ಪದ್ಯ ೨೬: ಕೃಷ್ಣನು ಅರ್ಜುನನಿಗೆ ಏನೆಂದು ಉತ್ತರಿಸಿದನು?

ಉಂಟು ಹೊಲ್ಲೆಹವಲ್ಲ ರಣದೊಳ
ಗೆಂಟುಮಡಿ ಬಳಲಿದವು ತೇಜಿಗ
ಳೀಂಟುವರೆ ನೀರಿಲ್ಲ ಮುರಿದರೆ ಬೆನ್ನ ಬಿಡರಿವರು
ಗೆಂಟರಲಿ ನಮ್ಮೊಡ್ಡ ಸುತ್ತಲು
ವೆಂಟಣಿಸಿ ರಿಪುಸೇನೆಯಿದೆ ಏ
ನುಂಟು ಮಾಡುವುಪಾಯವೆಂದನು ನಗುತ ಮುರವೈರಿ (ದ್ರೋಣ ಪರ್ವ, ೧೦ ಸಂಧಿ, ೨೬ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಅರ್ಜುನನ ಮಾತನ್ನು ಕೇಳಿ ನಗುತ್ತಾ, ಅರ್ಜುನ, ನಿನ್ನ ಮಾತು ನಿಜ, ಕುದುರೆಗಳು ಯುದ್ಧದಲ್ಲಿ ಎಂಟು ಮಡಿ ಬಳಲಿವೆ. ಕುಡಿಯಲು ನೀರಿಲ್ಲ, ಹಿಂದಿರುಗೋಣವೆಂದರೆ ಶತ್ರುಗಳು ನಮ್ಮ ಬೆನ್ನು ಹತ್ತುತ್ತಾರೆ. ನಮ್ಮ ಬಲವನು ಮುತ್ತಲು ಹತ್ತಿರದಲ್ಲೇ ಶತ್ರು ಸೈನ್ಯ ನಿಂತಿದೆ, ನಾವು ಮಾಡುವ ಉಪಾಯವಾದರೂ ಏನು, ಎಂದು ಕೃಷ್ಣನು ಕೇಳಿದನು.

ಅರ್ಥ:
ಉಂಟು: ಹೌದು; ಹೊಲ್ಲೆಹ: ದೋಷ; ರಣ: ಯುದ್ಧ; ಬಳಲು: ಆಯಾಸ; ತೇಜಿ: ಕುದುರೆ; ನೀರು: ಜಲ; ಮುರಿ: ಸೀಳು; ಬೆನ್ನ: ಹಿಂಭಾಗ; ಬಿಡು: ತ್ಯಜಿಸು; ಗೆಂಟು: ದೂರ; ವೆಂಟಣಿಸು: ಮುತ್ತು; ರಿಪು: ವೈರಿ; ಉಪಾಯ: ಯುಕ್ತಿ; ನಗು: ಹರ್ಷ; ಮುರವೈರಿ: ಕೃಷ್ಣ; ಒಡ್ಡು: ಸೈನ್ಯ, ಪಡೆ;

ಪದವಿಂಗಡಣೆ:
ಉಂಟು +ಹೊಲ್ಲೆಹವಲ್ಲ +ರಣದೊಳಗ್
ಎಂಟುಮಡಿ +ಬಳಲಿದವು +ತೇಜಿಗಳ್
ಈಂಟುವರೆ +ನೀರಿಲ್ಲ +ಮುರಿದರೆ +ಬೆನ್ನ +ಬಿಡರಿವರು
ಗೆಂಟರಲಿ +ನಮ್ಮೊಡ್ಡ +ಸುತ್ತಲು
ವೆಂಟಣಿಸಿ +ರಿಪು+ಸೇನೆಯಿದೆ +ಏ
ನುಂಟು +ಮಾಡುವುಪಾಯವೆಂದನು +ನಗುತ +ಮುರವೈರಿ

ಅಚ್ಚರಿ:
(೧) ಉಂಟು, ಎಂಟು, ಈಂಟು – ಪ್ರಾಸ ಪದಗಳು

ಪದ್ಯ ೧೦೦: ಊರ್ವಶಿಯು ದೂತನಿಗೆ ಏನೆಂದು ಹೇಳಿದಳು?

ಅಣಕವಲ್ಲಿದು ರಾಯನಟ್ಟಿದ
ಮಣಿಹವೋ ನಿಜಕಾರ್ಯಗತಿಗಳ
ಕುಣಿಕೆಯೋ ಕರ್ತವ್ಯವಾವುದು ನಿಮಗೆ ನಮ್ಮಲ್ಲಿ
ಗುಣಭರಿತ ಹೇಳೆನಲು ನಸುನಗೆ
ಕುಣಿಯೆ ಮುಖದಲಿ ಮಾನಿನಿಗೆ ವೆಂ
ಟಣಿಸಿ ಲಜ್ಜಾಭರದಿ ನುಡಿದನು ದೂತನೀ ಮಾತ (ಅರಣ್ಯ ಪರ್ವ, ೮ ಸಂಧಿ, ೧೦೦ ಪದ್ಯ)

ತಾತ್ಪರ್ಯ:
ಊರ್ವಶಿಯು ಚಿತ್ರಸೇನನಿಗೆ, ನೀನು ಇಲ್ಲಿಗೆ ಬಂದಿರುವುದೇನು ಹುಡುಗಾಟವಲ್ಲ ತಾನೆ? ರಾಜನು ಹೇಳಿದ ಕರ್ತವ್ಯಕ್ಕಾಗಿ ಇಲ್ಲಿಗೆ ಬಂದೆಯೋ, ನಿನ್ನದೇನಾದರೂ ಕೆಲಸವಿದೆಯೋ? ನೀವು ಯಾವ ಕಾರ್ಯಕ್ಕಾಗಿ ಬಂದಿರಿ ಎಂದು ಕೇಳಲು, ಚಿತ್ರಸೇನನು ನಾಚಿಕೆಗೊಂಡು ನಸುನಗುತ್ತಾ ನಮಸ್ಕರಿಸುತ್ತಾ ಹೀಗೆ ಹೇಳಿದನು.

ಅರ್ಥ:
ಅಣಕ: ಕುಚೋದ್ಯ; ರಾಯ: ರಾಜ; ಅಟ್ಟು: ಕಳುಹಿಸು; ಮಣಿಹ: ಉದ್ಯೋಗ; ಕಾರ್ಯ: ಕೆಲಸ; ಗತಿ: ಸಂಚಾರ; ಕುಣಿಕೆ: ಜೀರುಗುಣಿಕೆ; ಕರ್ತವ್ಯ: ಕೆಲಸ; ಗುಣ: ನಡತೆ; ಭರಿತ: ತುಂಬಿದ; ಹೇಳು: ತಿಳಿಸು; ನಸುನಗೆ: ಹಸನ್ಮುಖ; ಕುಣಿ: ನರ್ತಿಸು; ಮುಖ: ಆನನ; ಮಾನಿನಿ: ಹೆಂಗಸು, ಸ್ತ್ರೀ; ವೆಂಟಣಿಸು: ನಮಸ್ಕರಿಸು; ಲಜ್ಜೆ: ನಾಚಿಕೆ, ಸಂಕೋಚ; ನುಡಿ: ಮಾತಾಡು; ದೂತ: ಸೇವಕ; ಮಾತು: ವಾಣಿ;

ಪದವಿಂಗಡಣೆ:
ಅಣಕವಲ್ಲಿದು +ರಾಯನ್+ಅಟ್ಟಿದ
ಮಣಿಹವೋ +ನಿಜಕಾರ್ಯಗತಿಗಳ
ಕುಣಿಕೆಯೋ +ಕರ್ತವ್ಯವ್+ಆವುದು+ ನಿಮಗೆ+ ನಮ್ಮಲ್ಲಿ
ಗುಣಭರಿತ+ ಹೇಳೆನಲು+ ನಸುನಗೆ
ಕುಣಿಯೆ+ ಮುಖದಲಿ +ಮಾನಿನಿಗೆ +ವೆಂ
ಟಣಿಸಿ+ ಲಜ್ಜಾಭರದಿ+ ನುಡಿದನು+ ದೂತನ್+ಈ+ ಮಾತ

ಅಚ್ಚರಿ:
(೧) ನಕ್ಕನು ಎಂದು ಹೇಳಲು – ನಸುನಗೆ ಕುಣಿಯೆ ಮುಖದಲಿ