ಪದ್ಯ ೩೦: ಬ್ರಹ್ಮನಿಗೆ ನಳಿನಸಂಭವ ಎಂಬ ಹೆಸರು ಹೇಗೆ ಬಂತು?

ಹಲವು ಯುಗ ಪರಿಯಂತವಲ್ಲಿಯೆ
ತೊಳಲಿ ಕಡೆಗಾಣದೆ ಕೃಪಾಳುವ
ನೊಲಿದು ಹೊಗಳಿದನಜನು ವೇದ ಸಹಸ್ರಸೂಕ್ತದ್ಲಿ
ಬಳಿಕ ಕಾರುಣ್ಯದಲಿ ನಾಭೀ
ನಳಿನದಲಿ ತೆಗೆದನು ವಿರಿಂಚಿಗೆ
ನಳಿನ ಸಂಭವನೆಂಬ ಹೆಸರಾಯ್ತಮ್ದು ಮೊದಲಾಗಿ (ಅರಣ್ಯ ಪರ್ವ, ೧೫ ಸಂಧಿ, ೩೦ ಪದ್ಯ)

ತಾತ್ಪರ್ಯ:
ಬ್ರಹ್ಮನು ವಿಷ್ಣುವಿನ ಹೊಟ್ಟೆಯೊಳ ಹೊಕ್ಕು ಬಹಳ ವರ್ಷಗಳಾಯಿತು, ಅವನು ದಾರಿಕಾಣದೆ, ಕೃಪಾಳುವಾದ ಶ್ರೀ ಹರಿಯನ್ನು ವೇದ ಸಹಸ್ರ ಸೂಕ್ತದಿಂದ ಹೊಗಳಿದನು, ಆಗ ವಿಷ್ಣುವು ಕರುಣೆಯಿಂದ ತನ್ನ ಹೊಕ್ಕಳಿನ ಕಮಲದಿಂದ ಬ್ರಹ್ಮನನ್ನು ಹೊರತೆಗೆದನು. ಅಂದಿನಿಂದ ಬ್ರಹ್ಮನಿಗೆ ನಳಿನಸಂಭವ ಎಂಬ ಹೆಸರಾಯಿತು.

ಅರ್ಥ:
ಹಲವು: ಬಹಳ; ಯುಗ: ಸಮಯ; ಪರಿಯಂತ: ಕಳೆದು, ಮುಗಿಸು; ತೊಳಲು: ಬವಣೆ, ಸಂಕಟ; ಕಡೆ: ಕೊನೆ; ಕಾಣು: ತೋರು; ಕೃಪಾಳು: ದಯೆತೋರುವ; ಒಲಿ: ಒಪ್ಪು, ಸಮ್ಮತಿಸು; ಹೊಗಳು: ಪ್ರಶಂಶಿಸು; ಅಜ: ಬ್ರಹ್ಮನು; ವೇದ: ಶೃತಿ; ಸಹಸ್ರ: ಸಾವಿರ; ಸೂಕ್ತ: ಹಿತವಚನ; ಬಳಿಕ: ನಂತರ; ಕಾರುಣ್ಯ: ದಯೆ; ನಾಭಿ: ಹೊಕ್ಕಳು; ನಳಿನ: ಕಮಲ; ತೆಗೆ: ಹೊರತರು; ವಿರಿಂಚಿ: ಬ್ರಹ್ಮ; ಸಂಭವ: ಹುಟ್ಟು; ಹೆಸರು: ನಾಮ; ಮೊದಲು: ಮುಂಚೆ;

ಪದವಿಂಗಡಣೆ:
ಹಲವು +ಯುಗ +ಪರಿಯಂತವ್+ಅಲ್ಲಿಯೆ
ತೊಳಲಿ +ಕಡೆ+ಕಾಣದೆ+ ಕೃಪಾಳುವನ್
ಒಲಿದು +ಹೊಗಳಿದನ್+ಅಜನು +ವೇದ +ಸಹಸ್ರ+ಸೂಕ್ತದಲಿ
ಬಳಿಕ +ಕಾರುಣ್ಯದಲಿ +ನಾಭೀ
ನಳಿನದಲಿ +ತೆಗೆದನು +ವಿರಿಂಚಿಗೆ
ನಳಿನ ಸಂಭವನೆಂಬ +ಹೆಸರಾಯ್ತಂದು+ ಮೊದಲಾಗಿ

ಅಚ್ಚರಿ:
(೧) ವಿರಿಂಚಿ, ಅಜ, ನಳಿನಸಂಭವ – ಸಮನಾರ್ಥಕ ಪದಗಳು

ಪದ್ಯ ೭೦: ಮಂದೇಹ ಅಸುರರು ಯಾರ ಬಳಿ ಕಾಳಗ ಮಾಡಲಿಚ್ಛಿಸಿದರು?

ಹರಿಹರ ವಿರಿಂಚಿಗಳು ಮೊದಲಾ
ದುರುವ ದೇವರುಗಳೊಳು ಮತ್ತಾ
ತರವಿಡಿದ ಹದಿನಾಲ್ಕು ಜಗದೊಳಗುಳ್ಳ ದೇವರಲಿ
ತರಣಿಯತಿ ಬಲವಂತನೆಂಬುದ
ನರಿದು ಮಂದೇಹಾಸುರರು ಸಾ
ಸಿರ ಕರದ ದಿನನಾಥನೊಳು ಕಾಳಗವ ಬಯಸಿಹರು (ಅರಣ್ಯ ಪರ್ವ, ೮ ಸಂಧಿ, ೭೦ ಪದ್ಯ)

ತಾತ್ಪರ್ಯ:
ಹರಿಹರ ಬ್ರಹ್ಮರು ಮತ್ತು ಹದಿನಾಲ್ಕು ಲೋಕದಲ್ಲಿರುವ ಎಲ್ಲಾ ದೇವತೆಗಳಲ್ಲಿ ಸೂರ್ಯನು ಅತಿ ಬಲಶಾಲಿಯೆಂಬುದನ್ನು ತಿಳಿದು ಮಂದೇಹರೆಂಬ ಅಸುರರು ಸೂರ್ಯನೊಡನೆ ಕಾಳಗ ಮಾಡಲು ಇಚ್ಛೆಪಟ್ಟರು.

ಅರ್ಥ:
ಹರಿ: ವಿಷ್ಣು; ಹರ: ಶಿವ; ವಿರಿಂಚಿ: ಬ್ರಹ್ಮ; ಉರು: ವಿಶೇಷವಾದ, ಶ್ರೇಷ್ಠವಾದ; ದೇವ: ಸುರರು; ಮತ್ತಾರು: ಉಳಿದವರು; ಜಗ: ಪ್ರಪಮ್ಚ; ತರಣಿ: ಸೂರ್ಯ; ಬಲವಂತ: ಶೂರ, ಪರಾಕ್ರಮಿ; ಅರಿ: ತಿಳಿ; ಅಸುರ: ರಾಕ್ಷಸ; ಸಾಸಿರ: ಸಾವಿರ; ಕರ: ಹಸ್ತ; ದಿನನಾಥ: ಸೂರ್ಯ; ಕಾಳಗ: ಯುದ್ಧ; ಬಯಸು: ಇಷ್ಟಪಡು;

ಪದವಿಂಗಡಣೆ:
ಹರಿ+ಹರ+ ವಿರಿಂಚಿಗಳು +ಮೊದಲಾದ್
ಉರುವ +ದೇವರುಗಳೊಳು +ಮತ್ತಾ
ತರವಿಡಿದ +ಹದಿನಾಲ್ಕು +ಜಗದೊಳಗುಳ್ಳ+ ದೇವರಲಿ
ತರಣಿ+ಅತಿ +ಬಲವಂತನ್+ಎಂಬುದನ್
ಅರಿದು+ ಮಂದೇಹಾಸುರರು+ ಸಾ
ಸಿರ +ಕರದ +ದಿನನಾಥನೊಳು +ಕಾಳಗವ +ಬಯಸಿಹರು

ಅಚ್ಚರಿ:
(೧) ದಿನನಾಥ, ತರಣಿ – ಸೂರ್ಯನನ್ನು ಕರೆದ ಪರಿ

ಪದ್ಯ ೨೩: ಶಿವನು ಯಾವ ರೀತಿ ಅಭಯವನ್ನು ನೀಡಿದನು?

ನಗೆಯ ಮೊಳೆ ನಸುಹೊಳೆಯ ಬೊಮ್ಮನ
ಮೊಗವ ನೋಡಿದನಭವನೀಶನ
ಬಗೆಯ ಭಾವವನರಿದು ತಲೆಗುತ್ತಿದನು ಕಮಲಭವ
ದುಗುಡವನು ಬಿಡಿ ನಿಖಿಳ ದಿವಿಜಾ
ಳಿಗಳು ಪಶುಗಳಲಾ ವಿರಿಂಚನ
ವಿಗಡತನದಲಿ ಕೆಟ್ಟಿರಕಟಿನ್ನಂಜಬೇಡೆಂದ (ಕರ್ಣ ಪರ್ವ, ೬ ಸಂಧಿ, ೨೩ ಪದ್ಯ)

ತಾತ್ಪರ್ಯ:
ಶಿವನು ಬ್ರಹ್ಮನು ಮಾಡಿದ ಮನವಿಯನ್ನು ಕೇಳಿ ನಸುನಕ್ಕು ಬ್ರಹ್ಮನ ಮುಖವನ್ನು ನೋಡಿದನು. ಬ್ರಹ್ಮನು ಶಿವನ ಭಾವವನ್ನು ತಿಳಿದು ತಲೆತಗ್ಗಿಸಿದನು. ಶಿವನು ಅಲ್ಲಿ ನೆರೆದಿದ್ದ ಸಮಸ್ತ ದೇವತೆಗಳೂ ಪಶುಗಳು ತಾನೆ, ಬ್ರಹ್ಮನು ತಾರಕನ ಮಕ್ಕಳಿಗೆ ನೀಡಿದ ವರದಿಂದ ಕೆಟ್ಟಿರಿ, ಇನ್ನು ನೀವು ಹೆದರುವ ಭಯ ಬೇಡ ಎಂದು ಅಭಯವನ್ನು ನೀಡಿದನು.

ಅರ್ಥ:
ನಗೆ: ಸಂತೋಷ; ಮೊಳೆ: ಚಿಗುರು, ಕುಡಿ; ನಸು: ಕೊಂಚ, ಸ್ವಲ್ಪ; ಹೊಳೆ: ಕಾಂತಿ; ಬೊಮ್ಮ: ಬ್ರಹ್ಮ; ಮೊಗ: ಮುಖ; ನೋಡು: ವೀಕ್ಷಿಸು; ಅಭವ: ಬ್ರಹ್ಮ; ಈಶ: ಶಂಕರ; ಬಗೆ: ರೀತಿ; ಭಾವನ: ಮನಸ್ಸಿನ ಭಾವನೆ; ಅರಿ: ತಿಳಿ; ತಲೆ: ಶಿರ; ತಲೆಗುತ್ತು: ತಲೆ ಕೆಳಗೆ ಮಾಡು; ಕಮಲಭವ: ಕಮಲದಿಂದ ಹುಟ್ಟಿದ (ಬ್ರಹ್ಮ); ದುಗುಡ: ದುಃಖ; ಬಿಡಿ: ತ್ಯಜಿಸಿ; ನಿಖಿಳ: ಎಲ್ಲಾ; ದಿವಿಜ: ದೇವತೆ; ಆಳಿಗಳು: ಗುಂಪು; ಪಶು: ಮೃಗ; ವಿರಿಂಚ: ಬ್ರಹ್ಮ; ವಿಗಡ: ತೊಂದರೆ; ಕೆಟ್ಟಿರಿ: ತೊಂದರೆಗೆ ಒಳಗಾದಿರಿ; ಅಂಜು: ಭಯಪಡು; ಅಕಟ: ಅಯ್ಯೋ;

ಪದವಿಂಗಡಣೆ:
ನಗೆಯ +ಮೊಳೆ +ನಸುಹೊಳೆಯ +ಬೊಮ್ಮನ
ಮೊಗವ +ನೋಡಿದನ್+ಅಭವನ್+ಈಶನ
ಬಗೆಯ+ ಭಾವವನ್+ಅರಿದು +ತಲೆಗುತ್ತಿದನು+ ಕಮಲಭವ
ದುಗುಡವನು +ಬಿಡಿ +ನಿಖಿಳ +ದಿವಿಜಾ
ಳಿಗಳು+ ಪಶುಗಳಲಾ +ವಿರಿಂಚನ
ವಿಗಡತನದಲಿ +ಕೆಟ್ಟಿರ್+ಅಕಟ್+ಇನ್ನಂಜ+ಬೇಡೆಂದ

ಅಚ್ಚರಿ:
(೧) ಬೊಮ್ಮ, ಕಮಲಭವ, ಅಭವ, ವಿರಿಂಚಿ – ಬ್ರಹ್ಮನ ೪ ಹೆಸರುಗಳನ್ನು ಉಪಯೋಗಿಸಲಾಗಿದೆ
(೨) ಪದಗಳ ಜೋಡಣೆ – ಕೆಟ್ಟಿರಕಟಿನ್ನಂಜಬೇಡೆಂದ

ಪದ್ಯ ೩೪: ದುರ್ಯೋಧನನು ತನ್ನ ವಿಚಾರವನ್ನು ಹೇಗೆ ಸಮರ್ಥಿಸಿಕೊಂಡನು?

ದೇವಕೀಸುತನೇನು ಬಂಡಿಯ
ಬೋವಗುಲದಲಿ ಜನಿಸಿದನೆ ಮೇ
ಣಾ ವಿರಿಂಚಿಯದಾವ ಸಾರಥಿಕುಲದ ಪೀಳಿಗೆಯೊ
ಕಾವುದೊಬ್ಬರನೊಬ್ಬರಿದರೊಳ
ಗಾವ ಹಾನಿ ಪರಪ್ರಯೋಜನ
ಭಾವಕರು ಸತ್ಪುರುಷರಿದಕೆ ವಿಚಾರವೇನೆಂದ (ಕರ್ಣ ಪರ್ವ, ೫ ಸಂಧಿ, ೩೪ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ಮಾತನ್ನು ಮುಂದುವರಿಸುತ್ತಾ, ಅಲ್ಲಾ ಕೃಷ್ನನು ಯಾವ ಸಾರಥಿಕುಲದಲ್ಲಿ ಹುಟ್ಟಿದವನೇ? ಸೃಷ್ಟಿಕರ್ತನಾದ ಬ್ರಹ್ಮನು ಸೂತಕುಲದವನೇ? ಒಬ್ಬರನ್ನೊಬ್ಬರು ಕಾಪಾಡಿದರೆ ಅದರಿಂದ ಯಾವ ನಷ್ಟ? ಸತ್ಪುರುಷರು ಎಂದರೆ ಪರೋಪಕಾರಭಾವವುಳ್ಳವರು. ಇದರಲ್ಲಿ ನೀವು ಹಿಂಜರಿಯುವಂತಹ ವಿಚಾರವೇನಿದೆ ಎಂದು ತನ್ನ ವಾದವನ್ನು ಸಮರ್ಥಿಸಿಕೊಂಡನು.

ಅರ್ಥ:
ದೇವಕೀಸುತ: ಕೃಷ್ಣ; ಸುತ: ಮಗ; ಬಂಡಿ: ರಥ; ಬೋವ: ಬಂಡಿ ಓಡಿಸುವವ; ಸಾರಥಿ; ಕುಲ: ವಂಶ; ಜನಿಸು: ಹುಟ್ಟು; ಮೇಣ್: ಅಥವ; ವಿರಿಂಚಿ: ಬ್ರಹ್ಮ; ಸಾರಥಿ: ಸೂತ, ರಥವನ್ನು ಓಡಿಸುವವ; ಪೀಳಿಗೆ: ಒಂದು ವಂಶದ ಕುಡಿ; ಕಾವುದು: ಕಾವಲು, ರಕ್ಷಣೆ; ಹಾನಿ: ನಷ್ಟ; ಪರ: ಬೇರೆಯವರ; ಪ್ರಯೋಜನ: ಉಪಯೋಗ; ಭಾವಕ: ಉಂಟುಮಾಡುವ; ಸತ್ಪುರುಷ: ಒಳ್ಳೆಯ ನಡತೆಯುಳ್ಳ ವ್ಯಕ್ತಿ; ವಿಚಾರ: ಮತ, ಅಭಿಪ್ರಾಯ;

ಪದವಿಂಗಡಣೆ:
ದೇವಕೀಸುತನೇನು +ಬಂಡಿಯ
ಬೋವ+ಕುಲದಲಿ+ ಜನಿಸಿದನೆ+ ಮೇಣ್
ಆ+ ವಿರಿಂಚಿ+ಅದಾವ +ಸಾರಥಿಕುಲದ +ಪೀಳಿಗೆಯೊ
ಕಾವುದ್+ಒಬ್ಬರನ್+ಒಬ್ಬರ್+ಇದರೊಳಗ್
ಅವ +ಹಾನಿ +ಪರ+ಪ್ರಯೋಜನ
ಭಾವಕರು+ ಸತ್ಪುರುಷರ್+ಇದಕೆ +ವಿಚಾರವೇನೆಂದ

ಅಚ್ಚರಿ:
(೧) ಸತ್ಪುರುಷರು ಯಾರು? ಪರಪ್ರಯೋಜನ ಭಾವಕರು ಸತ್ಪುರುಷರು
(೨) ಬೋವಕುಲ, ಸಾರಥಿಕುಲ – ಸಮನಾರ್ಥಕ ಪದ
(೩) ೪ ಸಾಲು ಒಂದೇ ಪದವಾಗಿ ರಚಿತವಾಗಿರುವುದು