ಪದ್ಯ ೭೬: ಕೃಷ್ಣನನ್ನು ಅರ್ಜುನನು ಏನೆಂದು ಬೇಡಿದನು?

ದೇವ ಭಕ್ತಜನಾರ್ತಿಪಾಲಕ
ದೇವ ಬಹಳಕೃಪಾಮಹಾರ್ಣವ
ದೇವ ಸರ್ವೇಶ್ವರ ಸದಾತ್ಮಕ ಸಕಲ ನಿಷ್ಕಳನೆ
ಸೇವಕರಲಾರೈವರೇ ಸುಗು
ಣಾವಗುಣವನು ನಿಮ್ಮ ಭೃತ್ಯನ
ಭಾವ ಬೆಚ್ಚಿತು ವಿಶ್ವರೂಪವ ಬೀಳುಕೊಡಿಯೆಂದ (ಭೀಷ್ಮ ಪರ್ವ, ೩ ಸಂಧಿ, ೭೬ ಪದ್ಯ)

ತಾತ್ಪರ್ಯ:
ದೇವ ನೀನು ಭಕ್ತಜನರ ಕಷ್ಟಗಳನ್ನು ಪರಿಹರಿಸಿ ಕಾಪಾಡುವವನು, ದೇವ ನೀನು ಕೃಪಾಸಾಗರ, ಸರ್ವೇಶ್ವರ, ಸದಾತ್ಮಕ, ಸಕಲ ನಿಷ್ಕಳನಾದ ದೇವನೇ ಸೇವಕರಲ್ಲಿ ಗುಣ ಅವಗುಣಗಳನ್ನು ನೋಡಬಹುದೇ! ನಿನ್ನ ಸೇವಕನಾದ ನನ್ನ ಭಾವ ಬೆಚ್ಚಿದೆ ನಿನ್ನ ವಿಶ್ವರೂಪವನ್ನು ಬಿಟ್ಟು ಮೊದಲಿನಂತಾಗು.

ಅರ್ಥ:
ದೇವ: ಭಗವಂತ; ಭಕ್ತ: ಆರಾಧಕ; ಆರ್ತಿ:ವ್ಯಥೆ, ಚಿಂತೆ; ಪಾಲಕ: ಕಾಪಾಡುವ; ಬಹಳ: ತುಂಬ; ಕೃಪೆ: ದಯೆ; ಮಹಾರ್ಣವ: ಮಹಾಸಾಗರ; ಸರ್ವೇಶ್ವರ: ಒಡೆಯ, ಪ್ರಭು; ಆತ್ಮ: ಜೀವ; ನಿಷ್ಕಳ: ಪರಿಶುದ್ಧ; ಸೇವಕ: ದಾಸ; ಸುಗುಣ: ಒಳ್ಳೆಯ ನಡತೆ; ಅವಗುಣ: ದುರ್ಗುಣ; ಭೃತ್ಯ: ಆಳು, ಸೇವಕ; ಭಾವ: ಅಂತರ್ಗತ ಅರ್ಥ; ಬೆಚ್ಚು: ಭಯ, ಹೆದರಿಕೆ; ವಿಶ್ವರೂಪ: ಎಲ್ಲ ಕಡೆಗೂ ವ್ಯಾಪಿಸಿದ (ಕೃಷ್ಣನ) ರೂಪ; ಬೀಳುಕೊಡು: ತೆರಳು;

ಪದವಿಂಗಡಣೆ:
ದೇವ +ಭಕ್ತ+ಜನ+ಆರ್ತಿ+ಪಾಲಕ
ದೇವ +ಬಹಳ+ಕೃಪ+ಮಹಾರ್ಣವ
ದೇವ +ಸರ್ವೇಶ್ವರ +ಸದಾತ್ಮಕ +ಸಕಲ+ ನಿಷ್ಕಳನೆ
ಸೇವಕರಲ್+ಆರೈವರೇ +ಸುಗು
ಣ+ಅವಗುಣವನು +ನಿಮ್ಮ +ಭೃತ್ಯನ
ಭಾವ +ಬೆಚ್ಚಿತು+ ವಿಶ್ವರೂಪವ +ಬೀಳುಕೊಡಿಯೆಂದ

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸರ್ವೇಶ್ವರ ಸದಾತ್ಮಕ ಸಕಲ
(೨) ಮೊದಲಿನಂತಾಗು ಎಂದು ಹೇಳುವ ಪರಿ – ವಿಶ್ವರೂಪವ ಬೀಳುಕೊಡಿಯೆಂದ

ಪದ್ಯ ೬೭: ವಿಶ್ವರೂಪವು ಹೇಗೆ ಕಂಡಿತು?

ಬಿಳಿದು ಕರಿದೆಂಬಾರು ವರ್ಣದ
ಹೊಲಬು ಹೊದ್ದದ ಸೂರ್ಯಕೋಟಿಯ
ಹೊಳಹು ನಖದೀಧಿತಿಯ ಹೊಲದ ನಿಜದ ಹೊಸಪರಿಯ
ಅಳವಿನಳತೆಯ ಜಗದ ವಾರ್ತೆಯ
ಸುಳಿವು ಸೋಂಕದ ಸಕಲ ಲೋಕ
ಪ್ರಳಯ ಕಾರಣ ತೆಗೆದನಗ್ಗದ ವಿಶ್ವರೂಪವನು (ಭೀಷ್ಮ ಪರ್ವ, ೩ ಸಂಧಿ, ೬೭ ಪದ್ಯ)

ತಾತ್ಪರ್ಯ:
ಬಿಳುಪು ಕರಿ ಎಂಬ ಆರು ಬಣ್ಣಗಳ ದಾರಿಯನ್ನು ಮೀರಿದ, ಕೋಟಿ ಸೂರ್ಯರನ್ನು ಮೀರಿಸುವ ಉಗುರಿನ ಕಾಂತಿಯುಳ್ಳ ಹೊಸರೀತಿಯ, ಅಳೆಯಲು ಸಾಧ್ಯವಾಗದ ಲೋಕವ್ಯವಹಾರವು ಮುಟ್ಟಲಾಗದ, ಸಮಸ್ತಲೋಕಗಳ ಪ್ರಳಯಕಾರಣನಾದ ಶ್ರೀಕ್ರಷ್ಣನು ತನ್ನ ವಿಶ್ವರೂಪವನ್ನು ತಾಳಿದನು.

ಅರ್ಥ:
ಬಿಳಿ: ಶ್ವೇತ; ಕರಿ: ಕಪ್ಪು; ವರ್ಣ: ಬಣ್ಣ; ಹೊಲಬು: ದಾರಿ, ಪಥ, ಮಾರ್ಗ; ಹೊದ್ದು: ಹೊಂದು, ಸೇರು; ಸೂರ್ಯ: ರವಿ; ಕೋಟಿ: ಅಸಂಖ್ಯಾತ; ಹೊಳಹು: ಪ್ರಕಾಶ; ನಖ: ಉಗುರು; ದೀಧಿತಿ: ಹೊಳಪು, ಕಾಂತಿ; ಹೋಲು: ಸದೃಶವಾಗು; ನಿಜ: ತನ್ನ; ಹೊಸ: ನವೀನ; ಪರಿ: ರೂಪ; ಅಳವು: ಅಳತೆ; ಅಳತೆ:ಪರಿಮಾಣ; ಜಾಗ: ಪ್ರಪಂಚ; ವಾರ್ತೆ: ವಿಷಯ; ಸುಳಿವು: ಗುರುತು, ಕುರುಹು; ಸೋಂಕು: ತಗ್ಗು; ಸಕಲ: ಎಲ್ಲಾ; ಲೋಕ: ಪ್ರಪಂಚ; ಪ್ರಳಯ: ಕಲ್ಪದ ಕೊನೆಯಲ್ಲಿ ಉಂಟಾಗುವ ಪ್ರಪಂಚದ ನಾಶ, ಅಳಿವು; ಕಾರಣ: ನಿಮಿತ್ತ; ತೆಗೆ: ಹೊರತರು; ಅಗ್ಗ: ಶ್ರೇಷ್ಠ; ವಿಶ್ವರೂಪ: ಎಲ್ಲ ಕಡೆಗೂ ವ್ಯಾಪಿಸಿದ (ಕೃಷ್ಣನ) ರೂಪ;

ಪದವಿಂಗಡಣೆ:
ಬಿಳಿದು +ಕರಿದೆಂಬ್ +ಆರು +ವರ್ಣದ
ಹೊಲಬು +ಹೊದ್ದದ +ಸೂರ್ಯ+ಕೋಟಿಯ
ಹೊಳಹು+ ನಖ+ದೀಧಿತಿಯ+ ಹೋಲದ+ ನಿಜದ +ಹೊಸ+ಪರಿಯ
ಅಳವಿನ್ +ಅಳತೆಯ +ಜಗದ+ ವಾರ್ತೆಯ
ಸುಳಿವು+ ಸೋಂಕದ +ಸಕಲ+ ಲೋಕ
ಪ್ರಳಯ +ಕಾರಣ+ ತೆಗೆದನ್+ಅಗ್ಗದ+ ವಿಶ್ವರೂಪವನು

ಅಚ್ಚರಿ:
(೧) ಬಿಳಿ ಕರಿ – ಬಣ್ಣಗಳ ವಿರುದ್ಧ ಪದ
(೨) ವಿರಾಟ ರೂಪದ ವರ್ಣನೆ – ಬಿಳಿದು ಕರಿದೆಂಬಾರು ವರ್ಣದ ಹೊಲಬು ಹೊದ್ದದ ಸೂರ್ಯಕೋಟಿಯ ಹೊಳಹು ನಖದೀಧಿತಿಯ ಹೊಲದ ನಿಜದ ಹೊಸಪರಿಯ

ಪದ್ಯ ೩೦: ವಿಶ್ವರೂಪದ ಪ್ರಖರತೆ ಹೇಗಿತ್ತು?

ಕಿವಿಗಳಲಿ ಕಂಗಳಲಿ ನಾಸಾ
ವಿವರದಲಿ ಹೊಗೆ ಮಸಗಿ ದಳ್ಳುರಿ
ತಿವಿದುದಾಕಾಶವನು ಕವಿದುದು ಕಾಂತಿ ದೆಸೆದೆಸೆಗೆ
ರವಿಯ ತಗಡೆನೆ ತಳಿತವಾಯುಧ
ನಿವಹ ಸಾಸಿರ ಭುಜದ ಬಹುಳತೆ
ಯವಗಡಿಸಿ ವೈಕುಂಠನೆಸೆದನು ವಿಶ್ವರೂಪದಲಿ (ಉದ್ಯೋಗ ಪರ್ವ, ೧೦ ಸಂಧಿ, ೩೦ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನ ಕಿವಿ, ಕಣ್ಣು, ಮೂಗುಗಳಿಂದ ಹೊಗೆ ಹೊರಟು ದೊಡ್ಡವುರಿಯಾಗೆದ್ದು ಆಕಾಶವನ್ನು ವ್ಯಾಪಿಸಿತು. ಕಾಂತಿ ದಿಕ್ಕು ದಿಕ್ಕುಗಳಲ್ಲಿ ಹರಡಿತು. ಅಘಾದವಾಗ ವಿಶ್ವರೂಪಕ್ಕೆ ಸಹಸ್ರ ಭುಜಗಳು, ಅವುಗಳಲ್ಲಿ ಹಿಡಿದ ಆಯುಧಗಳು ಸೂರ್ಯನ ತಗಡುಗಳೋ ಎಂಬಂತೆ ಹೊಳೆಯುತ್ತಿದ್ದವು. ವೈಕುಂಠಾಧಿಪನು (ವಿಷ್ಣುವು) ವಿಶ್ವರೂಪದಿಂದ ರಾರಾಜಿಸುತ್ತಿದ್ದನು.

ಅರ್ಥ:
ಕಿವಿ: ಕರ್ಣ; ಕಂಗಳು: ನಯನ; ನಾಸಾ: ನಾಸಿಕ, ಮೂಗು; ವಿವರ: ತೂತು, ರಂಧ್ರ; ಹೊಗೆ: ಧೂಮ; ಮಸಗು: ಹರಡು; ಕೆರಳು; ದಳ್ಳುರಿ: ದೊಡ್ಡಉರಿ; ತಿವಿ: ಚಚ್ಚುವುದು; ಕಾಂತಿ: ಪ್ರಕಾಶ; ದೆಸೆ: ದಿಕ್ಕು; ರವಿ: ಭಾನು; ತಗಡು: ಸಾಂದ್ರತೆ, ದಟ್ಟಣೆ; ತಳಿತ: ಚಿಗುರಿದ; ಆಯುಧ: ಅಸ್ತ್ರ; ನಿವಹ: ಗುಂಪು; ಸಾಸಿರ: ಸಹಸ್ರ; ಭುಜ: ಬಾಹು; ಬಹುಳ: ತುಂಬ; ಅವಗಡಿಸು: ಹರಡು; ಎಸೆ: ತೋರು; ವಿಶ್ವರೂಪ:ಎಲ್ಲ ಕಡೆಗೂ ವ್ಯಾಪಿಸಿದ (ಕೃಷ್ಣನ) ರೂಪ;

ಪದವಿಂಗಡಣೆ:
ಕಿವಿಗಳಲಿ +ಕಂಗಳಲಿ +ನಾಸಾ
ವಿವರದಲಿ+ ಹೊಗೆ +ಮಸಗಿ +ದಳ್ಳುರಿ
ತಿವಿದುದ್+ಆಕಾಶವನು +ಕವಿದುದು +ಕಾಂತಿ +ದೆಸೆದೆಸೆಗೆ
ರವಿಯ +ತಗಡೆನೆ +ತಳಿತವ್+ಆಯುಧ
ನಿವಹ +ಸಾಸಿರ +ಭುಜದ +ಬಹುಳತೆ
ಯವಗಡಿಸಿ+ ವೈಕುಂಠನ್+ಎಸೆದನು +ವಿಶ್ವರೂಪದಲಿ

ಅಚ್ಚರಿ:
(೧) ಕಿವಿಗಳಲಿ ಕಂಗಳಲಿ; ಕವಿದುದು ಕಾಂತಿ; ವೈಕುಂಠನೆಸೆದನು ವಿಶ್ವರೂಪದಲಿ; ತಗಡೆನೆ ತಳಿತವಾಯುಧ – ಒಂದೇ ಅಕ್ಷರದ ಜೋಡಿ ಪದಗಳು

ಪದ್ಯ ೨೯: ಕೃಷ್ಣ ವಿಶ್ವರೂಪದಲ್ಲಿ ಮತ್ತಾರು ತೋರಿದರು?

ಬಲದ ಭುಜದಲಿ ಪಾರ್ಥನೆಡದಲಿ
ಹಲಧರನು ಚರಣದಲಿ ಧರ್ಮಜ
ಕಲಿವೃಕೋದರ ನಕುಲ ಸಹದೇವಾದಿ ಯಾದವರು
ಲಲಿತ ಕಾಂತಿಯೊಳಖಿಳತಾರಾ
ವಳಿಗಳಮಳ ಗ್ರಹವಿರಲು ತೊಳ
ತೊಳಗಿ ಮೆರೆದನು ವಿಶ್ವರೂಪ ವಿಹಾರಿ ಮುರವೈರಿ (ಉದ್ಯೋಗ ಪರ್ವ, ೧೦ ಸಂಧಿ, ೨೯ ಪದ್ಯ)

ತಾತ್ಪರ್ಯ:
ಕೃಷ್ಣನ ವಿಶ್ವರೂಪದ ಬಲಭಾಗದಲ್ಲಿ ಅರ್ಜುನನು, ಎಡಭಾಗದಲ್ಲಿ ಬಲರಾಮ, ಪಾದಗಳಲ್ಲಿ ಯುಧಿಷ್ಥಿರ, ಭೀಮ, ನಕುಲ, ಸಹದೇವ ಮತ್ತು ಯಾದವರಿದ್ದರು; ಸುಂದರ ಕಾಂತಿಯಿಂದ ರಂಜಿಸುವ ಸಮಸ್ತ ನಕ್ಷತ್ರಗಳು ಮತ್ತು ಗ್ರಹಗಳು ಇರುತ್ತಿರಲು, ಶ್ರೀಕೃಷ್ಣನು ವಿಶ್ವರೂಪನಾಗಿ ವಿಹರಿಸಿ ಥಳಥಳನೆ ಪ್ರಕಾಶಿಸುತ್ತಿದ್ದನು.

ಅರ್ಥ:
ಬಲ: ಪಾರ್ಶ್ವ; ಭುಜ: ತೋಳು, ಬಾಹು; ಎಡ: ವಾಮ; ಹಲಧರ: ಬಲರಾಮ; ಚರಣ: ಪಾದ; ಧರ್ಮಜ: ಯುಧಿಷ್ಠಿರ; ಕಲಿ: ಶೂರ; ವೃಕ: ತೋಳ; ಉದರ: ಹೊಟ್ಟೆ; ವೃಕೋದರ: ತೋಳದ ಹೊಟ್ಟೆಹೊಂದಿರುವ (ಭೀಮ); ಆದಿ: ಮುಂತಾದ; ಲಲಿತ: ಚೆಲುವು; ಕಾಂತಿ: ಪ್ರಕಾಶ; ಅಖಿಳ: ಎಲ್ಲಾ; ತಾರ: ನಕ್ಷತ್ರ; ಆವಳಿ: ಗುಂಪು; ಅಮಳ:ಜೋಡಿ; ಗ್ರಹ: ಆಕಾಶಚರಗಳು; ತೊಳ: ಹೊಳೆ; ಮೆರೆ: ಪ್ರಕಾರವಾಗಿ, ತೋರು; ವಿಹಾರ: ಕಾಲ ಕಳೆಯುವುದು; ಮುರವೈರಿ: ಕೃಷ್ಣ; ವೈರಿ: ಶತ್ರು;

ಪದವಿಂಗಡಣೆ:
ಬಲದ +ಭುಜದಲಿ +ಪಾರ್ಥನ್+ಎಡದಲಿ
ಹಲಧರನು+ ಚರಣದಲಿ+ ಧರ್ಮಜ
ಕಲಿ+ವೃಕೋದರ +ನಕುಲ +ಸಹದೇವಾದಿ+ ಯಾದವರು
ಲಲಿತ+ ಕಾಂತಿಯೊಳ್+ಅಖಿಳ+ತಾರಾ
ವಳಿಗಳ್+ಅಮಳ +ಗ್ರಹವಿರಲು +ತೊಳ
ತೊಳಗಿ +ಮೆರೆದನು +ವಿಶ್ವರೂಪ +ವಿಹಾರಿ +ಮುರವೈರಿ

ಅಚ್ಚರಿ:
(೧) ‘ವ’ ಕಾರದ ಜೋಡಿ ಪದ – ವಿಶ್ವರೂಪ ವಿಹಾರಿ; ‘ಬ’ಕಾರ: ಬಲದ ಭುಜದಲಿ;
(೨) ಬಲ, ಎಡ – ವಿರುದ್ಧಪದ
(೩) ತೊಳತೊಳ – ಜೋಡಿ ಪದದ ಬಳಕೆ

ಪದ್ಯ ೨೬: ಕೃಷ್ಣನು ಸಭೆಗೆ ಯಾವಾಗ ವಿಶ್ವರೂಪ ದರ್ಶನವನ್ನಿಟ್ಟನು?

ಮಗುಳೆ ಗಜಬಜವಾಯ್ತು ಭೀಷ್ಮಾ
ದಿಗಳ ನುಡಿಗಳು ಬಳಲಿದವು ತಾ
ಳಿಗೆಗೆ ನೀರಸವಾಗೆ ಬೆಂಡೆದ್ದೊದರಿದನು ಭೂಪ
ಬಗೆದು ತಮತಮಗೆದ್ದು ನೃಪನೋ
ಲಗದೊಳಸುರಾಂತಕನ ಕೈಗಳ
ಬಿಗಿಯಲಂದನುವಾಗೆ ಹಿಡಿದನು ವಿಶ್ವರೂಪವನು (ಉದ್ಯೋಗ ಪರ್ವ, ೧೦ ಸಂಧಿ, ೨೬ ಪದ್ಯ)

ತಾತ್ಪರ್ಯ:
ತನ್ನ ವಿಶ್ವರೂಪವನ್ನು ತೋರಿದ ಬಳಿಕ ಸಭೆಯಲ್ಲಿ ಕೋಲಹಲವಾಯಿತು. ಅವನನ್ನು ಬಂಧಿಸಲು ಕೌರವಾದಿಗಳು ಮುಂದಾದರು, ಭೀಷ್ಮ ಮತ್ತಿತರರು ಬೇಡ ಬೇಡವೆಂದು ಹೇಳಿದರು ಅದು ಯಾರ ಕಿವಿಗೂ ಬೀಳದೆ ಅವರ ನುಡಿಗಳು ಬರಿದಾದವು, ಅಂಗಳು ಒಣಗಲು ಧೃತರಾಷ್ಟ್ರನು ಬೇಡವೆಂದು ಹೇಳಿದನು, ಇವನ ಮಾತನ್ನು ಲಕ್ಷಿಸದೇ ಕೌರವಾದಿಗಳು ಕೃಷ್ಣನ್ ಕೈಗಳನ್ನು ಕಟ್ಟಲು ಹವಣಿಸುತ್ತಿರಲು ಶ್ರೀಕೃಷ್ಣನು ತನ್ನ ವಿಶ್ವರೂಪವನ್ನು ತೋರಿದನು.

ಅರ್ಥ:
ಮಗುಳೆ: ಮತ್ತೆ; ಗಜಬಜ: ಗಲಾಟೆ, ಕೋಲಾಹಲ; ಆದಿ: ಮೊದಲಾದ; ನುಡಿ: ಮಾತು; ಬಳಲು: ಆಯಾಸ; ನೀರಸ: ಒಣಗಿದುದು; ಬೆಂಡು: ತಿರುಳಿಲ್ಲದುದು, ಪೊಳ್ಳು; ಒದರು: ಹೇಳು; ಭೂಪ: ರಾಜ; ಬಗೆ: ತಿಳಿದು; ಎದ್ದು: ನಿಂತು; ನೃಪ: ರಾಜ; ಓಲಗ: ದರ್ಬಾರು; ಅಸುರಾಂತಕ: ರಾಕ್ಷಸರಿಗೆ ಸಾವನ್ನು ಕೊಡುವವ (ಕೃಷ್ಣ); ಅಂತಕ: ಕೊನೆಗೊಳಿಸುವ; ಕೈ: ಹಸ್ತ; ಬಿಗಿ: ಬಂಧಿಸು; ಅನುವಾಗು: ಸಿದ್ಧವಾಗು; ಹಿಡಿ: ಬಂಧಿಸು; ವಿಶ್ವರೂಪ: ಎಲ್ಲ ಕಡೆಗೂ ವ್ಯಾಪಿಸಿದ (ಕೃಷ್ಣನ) ರೂಪ; ತಾಳಿಗೆ: ಗಂಟಲು;

ಪದವಿಂಗಡಣೆ:
ಮಗುಳೆ +ಗಜಬಜವಾಯ್ತು +ಭೀಷ್ಮಾ
ದಿಗಳ +ನುಡಿಗಳು +ಬಳಲಿದವು +ತಾ
ಳಿಗೆಗೆ +ನೀರಸವಾಗೆ +ಬೆಂಡೆದ್+ ಒದರಿದನು+ ಭೂಪ
ಬಗೆದು +ತಮತಮಗೆದ್ದು+ ನೃಪನ್+ಓ
ಲಗದೊಳ್+ಅಸುರಾಂತಕನ+ ಕೈಗಳ
ಬಿಗಿಯಲಂದ್+ಅನುವಾಗೆ+ ಹಿಡಿದನು +ವಿಶ್ವರೂಪವನು

ಅಚ್ಚರಿ:
(೧) ಗಜಬಜ – ಆಡು ಪದದ ಬಳಕೆ
(೨) ಬಳಲು, ನೀರಸವಾಗಿ ಬೆಂಡೆದ್ದು – ಪ್ರಯೋಜನವಿಲ್ಲದೆ ಎಂದು ಹೇಳುವ ಪದಗಳು

ಪದ್ಯ ೨೫ : ಕೃಷ್ಣನ ವಿಶ್ವರೂಪ ದರ್ಶನ ಹೇಗಿತ್ತು?

ವಿದುರನಿಂತೆನುತಿರಲು ಮಿಂಚಿನ
ಹೊದರು ಹುರಿಗೊಂಡಂತೆ ರವಿ ಶತ
ಉದುರಿದವು ಮೈ ಮುರಿದು ನಿಂದಡೆ ದೇವರಂಗದಲಿ
ಸದೆದುದಾಸ್ಥಾನವನು ಘನತೇ
ಜದಲಹರಿಲೀಲೆಯಲಿ ಹರಿ ತೋ
ರಿದನು ನಿರುಪಮ ವಿಶ್ವರೂಪವನಾ ಮಹಾಸಭೆಗೆ (ಉದ್ಯೋಗ ಪರ್ವ, ೧೦ ಸಂಧಿ, ೨೫ ಪದ್ಯ)

ತಾತ್ಪರ್ಯ:
ವಿದುರನು ಹೀಗೆ ಕೃಷ್ಣನ ಮಹಿಮೆಯನ್ನು ಹೇಳುತ್ತಿರಲು, ಕೃಷ್ಣನು ತನ್ನ ಪ್ರಕಾಶಮಾನವಾದ ದೇಹವನ್ನು ಕೊಡವಿ ನೆಟ್ಟನೆ ನಿಂತನು, ಮಿಂಚಿನ ಬಳ್ಳಿಗಳು ಹುರಿಗೊಂಡವೋ ಎಂಬಂತೆ ನೂರು ಸೂರ್ಯರು ಅವನ ದೇಹದಿಂದ ಉದುರಿದವು ಆ ತೇಜಸ್ಸಿನ ಹೊಳೆಯು ಆಸ್ಥಾನದ ಕಣ್ಣು ಕುಕ್ಕಿಸಿತು. ಶ್ರೀ ಕೃಷ್ಣನು ಆ ಮಹಾಸಭೆಗೆ ತನ್ನ ವಿಶ್ವರೂಪವನ್ನು ತೋರಿದನು.

ಅರ್ಥ:
ಮಿಂಚು: ಹೊಳಪು, ಕಾಂತಿ; ಹೊದರು:ಬಿರುಕು; ಹುರಿಗೊಳ್ಳು:ಹೊಂದಿಕೊಳ್ಳು; ರವಿ: ಭಾನು, ಸೂರ್ಯ; ಶತ: ನೂರು; ಉದುರು: ಕೆಳಗೆ ಬೀಳು; ಮೈ: ತನು; ಮುರಿ:ಸೀಳು; ನಿಂದಡೆ: ನಿಲ್ಲು; ದೇವ: ಭಗವಂತ; ರಂಗ: ಸಭೆ; ಸದೆ: ಹೊಡೆ; ಆಸ್ಥಾನ: ಸಭೆ, ದರ್ಬಾರು; ಘನತೆ: ಪ್ರತಿಷ್ಠೆ; ತೇಜ: ಕಾಂತಿ; ಲಹರಿ: ಚುರುಕು, ಪ್ರಭೆ; ಲೀಲೆ:ಆನಂದ; ಹರಿ: ವಿಷ್ಣು; ತೋರು: ಕಾಣಿಸು; ನಿರುಪಮ:ಸಾಟಿಯಿಲ್ಲದ, ಅತಿಶಯವಾದ; ವಿಶ್ವರೂಪ: ಎಲ್ಲ ಕಡೆಗೂ ವ್ಯಾಪಿಸಿದ (ಕೃಷ್ಣನ) ರೂಪ; ಮಹಾ: ಶ್ರೇಷ್ಠ;

ಪದವಿಂಗಡಣೆ:
ವಿದುರನ್+ಇಂತೆನುತಿರಲು +ಮಿಂಚಿನ
ಹೊದರು +ಹುರಿಗೊಂಡಂತೆ+ ರವಿ +ಶತ
ಉದುರಿದವು+ ಮೈ +ಮುರಿದು +ನಿಂದಡೆ +ದೇವ+ರಂಗದಲಿ
ಸದೆದುದ್+ಆಸ್ಥಾನವನು +ಘನ+ತೇ
ಜದ+ಲಹರಿ+ಲೀಲೆಯಲಿ +ಹರಿ +ತೋ
ರಿದನು +ನಿರುಪಮ +ವಿಶ್ವರೂಪವನಾ +ಮಹಾಸಭೆಗೆ

ಅಚ್ಚರಿ:
(೧) ಸಭೆ, ಆಸ್ಥಾನ, ರಂಗ – ಸಮಾನಾರ್ಥಕ ಪದ