ಪದ್ಯ ೪೯: ಪ್ರಾತಿಕಾಮಿಕನು ದ್ರೌಪದಿಯನ್ನು ಎಷ್ಟು ಸಖಿಯರ ಮಧ್ಯೆ ನೋಡಿದನು?

ಸುತ್ತಲೆಸೆವ ವಿಳಾಸಿನೀ ಜನ
ಹತ್ತು ಸಾವಿರ ನಡುವೆ ಕಂಡನು
ಮತ್ತ ಕಾಶಿನಿಯನು ಪತಿವ್ರತೆಯರ ಶಿರೋಮಣಿಯ
ಹತ್ತಿರೈತರಲಂಜಿದನು ತ
ನ್ನುತ್ತಮಾಂಗಕೆ ಕರಯುಗವ ಚಾ
ಚುತ್ತ ಬಿನ್ನಹ ಮಾಡಿದನು ಪಾಂಚಾಲ ನಂದನೆಗೆ (ಸಭಾ ಪರ್ವ, ೧೫ ಸಂಧಿ, ೪೯ ಪದ್ಯ)

ತಾತ್ಪರ್ಯ:
ಪ್ರಾತಿಕಾಮಿಕನು ಹತ್ತು ಸಾವಿರ ಸಖಿಯರ ನಡುವೆ ಅತ್ಯಂತ ಸುಂದರಿಯಾದ, ಪತಿವ್ರತೆಯರಲ್ಲಿ ಶ್ರೇಷ್ಠಳಾದ ದ್ರೌಪದಿಯನ್ನು ಕಂಡನು. ಅವಳ ಬಳಿಗೆ ಹೋಗಲು ಹೆದರಿದನು, ಎರಡು ಕೈಗಳನ್ನು ಹಣೆಗೆ ಚಾಚಿ ಹೀಗೆ ತನ್ನ ಮನವಿಯನ್ನು ನುಡಿದನು.

ಅರ್ಥ:
ಸುತ್ತ: ಎಲ್ಲಾ ಕಡೆ; ಎಸೆ: ತೋರು; ವಿಳಾಸಿನಿ: ಸಖಿ, ದಾಸಿ; ಸಾವಿರ: ಸಹಸ್ರ; ಹತ್ತು: ದಶ; ನಡುವೆ: ಮಧ್ಯೆ; ಕಂಡು: ನೋಡು; ಮತ್ತಕಾಶಿನಿ: ಸುಂದರಿ; ಪತಿವ್ರತೆ: ಗಂಡನಿಗೆ ವಿಧೇಯಳಾದ ಗರತಿ; ಶಿರೋಮಣಿ: ಶ್ರೇಷ್ಠ; ಹತ್ತಿರ: ಸಮೀಪ; ಅಂಜು: ಹೆದರು; ಉತ್ತಮಾಂಗ: ಶಿರ; ಕರ: ಹಸ್ತ; ಕರಯುಗ: ಎರಡುಕೈಗಳನ್ನೂ; ಚಾಚು: ಮುಂದೆ ಒಡ್ಡು; ಬಿನ್ನಹ: ಮನವಿ; ನಂದನೆ: ಮಗಳು;

ಪದವಿಂಗಡಣೆ:
ಸುತ್ತಲ್+ಎಸೆವ +ವಿಳಾಸಿನೀ +ಜನ
ಹತ್ತು +ಸಾವಿರ+ ನಡುವೆ +ಕಂಡನು
ಮತ್ತ +ಕಾಶಿನಿಯನು +ಪತಿವ್ರತೆಯರ +ಶಿರೋಮಣಿಯ
ಹತ್ತಿರೈತರಲ್+ಅಂಜಿದನು +ತನ್ನ್
ಉತ್ತಮಾಂಗಕೆ+ ಕರಯುಗವ+ ಚಾ
ಚುತ್ತ +ಬಿನ್ನಹ +ಮಾಡಿದನು +ಪಾಂಚಾಲ +ನಂದನೆಗೆ

ಅಚ್ಚರಿ:
(೧) ನಮಸ್ಕರಿಸಿದನು ಎಂದು ಹೇಳುವ ಪರಿ – ತನ್ನುತ್ತಮಾಂಗಕೆ ಕರಯುಗವ ಚಾಚುತ್ತ
(೨) ದ್ರೌಪದಿಯ ಸೇವೆಯಲ್ಲಿದ್ದ ಸಖಿಯರು – ಸುತ್ತಲೆಸೆವ ವಿಳಾಸಿನೀ ಜನ ಹತ್ತು ಸಾವಿರ ನಡುವೆ
(೩) ದ್ರೌಪದಿಯನ್ನು ವರ್ಣಿಸುವ ಪರಿ – ಮತ್ತ ಕಾಶಿನಿ, ಪತಿವ್ರತೆಯರ ಶಿರೋಮಣಿ