ಪದ್ಯ ೨೩: ಉತ್ತರೆಯ ಗರ್ಭವನ್ನು ಯಾವುದು ರಕ್ಷಿಸಲು ಅಣಿಯಾಯಿತು?

ಜಗವ ಹೂಡುವ ಮೇಣ್ ಚತುರ್ದಶ
ಜಗದ ಜೀವರನೂಡಿಯುಣಿಸುವ
ಜಗವನಂತರ್ಭಾವದಲಿ ಬಲಿಸುವ ಗುಣತ್ರಯದ
ಸೊಗಡು ತನ್ನ ಸಹಸ್ರಧಾರೆಯ
ಝಗೆಯೊಳೆನಿಪ ಮಹಾಸುದರ್ಶನ
ಬಿಗಿದು ಸುತ್ತಲು ವೇಢೆಯಾಯ್ತುತ್ತರೆಯ ಗರ್ಭದಲಿ (ಗದಾ ಪರ್ವ, ೧೦ ಸಂಧಿ, ೨೩ ಪದ್ಯ)

ತಾತ್ಪರ್ಯ:
ಜಗತ್ತನ್ನು ಸೃಷ್ಟಿಸಿ, ಹದಿನಾಲ್ಕು ಲೋಕಗಳ ಜೀವರನ್ನು ಸಲಹುವ, ಸಂಹರಿಸುವ ಮಾಯೆಯ ತ್ರಿಗುಣಗಲ ವಾಸನೆಯನ್ನು ತನ್ನ ಸಾವಿರ ಧಾರೆಗಳ ಬೆಳಕಿನಲ್ಲಿ ಧರಿಸುವ ಸುದರ್ಶನ ಚಕ್ರವು ಉತ್ತರೆಯ ಗರ್ಭವನ್ನಾವರಿಸಿ ರಕ್ಷಿಸಲನುವಾಯಿತು.

ಅರ್ಥ:
ಜಗ: ಜಗತ್ತು; ಹೂಡು: ಅಣಿಗೊಳಿಸು, ಸಿದ್ಧಪಡಿಸು; ಮೇಣ್: ಅಥವ; ಚತುರ್ದಶ: ಹದಿನಾಲ್ಕು; ಜೀವ: ಪ್ರಾಣ; ಊಡು: ಆಧಾರ, ಆಶ್ರಯ; ಉಣಿಸು: ತಿನ್ನಿಸು; ಭಾವ: ಭಾವನೆ, ಚಿತ್ತವೃತ್ತಿ; ಬಲಿಸು: ಗಟ್ಟಿಪಡಿಸು; ಗುಣ: ನಡತೆ, ಸ್ವಭಾವ; ತ್ರಯ: ಮೂರು; ಸೊಗಡು: ಕಂಪು, ವಾಸನೆ; ಸಹಸ್ರ: ಸಾವಿರ; ಧಾರೆ: ವರ್ಷ; ಝಗೆ: ಹೊಳಪು, ಪ್ರಕಾಶ; ಸುದರ್ಶನ: ವಿಷ್ಣುವಿನ ಕೈಯಲ್ಲಿರುವ ಆಯುಧಗಳಲ್ಲಿ ಒಂದು, ಚಕ್ರಾಯುಧ; ಬಿಗಿ: ಭದ್ರವಾಗಿರುವುದು; ಸುತ್ತಲು: ಎಲ್ಲಾ ಕಡೆ; ವೇಢೆ: ಆಕ್ರಮಣ; ಗರ್ಭ: ಹೊಟ್ಟೆ;

ಪದವಿಂಗಡಣೆ:
ಜಗವ +ಹೂಡುವ +ಮೇಣ್ +ಚತುರ್ದಶ
ಜಗದ +ಜೀವರನ್+ಊಡಿ+ಉಣಿಸುವ
ಜಗವನ್+ಅಂತರ್ಭಾವದಲಿ +ಬಲಿಸುವ +ಗುಣ+ತ್ರಯದ
ಸೊಗಡು +ತನ್ನ +ಸಹಸ್ರ+ಧಾರೆಯ
ಝಗೆಯೊಳೆನಿಪ+ ಮಹಾಸುದರ್ಶನ
ಬಿಗಿದು +ಸುತ್ತಲು +ವೇಢೆಯಾಯ್ತ್+ಉತ್ತರೆಯ +ಗರ್ಭದಲಿ

ಅಚ್ಚರಿ:
(೧) ಜಗ – ೧-೩ ಸಾಲಿನ ಮೊದಲ ಪದ
(೨) ಸುದರ್ಶನದ ವಿವರ – ಸಹಸ್ರಧಾರೆಯ ಝಗೆಯೊಳೆನಿಪ ಮಹಾಸುದರ್ಶನ

ಪದ್ಯ ೬೨: ಕೌರವನು ಪಾಂಡವರ ವಧೆ ಏಕೆ ಸಾಧ್ಯವಿಲ್ಲವೆಂದನು?

ಆಗಲಾ ಪಾಂಡವರ ವಧೆ ನಿನ
ಗಾಗಲರಿಯದು ನಿನ್ನ ಭುಜಬಲ
ವಾಗುರಿಯ ವೇಢೆಯಲಿ ಬೀಳದು ಕೃಷ್ಣಬುದ್ಧಿಮೃಗ
ಈಗಳೀ ನಿರ್ಬಂಧವಚನ ವಿ
ರಾಗಮೆವಗೇಕಾರಿಗಾವುದು
ಭಾಗಧೇಯವದಾಗಲೆಂದನು ಕೌರವರಾಯ (ಗದಾ ಪರ್ವ, ೮ ಸಂಧಿ, ೬೨ ಪದ್ಯ)

ತಾತ್ಪರ್ಯ:
ದುರ್ಯೊಧನನಿ ಅಶ್ವತ್ಥಾಮನಿಗೆ ಉತ್ತರಿಸುತ್ತಾ, ನೀನು ಹೇಳಿದಂತೆ ಆಗಲಿ, ಆದರೆ ಪಾಂಡವರನ್ನು ಸಂಹರಿಸುವುದು ನಿನಗೆ ಸಾಧ್ಯವಿಲ್ಲ. ಶ್ರೀಕೃಷ್ಣನ ಬುದ್ಧಿಯೆಂಬ ಮೃಗವು ನಿನ್ನ ಭುಜಬಲದ ಮುತ್ತಿಗೆಗೆ ದಕ್ಕಲಾರದು. ಈಗ ಇಂತಹ ನಿಷ್ಠುರವಾದ ಮಾತು ನಮಗೇಕೆ, ಯಾರ ಪಾಲಿಗೆ ಯಾವ ಭಾಗ್ಯವಿದೆಯೋ ಹಾಗೆ ಆಗಲಿ ಎಂದನು.

ಅರ್ಥ:
ವಧೆ: ಸಾವು;ಅರಿ: ತಿಳಿ; ಭುಜಬಲ: ಪರಾಕ್ರಮ; ವೇಢೆ: ಆಕ್ರಮಣ, ಮುತ್ತಿಗೆ; ಬೀಳು: ಕುಸಿ; ಬುದ್ಧಿ: ತಿಳಿವು, ಅರಿವು; ಮೃಗ: ಪ್ರಾಣಿ; ನಿರ್ಬಂಧ: ಕಟ್ಟುಪಾಡು; ವಚನ: ಮಾತು; ವಿರಾಗ: ವಿರಕ್ತಿ, ವೈರಾಗ್ಯ;ಭಾಗ: ಭಾಗ್ಯ; ರಾಯ: ರಾಜ;

ಪದವಿಂಗಡಣೆ:
ಆಗಲ್+ಆ +ಪಾಂಡವರ +ವಧೆ +ನಿನಗ್
ಆಗಲ್+ಅರಿಯದು +ನಿನ್ನ+ ಭುಜಬಲವ್
ಆ+ಗುರಿಯ +ವೇಢೆಯಲಿ +ಬೀಳದು +ಕೃಷ್ಣ+ಬುದ್ಧಿಮೃಗ
ಈಗಳ್+ಈ+ ನಿರ್ಬಂಧ+ವಚನ+ ವಿ
ರಾಗಮ್+ಎವಗ್+ಏಕ್+ಆರಿಗ್+ಆವುದು
ಭಾಗಧೇಯವ್+ಅದಾಗಲ್+ಎಂದನು+ ಕೌರವರಾಯ

ಅಚ್ಚರಿ:
(೧) ಆಗಲ್, ಈಗಲ್ – ೧, ೪ ಸಾಲಿನ ಮೊದಲ ಪದ
(೨) ಕೃಷ್ಣನನ್ನು ಹೊಗಳುವ ಪರಿ – ನಿನ್ನ ಭುಜಬಲವಾಗುರಿಯ ವೇಢೆಯಲಿ ಬೀಳದು ಕೃಷ್ಣಬುದ್ಧಿಮೃಗ

ಪದ್ಯ ೫೩: ದುರ್ಯೋಧನನ ಸ್ಥಿತಿಯ ಬಗ್ಗೆ ಯಾರು ಚಿಂತಿಸಿದರು?

ಧರಣಿಪತಿ ಕೇಳೀಚೆಯಲಿ ಕೃಪ
ಗುರುತನುಜ ಕೃತವರ್ಮಕರು ನ
ಮ್ಮರಸನೇನಾದನೊ ವಿರೋಧಿಯ ದಳದ ವೇಢೆಯಲಿ
ತರಣಿ ತಿಮಿರಕೆ ತೆರಹುಗೊಟ್ಟನು
ಭರತಖಂಡವನಿನ್ನು ರಾಯನ
ಪರಿಗತಿಯನಾರೈವೆವೆನುತೇರಿದನು ನಿಜರಥವ (ಗದಾ ಪರ್ವ, ೮ ಸಂಧಿ, ೫೩ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಇತ್ತ ಅಶ್ವತ್ಥಾಮ, ಕೃಪಾಚಾರ್ಯ, ಕೃತವರ್ಮರು, ವಿರೋಧಿಗಳ ಮುತ್ತಿಗೆಯಿಂದ ಏನಾದನೋ? ಭರತ ಖಂಡವನ್ನು ಕತ್ತಲಾವರಿಸಿತು. ನಮ್ಮ ದೊರೆಯ ಗತಿ ಏನಾಯಿತೋ ನೋಡೋಣ ಎಂದುಕೊಂಡು ರಥಗಳನ್ನೇರಿದರು.

ಅರ್ಥ:
ಧರಣಿಪತಿ: ರಾಜ; ಕೇಳು: ಆಲಿಸು; ಇಚೆ: ಇತ್ತಕಡೆ; ತನುಜ: ಮಗ; ಅರಸ: ರಾಜ; ವಿರೋಧಿ: ವೈರಿ, ಶತ್ರ; ವೇಢೆ: ಆಕ್ರಮಣ; ತರಣಿ: ಸೂರ್ಯ; ತಿಮಿರ: ಅಂಧಕಾರ; ತೆರಹು: ಬಿಡುವು; ಖಂಡ: ದೊಡ್ಡ ಭೂಭಾಗ; ರಾಯ: ರಾಜ; ಪರಿಗತಿ: ಸ್ಥಿತಿ; ಏರು: ಮೇಲೆ ಹತ್ತು; ರಥ: ಬಂಡಿ;

ಪದವಿಂಗಡಣೆ:
ಧರಣಿಪತಿ +ಕೇಳ್+ಈಚೆಯಲಿ +ಕೃಪ
ಗುರುತನುಜ +ಕೃತವರ್ಮಕರು +ನಮ್ಮ್
ಅರಸನ್+ಏನಾದನೊ +ವಿರೋಧಿಯ +ದಳದ+ ವೇಢೆಯಲಿ
ತರಣಿ +ತಿಮಿರಕೆ +ತೆರಹುಗೊಟ್ಟನು
ಭರತಖಂಡವನ್+ಇನ್ನು +ರಾಯನ
ಪರಿಗತಿಯನ್+ಆರೈವೆವ್+ಎನುತ್+ಏರಿದನು +ನಿಜರಥವ

ಅಚ್ಚರಿ:
(೧) ಧರಣಿಪತಿ, ಅರಸ – ಸಮಾನಾರ್ಥಕ ಪದ
(೨) ಧರಣಿ, ತರಣಿ – ಪ್ರಾಸ ಪದ
(೩) ರೂಪಕದ ಪ್ರಯೋಗ – ತರಣಿ ತಿಮಿರಕೆ ತೆರಹುಗೊಟ್ಟನು ಭರತಖಂಡವನ್

ಪದ್ಯ ೫೯: ಸೈನ್ಯವು ಏನೆಂದು ಕೂಗಿತು?

ಉರವಣಿಸಿತರಿಸೇನೆ ಮುತ್ತಿತು
ಸರಸಿಯನು ವೇಢೆಯಲಿ ಗಿಡುಮೆಳೆ
ತರುಲತೆಯಲೊಳಕೊಂಡು ನಿಂದುದು ಚತುರಚತುರಂಗ
ನರರ ಗರ್ಜನೆ ವಾದ್ಯರವ ಕರಿ
ತುರಗ ರಥ ನಿರ್ಘೋಷ ಪರ್ವತ
ಬಿರಿಯೆ ಮೊಳಗಿತು ಸಿಲುಕಿದನು ಸಿಲುಕಿದನು ಹಗೆಯೆನುತ (ಗದಾ ಪರ್ವ, ೪ ಸಂಧಿ, ೫೯ ಪದ್ಯ)

ತಾತ್ಪರ್ಯ:
ಶತ್ರುಸೇನೆಯು ತ್ವರಿತವಾಗಿ ಬಂದು ಸರೋವರವನ್ನು ಮುತ್ತಿತು. ಗಿಡ, ದಟ್ಟವಾಗಿ ಬೆಳೆದ ಗಿಡಗಳ ಗುಂಪು, ಮರ, ಬಳ್ಳಿಗಳನೂ ಚತುರಂಗ ಸೈನ್ಯವು ಆವರಿಸಿತು. ಸೇನೆಯ ಭಟರ ಗರ್ಜನೆ, ವಾದ್ಯಗಳ ಸದ್ದು, ಆನೆ, ಕುದುರೆ ರಥಗಳ ಸದ್ದು ಮೊಳಗಿ ಪರ್ವತಗಳು ಬಿರಿದವು. ಶತ್ರುವು ಸಿಕ್ಕ ಸಿಕ್ಕ ಎಂದು ಕೂಗಿದರು.

ಅರ್ಥ:
ಉರವಣಿಸು: ಉತ್ಸಾಹದಿಂದಿರು, ಆತುರಿಸು; ಅರಿ: ವೈರಿ; ಸೇನೆ: ಸೈನ್ಯ; ಮುತ್ತು: ಆವರಿಸು; ಸರಸಿ: ಸರೋವರ; ವೇಢೆ: ಆಕ್ರಮಣ; ಮೆಳೆ: ದಟ್ಟವಾಗಿ ಬೆಳೆದ ಗಿಡಗಳ ಗುಂಪು, ಪೊದರು; ತರು: ಮರ; ಲತೆ: ಬಳ್ಳಿ; ನಿಂದು: ನಿಲ್ಲು; ಚತುರ: ಜಾಣ, ನಿಪುಣ; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ನರ: ಮನುಷ್ಯ; ಗರ್ಜನೆ: ಗಟ್ಟಿಯಾದ ಕೂಗು, ಆರ್ಭಟ; ವಾದ್ಯ: ಸಂಗೀತದ ಸಾಧನ; ರವ: ಶಬ್ದ; ಕರಿ: ಆನೆ; ತುರಗ: ಅಶ್ವ; ರಥ: ಬಂಡಿ; ನಿರ್ಘೋಷ: ದೊಡ್ಡ ಘೋಷಣೆ; ಪರ್ವತ: ಗಿರಿ, ಬೆಟ್ಟ; ಬಿರಿ: ಸೀಳು; ಮೊಳಗು: ಧ್ವನಿ, ಸದ್ದು; ಸಿಲುಕು: ಸೆರೆಯಾದ ವಸ್ತು; ಹಗೆ: ವೈರಿ;

ಪದವಿಂಗಡಣೆ:
ಉರವಣಿಸಿತ್+ಅರಿಸೇನೆ+ ಮುತ್ತಿತು
ಸರಸಿಯನು +ವೇಢೆಯಲಿ +ಗಿಡು+ಮೆಳೆ
ತರು+ಲತೆಯಲ್+ಒಳಕೊಂಡು +ನಿಂದುದು +ಚತುರ+ಚತುರಂಗ
ನರರ+ ಗರ್ಜನೆ +ವಾದ್ಯ+ರವ+ ಕರಿ
ತುರಗ +ರಥ +ನಿರ್ಘೋಷ +ಪರ್ವತ
ಬಿರಿಯೆ +ಮೊಳಗಿತು+ ಸಿಲುಕಿದನು+ ಸಿಲುಕಿದನು+ ಹಗೆಯೆನುತ

ಅಚ್ಚರಿ:
(೧) ಗರ್ಜನೆ, ರವ, ನಿರ್ಘೋಷ, ಮೊಳಗು – ಶಬ್ದವನ್ನು ವಿವರಿಸುವ ಪದಗಳು

ಪದ್ಯ ೧೧: ಭೀಮನ ಪರಾಕ್ರಮವು ಹೇಗಿತ್ತು?

ಗಜದಳದ ಘಾಡಿಕೆಗೆ ವಾಜಿ
ವ್ರಜದ ವೇಢೆಗೆ ಭೀಮನೇ ಗಜ
ಬಜಿಸುವನೆ ಹೊಡೆಸೆಂಡನಾಡಿದನಹಿತ ಮೋಹರವ
ಗುರಜು ಗುಲ್ಮದ ಕುಂಜರಾಶ್ವ
ವ್ರಜದ ಮೆಳೆಯೊಣಗಿದುದು ಪವಮಾ
ನಜ ಪರಾಕ್ರಮಶಿಖಿಯ ಝಳ ಝೊಂಪಿಸಿತು ನಿಮಿಷದಲಿ (ಶಲ್ಯ ಪರ್ವ, ೩ ಸಂಧಿ, ೧೧ ಪದ್ಯ)

ತಾತ್ಪರ್ಯ:
ಗಜದಳವು ಯುದ್ಧಕ್ಕೆ ಬಂದರೆ ಭೀಮನು ಹಿಂದೆಮುಂದೆ ನೋಡುವನೇ? ಆನೆ ಕುದುರೆಗಳನ್ನು ಹೊಡೆದು ಚೆಂಡಾಡಿದನು. ಆ ಸೇನೆಯ ಮಳೆಯು ಭೀಮನ ಪರಾಕ್ರಮದ ಅಗ್ನಿಯ ಝಳಕ್ಕೆ ಒಣಗಿ ಹೋಯಿತು.

ಅರ್ಥ:
ಗಜ: ಆನೆ; ದಳ: ಸೈನ್ಯ; ಘಾಡಿಸು: ವ್ಯಾಪಿಸು; ವಾಜಿ: ಕುದುರೆ; ವ್ರಜ: ಗುಂಪು; ವೇಡೆ: ಆಕ್ರಮಣ; ಗಜಬಜಿಸು: ಹಿಂದುಮುಂದು ನೋಡು, ಗೊಂದಲಕ್ಕೀಡಾಗು; ಹೊಡೆ: ಹೋರಾಡು; ಅಹಿತ: ವೈರಿ; ಸೆಂಡನಾಡು: ಚೆಂಡಾಡು; ಮೋಹರ: ಯುದ್ಧ; ಗುಜುರು: ಕೆದಕಿದ; ಗುಲ್ಮ: ಸೇನೆಯ ಒಂದು ಘಟಕ; ಕುಂಜರ: ಆನೆ; ಅಶ್ವ: ಕುದುರೆ; ವ್ರಜ: ಗುಂಪು; ಮೆಳೆ: ಗುಂಪು; ಒಣಗು: ಸತ್ವವಿಲ್ಲದ;ಪವಮಾನಜ: ಭೀಮ; ಪರಾಕ್ರಮ: ಶೌರ್ಯ; ಶಿಖಿ: ಬೆಂಕಿ; ಝಳ: ಕಾಂತಿ; ಝೊಂಪಿಸು: ಮೈಮರೆ; ನಿಮಿಷ: ಕ್ಷಣ ಮಾತ್ರ;

ಪದವಿಂಗಡಣೆ:
ಗಜದಳದ+ ಘಾಡಿಕೆಗೆ +ವಾಜಿ
ವ್ರಜದ +ವೇಢೆಗೆ +ಭೀಮನೇ +ಗಜ
ಬಜಿಸುವನೆ +ಹೊಡೆ+ಸೆಂಡನಾಡಿದನ್+ಅಹಿತ +ಮೋಹರವ
ಗುರಜು +ಗುಲ್ಮದ +ಕುಂಜರ+ಅಶ್ವ
ವ್ರಜದ +ಮೆಳೆ+ಒಣಗಿದುದು +ಪವಮಾ
ನಜ+ ಪರಾಕ್ರಮ+ಶಿಖಿಯ +ಝಳ +ಝೊಂಪಿಸಿತು +ನಿಮಿಷದಲಿ

ಅಚ್ಚರಿ:
(೧) ರೂಪಕದ ಪ್ರಯೋಗ – ಕುಂಜರಾಶ್ವವ್ರಜದ ಮೆಳೆಯೊಣಗಿದುದು ಪವಮಾನಜ ಪರಾಕ್ರಮಶಿಖಿಯ ಝಳ ಝೊಂಪಿಸಿತು
(೨) ಘಾಡಿಕೆಗೆ, ವೇಢೆಗೆ – ಪದಗಳ ಬಳಕೆ
(೩) ಜೋಡಿ ಪದಗಳ ಬಳಕೆ – ಗುರಜು ಗುಲ್ಮದ; ಝಳ ಝೊಂಪಿಸಿತು

ಪದ್ಯ ೭: ಭೀಮನು ಹೇಗೆ ಯುದ್ಧವನ್ನು ಮಾಡುತ್ತಿದ್ದನು?

ರಾಯ ಹೊಕ್ಕನು ಭೀಮಸೇನನ
ದಾಯ ಬಲುಹೋ ಧರ್ಮಪುತ್ರನ
ದಾಯವಲ್ಲಿದು ನೂಕೆನುತ ಕೃತವರ್ಮ ಗೌತಮರ
ಸಾಯಕದ ಮಳೆಗರೆದು ಕೌರವ
ರಾಯನನು ಹಿಂದಿಕ್ಕಿ ವೇಢೆಯ
ವಾಯುಜನ ವಂಗಡವ ಮುರಿದರು ತರಿದರರಿಬಲವ (ಶಲ್ಯ ಪರ್ವ, ೩ ಸಂಧಿ, ೭ ಪದ್ಯ)

ತಾತ್ಪರ್ಯ:
ಧರ್ಮಜನ ಯುದ್ಧದಂತಲ್ಲ, ಭೀಮನ ಲೆಕ್ಕಾಚಾರ ಉಗ್ರವಾದುದು. ದೊರೆಯು ಆವನೊಡನೆ ಕದನಕ್ಕೆ ಹೋಗಿದ್ದಾನೆ ಎಂದು ಕೃತವರ್ಮ ಕೃಪರು ಮುಂದೆ ಬಂದು ಬಾಣಗಳ ಮಳೆಗರೆದು, ಕೌರವನನ್ನು ಹಿಂದಿಟ್ಟು ದಾಳಿ ಮಾಡುತ್ತಿದ್ದ ಭೀಮನ ಗುಂಪನ್ನು ನುಗ್ಗಿ ಶತ್ರುಗಳನ್ನು ಸಂಹರಿಸಿದರು.

ಅರ್ಥ:
ರಾಯ: ರಾಜ; ಹೊಕ್ಕು: ಸೇರು; ಆಯ: ಪರಿಮಿತಿ, ರೀತಿ; ಬಲುಹು: ಶಕ್ತಿ; ನೂಕು: ತಳ್ಳು; ಸಾಯಕ: ಬಾಣ, ಶರ; ಮಳೆ: ವರ್ಷ; ಹಿಂದಿಕ್ಕು: ಹಿಂದೆ ತಳ್ಳು; ವೇಢೆಯ: ಹಯಮಂಡಲ; ವಾಯುಜ: ಭೀಮ; ವಂಗಡ: ಗುಂಪು; ಮುರಿ: ಸೀಳು; ತರಿ: ಕಡಿ, ಕತ್ತರಿಸು; ಅರಿ: ವೈರಿ; ಬಲ: ಸೈನ್ಯ;

ಪದವಿಂಗಡಣೆ:
ರಾಯ +ಹೊಕ್ಕನು +ಭೀಮಸೇನನದ್
ಆಯ +ಬಲುಹೋ +ಧರ್ಮಪುತ್ರನದ್
ಆಯವಲ್ಲಿದು+ ನೂಕೆನುತ+ ಕೃತವರ್ಮ +ಗೌತಮರ
ಸಾಯಕದ +ಮಳೆಗರೆದು +ಕೌರವ
ರಾಯನನು +ಹಿಂದಿಕ್ಕಿ +ವೇಢೆಯ
ವಾಯುಜನ+ ವಂಗಡವ+ ಮುರಿದರು+ ತರಿದರ್+ಅರಿಬಲವ

ಅಚ್ಚರಿ:
(೧) ವ ಕಾರದ ತ್ರಿವಳಿ ಪದ – ವೇಢೆಯ ವಾಯುಜನ ವಂಗಡವ
(೨) ಯುದ್ಧದ ತೀವ್ರತೆ – ಸಾಯಕದ ಮಳೆಗರೆದು ಕೌರವರಾಯನನು ಹಿಂದಿಕ್ಕಿ

ಪದ್ಯ ೩೫: ಭೀಮನ ಆಕ್ರಮಣದ ವೇಗ ಹೇಗಿತ್ತು?

ಇತ್ತಲಿತ್ತಲು ಭೀಮನೆಂದುರೆ
ಮುತ್ತಿ ಮುಸುಕಿತು ಸೇನೆ ಚಿಮ್ಮಿದ
ನತ್ತಲಾಚೆಯಲಲ್ಲಿ ದಳ ಘಾಡಿಸಿತು ವೇಢೆಯಲಿ
ಇತ್ತ ಹಾಯ್ದನು ಕೌರವನ ರಥ
ದತ್ತ ಚಿಗಿದನು ಗುರುಸುತಾದಿಗ
ಳತ್ತಲಲ್ಲಿಗೆ ಮೊಳಗಿದನು ಮೋದಿದನು ಪಟುಭಟರ (ಕರ್ಣ ಪರ್ವ, ೧೫ ಸಂಧಿ, ೩೫ ಪದ್ಯ)

ತಾತ್ಪರ್ಯ:
ಓಹೋ ಇಲ್ಲಿ ಇಲ್ಲಿ ಭೀಮನು ಎಂದು ಕೂಗು ಸೈನಿಕರಲ್ಲಿ ಕೇಳಿದೊಡನೆಯೇ, ಸೇನೆಯು ಅವನನ್ನು ಮುತ್ತುವಷ್ಟರಲ್ಲಿ ಭೀಮನು ಆಚೆಕಡೆ ಚಿಮ್ಮಿ ಹೋದನು. ಅಲ್ಲಿ ಸೇನೆ ಕವಿಯುವಷ್ಟರಲ್ಲಿ ಕೌರವನ ರಥದ ಕಡೆ ಹೋದನು. ಮತ್ತೆ ಅಶ್ವತ್ಥಾಮಾದಿಗಳ ಮುಂದೆ ಗರ್ಜಿಸಿ ಗದೆಯಿಂದ ಹೊಡೆದನು.

ಅರ್ಥ:
ಉರೆ: ಅತಿಶಯವಾಗಿ; ಮುತ್ತು: ಆವರಿಸು; ಮುಸುಕು:ಹೊದಿಕೆ; ಸೇನೆ: ಸೈನ್ಯ; ಚಿಮ್ಮು: ನೂಕು, ಹಾರಿಸು; ಆಚೆ: ಹೊರಗೆ; ದಳ: ಸೈನ್ಯ; ಘಾಡಿಸು: ವ್ಯಾಪಿಸು; ವೇಢೆ: ಆಕ್ರಮಣ; ಹಾಯ್ದು: ಹೊಡೆ; ರಥ: ಬಂಡಿ; ಚಿಗಿ: ಹಾರು; ಸುತ: ಮಗ; ಮೊಳಗು: ಧ್ವನಿ, ಸದ್ದು; ಮೋದು: ಗುದ್ದು; ಪಟು:ಬಲಿಷ್ಠ; ಭಟ: ಸೈನಿಕ;

ಪದವಿಂಗಡಣೆ:
ಇತ್ತಲ್+ಇತ್ತಲು +ಭೀಮನೆಂದ್+ಉರೆ
ಮುತ್ತಿ+ ಮುಸುಕಿತು +ಸೇನೆ +ಚಿಮ್ಮಿದನ್
ಅತ್ತಲ್+ಆಚೆಯಲ್+ಅಲ್ಲಿ+ ದಳ+ ಘಾಡಿಸಿತು +ವೇಢೆಯಲಿ
ಇತ್ತ +ಹಾಯ್ದನು +ಕೌರವನ+ ರಥದ್
ಅತ್ತ +ಚಿಗಿದನು +ಗುರುಸುತಾದಿಗಳ್
ಅತ್ತಲ್+ಅಲ್ಲಿಗೆ +ಮೊಳಗಿದನು +ಮೋದಿದನು +ಪಟುಭಟರ

ಅಚ್ಚರಿ:
(೧) ಇತ್ತಲ್, ಅತ್ತಲ್ – ಪ್ರಾಸ ಪದಗಳು