ಪದ್ಯ ೧೧: ಇಂದ್ರನು ವೃತನನ್ನು ಹೇಗೆ ಕೊಂದನು?

ಆ ಮುನಿಯ ಕಂಕಾಳದಲಿ ಸು
ತ್ರಾಮಕೊಂದನು ವೃತ್ರನನು ಬಳಿ
ಕಾ ಮಹಾದಾನವರು ರಕ್ಕಸಕೋಟಿಜಲಧಿಯಲಿ
ಭೀಮಬಲರಡಗಿದರು ಬಂದೀ
ಭೂಮಿಯಲ್ಲಿ ವಸಿಷ್ಠನಾಶ್ರಮ
ದಾ ಮುನೀಂದ್ರರ ತಿಂದರಂದು ಸಹಸ್ರ ಸಂಖ್ಯೆಯಲಿ (ಅರಣ್ಯ ಪರ್ವ, ೧೦ ಸಂಧಿ, ೧೧ ಪದ್ಯ)

ತಾತ್ಪರ್ಯ:
ದಧೀಚಿಯ ಎಲುಬಿನಿಂದ ವಜ್ರಾಯುಧವನ್ನು ರೈಸಿ ಇಂದ್ರನು ವೃತನನ್ನು ಸಂಹರಿಸಿದನು. ಆಗ ಅನಂತ ಸಂಖ್ಯೆಯ ರಾಕ್ಷಸರು ಸಮುದ್ರದಲ್ಲಿ ಅಡಗಿಕೊಂಡು ಹೊರಕ್ಕೆ ಬಂದ ಮೇಲೆ ಅವರು ಭೂಮಿಯಲ್ಲಿ ವಸಿಷ್ಠರ ಆಶ್ರಮದ ಸಾವಿರಾರು ಮುನಿಗಳನ್ನು ತಿಂದರು.

ಅರ್ಥ:
ಮುನಿ: ಋಷಿ; ಕಂಕಾಳ: ಅಸ್ತಿಪಂಜರ; ಸುತ್ರಾಮ: ಇಂದ್ರ; ಕೊಲ್ಲು: ಸಾಯಿಸು; ಬಳಿಕ: ನಂತರ; ದಾನವ: ರಾಕ್ಷಸ; ರಕ್ಕಸ: ನೆತ್ತರು; ಜಲಧಿ: ಸಾಗರ; ಭೀಮ: ಭಯಂಕರವಾದ; ಬಲ: ಶಕ್ತಿ; ಅಡಗು: ಅವಿತುಕೊಳ್ಳು; ಭೂಮಿ: ಧರಣಿ; ಆಶ್ರಮ: ಕುಟೀರ; ಮುನೀಂದ್ರ: ಋಷಿವರ್ಯ; ತಿಂದು: ಭಕ್ಷಿಸು; ಸಹಸ್ರ: ಸಾವಿರ; ಸಂಖ್ಯೆ: ಎಣಿಕೆ;

ಪದವಿಂಗಡಣೆ:
ಆ+ ಮುನಿಯ +ಕಂಕಾಳದಲಿ +ಸು
ತ್ರಾಮ+ಕೊಂದನು +ವೃತ್ರನನು +ಬಳಿ
ಕಾ +ಮಹಾ+ದಾನವರು+ ರಕ್ಕಸ+ಕೋಟಿ+ಜಲಧಿಯಲಿ
ಭೀಮ+ಬಲರ್+ಅಡಗಿದರು+ ಬಂದೀ
ಭೂಮಿಯಲ್ಲಿ +ವಸಿಷ್ಠನ್+ಆಶ್ರಮದ್
ಆ+ ಮುನೀಂದ್ರರ +ತಿಂದರ್+ಅಂದು +ಸಹಸ್ರ+ ಸಂಖ್ಯೆಯಲಿ

ಅಚ್ಚರಿ:
(೧) ರಾಕ್ಷಸರು ಅಡಗಿಕೊಂಡ ಪರಿ – ಮಹಾದಾನವರು ರಕ್ಕಸಕೋಟಿಜಲಧಿಯಲಿ
ಭೀಮಬಲರಡಗಿದರು

ಪದ್ಯ ೧೦: ಲೋಮಶ ಮುನಿಯು ಯಾವ ಕಥೆಯನ್ನು ಧರ್ಮಜನಿಗೆ ಹೇಳಿದರು?

ಬಳಿಕ ಲೋಮಶ ಸಹಿತ ನೃಪಕುಲ
ತಿಲಕ ಬಂದನಗಸ್ತ್ಯನಾಶ್ರಮ
ದೊಳಗೆ ಬಿಟ್ಟನು ಪಾಳೆಯವನಾ ಮುನಿಯಚರಿತವನು
ತಿಳುಹಿದನು ಲೋಮಶನು ವೃತ್ರನ
ಕಲಹಕೆಂದು ದಧೀಚಿ ಮುನಿಪತಿ
ಯೆಲುವನಮರರು ಬೇಡಿದುದನರುಹಿದನು ಜನಪತಿಗೆ (ಅರಣ್ಯ ಪರ್ವ, ೧೦ ಸಂಧಿ, ೧೦ ಪದ್ಯ)

ತಾತ್ಪರ್ಯ:
ನಂತರ ಲೋಮಶ ಮುನಿಯ ಜೊತೆ ಧರ್ಮರಾಯನು ಅಗಸ್ತ್ಯರ ಆಶ್ರಮಕ್ಕೆ ಬಂದು ಅಲ್ಲಿ ಬೀಡು ಬಿಟ್ಟನು. ಲೋಮಶನು ಅಗಸ್ತ್ಯನ ಚರಿತ್ರೆಯನ್ನು ಹೇಳಿದ ಬಳಿಕ ದಧೀಚಿಯ ಎಲುಬನ್ನು ದೇವತೆಗಳು ಬೇಡಿದ ಕಥೆಯನ್ನು ಹೇಳಿದನು.

ಅರ್ಥ:
ಬಳಿಕ: ನಂತರ; ಸಹಿತ: ಜೊತೆ; ನೃಪ: ರಾಜ; ಕುಲ: ವಂಶ; ತಿಲಕ: ಶ್ರೇಷ್ಠ; ನೃಪಕುಲತಿಲಕ: ಶ್ರೇಷ್ಠನಾದ ರಾಜ; ಆಶ್ರಮ: ಕುಟೀರ; ಪಾಳೆಯ: ಬೀಡು, ಶಿಬಿರ; ಮುನಿ: ಋಷಿ; ಚರಿತ: ವಿಚಾರ, ಕಥೆ; ತಿಳುಹು: ತಿಳಿಸು; ಕಲಹ: ಜಗಳ; ಮುನಿಪತಿ: ಋಷಿ; ಯೆಲುಬು: ಮೂಳೆ; ಅಮರ: ದೇವತೆ; ಬೇಡು: ಕೇಳು; ಅಉಹು: ತಿಳಿಸು; ಜನಪತಿ: ರಾಜ;

ಪದವಿಂಗಡಣೆ:
ಬಳಿಕ +ಲೋಮಶ +ಸಹಿತ +ನೃಪಕುಲ
ತಿಲಕ +ಬಂದನ್+ಅಗಸ್ತ್ಯನ್+ಆಶ್ರಮ
ದೊಳಗೆ +ಬಿಟ್ಟನು +ಪಾಳೆಯವನಾ+ ಮುನಿಯ+ಚರಿತವನು
ತಿಳುಹಿದನು +ಲೋಮಶನು +ವೃತ್ರನ
ಕಲಹಕೆಂದು +ದಧೀಚಿ +ಮುನಿಪತಿ
ಯೆಲುವನ್+ಅಮರರು +ಬೇಡಿದುದನ್+ಅರುಹಿದನು +ಜನಪತಿಗೆ

ಅಚ್ಚರಿ:
(೧) ಯುಧಿಷ್ಠಿರನನ್ನು ನೃಪಕುಲತಿಲಕ ಎಂದು ಕರೆದಿರುವುದು

ಪದ್ಯ ೧೦೭: ದರ್ಭೆಯು ಹೇಗೆ ಹೊರಹೊಮ್ಮಿತು?

ಪಾಕಶಾಸನನೈದೆ ವೃತ್ರನ
ಢಾಕುಗೆಡಿಸಿ ದಧೀಚಿಯಸ್ಥಿಯ
ಲೌಕಿ ಹೊಯ್ಯಲು ದಾನವನತನು ನೀರೊಳಡೆಗೆಡೆಯೆ
ತೂಕಗುಂದಿ ಜಲಾಧಿದೇವತೆ
ಯಾ ಕಪರ್ದಿಯ ಕರುಣದೊಳು ದ
ರ್ಭಾಕೃತಿಯ ಕೈಕೊಂಡುದವನೀಶ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೧೦೭ ಪದ್ಯ)

ತಾತ್ಪರ್ಯ:
ದರ್ಭೆಯು ಹೇಗೆ ಜಗಕ್ಕೆ ಬಂತೆಂದು ಈ ಪದ್ಯದಲ್ಲಿ ವಿವರಿಸಿದೆ. ಇಂದ್ರನು ವೃತ್ರನ ಮೇಳೆ ಲಗ್ಗೆ ಹಾಕಿ ದಧೀಚಿಯ ಮೂಳೆಗಳಿಂದ ಮಾಡಿದ ವಜ್ರಾಯುಧದಿಂದ ಅವನ ಮೇಲೆ ಪ್ರಯೋಗ ಮಾಡಲು, ಆ ರಾಕ್ಷಸನು ನೀರೊಳಗೆ ಬಿದ್ದನು. ಆಗ ಜಲದ ಅಧಿದೇವತೆಯು ಶಿವನಲ್ಲಿ ಮೊರೆಹೋಗಲು, ಶಿವನು ಅವರ ಮೇಲೆ ಕರುಣೆತೋರಿ ದರ್ಭೆಯನ್ನಾಗಿ ಪರಿವರ್ತಿಸಿದನು ಎಂದು ಸನತ್ಸುಜಾತರು ಧೃತರಾಷ್ಟ್ರನಿಗೆ ತಿಳಿಸಿದರು.

ಅರ್ಥ:
ಪಾಕಶಾಸನ: ಇಂದ್ರ; ಐದೆ: ವಿಶೇಷವಾಗಿ; ಢಾಕು: ಲಗ್ಗೆ; ಅಸ್ಥಿ: ಮೂಳೆ; ಲೌಕಿಕ: ಲೋಕಕ್ಕೆ ಸಂಬಂಧಿಸಿದುದು; ಹೊಯ್ಯು: ಹೊಡೆ, ಬಡಿ; ದಾನವ: ರಾಕ್ಷಸ; ತನು: ಶರೀರ; ನೀರು: ಜಲ; ಅಡೆಗೆಡೆ: ಅಡ್ಡ ಬೀಳು; ತೂಕ: ಭಾರ;ಜಲ: ನೀರು; ಅಧಿದೇವತೆ: ಮುಖ್ಯವಾದ ದೇವ; ಕಪರ್ದಿ: ಜಟಾಜೂಟವುಳ್ಳವ-ಶಿವ; ಕರುಣ: ದಯೆ; ದರ್ಭೆ: ಮೊನಚಾದ ತುದಿ ಯುಳ್ಳ ಒಂದು ಬಗೆಯ ಹುಲ್ಲು, ಕುಶ; ಆಕೃತಿ: ರೂಪ; ಅವನೀಶ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಪಾಕಶಾಸನನ್+ಐದೆ +ವೃತ್ರನ
ಢಾಕು+ಗೆಡಿಸಿ +ದಧೀಚಿಯ+ಅಸ್ಥಿಯ
ಲೌಕಿ +ಹೊಯ್ಯಲು +ದಾನವನ+ತನು +ನೀರೊಳ್+ಅಡೆಗೆಡೆಯೆ
ತೂಕಗುಂದಿ+ ಜಲಾಧಿದೇವತೆ
ಯಾ +ಕಪರ್ದಿಯ+ ಕರುಣದೊಳು +ದ
ರ್ಭಾಕೃತಿಯ+ ಕೈಕೊಂಡುದ್+ಅವನೀಶ +ಕೇಳೆಂದ

ಅಚ್ಚರಿ:
(೧) ಪಾಕಶಾಸನ, ವೃತ್ರ, ದಧೀಚಿ, ಕರ್ಪದಿ – ಹೆಸರುಗಳ ಪರಿಚಯ

ಪದ್ಯ ೪೪: ಇಂದ್ರನ ಬಿರುದಾವಳಿಗಳಾವುವು?

ನಮುಚಿ ಮಸ್ತಕಶೂಲ ಬಲಸಂ
ತಮಸ ಭಾಸ್ಕರ ಜಂಭ ಭುಜ ವಿ
ಕ್ರಮ ಮಹಾಂಬುಧಿ ಕುಂಭಸಂಭವ ವೃತ್ರಗಿರಿವಜ್ರ
ಕಮಲಭವ ಹರ ವಿಷ್ಣು ಹೊರೆಗಾ
ದಮಿತ ಸುರಗಣ ಮೌಳಿಮಣಿ ಸಂ
ಕ್ರಮಣ ಚತುರ ಪದಾಬ್ಜವೆಂದುದು ವಂದಿ ಸಂದೋಹ (ಆದಿ ಪರ್ವ, ೨೦ ಸಂಧಿ, ೪೪ ಪದ್ಯ)

ತಾತ್ಪರ್ಯ:
ಇಂದ್ರನ ಬಿರುದಾವಳಿಗಳನ್ನು ಕುಮಾರವ್ಯಾಸ ಸುಂದರವಾಗಿ ವರ್ಣಿಸಿದ್ದಾರೆ:
ನಮೂಚಿಯ ತಲೆಗೆ ಶೂಲದಂತಿರುವವನೆ (ನಮುಚಿಯೆಂಬ ರಾಕ್ಷಸನನ್ನು ಕೊಂದವನೆ), ಬಲನೆಂಬ ಕತ್ತಲೆಗೆ ಸೂರ್ಯನಾಗಿರುವವನೆ (ಬಲನೆಂಬ ರಾಕ್ಷಸನನ್ನು ಕೊಂದವನೆ), ಜಂಭನೆಂಬ ರಾಕ್ಷಸನ ಭುಜಬಲದ ಮಹಾಸಮುದ್ರಕ್ಕೆ ಅಗಸ್ತ್ಯನಾದವನೆ (ಜಂಭನೆಂಬ ರಾಕ್ಷಸನನ್ನು ಸಂಹರಿಸಿದವನೆ), ವೃತ್ರಾಸುರನೆಂಬ ಬೆಟ್ಟಕ್ಕೆ ವಜ್ರಾಯುಧದಂತಿರುವವನೆ (ವೃತ್ರಾಸುರನನ್ನು ಸಂಹರಿಸಿದವನೆ), ಬ್ರಹ್ಮ, ವಿಷ್ಣು, ರುದ್ರರಿಂದ ಪೋಷಿತರಾದ ಎಲ್ಲಾ ದೇವತೆಗಳ ತಲೆಯ ಕಿರೀಟಗಳು ಪಾದದ ಮೇಲಿರುವವನೆ (ದೇವತೆಗಳಿಂದ ನಮಸ್ಕರಿಸಲ್ಪಡುವವನೆ) ಎಂದು ವಂದಿಮಾಗಧರು ಇಂದ್ರನನ್ನು ಹೊಗಳಿದರು.

ಅರ್ಥ:
ನಮುಚಿ:ಜಿಹ್ವಾಭಿಮಾನಿ ದೈತ್ಯ; ಮಸ್ತಕ: ತಲೆ; ಶೂಲ: ಚೂಪಾದ ತುದಿಯುಳ್ಳ ಒಂದು ಬಗೆಯ ಆಯುಧ; ಬಲ:ಒಬ್ಬ ರಾಕ್ಷನಸ ಹೆಸರು; ತಮಸ: ಕತ್ತಲೆ; ಭಾಸ್ಕರ: ಸೂರ್ಯ; ಜಂಭ: ರಾಕ್ಷಸನ ಹೆಸರು; ವಿಕ್ರಮ:ಪರಾಕ್ರಮಿ; ಮಹಾಂಬುಧಿ: ದೊಡ್ಡ ಸಾಗರ; ಕುಂಭ: ಕಳಶ; ಸಂಭವ: ಹುಟ್ಟಿದ; ಕುಂಭಸಂಭವ: ಅಗಸ್ತ್ಯ; ವೃತ್ರ: ರಾಕ್ಷಸನ ಹೆಸರು; ಗಿರಿ: ಬೆಟ್ಟ; ವಜ್ರ: ಆಯುಧದ ಹೆಸರು; ಕಮಲಭವ: ಬ್ರಹ್ಮ; ಹರ: ಶಿವ; ಹೊರೆ: ಹತ್ತಿರ, ಸಮೀಪ; ಅಮಿತ: ಮಿತವಲ್ಲದ; ಸುರಗಣ: ದೇವತೆಗಳ ಸಮೂಹ; ಮೌಳಿ: ಶಿರ; ಮಣಿ: ಮಾಣಿಕ್ಯ; ಸಂಕ್ರಮಣ: ಚಲಿಸುವಿಕೆ; ಚತುರ: ಜಾಣ; ಪದಾಬ್ಜ: ಪಾದಪದ್ಮ; ವಂದಿ: ಹೊಗಳುಭಟ್ಟ; ಸಂದೋಹ: ಗುಂಪು;

ಪದವಿಂಗಡಣೆ:
ನಮುಚಿ +ಮಸ್ತಕ+ಶೂಲ +ಬಲ+ಸಂ
ತಮಸ +ಭಾಸ್ಕರ +ಜಂಭ +ಭುಜ+ ವಿ
ಕ್ರಮ+ ಮಹಾಂಬುಧಿ+ ಕುಂಭಸಂಭವ+ ವೃತ್ರ+ಗಿರಿ+ವಜ್ರ
ಕಮಲಭವ+ ಹರ+ ವಿಷ್ಣು+ ಹೊರೆಗಾದ್
ಅಮಿತ+ ಸುರಗಣ+ ಮೌಳಿಮಣಿ+ ಸಂ
ಕ್ರಮಣ +ಚತುರ +ಪದಾಬ್ಜ+ವೆಂದುದು +ವಂದಿ +ಸಂದೋಹ

ಅಚ್ಚರಿ:
(೧) ನಮುಚಿ, ಬಲ, ಜಂಭ, ವೃತ್ರ – ರಾಕ್ಷಸರ ಹೆಸರು
(೨) ಕೊಂದವನೆ ಎಂದು ಹೇಳಲು ೪ ಬಗೆಯ ಪ್ರಯೋಗ (ಅ) ಮಸ್ತಕಶೂಲ (ಆ) ತಮಸ ಭಾಸ್ಕರ (ಇ) ಮಹಾಂಬುಧಿ ಕುಂಭಸಂಭವ (ಈ)ಗಿರಿವಜ್ರ
(೩) ಅಗಸ್ತ್ಯ – ಕುಂಭಸಂಭವ ಪದದ ಬಳಕೆ