ಪದ್ಯ ೧೮: ಕೌರವನನ್ನು ಉತ್ತರನಿಗೆ ಹೋಲಿಸಿ ಹೇಗೆ ಹಂಗಿಸಿದನು?

ಕಂಡೆವಂದೊಬ್ಬನ ಪಲಾಯನ
ಪಂಡಿತನನುತ್ತರನನಾತನ
ಗಂಡ ನೀನಾದೈ ಪಲಾಯನಸಿರಿಯ ಸೂರೆಯಲಿ
ಭಂಡರಿಬ್ಬರು ಭೂಮಿಪರೊಳಾ
ಭಂಡನಿಗೆ ನೀ ಮಿಗಿಲು ಸಲಿಲದ
ಕೊಂಡದಲಿ ಹೊಕ್ಕೆನೆ ವಿರಾಟಜನೆಂದನಾ ಭೂಪ (ಗದಾ ಪರ್ವ, ೫ ಸಂಧಿ, ೧೮ ಪದ್ಯ)

ತಾತ್ಪರ್ಯ:
ಹಿಂದೆ ಗೋಗ್ರಹಣದಲ್ಲಿ ಉತ್ತರಕುಮಾರನನೆಂಬ ಪಲಾಯನ ಪಂಡಿತನನ್ನು ನೋಡಿದ್ದೇವೆ, ನೀನು ಅವನನ್ನು ಪಲಾಯನ ಸಂಪತ್ತಿನಲ್ಲಿ ಮೀರಿಸಿದೆ. ರಾಜರಲ್ಲಿ ಇಬ್ಬರು ಭಂಡರು. ಆ ಭಂಡನನ್ನು ನೀನು ಮೀರಿಸಿದೆ. ಉತ್ತರನು ಓಡಿಹೋದ, ಅವನೇನು ನಿನ್ನಂತೆ ನೀರನ್ನು ಹೊಕ್ಕನೆ ಎಂದು ಹೇಳಿ ಹಂಗಿಸಿದನು.

ಅರ್ಥ:
ಕಂಡು: ನೋಡು; ಪಲಾಯನ: ಓಡುವಿಕೆ, ಪರಾರಿ; ಪಂಡಿತ: ತಿಳಿದವ, ವಿದ್ವಾಂಸ; ಗಂಡ: ಯಜಮಾನ; ಸಿರಿ: ಐಶ್ವರ್ಯ; ಸೂರೆ: ಲೂಟಿ; ಭಂಡ: ನಾಚಿಕೆ, ಲಜ್ಜೆ; ಭೂಮಿ: ಇಳೆ; ಮಿಗಿಲು: ಹೆಚ್ಚು; ಸಲಿಲ: ಜಲ; ಹೊಕ್ಕು: ಸೇರು; ವಿರಾಟಜ: ಉತ್ತರ (ವಿರಾಟನ ಮಗ); ಭೂಪ: ರಾಜ;

ಪದವಿಂಗಡಣೆ:
ಕಂಡೆವ್+ಅಂದ್+ಒಬ್ಬನ +ಪಲಾಯನ
ಪಂಡಿತನನ್+ಉತ್ತರನನ್+ಆತನ
ಗಂಡ +ನೀನಾದೈ +ಪಲಾಯನ+ಸಿರಿಯ +ಸೂರೆಯಲಿ
ಭಂಡರಿಬ್ಬರು+ ಭೂಮಿಪರೊಳ್+ಆ
ಭಂಡನಿಗೆ +ನೀ +ಮಿಗಿಲು +ಸಲಿಲದ
ಕೊಂಡದಲಿ+ ಹೊಕ್ಕೆನೆ+ ವಿರಾಟಜನೆಂದನಾ +ಭೂಪ

ಅಚ್ಚರಿ:
(೧) ಹೋಲಿಸುವ ಪರಿ – ಪಲಾಯನ ಪಂಡಿತನನುತ್ತರನನಾತನ ಗಂಡ ನೀನಾದೈ ಪಲಾಯನಸಿರಿಯ ಸೂರೆಯಲಿ
(೨) ೨ನೇ ಸಾಲು ಒಂದೇ ಪದವಾಗಿ ರಚನೆ – ಪಂಡಿತನನುತ್ತರನನಾತನ
(೩) ಉತ್ತರಕುಮಾರನನ್ನು – ಉತ್ತರ, ವಿರಾಟಜ ಎಂದು ಕರೆದಿರುವುದು