ಪದ್ಯ ೨೬: ಭೀಷ್ಮನು ವೇಗವಾಗಿ ಎಲ್ಲಿಗೆ ಬಂದನು?

ವಿರಹ ದಾವುಗೆ ಕಿಚ್ಚು ಭೂಮೀ
ಶ್ವರನ ಮುಸುಕಿತು ಬಲಿದವಸ್ಥೆಯ
ನರಸ ಬಣ್ಣಿಸಲರಿಯೆನೇಳೆಂಟೊಂಬತರ ಬಳಿಯ
ಮರಣವೀತಂಗೆಂಬ ಜನದು
ಬ್ಬರದ ಗುಜುಗುಜುವರಿದು ಯಮುನಾ
ವರನದಿಯ ತೀರಕ್ಕೆ ಬಂದನು ಭೀಷ್ಮ ವಹಿಲದಲಿ (ಆದಿ ಪರ್ವ, ೨ ಸಂಧಿ, ೨೬ ಪದ್ಯ)

ತಾತ್ಪರ್ಯ:
ವಿರಹದ ಕುಲುಮೆಯ ಬೆಂಕಿಯು ಅವನನ್ನು ಆವರಿಸಿತು. ಆ ತಾಪವನ್ನು ಬಣ್ಣಿಸಲಾರೆ. ಏಳೋ, ಎಂಟೋ, ಒಂಬತ್ತು ದಿನಗಳಲ್ಲಿ ಇವನ ಮರಣವು ನಿಶ್ಚಿತವೆಂದು ಜನರು ಗುಜುಗುಜು ಮಾತನಾಡಿದರು. ಅದನ್ನು ಕೇಳಿ ಭೀಷ್ಮನು ಯಮುನಾ ನದಿಯ ತೀರಕ್ಕೆ ವೇಗದಿಂದ ಬಂದನು.

ಅರ್ಥ:
ವಿರಹ: ಅಗಲಿಕೆ, ವಿಯೋಗ; ದಾವು: ತಾಪ, ಧಗೆ; ಕಿಚ್ಚು: ಬೆಂಕಿ; ಭೂಮೀಶ್ವರ: ರಾಜ; ಮುಸುಕು: ಆವರಿಸು; ಬಲಿ: ಹೆಚ್ಚಾ, ಗಟ್ಟಿ; ಅವಸ್ಥೆ: ಸ್ಥಿತಿ; ಅರಸ: ರಾಜ; ಬಣ್ಣಿಸು: ವಿವರಿಸು; ಅರಿ: ತಿಳಿ; ಬಳಿ: ನಂತರ; ಮರಣ: ಸವು; ಉಬ್ಬರ: ಅತಿಶಯ; ಗುಜುಗುಜು: ಮಾತು; ಅರಿ: ತಿಳಿ; ನದಿ: ಸರೋವರ; ತೀರ: ದಡ; ಬಂದು: ಆಗಮಿಸು; ವಹಿಲ: ವೇಗ;

ಪದವಿಂಗಡಣೆ:
ವಿರಹ +ದಾವುಗೆ +ಕಿಚ್ಚು +ಭೂಮೀ
ಶ್ವರನ +ಮುಸುಕಿತು +ಬಲಿದ್+ಅವಸ್ಥೆಯನ್
ಅರಸ +ಬಣ್ಣಿಸಲ್+ಅರಿಯೆನ್+ಏಳೆಂಟೊಂಬತರ +ಬಳಿಯ
ಮರಣವ್+ಈತಂಗ್+ಎಂಬ +ಜನದ್
ಉಬ್ಬರದ +ಗುಜುಗುಜುವ್+ಅರಿದು +ಯಮುನಾ
ವರ+ನದಿಯ +ತೀರಕ್ಕೆ+ ಬಂದನು +ಭೀಷ್ಮ +ವಹಿಲದಲಿ

ಅಚ್ಚರಿ:
(೧) ವಿರಹದ ತೀವ್ರತೆಯನ್ನು ಹೇಳುವ ಪರಿ – ವಿರಹ ದಾವುಗೆ ಕಿಚ್ಚು ಭೂಮೀಶ್ವರನ ಮುಸುಕಿತು

ಪದ್ಯ ೩೧: ಅರ್ಜುನನೇಕೆ ನೆಲದ ಮೇಲೆ ಬಿದ್ದನು?

ಮುಚ್ಚಿದನು ಕಂಗಳನು ಧೈರ್ಯದ
ಕೆಚ್ಚಿನೆದೆ ಕರಗಿತ್ತು ಶೋಕದ
ಕಿಚ್ಚು ಕೊಂಡುದು ಮನವನಖಿಳೇಂದ್ರಿಯದ ಸುಳಿವಡಗೆ
ಎಚ್ಚರಡಗಿತು ನೆಲಕೆ ಕೈಗಳ
ಬಚ್ಚಿ ಬಿದ್ದನು ಪುತ್ರವಿರಹದ
ಹೆಚ್ಚಿಗೆಯ ತಾಪವನು ಹೆಸರಿಡಲರಿಯೆನರ್ಜುನನ (ದ್ರೋಣ ಪರ್ವ, ೮ ಸಂಧಿ, ೩೧ ಪದ್ಯ
)

ತಾತ್ಪರ್ಯ:
ಅರ್ಜುನನ ಪುತ್ರವಿರಹದ ತಾಪವನ್ನು ವರ್ಣಿಸಲಾರೆ, ಅವನು ಕಣ್ಣು ಮುಚ್ಚಿಕೊಂಡನು, ಎದೆಯ ಕೆಚ್ಚು ಕರಗಿಹೋಗಿ, ಶೋಕದ ಕಿಚ್ಚು ಅವನ ಮನಸ್ಸನ್ನೂ ಎಲ್ಲಾ ಇಂದ್ರಿಯಗಳನ್ನೂ ವ್ಯಾಪಿಸಿತು. ಎಚ್ಚರದಪ್ಪಿ ಕೈಗಳನ್ನಗಲಿಸಿ ನೆಲದ ಮೇಲೆ ಬಿದ್ದು ಬಿಟ್ಟನು.

ಅರ್ಥ:
ಮುಚ್ಚು: ಮರೆಮಾಡು, ಹೊದಿಸು; ಕಂಗಳು: ಕಣ್ಣು, ನಯನ; ಧೈರ್ಯ: ಎದೆಗಾರಿಕೆ; ಕೆಚ್ಚು: ಸಾಹಸ; ಕರಗು: ಕಡಿಮೆಯಾಗು; ಶೋಕ: ದುಃಖ; ಕಿಚ್ಚು: ಬೆಂಕಿ, ಅಗ್ನಿ; ಕೊಂಡು: ಪಡೆದು; ಮನ: ಮನಸ್ಸು; ಅಖಿಳ: ಎಲ್ಲಾ: ಇಂದ್ರಿಯ: ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳನ್ನು ಗ್ರಹಿಸಲು ಸಹಕಾರಿಯಾಗಿರುವ ಅವಯವ; ಸುಳಿವು: ಕುರುಹು; ಎಚ್ಚರ: ನಿದ್ರೆಯಿಂದ ಏಳುವುದು; ನೆಲ: ಭೂಮಿ; ಕೈ: ಹಸ್ತ; ಬಿಚ್ಚು: ಬೇರೆಮಾಡು; ಪುತ್ರ: ಮಗ; ವಿರಹ: ಅಗಲಿಕೆ; ಹೆಚ್ಚಿಗೆ: ಅಧಿಕ; ತಾಪ: ಶಾಖ; ದುಃಖ; ಹೆಸರು: ನಾಮ; ಅರಿ: ತಿಳಿ; ಎದೆ: ವಕ್ಷಸ್ಥಳ;

ಪದವಿಂಗಡಣೆ:
ಮುಚ್ಚಿದನು +ಕಂಗಳನು +ಧೈರ್ಯದ
ಕೆಚ್ಚಿನ್+ಎದೆ +ಕರಗಿತ್ತು +ಶೋಕದ
ಕಿಚ್ಚು +ಕೊಂಡುದು +ಮನವನ್+ಅಖಿಳ+ಇಂದ್ರಿಯದ +ಸುಳಿವಡಗೆ
ಎಚ್ಚರ್+ಅಡಗಿತು +ನೆಲಕೆ +ಕೈಗಳ
ಬಚ್ಚಿ +ಬಿದ್ದನು +ಪುತ್ರ+ವಿರಹದ
ಹೆಚ್ಚಿಗೆಯ +ತಾಪವನು +ಹೆಸರಿಡಲ್+ಅರಿಯೆನ್+ಅರ್ಜುನನ

ಅಚ್ಚರಿ:
(೧) ಅರ್ಜುನನ ಸ್ಥಿತಿ – ಧೈರ್ಯದ ಕೆಚ್ಚಿನೆದೆ ಕರಗಿತ್ತು; ಶೋಕದ ಕಿಚ್ಚು ಕೊಂಡುದು ಮನವನಖಿಳೇಂದ್ರಿಯದ ಸುಳಿವಡಗೆ

ಪದ್ಯ ೬: ಧರ್ಮಜನು ರಣರಂಗವನ್ನು ಹೇಗೆ ಪ್ರವೇಶಿಸಿದನು?

ಕುಣಿದು ಮುಂಚಿತು ಚೂಣಿ ಸಮರಾಂ
ಗಣದ ಕೇಳೀಬಾಲಕರು ಸಂ
ದಣಿಸಿ ಹೊಕ್ಕರು ಜಯವಧೂಟೀವಿರಹ ಕಾತರರು
ಗಣನೆಯಿಲ್ಲದ ಗಜಹಯದ ಭಾ
ರಣೆಯ ಭಾರಿಯ ಭಟರೊಡನೆ ಥ
ಟ್ಟಣೆಯ ಮೇಲೆ ಮಹೇಶ ಹೊಕ್ಕನು ಕಾಳೆಗದ ಕಳನ (ಭೀಷ್ಮ ಪರ್ವ, ೮ ಸಂಧಿ, ೬ ಪದ್ಯ)

ತಾತ್ಪರ್ಯ:
ಜಯವಧುವಿನ ವಿರಹದಿಂದ ಕಾತರರಾದ ಚೂಣಿಯ ಸೈನಿಕರು ಕುಣಿಯುತ್ತಾ ರಣರಂಗವನ್ನು ಹೊಕ್ಕರು. ಲೆಕ್ಕವಿಲ್ಲದಷ್ಟು ಆನೆ ಕುದುರೆಗಳ ಮಾವುತರು ರಾವುತರೊಡನೆ ಧರ್ಮಜನು ರಣರಂಗವನ್ನು ಪ್ರವೇಶಿಸಿದನು.

ಅರ್ಥ:
ಕುಣಿ: ನರ್ತಿಸು; ಮುಂಚೆ: ಮುಂಭಾಗದಲ್ಲಿ, ಮುಂದೆ; ಚೂಣಿ: ಮುಂದಿನ ಸಾಲು, ಮುಂಭಾಗ; ಸಮರಾಂಗಣ: ರಣರಂಗ; ಕೇಳಿ: ಕ್ರೀಡೆ, ವಿನೋದ; ಬಾಲಕ: ಹುಡುಗ; ಸಂದಣಿ: ಗುಂಪು; ಹೊಕ್ಕು: ಸೇರು; ಜಯವಧು: ವಿಜಯಲಕ್ಷ್ಮಿ; ವಿರಹ: ಅಗಲಿಕೆ, ವಿಯೋಗ; ಕಾತರ: ಕಳವಳ, ಉತ್ಸುಕತೆ; ಗಣನೆ: ಎಣಿಕೆ; ಗಜ: ಆನೆ; ಹಯ: ಕುದುರೆ; ಭಾರಣೆ: ಮಹಿಮೆ, ಗೌರವ; ಭಾರಿ: ಅತಿಶಯವಾದ; ಭಟ: ಸೈನಿಕ; ಥಟ್ಟಣೆ: ಮಹಾಸಮೂಹ; ಮಹೀಶ: ರಾಜ; ಹೊಕ್ಕು: ಸೇರು; ಕಾಳೆಗ: ಯುದ್ಧ; ಕಳ: ರಣರಂಗ;

ಪದವಿಂಗಡಣೆ:
ಕುಣಿದು +ಮುಂಚಿತು +ಚೂಣಿ +ಸಮರಾಂ
ಗಣದ+ ಕೇಳೀ+ ಬಾಲಕರು+ ಸಂ
ದಣಿಸಿ +ಹೊಕ್ಕರು +ಜಯವಧೂಟೀ+ವಿರಹ +ಕಾತರರು
ಗಣನೆಯಿಲ್ಲದ +ಗಜ+ಹಯದ +ಭಾ
ರಣೆಯ +ಭಾರಿಯ +ಭಟರೊಡನೆ +ಥ
ಟ್ಟಣೆಯ +ಮೇಲೆ +ಮಹೇಶ +ಹೊಕ್ಕನು +ಕಾಳೆಗದ +ಕಳನ

ಅಚ್ಚರಿ:
(೧) ಭ ಕಾರದ ತ್ರಿವಳಿ ಪದ – ಭಾರಣೆಯ ಭಾರಿಯ ಭಟರೊಡನೆ

ಪದ್ಯ ೪೦: ಕೀಚಕನು ಯಾರನ್ನು ಕಾಣಲು ಹೊರಟನು?

ಹೂಣೆ ಹೊಕ್ಕುದು ವಿರಹದಾಶೆಯ
ಕಾಣೆನಾಕೆಯ ಮಾತಿನಲಿ ಮುಂ
ಗಾಣಿಕೆಯಲೇ ಸೂರೆಹೋದುದು ಮನದ ಸರ್ವಸ್ವ
ತ್ರಾಣ ಸಡಿಲಿತು ಬುದ್ಧಿ ಕದಡಿ ಕೃ
ಪಾಣಪಾಣಿ ವಿರಾಟರಾಯನ
ರಾಣಿಯರಮನೆಗೈದಿದನು ಕಂಡನು ನಿಜಾಗ್ರಜೆಯ (ವಿರಾಟ ಪರ್ವ, ೨ ಸಂಧಿ, ೪೦ ಪದ್ಯ)

ತಾತ್ಪರ್ಯ:
ಕೀಚಕನ ಮನಸ್ಸಿನಲ್ಲಿ ಹತಾಶೆ ಕಾಣಿಸಿತು, ಅವಳ ಮಾತಿನಲ್ಲಿ ಬಯಕೆಯ ಲಕ್ಷಣವೇ ಕಾಣಲಿಲ್ಲ. ಅವನ ಸರ್ವಸ್ವವೂ ಮೇಲುನೋಟಕ್ಕೆ ಸೂರೆಹೋಯಿತು. ಅವನ ಶಕ್ತಿ ಸಡಲಿತು, ಬುದ್ಧಿ ಕದಡಿತು, ಕೈಯಲ್ಲಿ ಕತ್ತಿಯನ್ನು ಹಿಡಿದಿದ್ದ ಕೀಚಕನು ಅರಮನೆಗೆ ಹೋಗಿ ತನ್ನ ಅಕ್ಕ ಸುದೇಷ್ಣೆಯನ್ನು ಕಂಡನು.

ಅರ್ಥ:
ಹೂಣೆ: ಸ್ಪರ್ಧೆ, ಪ್ರತಿಜ್ಞೆ; ಹೊಕ್ಕು: ಸೇರು; ವಿರಹ: ಅಗಲಿಕೆ, ವಿಯೋಗ; ಆಶೆ: ಇಚ್ಛೆ; ಕಾಣೆ: ತೋರು; ಮಾತು: ನುಡಿ; ಮುಂಗಾಣು: ಮುಂದೆ ತೋರು; ಸೂರೆ: ಸುಲಿಗೆ, ಕೊಳ್ಳೆ; ಮನ: ಮನಸ್ಸು; ಸರ್ವಸ್ವ: ಎಲ್ಲಾ; ತ್ರಾಣ: ಶಕ್ತಿ, ಬಲ; ಸಡಿಲು: ಜಾರು; ಬುದ್ಧಿ: ವಿವೇಕ; ಕದಡು: ಕಲಕು, ರಾಡಿ; ಕೃಪಾಣ: ಕತ್ತಿ; ಪಾಣಿ: ಹಸ್ತ; ರಾಯ: ರಾಜ; ರಾಣಿ: ಅರಸ; ಅರಮನೆ: ಆಲಯ; ಐದು: ಬಂದು ಸೇರು; ಕಂಡು: ನೋಡು; ಅಗ್ರಜೆ: ಅಕ್ಕ;

ಪದವಿಂಗಡಣೆ:
ಹೂಣೆ +ಹೊಕ್ಕುದು +ವಿರಹದ್+ಆಶೆಯ
ಕಾಣೆನ್+ಆಕೆಯ +ಮಾತಿನಲಿ+ ಮುಂ
ಗಾಣಿಕೆಯಲೇ +ಸೂರೆಹೋದುದು+ ಮನದ +ಸರ್ವಸ್ವ
ತ್ರಾಣ +ಸಡಿಲಿತು +ಬುದ್ಧಿ +ಕದಡಿ+ ಕೃ
ಪಾಣ+ಪಾಣಿ +ವಿರಾಟರಾಯನ
ರಾಣಿ+ಅರಮನೆಗ್+ಐದಿದನು+ ಕಂಡನು+ ನಿಜ+ಅಗ್ರಜೆಯ

ಅಚ್ಚರಿ:
(೧) ಕೀಚಕನನ್ನು ಕರೆದ ಪರಿ – ಕೃಪಾಣಪಾಣಿ
(೨) ಪಾಣಿ, ರಾಣಿ; ಪ್ರಾಣ, ತ್ರಾಣ – ಪ್ರಾಸ ಪದಗಳು