ಪದ್ಯ ೨೯: ವಂಧಿ ಮಾಗಧರು ಭೀಮನನ್ನು ಹೇಗೆ ಹೊಗಳಿದರು?

ಭಾಪು ಮಝರೇ ಭೀಮ ಕೌರವ
ಭೂಪವಿಲಯಕೃತಾಂತ ಕುರುಕುಲ
ದೀಪಚಂಡಸಮೀರ ಕುರುನೃಪತಿಮಿರಮಾರ್ತಾಂಡ
ಕೋಪನಪ್ರತಿಪಕ್ಷಕುಲನಿ
ರ್ವಾಪಣೈಕಸಮರ್ಥ ಎನುತಭಿ
ರೂಪನನು ಹೊಗಳಿದರು ವಂದಿಗಳಬುಧಿ ಘೋಷದಲಿ (ಗದಾ ಪರ್ವ, ೭ ಸಂಧಿ, ೨೯ ಪದ್ಯ)

ತಾತ್ಪರ್ಯ:
ಭೀಮಾ, ಭಲೇ, ಭೇಷ್, ಕೌರವ ರಾಜರಿಗೆ ಕಾಲಯಮ! ಕೌರವ ಕುಲದೀಪಕ್ಕೆ ಚಂಡಮಾರುತ!, ಕೌರವರೆಂಬ ಕತ್ತಲೆಗೆ ಸೂರ್ಯ!, ಅತಿಕೋಪದ ವೈರಿ ಕುಲವನ್ನು ನಾಶಮಾಡಲು ಸಮರ್ಥನಾದವನೇ ಎಂದು ವಂದಿ ಮಾಗಧರು ಭೀಮನನ್ನು ಹೊಗಳಿದರು.

ಅರ್ಥ:
ಭಾಪು: ಭಲೇ; ಮಝರೇ: ಭೇಷ್; ಭೂಪ: ರಾಜ; ವಿಲಯ: ನಾಶ, ಪ್ರಳಯ; ಕೃತಾಂತ: ಯಮ; ದೀಪ: ದೀವಿಗೆ, ಜೊಡರು; ಚಂಡಸಮೀರ: ಚಂಡಮಾರುತ; ನೃಪತಿ: ರಾಜ; ತಿಮಿರ: ಕತ್ತಲು, ಅಂಧಕಾರ; ಮಾರ್ತಾಂಡ: ಸೂರ್ಯ; ಕೋಪ: ಮುಳಿ, ಕುಪಿತ; ಪ್ರತಿಪಕ್ಷ: ಎದುರಾಳಿ; ಕುಲ: ವಂಶ; ನಿರ್ವಾಪಣ: ನಾಶಮಾಡಲು; ಸಮರ್ಥ: ಯೋಗ್ಯ; ಅಭಿರೂಪ: ಅನುರೂಪವಾದ; ಹೊಗಳು: ಪ್ರಶಂಶಿಸು; ವಂದಿ: ಹೊಗಳುಭಟ್ಟ; ಅಬುಧಿ: ಸಾಗರ; ಘೋಷ: ಕೂಗು;

ಪದವಿಂಗಡಣೆ:
ಭಾಪು +ಮಝರೇ +ಭೀಮ +ಕೌರವ
ಭೂಪ+ವಿಲಯ+ಕೃತಾಂತ +ಕುರುಕುಲ
ದೀಪ+ಚಂಡಸಮೀರ +ಕುರುನೃಪ+ತಿಮಿರ+ಮಾರ್ತಾಂಡ
ಕೋಪನ+ಪ್ರತಿಪಕ್ಷಕುಲ+ನಿ
ರ್ವಾಪಣೈಕ+ಸಮರ್ಥ+ ಎನುತ್+ಅಭಿ
ರೂಪನನು +ಹೊಗಳಿದರು +ವಂದಿಗಳ್+ಅಬುಧಿ +ಘೋಷದಲಿ

ಅಚ್ಚರಿ:
(೧) ಭೀಮನನ್ನು ಹೊಗಳುವ ಪರಿ – ಕೌರವ ಭೂಪವಿಲಯಕೃತಾಂತ; ಕುರುಕುಲ ದೀಪ ಚಂಡಸಮೀರ; ಕುರುನೃಪತಿಮಿರಮಾರ್ತಾಂಡ

ಪದ್ಯ ೬: ಯಾರ ಬಾಣದ ಪೆಟ್ಟನ್ನು ಭೀಷ್ಮರು ಸಹಿಸಲಾರರು?

ಪರಶುರಾಮನ ಕೊಡಲಿಗಡಿತವ
ಧರಿಸಲಾಪೆನು ವಿಲಯ ಭೈರವ
ನಿರಿದಡಂಜೆನು ಸಿಡಿಲು ಹೊಡೆದರೆ ರೋಮ ಕಂಪಿಸದು
ಹರನ ಪಾಶುಪತಾಸ್ತ್ರ ಬಾದಣ
ಗೊರೆದರೆಯು ಲೆಕ್ಕಿಸೆನು ಪಾರ್ಥನ
ಸರಳ ಚೂಣಿಗೆ ಸಿಲುಕಿದೆನು ಪರಿಹರಿಸಿ ನೀವೆಂದ (ಭೀಷ್ಮ ಪರ್ವ, ೧೦ ಸಂಧಿ, ೬ ಪದ್ಯ)

ತಾತ್ಪರ್ಯ:
ಪರಶುರಾಮನ ಕೊಡಲಿಯ ಹೊಡೆತವನ್ನು ಸಹಿಸಬಲ್ಲೆ. ಪ್ರಳಯ ಭೈರವನ ಇರಿತಕ್ಕೆ ಹೆದರುವುದಿಲ್ಲ. ಸಿಡಿಲು ಬಡಿದರೆ ನನ್ನ ಕೂದಲೂ ಕೊಂಕುವುದಿಲ್ಲ. ಶಿವನ ಪಾಶುಪತಾಸ್ತ್ರವು ಮೈಯಲ್ಲಿ ರಂಧ್ರವನ್ನು ಕೊರೆದರೂ ಬೆದರುವುದಿಲ್ಲ. ಅರ್ಜುನನ ಬಾಣಗಳ ದಾಳಿಗೆ ಸಿಲುಕಿ ನೋಯುತ್ತಿದ್ದೇನೆ, ನೀವು ಬಂದು ಅವನ ಬಾಣಗಳನ್ನು ಪರಿಹರಿಸಿ ಎಂದು ಭೀಷ್ಮನು ಬೇಡಿದನು.

ಅರ್ಥ:
ಕೊಡಲಿ: ಪರಶು; ಕಡಿತ: ಕತ್ತರಿಸು; ಧರಿಸು: ಹಿಡಿ, ತೆಗೆದುಕೊಳ್ಳು; ವಿಲಯ: ನಾಶ, ಪ್ರಳಯ; ಇರಿ: ಚುಚ್ಚು; ಅಂಜು: ಹೆದರು; ಸಿಡಿಲು: ಅಶನಿ; ಹೊಡೆ: ಏಟು, ಹೊಡೆತ; ರೋಮ: ಕೂದಲು; ಕಂಪಿಸು: ಅಲುಗಾಡು; ಹರ: ಈಶ್ವರ; ಅಸ್ತ್ರ: ಶಸ್ತ್ರ; ಬಾದಣ: ತೂತು, ರಂಧ್ರ; ಒರೆ: ತಿಕ್ಕು; ಲೆಕ್ಕಿಸು: ಎಣಿಕೆಮಾಡು; ಸರಳು: ಬಾಣ; ಚೂಣಿ: ಮುಂದಿನ ಸಾಲು; ಸಿಲುಕು: ಸೆರೆಯಾದ ವಸ್ತು; ಪರಿಹರ: ನಿವಾರಣೆ;

ಪದವಿಂಗಡಣೆ:
ಪರಶುರಾಮನ +ಕೊಡಲಿ+ಕಡಿತವ
ಧರಿಸಲಾಪೆನು +ವಿಲಯ +ಭೈರವನ್
ಇರಿದಡ್+ಅಂಜೆನು +ಸಿಡಿಲು +ಹೊಡೆದರೆ +ರೋಮ +ಕಂಪಿಸದು
ಹರನ +ಪಾಶುಪತಾಸ್ತ್ರ+ ಬಾದಣಗ್
ಒರೆದರೆಯು+ ಲೆಕ್ಕಿಸೆನು+ ಪಾರ್ಥನ
ಸರಳ+ ಚೂಣಿಗೆ +ಸಿಲುಕಿದೆನು +ಪರಿಹರಿಸಿ+ ನೀವೆಂದ

ಅಚ್ಚರಿ:
(೧) ಭೀಷ್ಮನು ಬೇಡುವ ಪರಿ – ಪಾರ್ಥನ ಸರಳ ಚೂಣಿಗೆ ಸಿಲುಕಿದೆನು ಪರಿಹರಿಸಿ ನೀವೆಂದ

ಪದ್ಯ ೧೬: ಅರ್ಜುನನನ್ನು ಯಾರು ಆವರಿಸಿದರು?

ಆ ಸಮಯದೊಳು ರಣದೊಳೌಕಿದ
ರಾ ಸುಯೋಧನ ಶಲ್ಯ ಸಲೆ ದು
ಶ್ಯಾಸನನು ಕೃಪ ಶಕುನಿ ಗುರುಸುತರಾದಿ ಯಾದವರು
ಸೂಸಿದರು ಸರಳುಗಳನರ್ಜುನ
ಘಾಸಿಯಾದನು ವಿಲಯ ಮೇಘದ
ಮೀಸಲಿನ ಮಳೆಗಾಲವೆನೆ ಮೋಹಿದುದು ಶರಜಾಲ (ಭೀಷ್ಮ ಪರ್ವ, ೬ ಸಂಧಿ, ೧೬ ಪದ್ಯ)

ತಾತ್ಪರ್ಯ:
ಆ ಸಮಯದಲ್ಲಿ ದುರ್ಯೋಧನ, ಶಲ್ಯ ದುಶ್ಯಾಸನ, ಕೃಪ, ಶಕುನಿ, ಅಶ್ವತ್ಥಾಮ ಮತ್ತು ಯಾದವರು ಅರ್ಜುನನನ್ನು ಮುತ್ತಿ ಬಾಣಗಳನ್ನು ಬಿಡಲು ಅರ್ಜುನನು ಘಾಸಿಯಾದನು. ಪ್ರಳಯ ಕಾಲದ ಮೋಡಗಳೋ ಎಂಬಂತೆ ಬಾಣಗಳು ಅರ್ಜುನನನ್ನು ಮುಸುಕಿದವು.

ಅರ್ಥ:
ಸಮಯ: ಕಾಲ; ರಣ: ಯುದ್ಧ; ಔಕು: ಒತ್ತು, ಹಿಚುಕು; ಸಲೆ: ಸಂಪೂರ್ಣವಾಗಿ; ಸುತ: ಪುತ್ರ; ಸೂಸು: ಎರಚು, ಚಲ್ಲು; ಸರಳು: ಬಾಣ; ಘಾಸಿ: ಆಯಾಸ, ದಣಿವು; ವಿಲಯ: ನಾಶ, ಪ್ರಳಯ; ಮೇಘ: ಮೋಡ; ಮೀಸಲು: ಮುಡಿಪು, ಪ್ರತ್ಯೇಕ; ಮಳೆ: ವರ್ಷ; ಮೋಹ: ಭ್ರಾಂತಿ, ಭ್ರಮೆ, ಇಂದ್ರಜಾಲ; ಶರ: ಬಾಣ; ಜಾಲ: ಬಲೆ;

ಪದವಿಂಗಡಣೆ:
ಆ +ಸಮಯದೊಳು +ರಣದೊಳ್+ಔಕಿದರ್
ಆ+ ಸುಯೋಧನ +ಶಲ್ಯ +ಸಲೆ +ದು
ಶ್ಯಾಸನನು +ಕೃಪ +ಶಕುನಿ+ ಗುರುಸುತರಾದಿ+ ಯಾದವರು
ಸೂಸಿದರು+ ಸರಳುಗಳನ್+ಅರ್ಜುನ
ಘಾಸಿಯಾದನು +ವಿಲಯ +ಮೇಘದ
ಮೀಸಲಿನ +ಮಳೆಗಾಲವೆನೆ+ ಮೋಹಿದುದು +ಶರಜಾಲ

ಅಚ್ಚರಿ:
(೧) ಉಪಮಾನದ ಪ್ರಯೋಗ – ವಿಲಯ ಮೇಘದ ಮೀಸಲಿನ ಮಳೆಗಾಲವೆನೆ ಮೋಹಿದುದು ಶರಜಾಲ

ಪದ್ಯ ೧೨: ಘಟೋತ್ಕಚನು ಹೇಗೆ ತೋರಿದನು?

ಅರೆನೆಲೆಯ ದಳದತ್ತ ದೃಷ್ಟಿಯ
ಹರಿಯಬಿಡು ನೋಡಲ್ಲಿ ಕೌಂತೇ
ಯರ ಕುಮಾರರನಮಲ ಪಂಚದ್ರೌಪದೀಸುತರ
ಉರಿಯ ಕರುವಿಟ್ಟಂತೆ ವಿಲಯದ
ಹರನ ಖತಿ ಹೊಗೆವಂತೆ ಸಿಡಿಲಿನ
ಹೊರಳಿ ಹೊದರೆದ್ದಂತೆ ನಿಂದವನವ ಘಟೋತ್ಕಚನು (ಭೀಷ್ಮ ಪರ್ವ, ೨ ಸಂಧಿ, ೧೨ ಪದ್ಯ)

ತಾತ್ಪರ್ಯ:
ಮುಂದಿನ ಕಾಣುವ ದೊರೆಯ ಸೈನ್ಯದ ಹಿಂದೆ ಸುತ್ತಲೂ ದ್ರೌಪದಿಯ ಮಕ್ಕಳಾದ ಐವರು ಉಪಪಾಂಡವರಿದ್ದಾರೆ, ಉರಿಯ ಕರುವೋ, ಪ್ರಳ್ಯ ರುದ್ರನ ಕೋಪಾಗ್ನಿಯ ಹೊಗೆಯೋ, ಸಿಡಿಲುಗಳ ಪೊದೆಯೋ, ಎನ್ನುವಂತೆ ಘಟೋತ್ಕಚನು ನಿಂತಿದ್ದಾನೆ ಎಂದು ಭೀಷ್ಮರು ತಿಳಿಸಿದರು.

ಅರ್ಥ:
ಅರೆನೆಲೆ: ಮುಂಗಡೆಯ ಸೈನ್ಯಕ್ಕೆ ಸಹಾಯಕವಾಗಿ ಹಿಂದಿರುವ ಸೈನ್ಯ; ದಳ: ಸೈನ್ಯ; ದೃಷ್ಟಿ: ನೋಟ; ಹರಿಸು: ಹರಡು; ನೋಡು: ವೀಕ್ಷಿಸು; ಕುಮಾರ: ಮಕ್ಕಳು; ಅಮಲ: ನಿರ್ಮಲ; ಸುತ: ಮಕ್ಕಳು; ಉರಿ: ಬೆಂಕಿ; ಕರು: ಮರಿ, ಚಿಕ್ಕವ; ವಿಲಯ: ನಾಶ, ಪ್ರಳಯ; ಹರ: ಶಿವ; ಖತಿ: ಕೋಪ; ಹೊಗೆ: ಧೂಮ, ಆವಿ; ಸಿಡಿಲು: ಅಶನಿ; ಹೊರಳು: ತಿರುವು, ಬಾಗು; ಹೊದರು: ಪೊದೆ, ಹಿಂಡಲು; ಎದ್ದು: ಮೇಲೇಳು; ನಿಂದವ: ನಿಂತಿರುವ;

ಪದವಿಂಗಡಣೆ:
ಅರೆನೆಲೆಯ+ ದಳದತ್ತ+ ದೃಷ್ಟಿಯ
ಹರಿಯಬಿಡು+ ನೋಡಲ್ಲಿ +ಕೌಂತೇ
ಯರ +ಕುಮಾರರನ್+ಅಮಲ+ ಪಂಚ+ದ್ರೌಪದೀ+ಸುತರ
ಉರಿಯ+ ಕರುವಿಟ್ಟಂತೆ+ ವಿಲಯದ
ಹರನ+ ಖತಿ+ ಹೊಗೆವಂತೆ +ಸಿಡಿಲಿನ
ಹೊರಳಿ+ ಹೊದರೆದ್ದಂತೆ +ನಿಂದವನವ+ ಘಟೋತ್ಕಚನು

ಅಚ್ಚರಿ:
(೧) ಘಟೋತ್ಕಚನ ಗುಣಗಾನ – ಉರಿಯ ಕರುವಿಟ್ಟಂತೆ ವಿಲಯದ ಹರನ ಖತಿ ಹೊಗೆವಂತೆ ಸಿಡಿಲಿನ
ಹೊರಳಿ ಹೊದರೆದ್ದಂತೆ ನಿಂದವನವ ಘಟೋತ್ಕಚನು