ಪದ್ಯ ೨೨: ಭೂರಿಶ್ರವನ ತಲೆಯನ್ನು ಯಾರು ಕಡೆದರು?

ತರಣಿಮಂಡಲದಲ್ಲಿ ದೃಷ್ಟಿಯ
ನಿರಿಸಿ ಬಹಿರಿಂದ್ರಿಯದ ಬಳಕೆಯ
ಮುರಿದು ವೇದಾಂತದ ರಹಸ್ಯದ ವಸ್ತು ತಾನಾಗಿ
ಇರಲು ಸಾತ್ಯಕಿ ಕಂಡು ಖತಿಯು
ಬ್ಬರಿಸಿ ಕಿತ್ತ ಕಠಾರಿಯಲಿ ಹೊ
ಕ್ಕುರವಣಿಸಿ ಭೂರಿಶ್ರವನ ತುರುಬಿಂಗೆ ಲಾಗಿಸಿದ (ದ್ರೋಣ ಪರ್ವ, ೧೪ ಸಂಧಿ, ೨೨ ಪದ್ಯ)

ತಾತ್ಪರ್ಯ:
ಸೂರ್ಯಮಂಡಲದಲ್ಲಿ ದೃಷ್ಟಿಯನ್ನಿಟ್ಟು, ಹೊರಗಡೆಗೆ ಮಾತ್ರ ನೋಡುವ ಇಂದ್ರಿಯಗಳ ವ್ಯಾಪಾರವನ್ನು ನಿಲ್ಲಿಸಿ, ವೇದಾಂತದಲ್ಲಿ ಹೇಳಿರುವ ರಹಸ್ಯವಸ್ತುವೇ ಆದ ಬ್ರಹ್ಮನಲ್ಲಿ ತಾನಾಗಿ ಭೂರಿಶ್ರವನು ಆತ್ಮಾರಾಮನಾಗಿದ್ದನು. ಇದನ್ನು ನೋಡಿದ ಸಾತ್ಯಕಿಯ ಕೋಪವು ಉಕ್ಕಿಬರಲು, ಕಠಾರಿಯನ್ನು ಎಳೆದುಕೊಂಡು ನುಗ್ಗಿ ಭೂರಿಶ್ರವನ ತಲೆಯನ್ನು ಘಾತಿಸಿದನು.

ಅರ್ಥ:
ತರಣಿ: ಸೂರ್ಯ; ಮಂಡಲ: ವರ್ತುಲಾಕಾರ; ದೃಷ್ಟಿ: ನೋಟ; ಇರಿಸು: ಇಡು; ಬಹಿರ: ಹೊರಗೆ; ಇಂದ್ರಿಯ: ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳನ್ನು ಗ್ರಹಿಸಲು ಸಹಕಾರಿಯಾಗಿರುವ ಅವಯವ; ಬಳಕೆ: ಉಪಯೋಗ; ಮುರಿ: ಸೀಳು; ವೇದಾಂತ: ಉಪನಿಷತ್ತುಗಳು; ರಹಸ್ಯ: ಗುಟ್ಟು; ವಸ್ತು: ಸಾಮಾಗ್ರಿ; ಕಂಡು: ನೋಡು; ಖತಿ: ಕೋಪ; ಉಬ್ಬರಿಸು: ಹೆಚ್ಚಾಗು; ಕಠಾರಿ: ಚೂರಿ, ಕತ್ತಿ; ಹೊಕ್ಕು: ಓತ, ಸೇರು; ಉರವಣಿಸು: ಹೆಚ್ಚಾಗು; ತುರುಬು: ತಲೆ; ಲಾಗು: ರಭಸ, ತೀವ್ರತೆ; ಲಾಗಿಸು: ಹೊಡೆ;

ಪದವಿಂಗಡಣೆ:
ತರಣಿಮಂಡಲದಲ್ಲಿ +ದೃಷ್ಟಿಯನ್
ಇರಿಸಿ +ಬಹಿರ್+ಇಂದ್ರಿಯದ +ಬಳಕೆಯ
ಮುರಿದು +ವೇದಾಂತದ +ರಹಸ್ಯದ +ವಸ್ತು +ತಾನಾಗಿ
ಇರಲು +ಸಾತ್ಯಕಿ +ಕಂಡು +ಖತಿ
ಉಬ್ಬರಿಸಿ +ಕಿತ್ತ +ಕಠಾರಿಯಲಿ +ಹೊಕ್ಕ್
ಉರವಣಿಸಿ +ಭೂರಿಶ್ರವನ +ತುರುಬಿಂಗೆ +ಲಾಗಿಸಿದ

ಅಚ್ಚರಿ:
(೧) ತಲೆಯನ್ನು ಕಡೆದನು ಎಂದು ಹೇಳುವ ಪರಿ – ಭೂರಿಶ್ರವನ ತುರುಬಿಂಗೆ ಲಾಗಿಸಿದ
(೨) ಉರವಣಿಸಿ, ಉಬ್ಬರಿಸಿ, ಇರಿಸಿ – ಪ್ರಾಸ ಪದಗಳು

ಪದ್ಯ ೨೪: ನೀಚರಿಗೆ ಕೃಷ್ಣನನ್ನು ಏಕೆ ಬಿಗಿಯಲಾಗದು?

ಸೂಚಿಸುವ ಶ್ರುತಿನಿಚಯ ಬರೆಬರೆ
ನಾಚಿದವು ವೇದಾಂತ ನಿಚಯದ
ವಾಚನೆಗಳಳವಳಿದು ನಿಂದವು ನಿಜವ ಕಾಣಿಸದೆ
ಆಚರಿಸಲಳವಲ್ಲ ಮುನಿಗಳ
ಗೋಚರಕೆ ಮನಗುಡದ ಹರಿಯನು
ನೀಚರಿವದಿರು ಬಿಗಿಯಲಳವೇ ಭೂಪ ಕೇಳೆಂದ (ಉದ್ಯೋಗ ಪರ್ವ, ೧೦ ಸಂಧಿ, ೨೪ ಪದ್ಯ)

ತಾತ್ಪರ್ಯ:
ಇವನನ್ನು ಹೇಳಲೆಂದು ಹೊರಟ ವೇದಗಳು, ಬರುತ್ತಾ ಬರುತ್ತಾ ಅದು ಸಾಧ್ಯವಾಗದೆ ನಾಚಿಗೊಂಡವು. ಉಪನಿಷತ್ತುಗಳು ನಿಜವನ್ನು ಕಾಣಿಸದೆ ಶಕ್ತಿಗುಂದಿ ನಿಂತವು. ಕರ್ಮದಿಂದ ಇದನ್ನು ಪಡೆಯಲು ಸಾಧ್ಯವಿಲ್ಲ. ಮುನಿಗಳಿಗೆ ಇವನು ಕಾಣಿಸದಾದನು, ಇಂತಹವನನ್ನು ಈ ನೀಚರು ಕಟ್ಟಿಹಾಕಲು ಸಾಧ್ಯವೇ ಎಂದು ವಿದುರ ಕೇಳಿದ.

ಅರ್ಥ:
ಸೂಚಿಸು:ತೋರಿಸು; ಶ್ರುತಿ: ವೇದ; ನಿಚಯ: ರಾಶಿ, ಗುಂಪು; ಬರೆ:ಸೀಮಾ; ನಾಚು: ಅವಮಾನ ಹೊಂದು; ವೇದಾಂತ: ಉಪನಿಷತ್ತುಗಳು; ವಾಚನ: ಓದುವುದು, ಪಠಣ; ಅಳವಳಿ: ಶಕ್ತಿಗುಂದು; ನಿಂದು: ನಿಲ್ಲು; ನಿಜ: ದಿಟ; ಕಾಣಿಸು: ತೋರು; ಆಚರಿಸು: ಮಾಡು; ಮುನಿ: ಋಷಿ; ಗೋಚರ: ತೋರು; ಮನ: ಮನಸ್ಸು; ಹರಿ: ವಿಷ್ಣು; ನೀಚ: ಕೆಟ್ಟ, ದುಷ್ಟ; ಅರಿ: ತಿಳಿ; ಬಿಗಿ:ಕಟ್ಟು; ಅಳವು: ಶಕ್ತಿ; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಸೂಚಿಸುವ +ಶ್ರುತಿ+ನಿಚಯ +ಬರೆಬರೆ
ನಾಚಿದವು+ ವೇದಾಂತ +ನಿಚಯದ
ವಾಚನೆಗಳ್+ಅಳವಳಿದು +ನಿಂದವು +ನಿಜವ+ ಕಾಣಿಸದೆ
ಆಚರಿಸಲ್+ಅಳವಲ್ಲ +ಮುನಿಗಳ
ಗೋಚರಕೆ +ಮನಗುಡದ +ಹರಿಯನು
ನೀಚ್+ಅರಿವದಿರು +ಬಿಗಿಯಲ್+ಅಳವೇ +ಭೂಪ +ಕೇಳೆಂದ

ಅಚ್ಚರಿ:
(೧) ವೇದ, ಉಪನಿಷತ್ತು ಮತ್ತು ಮುನಿಗಳಿಗೆ ಗೋಚರಿಸದ ಕೃಷ್ಣ ಎಂದು ತಿಳಿಸುವ ಪದ್ಯ

ಪದ್ಯ ೪೫: ಯಾರನ್ನು ತ್ರಿಮೂರ್ತಿಗಳೂ ವಂದಿಸುತ್ತಾರೆ?

ಕರೆಕರೆದು ಮೃಷ್ಟಾನ್ನವನು ಭೂ
ಸುರರಿಗೀವ ಸದಾಗ್ನಿಹೋತ್ರಾ
ಚರಿತನನು ವೇದಾಂತ ವೇದಿಯನಾ ಪತಿವ್ರತೆಯ
ಉರುತರದ ಮಾಸೋಪವಾಸಿಯ
ನಿರದೆ ಮಾಸ ಸಹಸ್ರ ಜೀವಿಯ
ನರಸ ಕೇಳ್ವಂದಿಸುವರೈ ತ್ರೈಮೂರುತಿಗಳೆಂದ (ಉದ್ಯೋಗ ಪರ್ವ, ೩ ಸಂಧಿ, ೪೫ ಪದ್ಯ)

ತಾತ್ಪರ್ಯ:
ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರು ಯಾರನ್ನು ಗೌರವಿಸುತ್ತಾರೆ ಎಂದು ವಿದುರ ಇಲ್ಲಿ ಹೇಳುತ್ತಾರೆ. ಆತ್ಮೀಯತೆಯಿಂದ ಬರೆಮಾಡಿ ಬ್ರಾಹ್ಮಣರಿಗೆ ಮೃಷ್ಟಾನ್ನ ಭೋಜನವನ್ನು ಮಾದಿಸುವವನು, ಅಗ್ನಿಹೋತ್ರವನ್ನು ಮಾಡುವವನು, ವೇದಾಂತವನ್ನರಿತವನು, ಪತಿವ್ರತೆ, ತಿಂಗಳು ಉಪವಾಸ ಮಾಡುವವನು, ಸಹಸ್ರಮಾಸಗಳ ಕಾಲ ಬದುಕಿರುವವನು, ಇಂಥಹವರನ್ನು ತ್ರಿಮೂರ್ತಿಗಳೂ ವಂದಿಸುತ್ತಾರೆ.

ಅರ್ಥ:
ಕರೆಕರೆದು: ಬರೆಮಾಡಿ; ಮೃಷ್ಟಾನ್ನ: ಭೋಜನ; ಭೂಸುರ: ಬ್ರಾಹ್ಮಣ; ಸದಾ: ಯಾವಾಗಲು; ಅಗ್ನಿ: ಶಿಖಿ, ಬೆಂಕಿ; ಅಗ್ನಿಹೋತ್ರಾ:ಅಗ್ನಿಯನ್ನು ಆರಾಧಿಸುವವ; ಚರಿತ: ಕಥೆ; ವೇದಾಂತ: ಉಪನಿಷತ್ತುಗಳು; ವೇದಿ: ಪಂಡಿತ, ವಿದ್ವಾಂಸ; ಪತಿವ್ರತೆ: ಸಾಧ್ವಿ, ಗರತಿ; ಉರುತರ:ಬಹಳ ಶ್ರೇಷ್ಠ; ಮಾಸ: ತಿಂಗಳು; ಉಪವಾಸಿ: ಆಹಾರ ವಿಲ್ಲದೆ ಇರುವ ವ್ರತ; ಸಹಸ್ರ: ಸಾವಿರ; ಜೀವಿ: ಪ್ರಾಣಿ, ಮನುಷ್ಯ; ಅರಸ: ರಾಜ; ವಂದಿಸು: ಗೌರವಿಸು, ನಮಸ್ಕರಿಸು; ತ್ರೈಮೂರ್ತಿ: ತ್ರಿಮೂರ್ತಿಗಳು;

ಪದವಿಂಗಡಣೆ:
ಕರೆಕರೆದು +ಮೃಷ್ಟಾನ್ನವನು +ಭೂ
ಸುರರಿಗೀವ+ ಸದ+ಅಗ್ನಿಹೋತ್ರಾ
ಚರಿತನನು +ವೇದಾಂತ +ವೇದಿಯನಾ+ ಪತಿವ್ರತೆಯ
ಉರುತರದ +ಮಾಸ+ಉಪವಾಸಿಯನ್
ಇರದೆ +ಮಾಸ +ಸಹಸ್ರ +ಜೀವಿಯನ್
ಅರಸ +ಕೇಳ್+ವಂದಿಸುವರೈ+ ತ್ರೈಮೂರುತಿಗಳೆಂದ

ಅಚ್ಚರಿ:
(೧) ೬ ಲಕ್ಷಣಗಳನ್ನು ಪಾಲಿಸುವರನ್ನು ತ್ರಿಮೂರ್ತಿಗಳು ವಂದಿಸುತ್ತಾರೆ ಎಂದು ಹೇಳಿರುವ ಪದ್ಯ
(೨) ಮಾಸ – ೪, ೫ ಸಾಲಿನ ೨ ಪದ
(೩) ‘ವ’ ಕಾರದ ಜೋಡಿ ಪದ – ವೇದಾಂತ ವೇದಿಯನಾ