ಪದ್ಯ ೫೩: ದ್ರೌಪದಿಯ ಚಿಂತನೆ ಹೇಗಿತ್ತು?

ತಾಗಿದುದಲಾ ನಾರದಾದ್ಯರ
ನಾಗತವನರುಹಿದರು ಹಿಂದೆ ವಿ
ಯೋಗವಾಯಿತೆ ಲಕ್ಷ್ಮಿಗಿಂದ್ರ ಪ್ರಸ್ಥಪುರವರದ
ಹೋಗಲದು ಮುನ್ನೇನ ನೊಡ್ಡಿದ
ನೀಗಿದನು ಗಡ ತನ್ನನೆಂತಿದ
ರಾಗು ಹೋಗೇನೆಂದು ನುಡಿದಳು ಪ್ರಾತಿಕಾಮಿಕನ (ಸಭಾ ಪರ್ವ, ೧೫ ಸಂಧಿ, ೫೩ ಪದ್ಯ)

ತಾತ್ಪರ್ಯ:
ಅಯ್ಯೋ ಹಿಂದೆ ನಾರದಾದಿಗಳು ಎಚ್ಚರಿಸಿದ ಮಾತು ಸತ್ಯವಾಯಿತೇ? ಅವರು ಮುಂದೆ ಬರುವ ಅನಾಹುತಕ್ಕೆ ಎಚ್ಚರಿಸಿದ್ದರು, ಇಂದ್ರಪ್ರಸ್ಥನಗರಕ್ಕೂ ರಾಜ್ಯಲಕ್ಷ್ಮಿಗೂ ಅಗಲಿಕೆಯಾಯಿತೇ? ಅದು ಹಾಗಿರಲಿ, ಎಲೈ ಪ್ರಾತಿಕಾಮಿಕ, ರಾಜನು ಮೊದಲು ಏನನ್ನು ಪಣಕ್ಕೆ ಒಡ್ಡಿ ಸೋತನು? ನಂತರ ತನ್ನನ್ನು ಸೋತನೇ? ಇದರ ವಿಷಯವನ್ನು ತಿಳಿಸು ಎಂದು ಪ್ರಾತಿಕಾಮಿಕನನ್ನು ದ್ರೌಪದಿ ಕೇಳಿದಳು.

ಅರ್ಥ:
ತಾಗು: ಮುಟ್ಟು; ಆದಿ: ಮುಂತಾದ; ಆಗತ: ಬರುವುದನ್ನು; ಅರುಹು: ಹೇಳು; ಹಿಂದೆ: ಮೊದಲು; ವಿಯೋಗ: ಬೇರಾಗುವಿಕೆ; ಲಕ್ಷ್ಮ: ರಾಜ್ಯಲಕ್ಷ್ಮಿ; ಪುರ: ಊರು; ವರ: ಶ್ರೇಷ್ಠ; ಹೋಗಲುದು: ಹಾಗಿರಲಿ; ಮುನ್ನ: ಮೊದಲು; ಒಡ್ಡು: ದ್ಯೂತದಲ್ಲಿ ಪಣಕ್ಕೆ ಇಡು; ಆಗುಹೋಗು: ನಡೆದ; ನುಡಿ: ಮಾತಾಡು; ನೀಗು: ಕಳೆದುಕೊಳ್ಳು; ಗಡ: ಅಲ್ಲವೆ, ಬೇಗನೆ;

ಪದವಿಂಗಡಣೆ:
ತಾಗಿದುದಲಾ +ನಾರದಾದ್ಯರನ್
ಆಗತವನ್+ಅರುಹಿದರು +ಹಿಂದೆ +ವಿ
ಯೋಗವಾಯಿತೆ +ಲಕ್ಷ್ಮಿಗ್ + ಇಂದ್ರಪ್ರಸ್ಥ+ಪುರವರದ
ಹೋಗಲದು +ಮುನ್+ಏನನ್+ಒಡ್ಡಿದ
ನೀಗಿದನು +ಗಡ +ತನ್ನನ್+ಎಂತಿದರ್
ಆಗು ಹೋಗ್+ಏನೆಂದು +ನುಡಿದಳು +ಪ್ರಾತಿಕಾಮಿಕನ

ಅಚ್ಚರಿ:
(೧) ದ್ರೌಪದಿಯು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ವಿವೇಚಿಸುವ ಪರಿ – ಮುನ್ನೇನ ನೊಡ್ಡಿದ
ನೀಗಿದನು ಗಡ ತನ್ನನೆಂತಿದರಾಗು ಹೋಗೇನೆಂದು ನುಡಿದಳು ಪ್ರಾತಿಕಾಮಿಕನ
(೨) ದ್ರೌಪದಿ ದುಃಖಿತಳಾದಳೆಂದು ಹೇಳುವ ಪರಿ – ವಿಯೋಗವಾಯಿತೆ ಲಕ್ಷ್ಮಿಗಿಂದ್ರ ಪ್ರಸ್ಥಪುರವರದ