಸುಖವಾಗಿ ಸತ್ಕಥಾವಿನೋದದಲಿ ಕಾಲವನ್ನು ಕಳೆದನು. ಅವನಿಗೆ ಮಕ್ಕಳಾಗಲಿಲ್ಲ. ಮಕ್ಕಳಿಲ್ಲದವರಿಗೆ ವೈಭವವು ಹೆಚ್ಚಿನ ದುಃಖಕ್ಕೆ ಕಾರಣವೆಂದು ರಾಜನು ವೈರಾಗ್ಯಶಾಲಿಯಾಗಿ ತಪಸ್ಸಿನಿಂದ ದೇಹವನ್ನು ಬಿಡುತ್ತೇನೆ ಎಂದು ಸಂಕಲ್ಪಿಸಿ ರಾಜಧಾನಿಯನ್ನು ತ್ಯಜಿಸಿದನು.

ಅರ್ಥ:
ಅವರೊಡನೆ: ಜೊತೆ; ಸುಖ: ಸಂತೋಷ, ನಲಿವು; ವಿನೋದ:ವಿಹಾರ, ಸಂತೋಷ; ಸಂಭವ:ಶಕ್ಯತೆ, ಹುಟ್ಟು; ವೈಭವ: ಐಶ್ವರ್ಯ; ಪುತ್ರ: ಮಗ; ದುಃಖ: ನೋವು; ಉಪಚಯ: ಬೆಳವಣಿಗೆ; ಅವನಿಪತಿ: ರಾಜ; ವೈರಾಗ್ಯ:ಅನಾಸಕ್ತಿ, ವಿರಕ್ತಿ; ರಾಜ್ಯ: ದೇಶ; ಬಿಸುಟು: ಬಿಟ್ಟು; ತಪಃ: ತಪಸ್ಸು, ಧ್ಯಾನ; ಪ್ರಭಾವ:ಪ್ರಾಬಲ್ಯ, ಮಹಿಮೆ; ವ್ಯವಹಾರ: ವಹಿವಾಟು; ತನು: ದೇಹ; ನೂಕು: ತಳ್ಳು; ಹೊರವಂಟ: ಹೊರಟ;

ಪದವಿಂಗಡಣೆ:
ಅವರೊಡನೆ +ಸುಖ +ಸತ್ಕಥಾ +ಸಂ
ಭವ +ವಿನೋದದಲಿದ್ದನ್+ಈ+ ವೈ
ಭವ+ಫಲವ+ಪುತ್ರರಿಗೆ +ಬಹು+ದುಃಖ+ಉಪಚಯವೆಂದು
ಅವನಿಪತಿ+ ವೈರಾಗ್ಯದಲಿ +ರಾ
ಜ್ಯವನು +ಬಿಸುಟು +ತಪಃ+ಪ್ರಭಾವ
ವ್ಯವಹರಣೆಯಲಿ+ ತನುವ +ನೂಕುವೆನೆನುತ+ ಹೊರವಂಟ

ಅಚ್ಚರಿ:
(೧) “ವ” ಕಾರದ ಪದಗಳು – ವೈರಾಗ್ಯ, ವ್ಯವಹರಣೆ, ವಿನೋದ, ವೈಭವ;
(೨) ಸಂಭವ, ವೈಭವ – ಭವ ಪದದ ಬಳಕೆ – ೨,೩ ಸಾಲಿನ ಮೊದಲ ಪದ

ಪದ್ಯ ೫೯: ಧೃತರಾಷ್ಟ್ರನ ಮಾತಿಗೆ ದುರ್ಯೋಧನನ ವ್ಯಂಗ್ಯ ಉತ್ತರವೇನು?

ಬೊಪ್ಪ ಬಿನ್ನಹವವರ ಜನಕನು
ತಪ್ಪಿ ನಡೆಯನು ನಿಮಗೆ ನೀವಿ
ನೊಪ್ಪಿಸುವುದಾ ಪಾಂಡುಸುತರಿಗೆ ರಾಜ್ಯ ವೈಭವವ
ಅಪ್ಪುದಿಳೆ ಧರ್ಮಜನ ತರುವಾ
ಯಪ್ಪುದಾ ವಿಧಿಯಲ್ಲಿ ಸಂತತಿ
ತಪ್ಪದವರಿಗೆ ಸಲಲಿ ನೆಲವಿದು ಹೊಲ್ಲೆಹೇನೆಂದ (ಆದಿ ಪರ್ವ, ೮ ಸಂಧಿ, ೫೯ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಮಗನಿಗೆ ದುಷ್ಟರ ಮಾತನ್ನು ಕೇಳಬೇಡ ಎಂದು ಹೇಳಿದ ನಂತರ, ದುರ್ಯೋಧನನು, ತಂದೆ ನನ್ನ ದೊಂದು ಬಿನ್ನಹ, ಪಾಂಡವರ ಜನಕನಾದ ಪಾಂಡುವು ಎಂದು ನಿಮಗೆ ತಪ್ಪಿ ನಡೆದುಕೊಳ್ಳುವನು ಆದ್ದರಿಂದ ನೀವು ಈ ರಾಜ್ಯವನ್ನು ಅವರ ಮಕ್ಕಳಿಗೆ ಒಪ್ಪಿಸಿಬಿಡಿ, ಅವರ ಸಂತತಿಗೆ ಸಲಹಲಿ ಈ ರಾಜ್ಯ ವೈಭವವು, ಇದರಲ್ಲಿ ತಪ್ಪೇನು, ಕೇಡೇನು ಎಂದು ದುರ್ಯೋಧನನು ಹೇಳಿದನು. ತಪ್ಪು ದಾರಿ ಹಿಡಿದಿದ್ದರು, ನಾವು ಪಾಪದವರು, ಅವರೇ ಸರಿ, ನಾವೆ ತಪ್ಪಿತಸ್ತರು ಎಂದು ಗೋಗರೆಯುತ್ತ ತಮ್ಮ ಮೇಲೆ ಮರುಕ ಹುಟ್ಟಿಸಲು ದುರ್ಯೋಧನನ ತಂತ್ರ.

ಅರ್ಥ:
ಬೊಪ್ಪ: ತಂದೆ; ಬಿನ್ನಹ: ಅರಿಕೆ, ವಿಜ್ಞಾಪನೆ; ಜನಕ: ತಂದೆ; ತಪ್ಪು: ಅಪಚಾರ, ಕ್ರಮಬಿಟ್ಟು ನಡೆ; ನಡೆ: ರೀತಿ; ಒಪ್ಪಿಸು: ಸಮ್ಮತಿಸು; ಸುತರು: ಮಕ್ಕಳು; ವೈಭವ: ಐಶ್ವರ್ಯ, ಶಕ್ತಿ, ಆಡಂಬರ; ಇಳೆ: ಭೂಮಿ; ಸಲಹು: ಕಾಪಾಡು, ಪೋಷಿಸು; ವಿಧಿ: ರೀತಿ; ನೆಲ: ಭೂಮಿ; ಹೊಲ್ಲ: ಕೆಟ್ಟದು;

ಪದವಿಂಗಡನೆ:
ಬೊಪ್ಪ+ ಬಿನ್ನಹವ್+ಅವರ+ ಜನಕನು
ತಪ್ಪಿ+ ನಡೆಯನು +ನಿಮಗೆ +ನೀವಿನ್
ಒಪ್ಪಿಸುವುದ್+ಆ+ ಪಾಂಡು+ಸುತರಿಗ+ ರಾಜ್ಯ+ ವೈಭವವ
ಅಪ್ಪುದ್+ಇಳೆ+ ಧರ್ಮಜನ+ ತರುವಾಯ್
ಅಪ್ಪುದ್+ಆ+ ವಿಧಿಯಲ್ಲಿ+ ಸಂತತಿ
ತಪ್ಪದ್+ಅವರಿಗೆ+ ಸಲಲಿ+ ನೆಲವಿದು+ ಹೊಲ್ಲೆಹೇನೆಂದ

ಅಚ್ಚರಿ:
(೧) ತಪ್ಪಿ, ಒಪ್ಪಿ – ಪ್ರಾಸ ಪದಗಳು – ೨, ೩ ಸಾಲಿನ ಮೊದಲ ಪದ
(೨) ಇಳೆ, ನೆಲ – ಭೂಮಿ ಅರ್ಥ ಕೊಡುವ ಸಮಾನಾರ್ಥಕ ಪದಗಳು
(೩) ಅಪ್ಪುದ್ – ೪, ೫ ಸಾಲಿನ ಮೊದಲ ಪದ
(೪) ಸಲಲಿ, ಸಂತತಿ – ಪದಗಳ ರಚನೆ