ಪದ್ಯ ೪೧: ಕೌರವನು ಭೀಷ್ಮಾದಿಗಳಿಗೆ ಏನು ಹೇಳಿದ?

ಈಸುದಿನ ಸಾಮ್ರಾಜ್ಯ ಸೌಖ್ಯವಿ
ಲಾಸದಲಿ ಬಳಸಿದೆನು ಸಾಕಿ
ನ್ನೀ ಶರೀರವ ನೂಕಿ ನಿಲುವೆನು ಮುಕ್ತಿರಾಜ್ಯದಲಿ
ಆಶೆಯವನಿಯೊಳಿಲ್ಲ ವಿಷಯಾ
ಭ್ಯಾಸಿಗೊಮ್ಮೆ ವಿರಕ್ತಿ ದೆಸೆಯಹು
ದೈಸಲೇ ಗುರು ನೀವು ಬೆಸಸುವುದೆಂದನಾ ಭೂಪ (ಅರಣ್ಯ ಪರ್ವ, ೨೨ ಸಂಧಿ, ೪೧ ಪದ್ಯ)

ತಾತ್ಪರ್ಯ:
ಇಷ್ಟು ದಿನ ಸಾಮ್ರಾಜ್ಯ ವಿಲಾಸದ ಸೌಖ್ಯವನ್ನನುಭವಿಸಿದೆ. ಅದು ಸಾಕಾಯಿತು. ಈ ಶರೀರವನ್ನು ಬಿಟ್ಟು ಮುಕ್ತಿರಾಜ್ಯದಲ್ಲಿ ನಿಲ್ಲುತ್ತೇನೆ. ನನಗೆ ಭೂಮಿಯ ಮೇಲಿನ ಆಶೆಯಿಲ್ಲ. ನಾನು ವಿಷಯಸುಖದಲ್ಲೇ ಮಗ್ನನಾಗಿದ್ದವನು. ಅಂತಹವನಿಗೂ ಒಮ್ಮೆ ವಿರಕ್ತಿ ಬರುತ್ತದೆ, ಆದುದರಿಂದ ನೀವು ಅಪ್ಪಣೆ ನೀಡಬೇಕು ಎಂದು ಗುರುಗಳ ಸ್ಥಾನದಲ್ಲಿದ್ದ ಭೀಷ್ಮಾದಿಗಳನ್ನುದ್ದೇಶಿಸಿ ಹೇಳಿದನು.

ಅರ್ಥ:
ಈಸು: ಇಷ್ಟು; ದಿನ: ದಿವಸ; ಸಾಮ್ರಾಜ್ಯ: ರಾಜ್ಯ, ರಾಷ್ಟ್ರ; ಸೌಖ್ಯ: ಸುಖ; ವಿಲಾಸ: ವಿಹಾರ; ಬಳಸು: ಆವರಿಸುವಿಕೆ; ಸಾಕು: ತಡೆ; ಶರೀರ: ತನು; ನೂಕು: ತಳ್ಳು; ನಿಲುವೆ: ನಿಲ್ಲು; ಮುಕ್ತಿ: ಬಿಡುಗಡೆ, ವಿಮೋಚನೆ; ಆಶೆ: ಆಸೆ, ಬಯಕೆ; ಅವನಿ: ಭೂಮಿ; ವಿಷಯ: ಇಂದ್ರಿಯ ಗೋಚರವಾಗುವ ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧಗಳೆಂಬ ಜ್ಞಾನೇಂದ್ರಿಯಗಳು; ಅಭ್ಯಾಸಿ: ರೂಢಿ ಮಾಡಿಕೊಂಡಿರುವವ; ವಿರಕ್ತಿ: ವೈರಾಗ್ಯ; ದೆಸೆ: ದೆಶೆ, ಅವಸ್ಥೆ; ಐಸಲೇ: ಅಲ್ಲವೇ; ಗುರು: ಆಚಾರ್ಯ; ಬೆಸಸು: ಹೇಳು, ಆಜ್ಞಾಪಿಸು; ಭೂಪ: ರಾಜ;

ಪದವಿಂಗಡಣೆ:
ಈಸುದಿನ+ ಸಾಮ್ರಾಜ್ಯ +ಸೌಖ್ಯ+ವಿ
ಲಾಸದಲಿ +ಬಳಸಿದೆನು+ ಸಾಕಿನ್
ಈ+ ಶರೀರವ +ನೂಕಿ +ನಿಲುವೆನು +ಮುಕ್ತಿ+ರಾಜ್ಯದಲಿ
ಆಶೆ+ಅವನಿಯೊಳಿಲ್ಲ+ ವಿಷಯ
ಅಭ್ಯಾಸಿಗೊಮ್ಮೆ +ವಿರಕ್ತಿ+ ದೆಸೆ+ಅಹುದ್
ಐಸಲೇ +ಗುರು +ನೀವು +ಬೆಸಸುವುದೆಂದನಾ+ ಭೂಪ

ಅಚ್ಚರಿ:
(೧) ಸಾಯುತ್ತೇನೆ ಎಂದು ಹೇಳುವ ಪರಿ – ಈ ಶರೀರವ ನೂಕಿ ನಿಲುವೆನು ಮುಕ್ತಿರಾಜ್ಯದಲಿ