ಪದ್ಯ ೩೭: ಶಿವನಿಗೆ ಯಾರು ಉಘೇ ಎಂದು ಜಯಘೋಷಮೊಳಗಿದರು?

ಪರಮ ಶ್ರುತಿ ವೇದಾಂಗ ಮಂತ್ರೋ
ತ್ಕರ ಧರಿತ್ರಿ ಕುಲಾದ್ರಿ ಸಸಿ ಭಾ
ಸ್ಕರ ಸುರೋರಗ ಜಲಧಿ ನದಿ ನಕ್ಷತ್ರ ರಾಶಿಗಳು
ಸರಸಿರುಹಭವ ವಿಷ್ಣು ವಿವಿಧಾ
ಧ್ವರ ಮುನೀಂದ್ರ ಗ್ರಹವು ಸಚಾರ
ಚರವುಘೇ ಎಂದೆರಗುತಿರ್ದುದು ಶಿವನ ಬಳಸಿನಲಿ (ಕರ್ಣ ಪರ್ವ, ೭ ಸಂಧಿ, ೩೭ ಪದ್ಯ)

ತಾತ್ಪರ್ಯ:
ವೇದ ವೇದಾಂಗಗಳು, ಮಂತ್ರಗಳು, ಭೂಮಿ, ಕುಲ ಪರ್ವತಗಳು, ಚಂದ್ರಸೂರ್ಯರು, ನಕ್ಷತ್ರಗಳು, ನದಿ ಸಮುದ್ರಗಳು, ಬ್ರಹ್ಮ ವಿಷ್ಣು ಯಜ್ಞಗಳು, ಮುನಿಮುಖ್ಯರು, ಗ್ರಹಗಳು ಸಚರಾಚರಗಳು ಉಘೇ ಎಂದು ಶಿವನಿಗೆ ನಮಸ್ಕರಿಸಿದರು.

ಅರ್ಥ:
ಪರಮ: ಶ್ರೇಷ್ಠ; ಶ್ರುತಿ: ವೇದ; ವೇದಾಂಗ: ಉಪನಿಷತ್ತು; ಮಂತ್ರ: ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಉತ್ಕರ: ಸಮೂಹ; ಧರಿತ್ರಿ: ಭೂಮಿ; ಕುಲಾದ್ರಿ: ಪರ್ವತ; ಸಸಿ: ಶಶಿ, ಚಂದ್ರ ಭಾಸ್ಕರ: ರವಿ; ಸುರ: ದೇವತೆ; ಉರಗ: ಹಾವು; ಜಲಧಿ: ಸಾಗರ; ನದಿ: ಸರೋವರ; ನಕ್ಷತ್ರ: ತಾರೆ; ರಾಶಿ: ಸಮೂಹ; ಸರಸಿರುಹಭವ: ಬ್ರಹ್ಮ; ವಿಷ್ಣು: ಶೇಷಶಯನ; ವಿವಿಧ: ಹಲವಾರು; ಅಧ್ವರ: ಯಜ್ಞ; ಮುನಿ: ಋಷಿ; ಮುನೀಂದ್ರ: ಮುನಿಮುಖ್ಯ; ಗ್ರಹ:ಆಕಾಶಚರಗಳು; ಸಚರಾಚರ: ಸಮಸ್ತ ಚಲಿಸುವ ಮತ್ತು ಚಲಿಸದ; ಉಘೇ: ಜಯಘೋಷ; ಎರಗು: ನಮಸ್ಕರಿಸು; ಶಿವ: ಶಂಕರ; ಬಳಸು: ಸುತ್ತುವರಿ, ಸುತ್ತುಗಟ್ಟು;

ಪದವಿಂಗಡಣೆ:
ಪರಮ +ಶ್ರುತಿ +ವೇದಾಂಗ +ಮಂತ್ರೋ
ತ್ಕರ+ ಧರಿತ್ರಿ+ ಕುಲಾದ್ರಿ +ಸಸಿ +ಭಾ
ಸ್ಕರ +ಸುರೋರಗ+ ಜಲಧಿ+ ನದಿ+ ನಕ್ಷತ್ರ+ ರಾಶಿಗಳು
ಸರಸಿರುಹಭವ +ವಿಷ್ಣು +ವಿವಿಧ
ಅಧ್ವರ +ಮುನೀಂದ್ರ +ಗ್ರಹವು +ಸಚಾರ
ಚರವ್+ಉಘೇ +ಎಂದ್+ಎರಗುತಿರ್ದುದು +ಶಿವನ +ಬಳಸಿನಲಿ

ಅಚ್ಚರಿ:
(೧) ಉತ್ಕರ, ಭಾಸ್ಕರ – ಪ್ರಾಸ ಪದ
(೨) ಉತ್ಕರ, ರಾಶಿ – ಸಮನಾರ್ಥಕ ಪದಗಳು

ಪದ್ಯ ೩೩: ಆರರ ಮಹಿಮೆಯನ್ನರಿತು ಜೀವನ್ಮುಕ್ತಿಯನ್ನು ಹೇಗೆ ಸಾಧಿಸಬಹುದು?

ಆರುಗುಣ ಋತುವಾರು ವರ್ಗವ
ದಾರು ದರ್ಶನವಾರುವಂಗವ
ದಾರು ಭೇದದ ಬಗೆಯನರಿದುತ್ಕೃಷ್ಟ ಮಾರ್ಗದೊಳು
ತೋರುವೀ ಮಾಯಾ ಪ್ರಪಂಚವ
ಮೀರಿ ಕೇಡಿಲ್ಲದ ಪದವ ಕೈ
ಸೂರೆಗೊಂಬುದು ಪರಮ ಮಂತ್ರವಿದೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೩೩ ಪದ್ಯ)

ತಾತ್ಪರ್ಯ:
ರಾಜನಿಗಿರಬೇಕಾದ ಆರುಗುಣಗಳಾದ ಸಂಧಿ, ವಿಗ್ರಹ, ಯಾನ, ಆಸನ, ದ್ವೈಧ, ಆಶ್ರಯ; ಆರು ಋತುಗಳಾದ ವಸಂತ, ಗೀಷ್ಮ, ವರ್ಷ, ಶರತ್, ಹೇಮಂತ, ಶಿಶಿರ; ಆರು ವೇದಾಂಗಗಳಾದ ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ್ಯ, ಕಲ್ಪ; ಇವುಗಳಲ್ಲಿರುವ ವೈಶಿಷ್ಟ್ಯವನ್ನರಿತು, ಉತ್ತಮ ಮಾರ್ಗದಲ್ಲಿ ನಡೆದು ಮಾಯಾ ಪ್ರಪಂಚವನ್ನು ಮೀರಿ ಕೇಡಿಲ್ಲದ ಜೀವನ್ಮುಕ್ತಿಯನ್ನು ಸಾಧಿಸುವುದೇ ಅತಿ ಹೆಚ್ಚಿನ ಮಂತ್ರ ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಆರು: ಷಟ್; ಗುಣ: ಸ್ವಭಾವ, ನಡತೆ; ಋತು: ಕಾಲ, ಪ್ರಕೃತಿಯಲ್ಲಿ ಬರುವ ಆರು ಕಾಲ; ವರ್ಗ: ಗುಂಪು, ಸಮೂಹ, ವಿಭಾಗ; ದರ್ಶನ: ನೋಡುವುದು, ಅವಲೋಕನ; ಅಂಗ: ಭಾಗ; ಭೇದ: ಬಗೆ, ವಿಧ, ಪ್ರಕಾರ; ಬಗೆ: ರೀತಿ, ತರಹ; ಉತ್ಕೃಷ್ಟ: ಶ್ರೇಷ್ಠ; ಮಾರ್ಗ: ದಾರಿ; ತೋರು: ಕಾಣಿಸು; ಮಾಯ: ಇಂದ್ರಜಾಲ; ಪ್ರಪಂಚ: ಲೋಕ; ಮೀರಿ: ದಾಟಿ; ಕೇಡು: ಕೆಡಕು; ಪದ: ಜಾಗ, ಸ್ಥಾನ; ಸೂರೆ:ಸುಲಿಗೆ; ಕೈಸೂರೆ: ಲೂಟಿ; ಪರಮ: ಶ್ರೇಷ್ಠ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಮುನಿ: ಋಷಿ;

ಪದವಿಂಗಡಣೆ:
ಆರುಗುಣ +ಋತುವ್+ಆರು+ ವರ್ಗವದ್
ಆರು +ದರ್ಶನವ್+ಆರುವ್+ಅಂಗವದ್
ಆರು +ಭೇದದ +ಬಗೆಯನ್+ಅರಿತ್+ಉತ್ಕೃಷ್ಟ+ ಮಾರ್ಗದೊಳು
ತೋರುವ್+ಈ+ ಮಾಯಾ +ಪ್ರಪಂಚವ
ಮೀರಿ +ಕೇಡಿಲ್ಲದ +ಪದವ +ಕೈ
ಸೂರೆಗೊಂಬುದು +ಪರಮ +ಮಂತ್ರವಿದೆಂದನಾ +ಮುನಿಪ

ಅಚ್ಚರಿ:
(೧) ಗುಣ, ಋತು, ವೇದಾಂಗ – ಆರರ ಮಹತ್ವವನ್ನು ತಿಳಿಸುವ ಪದಗಳು
(೨) ೫ ಬಾರಿ ಆರು ಪದದ ಬಳಕೆ