ಪದ್ಯ ೪೨: ಕೃಷ್ಣನು ಯಾವ ಅಪ್ಪಣೆಯನ್ನು ನೀಡಿದನು?

ಕಾಲ ಕೈಗೂಡುವೊಡೆ ಲೇಸಿನ
ಮೇಲೆ ಲೇಸುಗಳೊದಗುವವು ಭೂ
ಪಾಲ ಕುಂತಿಯ ಸುತರ ಬೆಳವಿಗೆ ಮೊದಲ ಮಂಗಳವು
ಮೇಲೆ ತಂಗಿಯ ಮಗನ ಮದುವೆ ವಿ
ಶಾಲ ಸುಖವದು ನಿಖಿಳಯಾದವ
ಜಾಲ ಪಯಣವ ಮಾಡಲೆಂದಸುರಾರಿ ನೇಮಿಸಿದ (ವಿರಾಟ ಪರ್ವ, ೧೧ ಸಂಧಿ, ೪೨ ಪದ್ಯ)

ತಾತ್ಪರ್ಯ:
ಒಳ್ಳೆಯ ಕಾಲ ಬಂದಾಗ ಶುಭದ ಮೇಲೆ ಶುಭವು ಉಂಟಾಗುತ್ತದೆ. ಪಾಂಡವರ ಏಳಿಗೆಯು ಮೊದಲ ಶುಭಕಾರ್ಯ. ಅದರ ಮೇಲೆ ತಂಗಿ ಸುಭದ್ರೆಯ ಮಗ ಅಭಿಮನ್ಯುವಿನ ಮದುವೆ, ಸುಖದ ಕಾಲ ಬಂದಿದೆ, ಸಮಸ್ತ ಯಾದವರೂ ಹೊರಡಲಿ ಎಂದು ಶ್ರೀಕೃಷ್ಣನು ಅಪ್ಪಣೆಯನ್ನು ನೀಡಿದನು.

ಅರ್ಥ:
ಕಾಲ: ಸಮಯ; ಕೈಗೂಡು: ನೆರವೇರು; ಲೇಸು: ಒಳಿತು; ಒದಗು: ಲಭ್ಯ, ದೊರೆತುದು; ಭೂಪಾಲ: ರಾಜ; ಸುತ: ಮಕ್ಕಳು; ಬೆಳವಿಗೆ: ಏಳಿಗೆ; ಮಂಗಳ: ಶುಭ; ತಂಗಿ: ಸಹೋದರಿ; ಮಗ: ಸುತ; ಮದುವೆ: ವಿವಾಹ; ವಿಶಾಲ: ದೊಡ್ಡ; ಸುಖ: ಸಂತ್ಸ; ನಿಖಿಳ: ಎಲ್ಲಾ; ಜಾಲ: ಗುಂಪು; ಪಯಣ: ಪ್ರಯಾಣ, ಸಂಚಾರ; ಅಸುರಾರಿ: ರಾಕ್ಷಸರ ವೈರಿ; ನೇಮಿಸು: ಹೇಳು, ಅಪ್ಪಣೆ ಮಾಡು;

ಪದವಿಂಗಡಣೆ:
ಕಾಲ+ ಕೈಗೂಡುವೊಡೆ +ಲೇಸಿನ
ಮೇಲೆ +ಲೇಸುಗಳ್+ಒದಗುವವು +ಭೂ
ಪಾಲ +ಕುಂತಿಯ +ಸುತರ+ ಬೆಳವಿಗೆ+ ಮೊದಲ+ ಮಂಗಳವು
ಮೇಲೆ +ತಂಗಿಯ +ಮಗನ +ಮದುವೆ +ವಿ
ಶಾಲ +ಸುಖವದು +ನಿಖಿಳ+ಯಾದವ
ಜಾಲ +ಪಯಣವ +ಮಾಡಲೆಂದ್+ಅಸುರಾರಿ +ನೇಮಿಸಿದ

ಅಚ್ಚರಿ:
(೧) ಭೂಪಾಲ, ವಿಶಾಲ, ಜಾಲ – ಪ್ರಾಸ ಪದಗಳು

ಪದ್ಯ ೬೨: ಸೂರ್ಯನ ರಥದ ವಿಸ್ತಾರವೆಷ್ಟು?

ಗಾಲಿ ಮಾನಸ ಗಿರಿಯ ಶಿಖರದ
ಮೇಲೆ ತಿರುಗುವುದೊಂದು ಕಡೆ ಸುರ
ಶೈಲದಲಿ ಬಿಗಿದಚ್ಚು ಕೋಟಿಯ ಮೇಲೆಯೈವತ್ತು
ಏಳುಲಕ್ಕದ ನೀಳ ರಥದ ವಿ
ಶಾಲವದು ಮುವ್ವತ್ತು ಸಾವಿರ
ಮೇಲೆ ಧ್ರುವ ಮಂಡಲಕೆ ಬಿಗಿದಿಹುದನಿಲಪಾಶದಲಿ (ಅರಣ್ಯ ಪರ್ವ, ೮ ಸಂಧಿ, ೬೨ ಪದ್ಯ)

ತಾತ್ಪರ್ಯ:
ಸೂರ್ಯನ ರಥವು ಒಂದು ಕೋಟಿ ಐವತ್ತೇಳು ಲಕ್ಷ ಯೋಜನ ಉದ್ದವಾಗಿದೆ. ಮೂವತ್ತು ಸಾವಿರ ಯೋಜನ ವಿಸ್ತಾರವಾಗಿದೆ. ಹಿಮಾಲಯದಲ್ಲಿ ಅದನ್ನು ಬಿಗಿದಿರುವ ಅಚ್ಚಿದೆ, ಮಾನಸಗಿರಿಯ ಮೇಲೆ ತಿರುಗುತ್ತದೆ. ಧೃವ ಮಂಡಲಕ್ಕೆ ಅನಿಲ ಪಾಶದಿಂದ ಬಿಗಿದಿದೆ.

ಅರ್ಥ:
ಗಾಲಿ: ಚಕ್ರ; ಗಿರಿ: ಬೆಟ್ಟ; ಶಿಖರ: ತುದಿ, ಅಗ್ರ; ತಿರುಗು: ಸುತ್ತು; ಕಡೆ: ಕೊನೆ; ಸುರ: ದೇವತೆ; ಶೈಲ: ಬೆಟ್ಟ; ಲಕ್ಕ: ಲಕ್ಷ; ನೀಳ: ಉದ್ದ; ರಥ: ಬಂಡಿ; ವಿಶಾಲ: ವಿಸ್ತಾರ; ಸಾವಿರ: ಸಹಸ್ರ; ಮಂಡಲ: ಜಗತ್ತು, ವರ್ತುಲಾಕಾರ; ಬಿಗಿ: ಭದ್ರವಾಗಿರುವುದು; ಅನಿಲ: ವಾಯು; ಪಾಶ: ಹಗ್ಗ;

ಪದವಿಂಗಡಣೆ:
ಗಾಲಿ +ಮಾನಸ +ಗಿರಿಯ +ಶಿಖರದ
ಮೇಲೆ +ತಿರುಗುವುದೊಂದು +ಕಡೆ+ ಸುರ
ಶೈಲದಲಿ +ಬಿಗಿದಚ್ಚು +ಕೋಟಿಯ +ಮೇಲೆ+ಐವತ್ತು
ಏಳು+ಲಕ್ಷದ+ ನೀಳ +ರಥದ +ವಿ
ಶಾಲವದು +ಮುವ್ವತ್ತು +ಸಾವಿರ
ಮೇಲೆ +ಧ್ರುವ +ಮಂಡಲಕೆ+ ಬಿಗಿದಿಹುದ್+ಅನಿಲ+ಪಾಶದಲಿ

ಪದ್ಯ ೬೩: ಜರಾಸಂಧನ ಮನಸ್ಸು ಏನು ಹೇಳಿತು?

ಕೇಳಿದನು ಕುಶಲವನು ಕುಶಲವ
ಹೇಳಿದರು ಕುಳ್ಳಿರಿಯೆನಲು ಭೂ
ಪಾಲಕರು ಕುಳ್ಳಿರ್ದರೆವೆಯಿಕ್ಕದೆ ನಿರೀಕ್ಷಿಸುತ
ಹೇಳಿರೈ ನಿಮಗಾವ ದೇಶ ವಿ
ಶಾಲ ಗೋತ್ರವದಾವುದೆನುತವಿ
ಲೋಲ ಮತಿ ಚಿಂತಿಸಿದನಿವದಿರು ವಿಪ್ರರಲ್ಲೆಂದು (ಸಭಾ ಪರ್ವ, ೨ ಸಂಧಿ, ೬೩ ಪದ್ಯ)

ತಾತ್ಪರ್ಯ:
ಜರಾಸಂಧನು ಬಂದವರ ಕುಶಲವನ್ನು ಕೇಳಿದನು, ಅವರು ತಮ್ಮ ಕುಶಲವನ್ನು ಹೇಳಿ, ಜರಾಸಂಧನನ್ನೇ ಕಣ್ಣಲುಗಾಡಿಸದೇ ನೋಡುತ್ತಿದ್ದರು, ಆಗ ಜರಾಸಂಧನು ನೀವು ಯಾವ ಊರು, ಯಾವ ಗೋತ್ರ ಎಂದು ಕೇಳಿದನು, ಅವನ ಸುಪ್ತ ಮನಸ್ಸು ಇವರು ಬ್ರಾಹ್ಮಣರಲ್ಲ ಎಂದು ಹೇಳತೊಡಗಿತು.

ಅರ್ಥ:
ಕೇಳು: ಪ್ರಶ್ನಿಸು; ಕುಶಲ: ಯೋಗಕ್ಷೇಮ; ಹೇಳು: ತಿಳಿಸು; ಕುಳ್ಳಿರಿ: ಆಸನವನ್ನು ಅಲಂಕರಿಸಿ; ಎವೆ: ರೆಪ್ಪೆ; ಎವೆಯಿಕ್ಕದೆ: ರೆಪ್ಪೆ ಅಲುಗಾಡಿಸದೆ; ನಿರೀಕ್ಷೆ: ಕಾಯುವಿಕೆ; ದೇಶ: ರಾಷ್ಟ್ರ; ವಿಶಾಲ: ದೊಡ್ಡ, ವಿಸ್ತಾರ; ಗೋತ್ರ: ವಂಶ; ವಿಲೋಲ:ಚಂಚಲವಾದ; ಮತಿ: ಬುದ್ಧಿ; ಚಿಂತಿಸು: ಆಲೋಚಿಸು; ಇವದಿರು: ಇವರು; ವಿಪ್ರ: ಬ್ರಾಹ್ಮಣ;

ಪದವಿಂಗಡಣೆ:
ಕೇಳಿದನು +ಕುಶಲವನು +ಕುಶಲವ
ಹೇಳಿದರು +ಕುಳ್ಳಿರಿ+ಯೆನಲು+ ಭೂ
ಪಾಲಕರು+ ಕುಳ್ಳಿರ್ದರ್+ಎವೆಯಿಕ್ಕದೆ+ ನಿರೀಕ್ಷಿಸುತ
ಹೇಳಿರೈ +ನಿಮಗಾವ +ದೇಶ +ವಿ
ಶಾಲ +ಗೋತ್ರವದ್+ಆವುದ್+ಎನುತ+ವಿ
ಲೋಲ +ಮತಿ +ಚಿಂತಿಸಿದನ್+ಇವದಿರು+ ವಿಪ್ರರಲ್ಲೆಂದು

ಅಚ್ಚರಿ:
(೧) ಕುಶಲ – ಜೋಡಿ ಪದವಾಗಿ ಪ್ರಯೋಗ
(೨) ಕೇಳು, ಹೇಳು – ೧,೨ ಸಾಲಿನ ಮೊದಲ ಪದ;
(೩) ಹೇಳು – ೨, ೪ ಸಾಲಿನ ಮೊದಲ ಪದ
(೪) ವಿಶಾಲ, ವಿಲೋಲ – ೫, ೬ ಸಾಲಿನ ಮೊದಲ ಪದ

ಪದ್ಯ ೬೫: ದ್ರೌಪದಿಯ ವಿವಾಹ ಹೇಗೆ ನೆರವೇರಿತು?

ಸಾರಿದರು ಮೆಟ್ಟಕ್ಕಿಗಳ ಗುಡ
ಜೀರಿಗೆಗಳೊದಗಿದವು ಲಗ್ನ ವಿ
ಹಾರದಾಶೀರ್ವಾದದಾಯತ ರವದ ರಭಸದಲಿ
ಧಾರೆಯೆರೆದನು ದ್ರುಪದ ಪಾಂಡುಕು
ಮಾರರಿಗೆ ನಿಜಸುತೆಯನತಿವಿ
ಸ್ತಾರಿಸಿತು ವೈವಾಹರಚನೆ ವಿಶಾಲ ವಿಭವದಲಿ (ಆದಿ ಪರ್ವ, ೧೬ ಸಂಧಿ, ೬೫ ಪದ್ಯ)

ತಾತ್ಪರ್ಯ:
ಮೆಟ್ಟಕ್ಕಿ, ಬೆಲ್ಲ, ಜೀರಿಗೆಗಳ ಹರಡಿ ಅದರ ಶಾಸ್ತ್ರವು ಮುಗಿದವು. ಆಶೀರ್ವಾದ ಮಂತ್ರಗಳ ಘೋಷದಿಂದ ದ್ರುಪದನು ತನ್ನ ಮಗಳನ್ನು ಪಾಂಡುಕುಮಾರರಿಗೆ ಧಾರೆಯೆರೆದು ಕೊಟ್ಟನು. ವಿವಾಹವು ಅತ್ಯಂತ ವೈಭವೋಪೇತವಾಗಿ ಜರುಗಿತು.

ಅರ್ಥ:
ಸಾರು: ಹರಡು; ಮೆಟ್ಟಕ್ಕಿ: ಮದುವೆಯಲ್ಲಿ ವಧುವರರು ಮೆಟ್ಟಿ ನಿಲ್ಲಲು ಬಿದಿರಿನ ತಟ್ಟೆಯಲ್ಲಿರಿಸಿದ ಅಕ್ಕಿ; ಗುಡ: ಬೆಲ್ಲ; ಲಗ್ನ: ಮದುವೆ; ವಿಹಾರ:ಸಂತೋಷ; ಆಶೀರ್ವಾದ: ಹರಕೆ; ರಭಸ: ವೇಗ; ಧಾರೆ: ಕನ್ಯಾದಾನ; ಕುಮಾರ: ಮಕ್ಕಳು; ಸುತೆ: ಮಗಳು; ವಿಸ್ತಾರ: ವಿವರವಾದ; ವೈವಾಹ: ಮದುವೆ; ರಚನೆ: ನಿರ್ಮಾಣ, ರೀತಿ; ವಿಶಾಲ: ಅಗಲ, ದೊಡ್ಡ; ವಿಭವ: ಸಿರಿ, ಸಂಪತ್ತು;

ಪದವಿಂಗಡಣೆ:
ಸಾರಿದರು +ಮೆಟ್ಟಕ್ಕಿಗಳ+ ಗುಡ
ಜೀರಿಗೆಗಳ್+ಒದಗಿದವು +ಲಗ್ನ +ವಿ
ಹಾರದ+ಆಶೀರ್ವಾದದ್+ಆಯತ+ ರವದ+ ರಭಸದಲಿ
ಧಾರೆಯೆರೆದನು +ದ್ರುಪದ+ ಪಾಂಡು+ಕು
ಮಾರರಿಗೆ+ ನಿಜಸುತೆಯನ್+ಅತಿ+ವಿ
ಸ್ತಾರಿಸಿತು +ವೈವಾಹರಚನೆ +ವಿಶಾಲ +ವಿಭವದಲಿ

ಅಚ್ಚರಿ:
(೧) ೨, ೫ ಸಾಲಿನ ಕೊನೆ ಅಕ್ಷರ – “ವಿ”
(೨) ವಿಭವದಲಿ, ರಭಸದಲಿ – ೩, ೬ ಸಾಲಿನ ಕೊನೆ ಪದ (ಪ್ರಾಸ)
(೩) ವಿಶಾಲ, ವಿಭವ, ವಿಸ್ತಾರ, ವಿಹಾರ, – “ವಿ” ಕಾರದ ಪದಗಳು