ಪದ್ಯ ೧೮: ಹನುಮಂತನು ಭೀಮನಿಗೆ ಏನು ಮಾಡಲು ಹೇಳಿದನು?

ನೀವು ಬಲ್ಲಿದರಿದಕೆ ಸಂಶಯ
ವಾವುದಲ್ಲದೊಡೀಮದದ್ವಿಭ
ವೀ ವಿಹಗಕುಲವೀ ಮೃಗ ವ್ರಜವಂಜುವುದೆ ನಿಮಗೆ
ನಾವು ವೃದ್ಧರು ನಮ್ಮ ಬಾಲವ
ನಾವು ಹದುಳಿಸಲಾರೆವೀಗಳು
ನೀವು ತೊಲಗಿಸಿ ಬಿಜಯ ಮಾಡುವುದೆಂದನಾ ಹನುಮ (ಅರಣ್ಯ ಪರ್ವ, ೧೧ ಸಂಧಿ, ೧೮ ಪದ್ಯ)

ತಾತ್ಪರ್ಯ:
ಹನುಮಂತನು ಭೀಮನ ಮಾತುಗಳನ್ನು ಕೇಳಿ, ನಿಜ ನೀವು ಬಲಶಾಲಿಗಳು, ಇದಕ್ಕೇನು ಅನುಮಾನವಿಲ್ಲ, ಇಲ್ಲದಿದ್ದರೆ ಈ ಮದದಾನೆಗಳು, ಮೃಗ ಪಕ್ಷಿಗಳ ಸಂಕುಲವು ನಿಮಗೆ ಹೆದರುತ್ತಿದ್ದವೇ? ನಾವಾದರೋ ಮುದುಕರು, ನಮ್ಮ ಬಾಲವನ್ನು ವಶದಲ್ಲಿಟ್ಟುಕೊಳ್ಳಲು ಸಮರ್ಥರಲ್ಲ. ಆದುದರಿಂದ ನಮ್ಮ ಬಾಲವನ್ನು ಆಚೆಗೆ ಸರಿಸಿ ಮುಂದೆಸಾಗಿರಿ ಎಂದು ಭೀಮನಿಗೆ ಹನುಮನು ತಿಳಿಸಿದನು.

ಅರ್ಥ:
ಬಲ್ಲಿದ: ಬಲಿಷ್ಠ; ಸಂಶಯ: ಅನುಮಾನ, ಸಂದೇಹ; ಇಭ: ಆನೆ; ಮದ: ಅಮಲು, ಸೊಕ್ಕು; ವಿಹಗ: ಪಕ್ಷಿ; ಕುಲ: ವಂಶ; ಮೃಗ: ಪ್ರಾಣಿ; ವ್ರಜ: ಗುಂಪು; ಅಂಜು: ಹೆದರು; ವೃದ್ಧ: ಮುಪ್ಪು; ಬಾಲ: ಪುಚ್ಛ; ಹದುಳ: ಕ್ಷೇಮ, ಆರೋಗ್ಯ; ತೊಲಗಿಸು: ಹೋಗಲಾಡಿಸು; ಬಿಜಯಂಗೈ: ದಯಮಾಡಿಸು, ನಡೆ;

ಪದವಿಂಗಡಣೆ:
ನೀವು +ಬಲ್ಲಿದರ್+ಇದಕೆ +ಸಂಶಯ
ವಾವುದಲ್ಲದೊಡ್+ಈ+ಮದದ್+ಇಭವ್
ಈ+ ವಿಹಗಕುಲವ್+ಈ+ ಮೃಗ +ವ್ರಜವ್+ಅಂಜುವುದೆ +ನಿಮಗೆ
ನಾವು +ವೃದ್ಧರು +ನಮ್ಮ +ಬಾಲವ
ನಾವು +ಹದುಳಿಸಲಾರೆವ್+ಈಗಳು
ನೀವು +ತೊಲಗಿಸಿ+ ಬಿಜಯ+ ಮಾಡುವುದೆಂದನಾ+ ಹನುಮ

ಅಚ್ಚರಿ:
(೧) ಭೀಮನ ಪರಾಕ್ರಮದ ಪರಿಚಯ ಮಾಡುವ ಪರಿ – ನೀವು ಬಲ್ಲಿದರಿದಕೆ ಸಂಶಯ
ವಾವುದಲ್ಲದೊಡೀಮದದ್ವಿಭವೀ ವಿಹಗಕುಲವೀ ಮೃಗ ವ್ರಜವಂಜುವುದೆ ನಿಮಗೆ