ಪದ್ಯ ೧೨: ಸಾತ್ಯಕಿಯು ಯುದ್ಧವನ್ನು ಹೇಗೆ ನಡೆಸಿದನು?

ಕಡಿದನನಿಬರ ಕೈಯ ಕೋಲ್ಗಳ
ನಡಗುದರಿದನನೇಕಭೂಪರ
ಗಡಣವನು ಘಾಡಿಸಿದನಂಬಿನ ಸೈಯನುರವಣಿಸಿ
ಕಡಗಿ ಸಾತ್ಯಕಿಯೊಡನೆ ಬವರವ
ಹಿಡಿದ ಭಟರಮರರ ವಿಮಾನವ
ನಡರುತಿದ್ದರು ಕೊಂದನತಿಬಳನಹಿತಮೋಹರವ (ದ್ರೋಣ ಪರ್ವ, ೧೧ ಸಂಧಿ, ೧೨ ಪದ್ಯ
)

ತಾತ್ಪರ್ಯ:
ಅವರೆಲ್ಲರೂ ಹಿಡಿದ ಬಾಣಗಳನ್ನು ಸಾತ್ಯಕಿಯು ತುಂಡುಮಾಡಿದನು. ಅನೇಕ ರಾಜರ ಮೇಲೆ ಬಾಣಗಳನ್ನು ಬಿಟ್ಟು ಮಾಂಸಖಂಡವನ್ನು ಹೊರಗೆಡಹಿದನು. ಸಾತ್ಯಕಿಯೊಡನೆ ಯುದ್ಧಕ್ಕಿಳಿದ ಅನೇಕ ರಾಜರು ದೇವತೆಗಳ ವಿಮಾನವನ್ನೇರಿ ಸ್ವರ್ಗಕ್ಕೆ ಹೋದರು.

ಅರ್ಥ:
ಕಡಿ: ಸೀಳು; ಅನಿಬರ: ಅಷ್ಟುಜನ; ಕೈ: ಹಸ್ತ; ಕೋಲು: ಬಾಣ; ಅಡಗು: ಅವಿತುಕೊಳ್ಳು; ಅನೇಕ: ಬಹಳ; ಭೂಪ: ರಾಜ; ಗಡಣ: ಗುಂಪು; ಘಾಡಿಸು: ವ್ಯಾಪಿಸು; ಅಂಬು: ಬಾಣ; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಬವರ: ಯುದ್ಧ; ಹಿಡಿ: ಗ್ರಹಿಸು; ಭಟ: ಸೈನಿಕ; ಅಮರ: ದೇವ; ವಿಮಾನ: ವಾಯು ಮಾರ್ಗದಲ್ಲಿ ಸಂಚರಿಸುವ ವಾಹನ; ಅಡರು: ಮೇಲಕ್ಕೆ ಹತ್ತು; ಕೊಂದು: ಕೊಲ್ಲು, ಸಾಯಿಸು; ಅಹಿತ: ವೈರಿ; ಮೋಹರ: ಯುದ್ಧ;

ಪದವಿಂಗಡಣೆ:
ಕಡಿದನ್+ಅನಿಬರ +ಕೈಯ +ಕೋಲ್ಗಳನ್
ಅಡಗುದರ್+ಇದನ್+ಅನೇಕ+ಭೂಪರ
ಗಡಣವನು +ಘಾಡಿಸಿದನ್+ಅಂಬಿನ +ಸರಿಯನ್+ಉರವಣಿಸಿ
ಕಡಗಿ +ಸಾತ್ಯಕಿಯೊಡನೆ +ಬವರವ
ಹಿಡಿದ +ಭಟರ್+ಅಮರರ +ವಿಮಾನವನ್
ಅಡರುತಿದ್ದರು +ಕೊಂದನ್+ಅತಿಬಳನ್+ಅಹಿತ+ಮೋಹರವ

ಅಚ್ಚರಿ:
(೧) ಸತ್ತರು ಎಂದು ಹೇಳಲು – ಅಮರರ ವಿಮಾನವನಡರುತಿದ್ದರು

ಪದ್ಯ ೨೯: ಭೀಮನು ಹೇಗೆ ಹೋರಾಡಿದನು?

ಮುರಿದು ಮರನನು ಭೀಮನಹಿತರ
ನೊರಸಿದನು ಮಲೆತಾನೆಗಳ ಹೊ
ಕ್ಕುರುಬಿದನು ತುರುಗಿದನು ಭಟ್ಟರಭ್ರದ ವಿಮಾನದಲಿ
ಜುರಿತಡಗಿನಿಂಡೆಗಳ ಮೆದುಳಿನ
ನಿರಿಗರುಳ ನೆಣವಸೆಗಳಲಿ ಜಿಗಿಯಲಿ
ಮೆರೆದುದಾಮರನಲ್ಲಿ ತಳಿತುದು ಹೂತುದೆಂಬಂತೆ (ಅರಣ್ಯ ಪರ್ವ, ೨೪ ಸಂಧಿ, ೨೯ ಪದ್ಯ)

ತಾತ್ಪರ್ಯ:
ಭೀಮನು ಮರವನ್ನು ಮುರಿದು ಶತ್ರು ಸೈನಿಕರನ್ನು ನಾಶ ಮಾಡಿದನು. ಎದುರಾದ ಆನೆಗಳನ್ನು ಬಡಿದು ಕೊಂದನು. ಶತ್ರುಗಳನ್ನು ದೇವತೆಗಳ ವಿಮಾನದಲ್ಲಿ ತುರುಕಿದನು. ಮಾಂಸದ ತುಂಡುಗಳು, ಮೆದುಳು ಕರುಳುಗಳ ವಸೆ, ಕೊಬ್ಬುಗಳು ಆ ಮರದಲ್ಲಿ ಹೂಬಿಟ್ಟಿತೆಂಬಂತೆ ಕಾಣುತ್ತಿತ್ತು.

ಅರ್ಥ:
ಮುರಿ: ಸೀಳು; ಮರ: ತರು; ಅಹಿತರ: ವೈರಿ; ಒರಸು: ನಾಶಮಾಡು; ಮಲೆತ: ಪ್ರತಿಭಟಿಸಿದ; ಆನೆ: ಗಜ; ಹೊಕ್ಕು: ಓತ; ಉರುಬು: ಅತಿಶಯವಾದ ವೇಗ; ತುರುಗು: ಸಂದಣಿ, ದಟ್ಟಣೆ; ಭಟ: ಸೈನಿಕ; ಅಭ್ರ: ಆಗಸ; ವಿಮಾನ: ಗಾಳಿಯಲ್ಲಿ ಹಾರುವ ವಾಹನ; ಮೆದುಳು: ಮಸ್ತಿಷ್ಕ; ಕರುಳು: ಪಚನಾಂಗ; ಮೆರೆ: ಪ್ರಕಾಶಿಸು; ಮರ: ತರು; ತಳಿತ: ಚಿಗುರು; ಹೂ: ಪುಷ್ಪ; ಅಡಗು: ಮಾಂಸ; ಆಮರ: ದೇವತೆ; ಇಂಡೆ: ಚೂರು, ತುಣುಕು; ಇರಿ: ಜಿನುಗು;

ಪದವಿಂಗಡಣೆ:
ಮುರಿದು+ ಮರನನು+ ಭೀಮನ್+ಅಹಿತರನ್
ಒರಸಿದನು+ ಮಲೆತ+ಆನೆಗಳ+ ಹೊಕ್ಕ್
ಉರುಬಿದನು+ ತುರುಗಿದನು +ಭಟ್ಟರ್+ಅಭ್ರದ+ ವಿಮಾನದಲಿ
ಜುರಿತ್+ಅಡಗಿನ್+ಇಂಡೆಗಳ+ ಮೆದುಳಿನನ್
ಇರಿ+ಕರುಳ +ನೆಣವಸೆಗಳಲಿ+ ಜಿಗಿಯಲಿ
ಮೆರೆದುದ್+ಅಮರನಲ್ಲಿ +ತಳಿತುದು +ಹೂತುದೆಂಬಂತೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಜುರಿತಡಗಿನಿಂಡೆಗಳ ಮೆದುಳಿನ ನಿರಿಗರುಳ ನೆಣವಸೆಗಳಲಿ ಜಿಗಿಯಲಿ ಮೆರೆದುದಾಮರನಲ್ಲಿ ತಳಿತುದು ಹೂತುದೆಂಬಂತೆ

ಪದ್ಯ ೪೭: ಇಂದ್ರನು ಅರ್ಜುನನಿಗೆ ಏನು ಹೇಳಿ ತೆರಳಿದನು?

ಮಗನೆ ನಿನ್ನಯ ಮನದ ನಿಷ್ಠೆಗೆ
ಸೊಗಸಿದೆನು ಪಿರಿದಾಗಿ ಹರನಿ
ಲ್ಲಿಗೆ ಬರಲಿ ಕರುಣಿಸಲಿ ನಿನ್ನ ಮನೋಭಿವಾಂಛಿತವ
ಹಗೆಗೆ ಹರಿವಹುದೆಂದು ಸುರಮೌ
ಳಿಗಳ ಮಣಿ ಸರಿದನು ವಿಮಾನದ
ಲಗಧರನ ಮೈದುನನ ಮಹಿಮೆಯನಿನ್ನು ಕೇಳೆಂದ (ಅರಣ್ಯ ಪರ್ವ, ೫ ಸಂಧಿ, ೪೭ ಪದ್ಯ)

ತಾತ್ಪರ್ಯ:
ದೇವೇಂದ್ರನು ತನ್ನ ನಿಜ ಸ್ವರೂಪವನ್ನು ತೋರುತ್ತಾ, ಮಗನೇ, ನಿನ್ನ ಮನಸ್ಸಿನ ನಿಷ್ಠೆಗೆ ನಾನು ಬಹಳ ಸಂತೋಷಿಸುತ್ತೇನೆ. ಶಿವನು ಇಲ್ಲಿಗೆ ಬರಲಿ, ನಿನ್ನ ಮನಸ್ಸಿನ ಇಷ್ಟಾರ್ಥವನ್ನು ಕರುಣಿಸಲಿ. ನಿಮ್ಮ ವೈರಿಗಳು ನಾಶವಾಗುತ್ತಾರೆ, ಎಂದು ಹೇಳಿ ದೇವತೆಗಳಲ್ಲಿ ಶ್ರೇಷ್ಠವನಾದ ಇಂದ್ರನು ವಿಮಾನದ ಮೂಲಕ ಸ್ವರ್ಗಲೋಕಕ್ಕೆ ತೆರಳಿದನು. ಜನಮೇಜಯ ಈಗ ಕೃಷ್ಣನ ಮೈದುನನಾದ ಅರ್ಜುನನ ಮಹಿಮೆಯನ್ನು ಕೇಳು ಎಂದು ವೈಶಂಪಾಯನರು ಕಥೆಯನ್ನು ಮುಂದುವರೆಸಿದರು.

ಅರ್ಥ:
ಮಗ: ಸುತ; ಮನ: ಮನಸ್ಸು; ನಿಷ್ಠೆ: ಶ್ರದ್ಧೆ; ಸೊಗಸು: ಚೆಲುವು; ಪಿರಿದು: ಹಿರಿದು; ಹರ: ಶಿವ; ಬರಲಿ: ಆಗಮಿಸು; ಕರುಣಿಸು: ದಯೆತೋರು; ಮನ: ಮನಸ್ಸು; ವಾಂಛನ: ಆಸೆ, ಇಚ್ಛೆ; ಹಗೆ:ವೈರಿ; ಹರಿ: ನಾಶ; ಸುರಮೌಳಿ: ದೇವೇಂದ್ರ; ಮಣಿ: ಶ್ರೇಷ್ಠ; ಸರಿ: ತೆರಳು; ವಿಮಾನ: ಆಕಾಶದಲ್ಲಿ ಚಲಿಸುವ ವಾಹನ; ಅಗ: ಬೆಟ್ಟ; ಅಗಧರ: ಕೃಷ್ಣ; ಮೈದುನ: ತಂಗಿಯ ಗಂಡ; ಮಹಿಮೆ: ಶ್ರೇಷ್ಠತೆ, ಔನ್ನತ್ಯ;

ಪದವಿಂಗಡಣೆ:
ಮಗನೆ +ನಿನ್ನಯ +ಮನದ +ನಿಷ್ಠೆಗೆ
ಸೊಗಸಿದೆನು +ಪಿರಿದಾಗಿ +ಹರನ್
ಇಲ್ಲಿಗೆ +ಬರಲಿ +ಕರುಣಿಸಲಿ +ನಿನ್ನ +ಮನೋಭಿ+ವಾಂಛಿತವ
ಹಗೆಗೆ+ ಹರಿವಹುದ್+ಎಂದು +ಸುರಮೌ
ಳಿಗಳ +ಮಣಿ +ಸರಿದನು +ವಿಮಾನದಲ್
ಅಗಧರನ +ಮೈದುನನ +ಮಹಿಮೆಯನ್+ಇನ್ನು+ ಕೇಳೆಂದ

ಅಚ್ಚರಿ:
(೧) ಕೃಷ್ಣನನ್ನು ಅಗಧರ ಎಂದು ಕರೆದಿರುವುದು
(೨) ಇಂದ್ರನನ್ನು ಕರೆದ ಬಗೆ – ಸುರಮೌಳಿಗಳ ಮಣಿ
(೩) ದೇವತೆಗಳ ವಾಹನ – ವಿಮಾನದ ಪ್ರಸ್ತಾಪ
(೪) ಮ, ನ ಅಕ್ಷರದ ಬಳಕೆ – ಮಗನೆ ನಿನ್ನಯ ಮನದ ನಿಷ್ಠೆಗೆ

ಪದ್ಯ ೬೯: ಕೃಷ್ಣ ಶಿಶುಪಾಲರ ಕಾಳಗವನ್ನು ಯಾರು ನೋಡುತ್ತಿದ್ದರು?

ಸೋತನೈ ಹರಿಯೆಂದು ಚೈದ್ಯನ
ಬೂತುಗಳು ಬಣ್ಣಿಸಿದರೀ ನಿ
ರ್ಭೀತ ಯಾದವ ಸೈನ್ಯವಿದ್ದುದು ಹರ್ಷಕೇಳಿಯಲಿ
ಈತ ರಾವಣ ಮುನ್ನ ಭುವನ
ಖ್ಯಾತನೆಂದಮರರು ವಿಮಾನ
ವ್ರಾತದಲಿ ನೆರೆ ನೋಡುತಿರ್ದುದು ಸಮರ ಸಂಭ್ರಮವ (ಸಭಾ ಪರ್ವ, ೧೧ ಸಂಧಿ, ೬೯ ಪದ್ಯ)

ತಾತ್ಪರ್ಯ:
ಶಿಶುಪಾಲನ ಜೊತೆಯಲ್ಲಿದ್ದ ಭಂಡ ಜನರು ಶ್ರೀಕೃಷ್ಣನು ಸೋತ ಎಂಬ ಭಂಡತನದ ಮಾತನ್ನಾಡಿದರು. ಯಾದವ ಸೈನ್ಯವು ಇಬ್ಬರ ಕಾಳಗವನ್ನು ಸಂತೋಷದ ವೀಕ್ಷಿಸುತ್ತಿತ್ತು. ಶಿಶುಪಾಲನು ಹಿಂದೆ ಭೂಮಿಯಲ್ಲಿ ಪ್ರಸಿದ್ಧನಾದ ರಾವಣನಾಗಿದ್ದವ, ಇವನ ಕಾಳಗವನ್ನು ನೋಡೋಣ ಎಂದು ಆಕಾಶದಲ್ಲಿ ದೇವತೆಗಳು ವಿಮಾನದಲ್ಲಿ ಕುಳಿತು ನೋಡುತ್ತಿದ್ದರು.

ಅರ್ಥ:
ಸೋತು: ಪರಾಭವ; ಹರಿ: ಕೃಷ್ಣ; ಚೈದ್ಯ: ಶಿಶುಪಾಲ; ಬೂತು:ಭಂಡ; ಬಣ್ಣಿಸು: ವರ್ಣಿಸು; ನಿರ್ಭೀತ: ಭಯವಿಲ್ಲದ; ಸೈನ್ಯ: ಪಡೆ; ಹರ್ಷ: ಸಂತೋಷ; ಕೇಳಿ: ವಿನೋದ, ಕ್ರೀಡೆ; ಮುನ್ನ: ಹಿಂದೆ; ಭುವನ: ಭೂಮಿ; ಖ್ಯಾತ: ಪ್ರಸಿದ್ಧ; ಅಮರ: ದೇವತೆ; ವಿಮಾನ: ವಾಯು ಮಾರ್ಗದಲ್ಲಿ ಸಂಚರಿಸುವ ವಾಹನ; ವ್ರಾತ: ಗುಂಪು; ನೆರೆ: ಜೊತೆಗೂಡು; ನೋಡು: ವೀಕ್ಷಿಸು; ಸಮರ: ಯುದ್ಧ; ಸಂಭ್ರಮ: ಉತ್ಸಾಹ, ಸಡಗರ;

ಪದವಿಂಗಡಣೆ:
ಸೋತನೈ +ಹರಿಯೆಂದು +ಚೈದ್ಯನ
ಬೂತುಗಳು+ ಬಣ್ಣಿಸಿದರ್+ಈ+ ನಿ
ರ್ಭೀತ +ಯಾದವ +ಸೈನ್ಯವಿದ್ದುದು +ಹರ್ಷ+ಕೇಳಿಯಲಿ
ಈತ+ ರಾವಣ+ ಮುನ್ನ +ಭುವನ
ಖ್ಯಾತನೆಂದ್+ಅಮರರು +ವಿಮಾನ
ವ್ರಾತದಲಿ +ನೆರೆ +ನೋಡುತಿರ್ದುದು +ಸಮರ +ಸಂಭ್ರಮವ

ಅಚ್ಚರಿ:
(೧) ಜೋಡಿ ಪದಗಳಾಕ್ಷರ – ವಿಮಾನ ವ್ರಾತದಲಿ; ನೆರೆ ನೋಡುತಿರ್ದುದು; ಸಮರ ಸಂಭ್ರಮವ