ಪದ್ಯ ೩: ಯಾವ ಜನರು ಹಸ್ತಿನಾಪುರಕ್ಕೆ ಬಂದು ಧರ್ಮಜನನ್ನು ಕಂಡರು?

ಜಲಧಿ ಮಧ್ಯದ ಕುರುವ ಘಟ್ಟಾ
ವಳಿಯ ಕೊಳ್ಳದ ಕುಹರ ಕುಂಜದ
ನೆಲೆಯ ಗಿರಿಸಾನುಗಳ ಶಿಖರದ ದುರ್ಗವೀಥಿಗಳ
ನೆಲನಶೇಷಪ್ರಜೆ ನಿಖಿಳ ಮಂ
ಡಳಿಕೆ ಮನ್ನೆಯ ವಂದಿಜನ ಸಂ
ಕುಲ ಮತಂಗಜಪುರಿಗೆ ಬಂದುದು ನೃಪನ ಕಾಣಿಕೆಗೆ (ಗದಾ ಪರ್ವ, ೧೩ ಸಂಧಿ, ೩ ಪದ್ಯ)

ತಾತ್ಪರ್ಯ:
ಸಮುದ್ರ ಮಧ್ಯದ ದ್ವೀಪಗಳು, ಘಟ್ಟಗಳು, ಕಣಿವೆಗಳು, ಬೆಟ್ಟಗಳು, ಪ್ರಸ್ಥಭೂಮಿಗಳು, ಶಿಖರಗಳು, ಕೋಟೆಗಳಲ್ಲಿದ್ದ ಎಲ್ಲಾ ಮಾಂಡಲಿಕರು, ನಾಯಕರು, ವಂದಿಗಳು ಹಸ್ತಿನಾಪುರಕ್ಕೆ ಬಂದು ದೊರೆಗೆ ಕಾಣಿಕೆ ಕೊಟ್ಟರು.

ಅರ್ಥ:
ಜಲಧಿ: ಸಾಗರ; ಮಧ್ಯ: ನಡುವೆ; ಘಟ್ಟ: ಬೆಟ್ಟಗಳ ಸಾಲು; ಆವಳಿ: ಸಾಲು; ಕೊಳ್ಳ: ತಗ್ಗಾಗಿರುವ ಪ್ರದೇಶ, ಹಳ್ಳ; ಕುಹರ: ಗವಿ, ಗುಹೆ; ಕುಂಜ: ಗುಹೆ; ನೆಲೆ: ಭೂಮಿ; ಗಿರಿ: ಬೆಟ್ಟ; ಸಾನು: ಬೆಟ್ಟದ ಮೇಲಿನ ಸಮತಲವಾದ ಪ್ರದೇಶ, ಪ್ರಸ್ಥಭೂಮಿ; ಶಿಖರ: ಬೆಟ್ಟದ ತುದಿ; ದುರ್ಗ: ಕೋಟೆ; ವೀಥಿ: ಮಾರ್ಗ; ಶೇಷ: ಉಳಿದ; ಪ್ರಜೆ: ನಾಗರೀಕ; ವಂದಿ: ಹೊಗಳುಭಟ್ಟ; ಸಂಕುಲ: ಗುಂಪು; ಮತಂಗಜ: ಆನೆ; ಬಂದು: ಆಗಮಿಸು; ನೃಪ: ರಾಜ; ಕಾಣಿಕೆ: ಕೊಡುಗೆ;

ಪದವಿಂಗಡಣೆ:
ಜಲಧಿ +ಮಧ್ಯದ+ ಕುರುವ +ಘಟ್ಟಾ
ವಳಿಯ +ಕೊಳ್ಳದ +ಕುಹರ +ಕುಂಜದ
ನೆಲೆಯ +ಗಿರಿಸಾನುಗಳ +ಶಿಖರದ +ದುರ್ಗ+ವೀಥಿಗಳ
ನೆಲನ+ಶೇಷ+ಪ್ರಜೆ+ ನಿಖಿಳ +ಮಂ
ಡಳಿಕೆ +ಮನ್ನೆಯ +ವಂದಿಜನ +ಸಂ
ಕುಲ +ಮತಂಗಜಪುರಿಗೆ +ಬಂದುದು +ನೃಪನ +ಕಾಣಿಕೆಗೆ

ಅಚ್ಚರಿ:
(೧) ಹಸ್ತಿನಾಪುರಕ್ಕೆ ಮತಂಗಜ ಪದದ ಬಳಕೆ
(೨) ಕ ಕಾರದ ತ್ರಿವಳಿ ಪದ – ಕೊಳ್ಳದ ಕುಹರ ಕುಂಜದ

ಪದ್ಯ ೪೭: ಕೃಷ್ಣನು ಭೀಮನಲ್ಲಿ ಹೇಗೆ ಜೀವ ತುಂಬಿದನು?

ಅರಸ ಕೇಳಾಕ್ಷಣದೊಳನಿಲ
ಸ್ಮರಣೆಯನು ಹರಿ ಮಾಡಿದನು ಸಂ
ಚರಿಸಿದನು ತತ್ತನುಜನಂಗೋಪಾಂಗವೀಥಿಯಲಿ
ತರತರದ ನಾಡಿಗಳೊಳಗೆವಿ
ಸ್ತರಿಸಿ ಮೂಲಾಧಾರದಲಿ ಚೇ
ತರಿಸಿ ಸರ್ವಾಂಗದಲಿ ಜೀವಸಮೀರ ಪಸರಿಸಿದ (ಗದಾ ಪರ್ವ, ೭ ಸಂಧಿ, ೪೭ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಆ ಸಮಯದಲ್ಲಿ ಶ್ರೀಕೃಷ್ಣನು ವಾಯುದೇವನನ್ನು ಸ್ಮರಿಸಿದನು. ಆತನು ತನ್ನ ಮಗನ ಅಂಗೋಪಾಂಗಗಳಲ್ಲಿ ಎಲ್ಲಾ ನಾಡಿಗಳಲ್ಲೂ ಆಡಿ, ಮೂಲಾಧಾರದಲ್ಲಿ ಚೇತನವನ್ನು ನೀಡಿದನು, ಭೀಮನು ಸಜೀವನಾದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಕ್ಷಣ: ಸಮಯ; ಅನಿಲ: ವಾಯು; ಸ್ಮರಣೆ: ಜ್ಞಾಪಕ; ಹರಿ: ಕೃಷ್ಣ; ಸಂಚರಿಸು: ಹರಿದಾಡು; ತನುಜ: ಮಗ; ಅಂಗೋಪಾಂಗ: ದೇಹದ ಅಂಗಗಳು; ವೀಥಿ: ಮಾರ್ಗ, ದಾರಿ; ತರತರ: ಹಲವಾರು; ನಾಡಿ: ಧಮನಿ; ವಿಸ್ತರಿಸು: ಹರಡು; ಮೂಲಾಧಾರ: ಕುಂಡಲಿನಿಯ ಮೂಲ ಸ್ಥಾನ; ಚೇತರಿಸು: ಎಚ್ಚರಿಸು; ಅಂಗ: ದೇಹದ ಭಾಗ; ಜೀವ: ಪ್ರಾಣ; ಸಮೀರ: ವಾಯು; ಪಸರಿಸು: ಹರಡು; ಅಗೆ: ಅಂಕುರ;

ಪದವಿಂಗಡಣೆ:
ಅರಸ +ಕೇಳ್+ಆ+ ಕ್ಷಣದೊಳ್+ಅನಿಲ
ಸ್ಮರಣೆಯನು +ಹರಿ +ಮಾಡಿದನು +ಸಂ
ಚರಿಸಿದನು +ತತ್+ತನುಜನ್+ಅಂಗೋಪಾಂಗ+ವೀಥಿಯಲಿ
ತರತರದ +ನಾಡಿಗಳೊಳ್+ಅಗೆ+ವಿ
ಸ್ತರಿಸಿ +ಮೂಲಾಧಾರದಲಿ +ಚೇ
ತರಿಸಿ +ಸರ್ವಾಂಗದಲಿ +ಜೀವ+ಸಮೀರ +ಪಸರಿಸಿದ

ಅಚ್ಚರಿ:
(೧) ಜೀವ ತುಂಬಿದ ಪರಿ – ತರತರದ ನಾಡಿಗಳೊಳಗೆವಿಸ್ತರಿಸಿ ಮೂಲಾಧಾರದಲಿ ಚೇತರಿಸಿ ಸರ್ವಾಂಗದಲಿ ಜೀವಸಮೀರ ಪಸರಿಸಿದ
(೨) ಅನಿಲ, ಸಮೀರ – ಸಮಾನಾರ್ಥಕ ಪದ

ಪದ್ಯ ೧೧: ಹಸ್ತಿನಾಪುರದ ವಾಣಿಜ್ಯ ವೀಥಿಯ ಸ್ಥಿತಿ ಹೇಗಿತ್ತು?

ಕೂಡೆ ಗಜಬಜವಾಯ್ತು ಪಾಳೆಯ
ವೋಡಿತಲ್ಲಿಯದಲ್ಲಿ ಜನವ
ಲ್ಲಾಡಿದುದು ಕ್ರಯವಿಕ್ರಯದ ವಾಣಿಜ್ಯವೀಥಿಯಲಿ
ಹೂಡಿದವು ಬಂಡಿಗಳು ಹರಿದೆಡೆ
ಯಾಡಿದವು ಕೊಲ್ಲಾರಿಗಳು ರಥ
ಗೂಡಿದವು ಬದ್ದರದ ದಂಡಿಗೆ ಬಂದವರಮನೆಗೆ (ಗದಾ ಪರ್ವ, ೪ ಸಂಧಿ, ೧೧ ಪದ್ಯ)

ತಾತ್ಪರ್ಯ:
ಆ ಕ್ಷಣದಲ್ಲೇ ಗಲಭೆ ಆರಂಭವಾಯಿತು. ಕೆಲ ಜನರು ಓಡಿ ಹೋದರು. ಅಂಗಡಿ ಬೀದಿಯಲ್ಲಿ ಜನ ಅಲುಗಾಡಿದರು. ಬಂಡಿಗಳನ್ನು ಹೂಡಿದರು. ಕಮಾನು ಬಂಡಿಗಳು ಓಡಾಡಿದವು. ರಥಗಳೊಡನೆ ಬದ್ದರದ ಪಲ್ಲಕ್ಕಿಗಳು ಅರಮನೆಗೆ ಬಂದವು.

ಅರ್ಥ:
ಕೂಡು: ಜೊತೆ; ಗಜಬಜ: ಗೊಂದಲ; ಪಾಳೆಯ: ಬಿಡಾರ; ಓಡು: ಧಾವಿಸು; ಜನ: ನರರ ಗುಂಪು; ಅಲ್ಲಾಡು: ತೂಗಾಡು; ಕ್ರಯ: ಬೆಲೆ, ಕಿಮ್ಮತ್ತು; ವಿಕ್ರಯ: ಮಾರಾಟ, ಬಿಕರಿ; ವೀಥಿ: ದಾರಿ, ಮಾರ್ಗ; ವಾಣಿಜ್ಯ: ವ್ಯಾಪಾರ; ಹೂಡು: ಅಣಿಗೊಳಿಸು; ಬಂಡಿ: ರಥ; ಹರಿ: ಕಡಿ, ಕತ್ತರಿಸು; ಎಡೆಯಾಡು: ಅತ್ತಿತ್ತ ಸುತ್ತಾಡು; ಕೊಲ್ಲಾರಿ: ಮುಖಂಡ, ಪ್ರಮುಖ; ರಥ: ಬಂಡಿ; ಬದ್ದರ: ಮಂಗಳಕರವಾದುದು; ದಂಡಿ: ಘನತೆ, ಹಿರಿಮೆ, ಶಕ್ತಿ; ಅರಮನೆ: ರಾಜರ ಆಲಯ; ಬಂದು: ಆಗಮಿಸು;

ಪದವಿಂಗಡಣೆ:
ಕೂಡೆ +ಗಜಬಜವಾಯ್ತು +ಪಾಳೆಯವ್
ಓಡಿತ್+ಅಲ್ಲಿಯದಲ್ಲಿ +ಜನವ್
ಅಲ್ಲಾಡಿದುದು +ಕ್ರಯ+ವಿಕ್ರಯದ +ವಾಣಿಜ್ಯ+ವೀಥಿಯಲಿ
ಹೂಡಿದವು +ಬಂಡಿಗಳು+ ಹರಿದೆಡೆ
ಆಡಿದವು +ಕೊಲ್ಲಾರಿಗಳು +ರಥ
ಕೂಡಿದವು +ಬದ್ದರದ +ದಂಡಿಗೆ +ಬಂದವ್+ಅರಮನೆಗೆ

ಅಚ್ಚರಿ:
(೧) ಗಜಬಜ, ಕ್ರಯವಿಕ್ರಯ – ಪದಗಳ ಬಳಕೆ
(೨) ಹೂಡಿ, ಆಡಿ, ಓಡಿ, ಅಲ್ಲಾಡಿ, ಕೂಡಿ – ಪ್ರಾಸ ಪದಗಳು