ಪದ್ಯ ೩೩: ದುರ್ಯೋಧನನು ತನಗೇನು ಬೇಕು ಎಂದು ಹೇಳಿದನು?

ಖಾತಿ ಕಂದದು ಮನದ ಧೈರ್ಯದ
ಧಾತು ಕುಂದದು ಲಜ್ಜೆಯಭಿಮತ
ಜಾತಿಗೆಡದು ವಿರೋಧ ಬಿಡದು ಯುಧಿಷ್ಠಿರಾದ್ಯರಲಿ
ಏತಕಿದು ನಿನ್ನೀ ಪ್ರಳಾಪ ವಿ
ಧೂತರಿಪು ಕುರುರಾಯನೆಂಬೀ
ಖ್ಯಾತಿಯಲ್ಲದೆ ಬೇರೆ ರಾಜ್ಯವನ್ನೊಲ್ಲೆ ನಾನೆಂದ (ಗದಾ ಪರ್ವ, ೩ ಸಂಧಿ, ೩೩ ಪದ್ಯ)

ತಾತ್ಪರ್ಯ:
ಸಂಜಯ, ನನ್ನ ಕೋಪ ಮಾಸಿಲ್ಲ, ಮನಸ್ಸಿನ ಧೈರ್ಯದ ಶಕ್ತಿ ಸಾಮರ್ಥ್ಯಗಳು ಮಾಸಿಲ್ಲ. ನಾಚಿಕೆಪಡುವ ಇಲ್ಲವೇ ಇಲ್ಲ. ಯುಧಿಷ್ಠಿರಾದಿ ಪಾಂಡವರಲ್ಲಿ ವಿರೋಧ ಹೋಗಿಲ್ಲ. ನೀನೇಕೆ ಸುಮ್ಮನೆ ಅಳುತ್ತಿರುವೆ? ಕೌರವನು ಶತ್ರುಗಳನ್ನು ಅಲುಗಾಡಿಸಿ ಕೊಲ್ಲಬಲ್ಲನು ಎಂಬ ಕೀರ್ತಿ ನನಗೆ ಬೇಕು. ಬೇರೆಯ ರಾಜ್ಯವನ್ನು ನಾನೊಲ್ಲೆ ಎಂದನು.

ಅರ್ಥ:
ಖಾತಿ: ಕೋಪ, ಕ್ರೋಧ; ಕಂದು: ಮಸಕಾಗು; ಮನ: ಮನಸ್ಸು; ಧೈರ್ಯ: ಎದೆಗಾರಿಕೆ, ಕೆಚ್ಚು; ಧಾತು: ತೇಜಸ್ಸು; ಲಜ್ಜೆ: ನಾಚಿಕೆ, ಸಿಗ್ಗು; ಅಭಿಮತ: ಅಭಿಪ್ರಾಯ; ಜಾತಿ: ಕುಲ; ಕೆಡು: ಇಲ್ಲವಾಗು, ಸೋಲು; ವಿರೋಧ: ತಡೆ, ಅಡ್ಡಿ, ವೈರತ್ವ; ಬಿಡು: ತೊರೆ, ತ್ಯಜಿಸು; ಆದಿ: ಮುಂತಾದ; ಪ್ರಳಾಪ: ಪ್ರಲಾಪ, ದುಃಖ; ವಿಧೂತ: ಅಲುಗಾಡುವ, ಅಲ್ಲಾಡುವ; ರಿಪು: ವೈರಿ; ಖ್ಯಾತಿ: ಪ್ರಸಿದ್ಧಿ, ಹೆಸರುವಾಸಿ; ಬೇರೆ: ಅನ್ಯ;

ಪದವಿಂಗಡಣೆ:
ಖಾತಿ +ಕಂದದು +ಮನದ +ಧೈರ್ಯದ
ಧಾತು +ಕುಂದದು +ಲಜ್ಜೆ+ಅಭಿಮತ
ಜಾತಿಗೆಡದು+ ವಿರೋಧ +ಬಿಡದು +ಯುಧಿಷ್ಠಿರಾದ್ಯರಲಿ
ಏತಕಿದು +ನಿನ್ನೀ +ಪ್ರಳಾಪ +ವಿ
ಧೂತರಿಪು +ಕುರುರಾಯನ್+ಎಂಬೀ
ಖ್ಯಾತಿಯಲ್ಲದೆ +ಬೇರೆ +ರಾಜ್ಯವನ್ನೊಲ್ಲೆ +ನಾನೆಂದ

ಅಚ್ಚರಿ:
(೧) ದುರ್ಯೋಧನನ ವೀರನುಡಿ – ಕುರುರಾಯನೆಂಬೀ ಖ್ಯಾತಿಯಲ್ಲದೆ ಬೇರೆ ರಾಜ್ಯವನ್ನೊಲ್ಲೆ ನಾನೆಂದ

ಪದ್ಯ ೪೮: ಅರ್ಜುನನು ಯಾರನ್ನು ಕೆಣಕಿದನು?

ಬಂದನೀಶ್ವರ ನಾವು ಕೆಡಹಿದ
ಹಂದಿ ನಮ್ಮದು ತ್ಗೆಯಿಯೆನೆ ನರ
ನೆಂದ ನಮ್ಮಂಬಿನಲಿ ಬಿದ್ದುದು ಸಾರು ನೀನೆನಲು
ಬಂದುದೇಕಾಮಿಷ ವಿರೋಧದ
ಕುಂದು ಪಾರ್ಥನ ಚಿತ್ತದಲಿ ಬಾ
ಲೇಂದು ಧರನೆಂದೆತ್ತ ಬಲ್ಲನು ಕೆಣಕಿದನು ಶಿವನ (ಅರಣ್ಯ ಪರ್ವ, ೬ ಸಂಧಿ, ೪೮ ಪದ್ಯ)

ತಾತ್ಪರ್ಯ:
ಹಂದಿಯು ಸತ್ತನೊಡನೆಯೇ ಶಬರ ರೂಪಿಯಾದ ಶಿವನು ಅಲ್ಲಿಗೆ ಬಂದು ಇದು ನಾನು ಹೊಡೆದ ಹಂದಿ, ಇದು ನಮ್ಮದು ತೆಗೆಯಿರಿ ಎಂದನು. ಆರ್ಜುನನು ಈ ಹಂದಿ ನನ್ನ ಬಾಣದಿಂದ ಬಿದ್ದಿದೆ ನೀನು ತೆರಳು ಎಂದನು. ಆಗ ಏಕಾಮಿಷ ವಿರೋಧವು ತಲೆದೊರಿತು. ಇವನು ಶಿವನೆಂದು ತಿಳಿಯದೆ ಅವನನ್ನು ಅರ್ಜುನನು ಕೆಣಕಿದನು.

ಅರ್ಥ:
ಬಂದು: ಆಗಮಿಸು; ಈಶ್ವರ: ಶಂಕರ; ಕೆಡಹು: ಬೀಳಿಸು; ಹಂದಿ: ಸೂಕರ; ತೆಗೆ: ಈಚೆಗೆ ತರು, ಹೊರತರು; ನರ: ಅರ್ಜುನ; ಅಂಬು: ಬಾಣ; ಬಿದ್ದು: ಉರುಳು; ಸಾರು; ಹೋಗು; ಏಕಾಮಿಷ: ಒಂದೇ ಭೋಗ್ಯವಸ್ತುವನ್ನು ಇಬ್ಬರು ಕಾಮಿಸುವುದರಿಂದ ಆಗುವ ವಿರೋಧ; ವಿರೋಧ: ಪ್ರತಿ; ಕುಂದು: ಕೊರತೆ, ನೂನ್ಯತೆ; ಚಿತ್ತ: ಮನಸ್ಸು; ಬಾಲೇಂದು: ಬಾಲ ಚಂದಿರ; ಧರ: ಧರಿಸಿದವ; ಬಲ್ಲ: ತಿಳಿ; ಕೆಣಕು: ರೇಗಿಸು, ಪ್ರಚೋದಿ;

ಪದವಿಂಗಡಣೆ:
ಬಂದನ್+ಈಶ್ವರ+ ನಾವು +ಕೆಡಹಿದ
ಹಂದಿ +ನಮ್ಮದು +ತೆಗೆಯಿ+ಎನೆ +ನರನ್
ಎಂದ+ ನಮ್+ಅಂಬಿನಲಿ +ಬಿದ್ದುದು +ಸಾರು +ನೀನೆನಲು
ಬಂದುದ್+ಏಕಾಮಿಷ +ವಿರೋಧದ
ಕುಂದು +ಪಾರ್ಥನ +ಚಿತ್ತದಲಿ +ಬಾಲ
ಇಂದು+ ಧರನ್+ ಎಂದ್+ಎತ್ತ+ ಬಲ್ಲನು+ ಕೆಣಕಿದನು +ಶಿವನ

ಅಚ್ಚರಿ:
(೧) ಪಾರ್ಥನ ಚಿತ್ತವನ್ನು ಚಿತ್ರಿಸುವ ಪರಿ – ಬಂದುದೇಕಾಮಿಷ ವಿರೋಧದ
ಕುಂದು ಪಾರ್ಥನ ಚಿತ್ತದಲಿ

ಪದ್ಯ ೨೯: ಶಿವನು ಯಾರನ್ನು ಪಶುಗಳೆಂದು ಕರೆದನು – ೪?

ಆಧಿಭೌತಿಕದಿಂದ ನೊಂದು ವಿ
ರೋಧಿ ಷಡ್ವರ್ಗದ ವಿಕಾರ
ವ್ಯಾಧಿಯಲಿ ಬೆಂಡಾಗಿ ಭವಪಾಶದಲಿ ಬಿಗಿವಡೆದು
ವಾದ ರಚನೆಯ ಬಲೆಗೆ ಸಿಲುಕಿ ವಿ
ರೋಧಗೊಂಬೀ ಮೋಹ ವಿದ್ಯಾ
ಸಾಧಕರು ನೀವ್ ಪಶುಗಳೆಂದರೆ ಖೇದವೇಕೆಂದ (ಕರ್ಣ ಪರ್ವ, ೬ ಸಂಧಿ, ೨೯ ಪದ್ಯ)

ತಾತ್ಪರ್ಯ:
ಪ್ರಕೃತಿಯ ದೆಸೆಯಿಂದಗುವ ತಾಪದಿಂದ ನೊಂದು ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಆರು ಶತ್ರುಗಳಿಂದಾಗುವ ವಿಚಾರವೆಂಬ ರೋಗದಿಂದ ಬೆಂಡೆದ್ದು ಸಂಸಾರ ಪಾಶದಿಂದ ಕಟ್ಟುವಡೆದು ವೃಥಾವಾದಗಳಿಂದಾಗುವ ಬಲೆಗೆ ಸಿಕ್ಕು ಸತ್ಯಕ್ಕೆ ವಿರೋಧವಾದ ಮೋಹ ವಿದ್ಯೆಯ ಸಾಧಕರಾದ ನೀವು ಪಶುಗಳೆಂದರೆ ನಿಮಗೇಕೆ ದುಃಖ ಎಂದು ಶಂಕರನು ದೇವತೆಗಳನ್ನು ಜರಿದನು.

ಅರ್ಥ:
ಆಧಿಬೌತಿಕ: ಪಂಚಭೂತಗಳಿಂದ ಬರುವ ದುಃಖ; ನೊಂದು: ದುಃಖ; ವಿರೋಧ: ವೈರತ್ವ, ತಡೆ; ಷಡ್ವರ್ಗ: ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ವೆಂಬ ಆರು ಶತ್ರುಗಳು; ವಿಕಾರ: ಬದಲಾವಣೆ; ವ್ಯಾಧಿ: ರೋಗ, ಖಾಯಿಲೆ; ಬೆಂಡು: ತಿರುಳಿಲ್ಲದುದು; ಭವ: ಇರುವಿಕೆ; ಪಾಶ: ಬಂಧನ; ಬಿಗಿ: ಭದ್ರವಾಗಿರುವುದು; ವಾದ: ಮಾತು, ಸಂಭಾಷಣೆ; ರಚನೆ: ನಿರ್ಮಾಣ, ಸೃಷ್ಟಿ; ಬಲೆ: ಮೋಸ, ವಂಚನೆ; ಸಿಲುಕು: ಬಂಧನಕ್ಕೊಳಗಾದುದು; ಮೋಹ: ಭ್ರಾಂತಿ, ಭ್ರಮೆ; ವಿದ್ಯಾ: ವಿದ್ಯೆ, ಜ್ಞಾನ; ಸಾಧಕ: ಸಾಧನೆಯ ಪಥವನ್ನು ಹಿಡಿದವನು; ಪಶು: ಮೃಗ; ಖೇದ: ದುಃಖ;

ಪದವಿಂಗಡಣೆ:
ಆಧಿಭೌತಿಕದಿಂದ +ನೊಂದು +ವಿ
ರೋಧಿ +ಷಡ್ವರ್ಗದ +ವಿಕಾರ
ವ್ಯಾಧಿಯಲಿ +ಬೆಂಡಾಗಿ +ಭವಪಾಶದಲಿ +ಬಿಗಿವಡೆದು
ವಾದ+ ರಚನೆಯ +ಬಲೆಗೆ +ಸಿಲುಕಿ +ವಿ
ರೋಧ+ಕೊಂಬ+ಈ+ ಮೋಹ +ವಿದ್ಯಾ
ಸಾಧಕರು +ನೀವ್ +ಪಶುಗಳೆಂದರೆ +ಖೇದವೇಕೆಂದ

ಅಚ್ಚರಿ:
(೧) ವಿರೋಧಿ, ವಿಕಾರ, ವಿರೋಧ, ವಿದ್ಯಾಸಾಧಕ – ವಿ ಕಾರದ ಪದಗಳ ಬಳಕೆ
(೨) ಬ ಕಾರದ ತ್ರಿವಳಿ ಪದ – ಬೆಂಡಾಗಿ ಭವಪಾಶದಲಿ ಬಿಗಿವಡೆದು

ಪದ್ಯ ೬೯: ರಾಜನು ತನ್ನ ಅಭ್ಯುದಯಕ್ಕೆ ಯಾವ ಗುಣಗಳನ್ನು ರೂಢಿಸಿಕೊಳ್ಳಬೇಕು?

ಗುರು ವಿರೋಧ ಮಹೀಬುಧರ ಮ
ತ್ಸರವು ದೈವದ್ರೋಹ ಗುಣ ಸಂ
ಹರಣ ಬಂಧು ದೇಷವತ್ಯಾಲೀಢ ವಾಕ್ಕಥನ
ಶರಣಜನ ದಂಡಿತ್ವವೆಂಬಿವ
ನರವರಿಸದಂಗೈಪ ಭೂಪನ
ಸಿರಿಗೆ ಮೂಡುಗು ಕೇಡು ನಿಮಿಷದೊಳರಸ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೬೯ ಪದ್ಯ)

ತಾತ್ಪರ್ಯ:
ರಾಜನಾದವನು ಯಾವ ಗುಣವನ್ನು ಬೆಳಸಿಕೊಂಡರೆ ಅವನಿಗೆ ಸಿರಿಯು ಒಲಿಯುತ್ತದೆ ಎಂದು ವಿದುರ ತಿಳಿಸಿದ್ದಾರೆ. ಗುರುವನ್ನು ವಿರೋಧಿಸುವವ, ಬ್ರಾಹ್ಮಣರನ್ನು ಹೊಟ್ಟೆಕಿಚ್ಚಿನಿಂದ ನೋಡುವವ, ಗುಣಗಳನ್ನು ಕೊಲ್ಲುವವ, ಬಂಧುಗಳನ್ನು ದ್ವೇಷಿಸುವ, ಇನ್ನೊಬ್ಬರ ಮನಸ್ಸನ್ನು ಗಾಯಗೊಳಿಸುವ ಮಾತನಾಡುವ, ಆಶ್ರಿತರನ್ನು ಶಿಕ್ಷಿಸುವ, ಈ ಗುಣಗಳನ್ನು ರಾಜನಾದವನು ರೂಢಿಸಿಕೊಂಡರೆ ಅವನ್ ಐಶ್ವರ್ಯಕ್ಕೆ ಕ್ಷಣಮಾತ್ರದಲ್ಲಿ ಕೇಡುಂಟಾಗುತ್ತದೆ.

ಅರ್ಥ:
ಗುರು: ಆಚಾರ್ಯ; ವಿರೋಧ: ಎದುರು,ವೈರತ್ವ, ಹಗೆತನ; ಮಹಿ: ಭೂಮಿ; ಮಹೀಬುಧರು: ಬ್ರಾಹ್ಮಣರು; ಮತ್ಸರ:ಹೊಟ್ಟೆಕಿಚ್ಚು, ಈರ್ಷ್ಯೆ; ದೈವ: ಸುರ, ದೇವತೆ; ದ್ರೋಹ:ವಿಶ್ವಾಸಘಾತ, ವಂಚನೆ, ಮೋಸ; ಗುಣ:ನಡತೆ, ಸ್ವಭಾವ; ಸಂಹರಣ: ನಾಶ; ಬಂಧು: ಬಾಂಧವರು; ದ್ವೇಷ: ಹಗೆ; ಆಲೀಢ: ಆವರಿಸಿದ; ವಾಕ್: ಮಾತು, ವಾಣಿ; ಶರಣ:ಆಶ್ರಿತ; ದಂಡಿತ್ವ: ಹೊಡೆಯುವ, ದಂಡಿಸು, ಶಿಕ್ಷಿಸು; ಅರವರಿಸು: ವಿಚಾರಿಸು, ಕಡೆಗಣಿಸು; ಭೂಪ: ರಾಜ; ಸಿರಿ: ಐಶ್ವರ್ಯ; ಮೂಡು: ಹುಟ್ಟು; ಕೇಡು:ಆಪತ್ತು, ಕೆಡಕು; ನಿಮಿಷ: ಕ್ಷಣಮಾತ್ರ; ಅರಸ: ರಾಜ;

ಪದವಿಂಗಡಣೆ:
ಗುರು +ವಿರೋಧ +ಮಹೀಬುಧರ+ ಮ
ತ್ಸರವು+ ದೈವದ್ರೋಹ +ಗುಣ+ ಸಂ
ಹರಣ+ ಬಂಧು+ ದೇಷವ್+ಅತಿ+ಆಲೀಢ +ವಾಕ್ಕಥನ
ಶರಣಜನ+ ದಂಡಿತ್ವವ್+ಎಂಬ್+ಇವನ್
ಅರವರಿಸದಂಗೈಪ+ ಭೂಪ
ಸಿರಿಗೆ+ ಮೂಡುಗು+ ಕೇಡು+ ನಿಮಿಷದೊಳ್+ಅರಸ +ಕೇಳೆಂದ

ಅಚ್ಚರಿ:
(೧) ವಿರೋಧ, ಮತ್ಸರ, ಸಂಹರಣ, ದ್ವೇಷ, ವಾಕ್ಕಥನ, ದಂಡಿತ್ವ, – ೬ ಬಗೆಯ ಗುಣಗಳನ್ನು ತ್ಯಜಿಸಬೇಕು
(೨) ಭೂಪ, ಅರಸ – ಸಮನಾರ್ಥಕ ಪದ