ಪದ್ಯ ೪೧: ದುರ್ಯೋಧನನು ತನ್ನ ಪಾಡನ್ನು ಹೇಗೆ ವಿವರಿಸಿದ?

ರಣಮುಖದೊಳೀ ಕ್ಷತ್ರಧರ್ಮದ
ಕುಣಿಕೆ ತಪ್ಪದೆ ವೇದಶಾಸ್ತ್ರದ
ಭಣಿತೆ ನೋಯದೆ ವೀರವೃತ್ತಿಯ ಪದದ ಪಾಡರಿದು
ಸೆನಸು ಸೋಂಕಿದ ಛಲದ ವಾಸಿಯೊ
ಳಣುವ ಹಿಂಗದೆ ಜೀವದಾಸೆಗೆ
ಮಣಿಯದಳಿದುದನೆಲ್ಲ ಬಲ್ಲರು ಕೃಷ್ಣ ಕೇಳೆಂದ (ಗದಾ ಪರ್ವ, ೮ ಸಂಧಿ, ೪೧ ಪದ್ಯ)

ತಾತ್ಪರ್ಯ:
ಎಲೈ ಕೃಷ್ಣ ಕೇಳು, ಈ ಯುದ್ಧದಲ್ಲಿ ಕ್ಷತ್ರಿಯ ಧರ್ಮವನ್ನು ಮೀರದೆ, ವೇದಶಾಸ್ತ್ರಗಳ ನಿಯಮಕ್ಕೆ ತಪ್ಪದೆ, ವೀರನ ನಡತೆಯ ರೀತಿಯನ್ನರಿತು ತಪ್ಪದೆ ಕೋಪಯುಕ್ತವಾದ ನನ್ನ ಛಲವನ್ನು ಅಣು ಮಾತ್ರವೂ ಬಿಡದೆ, ಜೀವಕ್ಕೆ ಆಶೆಪಡದೆ ಪರಾಜಿತನಾದುದನ್ನು ಎಲ್ಲರೂ ಬಲ್ಲರು ಎಂದು ದುರ್ಯೋಧನನು ಹೇಳಿದನು.

ಅರ್ಥ:
ರಣ: ಯುದ್ಧ; ಮುಖ: ಆನನ; ಧರ್ಮ: ಧಾರಣೆ ಮಾಡಿದುದು; ಕುಣಿಕೆ: ಸರಗಂಟು, ಕೊನೆ; ವೇದ: ಅರಿವು, ತಿಳಿವಳಿಕೆ; ಶಾಸ್ತ್ರ: ಧಾರ್ಮಿಕ ವಿಷಯ; ಭಣಿತೆ: ಮಾತು, ಹೇಳಿಕೆ; ನೋವು: ಪೆಟ್ಟು; ವೀರ: ಶೂರ, ಪರಾಕ್ರಮ; ವೃತ್ತಿ: ಕಾರ್ಯ; ಪದ: ಚಲನೆ; ಪಾಡು: ರೀತಿ; ಅರಿ: ತಿಳಿ; ಸೆಣಸು: ಹೋರಾಡು; ಸೋಂಕು: ಅಂಟು, ತಾಗು; ಛಲ: ದೃಢ ನಿಶ್ಚಯ; ವಾಸಿ: ವಚನ, ಆಣೆ; ಅಣು: ಸ್ವಲ್ಪ; ಹಿಂಗು: ಹಿಂಜರಿ, ಬತ್ತು; ಜೀವ: ಪ್ರಾಣ; ಆಸೆ: ಇಚ್ಛೆ; ಮಣಿ: ಬಾಗು; ಅಳಿ: ಸಾವು, ನಾಶ; ಬಲ್ಲರು: ತಿಳಿದಿರುವರು; ಕೇಳು: ಆಲಿಸು;

ಪದವಿಂಗಡಣೆ:
ರಣಮುಖದೊಳ್+ಈ+ ಕ್ಷತ್ರಧರ್ಮದ
ಕುಣಿಕೆ +ತಪ್ಪದೆ +ವೇದಶಾಸ್ತ್ರದ
ಭಣಿತೆ +ನೋಯದೆ +ವೀರ+ವೃತ್ತಿಯ +ಪದದ +ಪಾಡರಿದು
ಸೆಣಸು +ಸೋಂಕಿದ +ಛಲದ +ವಾಸಿಯೊಳ್
ಅಣುವ +ಹಿಂಗದೆ +ಜೀವದಾಸೆಗೆ
ಮಣಿಯದ್+ಅಳಿದುದನ್+ಎಲ್ಲ+ ಬಲ್ಲರು +ಕೃಷ್ಣ+ ಕೇಳೆಂದ

ಅಚ್ಚರಿ:
(೧) ತಪ್ಪದೆ, ನೋಯದೆ, ಹಿಂಗದೆ – ಪ್ರಾಸ ಪದಗಳ ಬಳಕೆ

ಪದ್ಯ ೩೩: ಕೃಪ ಅಶ್ವತ್ಥಾಮರು ಕೌರವನಿಗೆ ಯಾವ ಅಭಯವನ್ನು ನೀಡಿದರು?

ಅರಸ ಹೊರವಡು ಭೀಮಪಾರ್ಥರ
ಕರುಳ ಬೀಯವ ಭೂತ ನಿಕರಕೆ
ಬರಿಸುವೆವು ನೀ ನೋಡಲೊಡ್ಡುವೆವಸ್ತ್ರಸಂತತಿಯ
ಗರುವರಿಹರೇ ನೀರೊಳಾ ಹಿಮ
ಕರ ಮಹಾನ್ವಯ ಕೀರ್ತಿ ಜಲದೊಳು
ಕರಗದಿಹುದೇ ಕಷ್ಟವೃತ್ತಿಯದೆಂದರವನಿಪನ (ಗದಾ ಪರ್ವ, ೪ ಸಂಧಿ, ೩೩ ಪದ್ಯ)

ತಾತ್ಪರ್ಯ:
ಒಡೆಯ, ನೀರಿನಿಂದ ಹೊರಕ್ಕೆ ಬಾ, ನಿನ್ನೆದುರಿನಲ್ಲೇ ನಮ್ಮ ಅಸ್ತ್ರಗಳನ್ನೆಲ್ಲಾ ಒಡ್ಡಿ ಭೀಮಾರ್ಜುನರ ಕರುಳನ್ನು ಹೊರಗೆಳೆದು ಭೂತಗಳಿಗೆ ಬಡಿಸುತ್ತೇವೆ. ನಿನ್ನಂತಹ ಸ್ವಾಭಿಮಾನಿ ಶೂರರು ಎಲ್ಲಾದರೂ ನೀರಿನಲ್ಲಿ ಅಡಗಿಕೊಳ್ಳುವರೇ? ಚಂದ್ರವಂಶದ ಕೀರ್ತಿಯು ನಿನ್ನಿಂದಾಗಿ ನೀರಿನಲ್ಲಿ ಕರಗದಿರುವುದೇ?

ಅರ್ಥ:
ಅರಸ: ರಾಜ; ಹೊರವಡು: ಹೊರಗೆ ಬಾ; ಕರುಳು: ಪಚನಾಂಗ; ಬೀಯ: ಉಣಿಸು, ಆಹಾರ; ಭೂತ: ಬೇತಾಳ; ನಿಕರ: ಗುಂಪು; ಬರಿಸು: ತೃಪ್ತಿಪಡಿಸು; ನೋಡು: ವೀಕ್ಷಿಸು; ಒಡ್ಡು: ನೀಡು; ಅಸ್ತ್ರ: ಶಸ್ತ್ರ, ಆಯುಧ; ಸಂತತಿ: ಗುಂಪು; ಗರುವ: ಶ್ರೇಷ್ಠ, ಬಲಶಾಲಿ; ನೀರು: ಜಲ; ಹಿಮಕರ: ಚಂದ್ರ; ಮಹಾನ್ವಯ: ವಂಶ; ಕೀರ್ತಿ: ಯಶಸ್ಸು; ಜಲ: ನೀರು; ಕರಗು: ಮಾಯವಾಗು; ಕಷ್ಟ: ಕಠಿಣ; ವೃತ್ತಿ: ಸ್ಥಿತಿ; ಅವನಿಪ: ರಾಜ;

ಪದವಿಂಗಡಣೆ:
ಅರಸ+ ಹೊರವಡು +ಭೀಮ+ಪಾರ್ಥರ
ಕರುಳ +ಬೀಯವ +ಭೂತ +ನಿಕರಕೆ
ಬರಿಸುವೆವು +ನೀ +ನೋಡಲ್+ಒಡ್ಡುವೆವ್+ಅಸ್ತ್ರ+ಸಂತತಿಯ
ಗರುವರಿಹರೇ +ನೀರೊಳಾ +ಹಿಮ
ಕರ +ಮಹಾನ್ವಯ +ಕೀರ್ತಿ +ಜಲದೊಳು
ಕರಗದಿಹುದೇ +ಕಷ್ಟ+ವೃತ್ತಿಯದೆಂದರ್+ಅವನಿಪನ

ಅಚ್ಚರಿ:
(೧) ರೂಪಕದ ಪ್ರಯೋಗ – ಹಿಮಕರ ಮಹಾನ್ವಯ ಕೀರ್ತಿ ಜಲದೊಳು ಕರಗದಿಹುದೇ ಕಷ್ಟವೃತ್ತಿಯದೆಂದರವನಿಪನ
(೨) ಚಂದ್ರವಂಶ ಎಂದು ಕರೆಯುವ ಪರಿ – ಹಿಮಕರ ಮಹಾನ್ವಯ