ಪದ್ಯ ೩: ಯಜ್ಞವು ಹೇಗೆ ಸಮಾಪ್ತವಾಯಿತು?

ಶ್ರುತಿ ವಿಧಾನದ ವಿಮಳ ಪೂರ್ಣಾ
ಹುತಿಯ ಪಾರಾಯಣದ ನಿಗಮ
ಪ್ರತತಿಗಳ ಪರಿಪೂತ ಪರಿಮಳಮಯ ದಿಶಾವಳಿಯ
ಕ್ರತು ಸಮಾಪ್ತಿಯಲವಭೃತದ ಭೂ
ಪತಿಯ ವಿಮಳಸ್ನಾನ ಪುಣ್ಯೋ
ಚಿತದಲೋಕುಳಿಯಾಡಿ ದಣಿದುದು ಲೋಕ ಸುರನರರ (ಸಭಾ ಪರ್ವ, ೧೨ ಸಂಧಿ, ೩ ಪದ್ಯ)

ತಾತ್ಪರ್ಯ:
ವೇದೋಕ್ತಿಗಳ ವಿಧಾನದಂತೆ ಪೂರ್ಣಾಹುತಿಯನ್ನು ಕೊಟ್ಟರು. ವೇದ ಮಂತ್ರಗಳು, ಹವಿಸ್ಸಿನ ಸುವಾಸನೆಗಳಿಂದ ದಿಕ್ಕುಗಳು ಸುಗಂಧದಿಂದ ತುಂಬಿದವು. ಯಜ್ಞಸಮಾಪ್ತಿಯ ನಂತರ ಅವಭೃತಸ್ನಾನವಾಯಿತು. ಓಕುಳಿಯಾಟದಿಂದ ಭೂಲೋಕ ದೇವಲೋಕಗಳು ತಣಿದವು.

ಅರ್ಥ:
ಶ್ರುತಿ: ವೇದ; ವಿಧಾನ: ರೀತಿ; ವಿಮಳ: ನಿರ್ಮಲ; ಪೂರ್ಣಾಹುತಿ: ಯಜ್ಞವನ್ನು ಪೂರ್ಣಗೊಳಿಸುವ ಆಹುತಿ; ಪಾರಾಯಣ: ಗ್ರಂಥಾದಿಗಳನ್ನು ಮೊದಲಿನಿಂದ ಕಡೆಯವರೆಗೆ ಓದುವುದು; ನಿಗಮ: ವೇದ, ಶ್ರುತಿ; ಪ್ರತತಿ: ಗುಂಪು, ಸಮೂಹ; ಪರಿಪೂತ: ಪವಿತ್ರ, ಶುದ್ಧವಾದ; ಪರಿಮಳ: ಸುಗಂಧದಿಂದ ಕೂಡಿದ ವಸ್ತು; ದಿಶ: ದಿಕ್ಕು; ಆವಳಿ: ಸಾಲು; ಕ್ರತು: ಯಜ್ಞ; ಸಮಾಪ್ತಿ: ಕೊನೆ; ಅವಭೃತ:ಯಾಗದ ಅನಂತರ ಮಾಡುವ ಮಂಗಳಸ್ನಾನ; ಭೂಪತಿ: ರಾಜ; ವಿಮಳ: ನಿರ್ಮಲ, ಶುಭ್ರ; ಸ್ನಾನ: ಅಭ್ಯಂಜನ; ಪುಣ್ಯ: ಸದಾಚಾರ, ಪರೋಪಕಾರ; ಓಕುಳಿ: ಬಣ್ಣದ ನೀರು; ದಣಿ: ಆಯಾಸ; ಲೋಕ: ಜಗತ್ತು; ಸುರ: ದೇವತೆ; ನರ: ಮಾನವ;

ಪದವಿಂಗಡಣೆ:
ಶ್ರುತಿ+ ವಿಧಾನದ +ವಿಮಳ +ಪೂರ್ಣಾ
ಹುತಿಯ +ಪಾರಾಯಣದ +ನಿಗಮ
ಪ್ರತತಿಗಳ+ ಪರಿಪೂತ+ ಪರಿಮಳಮಯ +ದಿಶಾವಳಿಯ
ಕ್ರತು+ ಸಮಾಪ್ತಿಯಲ್+ಅವಭೃತದ +ಭೂ
ಪತಿಯ +ವಿಮಳಸ್ನಾನ +ಪುಣ್ಯೋ
ಚಿತದಲ್+ಓಕುಳಿಯಾಡಿ +ದಣಿದುದು +ಲೋಕ +ಸುರ+ನರರ

ಅಚ್ಚರಿ:
(೧) ಪ ಕಾರದ ತ್ರಿವಳಿ ಪದ – ಪ್ರತತಿಗಳ ಪರಿಪೂತ ಪರಿಮಳಮಯ
(೨) ಶ್ರುತಿ, ನಿಗಮ – ಸಮನಾರ್ಥಕ ಪದ