ಪದ್ಯ ೨೮: ಬಲರಾಮನ ಎದುರು ಯಾರು ನಿಂತರು?

ಹಲಧರನ ಮಸಕವನು ಪಾಂಡವ
ಬಲದ ದುಶ್ಚೇಷ್ಟೆಯನು ಭೀಮನ
ಫಲುಗುಣನ ಧರ್ಮಜನ ಯಮಳರ ಚಿತ್ರವಿಭ್ರಮವ
ಬಲಿಮಥನನೀಕ್ಷಿಸುತ ರಜತಾ
ಚಲವ ತರುಬುವ ನೀಲ ಗಿರಿಯವೊ
ಲಳುಕದಿದಿರಲಿ ನಿಂದು ಹಿಡಿದನು ಬಲನ ಬಲಗಯ್ಯ (ಗದಾ ಪರ್ವ, ೮ ಸಂಧಿ, ೨೮ ಪದ್ಯ)

ತಾತ್ಪರ್ಯ:
ಬಲರಾಮನ ಉದ್ರೇಕವನ್ನೂ ಪಾಂಡವರು ಭಯಭೀತರಾದುದನ್ನೂ, ಪಾಂಡವರ ಮನಸ್ಸಿನ ಅಳುಕನ್ನೂ ಶ್ರೀಕೃಷ್ಣನು ನೋಡಿ, ರಜತಗಿರಿಯನ್ನು ಅಡ್ಡಗಟ್ಟು ನಿಲ್ಲುವ ನೀಲಗಿರಿಯಂತೆ ಬಲರಾಮನೆದುರಿಗೆ ಬಂದು ಅಳುಕದೆ ಅವನ ಬಲಗೈಯನ್ನು ಹಿಡಿದನು.

ಅರ್ಥ:
ಹಲಧರ: ಬಲರಾಮ; ಹಲ: ನೇಗಿಲು; ಮಸಕ: ಆಧಿಕ್ಯ, ಹೆಚ್ಚಳ; ಬಲ: ಸೈನ್ಯ; ಚೇಷ್ಟೆ:ವರ್ತನೆ, ನಡವಳಿಕೆ; ವಿಭ್ರಮ: ಭ್ರಮೆ, ಭ್ರಾಂತಿ; ಬಲಿಮಥನ: ಬಲಿ ಚಕ್ರವರ್ತಿಯನ್ನು ನಾಶ ಮಾಡಿದವ (ಕೃಷ್ಣ); ಈಕ್ಷಿಸು: ನೋಡು; ರಜತಾಚಲ: ಹಿಮಾಲಯ; ರಜತ: ಬೆಳ್ಳಿ; ಅಚಲ: ಬೆಟ್ಟ; ತರುಬು: ತಡೆ, ನಿಲ್ಲಿಸು, ಅಡ್ಡಗಟ್ಟು; ಗಿರಿ: ಬೆಟ್ಟ; ಅಳುಕು: ಹೆದರು; ಇದಿರು: ಎದುರು; ನಿಂದು: ನಿಲ್ಲು; ಹಿಡಿ: ಗ್ರಹಿಸು; ಬಲಗಯ್ಯ: ಬಲಕೈ;

ಪದವಿಂಗಡಣೆ:
ಹಲಧರನ +ಮಸಕವನು +ಪಾಂಡವ
ಬಲದ +ದುಶ್ಚೇಷ್ಟೆಯನು +ಭೀಮನ
ಫಲುಗುಣನ +ಧರ್ಮಜನ +ಯಮಳರ +ಚಿತ್ರ+ವಿಭ್ರಮವ
ಬಲಿಮಥನನ್+ಈಕ್ಷಿಸುತ +ರಜತಾ
ಚಲವ +ತರುಬುವ +ನೀಲ +ಗಿರಿಯವೊಲ್
ಅಳುಕದ್+ಇದಿರಲಿ +ನಿಂದು +ಹಿಡಿದನು +ಬಲನ +ಬಲಗಯ್ಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ರಜತಾಚಲವ ತರುಬುವ ನೀಲ ಗಿರಿಯವೊಲಳುಕದಿದಿರಲಿ ನಿಂದು
(೨) ಕೃಷ್ಣನನ್ನು ಬಲಿಮಥನ ಎಂದು ಕರೆದಿರುವುದು
(೩) ಗಿರಿ, ಅಚಲ – ಸಮಾನಾರ್ಥಕ ಪದ

ಪದ್ಯ ೬೦: ಅಶ್ವತ್ಥಾಮ ಏನು ಯೋಚಿಸಿ ಹಿಂದಿರುಗಿದನು?

ಇವರು ತಿರುಗಿದರಿನ್ನು ದೈವ
ವ್ಯವಸಿತವೆ ಫಲಿಸುವುದಲಾ ಕೌ
ರವನ ಸಿರಿ ಪಣ್ಯಾಂಗನಾವಿಭ್ರಮವ ವರಿಸಿತಲಾ
ಅವರಿಗಿದನಾರರುಹಿದರೊ ಪಾಂ
ಡವರಿಗಾವುದು ಕೊರತೆ ಪುಣ್ಯ
ಪ್ರವರ ಗದುಗಿನ ವೀರನಾರಾಯಣನ ಕರುಣದಲಿ (ಗದಾ ಪರ್ವ, ೪ ಸಂಧಿ, ೬೦ ಪದ್ಯ)

ತಾತ್ಪರ್ಯ:
ಕೃಪ, ಅಶ್ವತ್ಥಾಮ, ಕೃತವರ್ಮರು, ದೈವ ಸಂಕಲ್ಪದಂತೆಯೇ ನಡೆದೀತು. ಅನ್ಯಥಾ ನಡೆಯಲಾರದು. ಕೌರವನ ಜಯಲಕ್ಷ್ಮಿಯ ವಿಲಾಸವು ವೇಶ್ಯೆಯ ವಿಭ್ರಮವನ್ನು ಸ್ವೀಕರಿಸಿತು. ಪುಞ ಪ್ರವರನಾದ ಗದುಗಿನ ವೀರನಾರಾಯಣನ ಕರುಣೆಯಿರುವುದರಿಂದ ಪಾಂಡವರಿಗೆ ಯಾವ ಕೊರತೆಯುಂಟಾದೀತು? ಎಂದುಕೊಂಡು ದೂರಕ್ಕೆ ಹೋದರು.

ಅರ್ಥ:
ತಿರುಗು: ಮರಳು; ಹಿಂದಿರುಗು; ದೈವ: ಭಗವಂತ; ವ್ಯವಸಿತ: ಸಂಕಲ್ಪ; ಫಲಿಸು: ಹೊರಹೊಮ್ಮು; ಸಿರಿ: ಐಶ್ವರ್ಯ; ಪಣ್ಯ: ಮಾರಾಟ, ವ್ಯಾಪಾರ; ವಿಭ್ರಮ: ಅಲೆದಾಟ, ಸುತ್ತಾಟ; ವರಿಸು: ಕೈಹಿಡಿ; ಅರುಹು: ಹೇಳು; ಕೊರತೆ: ನ್ಯೂನ್ಯತೆ; ಪುಣ್ಯ: ಸದಾಚಾರ; ಪ್ರವರ: ಶ್ರೇಷ್ಠ, ಮೊದಲಿಗ; ಕರುಣ: ದಯೆ;

ಪದವಿಂಗಡಣೆ:
ಇವರು +ತಿರುಗಿದರ್+ಇನ್ನು +ದೈವ
ವ್ಯವಸಿತವೆ +ಫಲಿಸುವುದಲಾ+ ಕೌ
ರವನ+ ಸಿರಿ+ ಪಣ್ಯಾಂಗನಾ+ವಿಭ್ರಮವ +ವರಿಸಿತಲಾ
ಅವರಿಗ್+ಇದನ್+ಆರ್+ಅರುಹಿದರೊ +ಪಾಂ
ಡವರಿಗ್+ಆವುದು +ಕೊರತೆ +ಪುಣ್ಯ
ಪ್ರವರ +ಗದುಗಿನ +ವೀರನಾರಾಯಣನ+ ಕರುಣದಲಿ

ಅಚ್ಚರಿ:
(೧) ರೂಪಕದ ಪ್ರಯೋಗ – ಕೌರವನ ಸಿರಿ ಪಣ್ಯಾಂಗನಾವಿಭ್ರಮವ ವರಿಸಿತಲಾ
(೨) ಪಾಂಡವರ ಶ್ರೇಷ್ಠತೆ – ಪಾಂಡವರಿಗಾವುದು ಕೊರತೆ ಪುಣ್ಯ ಪ್ರವರ ಗದುಗಿನ ವೀರನಾರಾಯಣನ ಕರುಣದಲಿ

ಪದ್ಯ ೨೮: ಸಹದೇವನು ಶಕುನಿಗೆ ಏನೆಂದು ಉತ್ತರಿಸಿದನು?

ಮರುಗದಿರು ನಿನ್ನುಭಯ ಪಕ್ಷವ
ತರಿದು ತುಂಡವ ಸೀಳುವೆನು ತಾ
ಮರೆವೆನೇ ಭವದೀಯ ರಚಿತ ವಿಕಾರ ವಿಭ್ರಮವ
ನೆರೆ ಪತತ್ರಿಗಳಿವೆ ಪತತ್ರಿಯ
ಮರುವೆಸರು ನಿನಗಿವರ ಕೇಣಿಗೆ
ತೆರಹುಗೊಡು ನೀನೆಂದು ಮಾದ್ರೀತನುಜ ಮಗುಳೆಚ್ಚ (ಗದಾ ಪರ್ವ, ೨ ಸಂಧಿ, ೨೮ ಪದ್ಯ)

ತಾತ್ಪರ್ಯ:
ಸಹದೇವನು ಮಾತನಾಡುತ್ತಾ, ದುಃಖಿಸಬೇಡ, ನಿನ್ನ ಎಅರ್ಡು ರೆಕ್ಕೆಗಳನ್ನು ತರಿದು ಕೊಕ್ಕನ್ನು ಸೀಳುತ್ತೇನೆ. ನೀನು ಮಾಡಿದ ವಿಕಾರ ಪರಂಪರೆಯನ್ನು ಮರೆಯಲಾದೀತೇ? ನನ್ನ ಬಳಿ ಬಾಣಗಳಿವೆ, ನೀನೂ ಪತತ್ರಿ. ನನ್ನ ಬಾಣಗಳು ನಿನ್ನನ್ನು ಗುತ್ತಿಗೆ ಪಡೆಯಲು ಅವಕಾಶಕೊಡು ಎಂದು ಇದಿರಾಗಿ ಬಾಣ ಪ್ರಯೋಗ ಮಾಡಿದನು.

ಅರ್ಥ:
ಮರುಗು: ತಳಮಳ, ಸಂಕಟ; ಉಭಯ: ಎರಡು; ಪಕ್ಷ: ಗುಂಪು; ತರಿ: ಸೀಳು; ತುಂಡು: ಚೂರು, ಭಾಗ; ಸೀಳು: ಕತ್ತರಿಸು; ಮರೆ: ಗುಟ್ಟು, ರಹಸ್ಯ; ಭವದೀಯ: ನಿನ್ನ; ರಚಿತ: ನಿರ್ಮಿತ; ವಿಕಾರ: ಬದಲಾವಣೆ, ಮಾರ್ಪಾಟು; ವಿಭ್ರಮ: ಅಲೆದಾಟ, ಸುತ್ತಾಟ; ನೆರೆ: ಗುಂಪು; ಪತತ್ರಿ: ರೆಕ್ಕೆಗಳಿರುವ ಬಾಣ, ಪಕ್ಷಿ; ಮರು: ಎರಡನೆಯ, ದ್ವಿತೀಯ; ಎಸು: ಬಾಣ ಪ್ರಯೋಗ ಮಾಡು; ಕೇಣಿ: ಗುತ್ತಿಗೆ, ಗೇಣಿ; ತೆರಹು: ಬಿಚ್ಚು, ತೆರೆ; ತನುಜ: ಮಗ; ಮಗುಳು: ಪುನಃ, ಮತ್ತೆ; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಮರುಗದಿರು+ ನಿನ್ನ್+ಉಭಯ +ಪಕ್ಷವ
ತರಿದು +ತುಂಡವ +ಸೀಳುವೆನು+ ತಾ
ಮರೆವೆನೇ+ ಭವದೀಯ+ ರಚಿತ +ವಿಕಾರ +ವಿಭ್ರಮವ
ನೆರೆ +ಪತತ್ರಿಗಳಿವೆ+ ಪತತ್ರಿಯ
ಮರುವೆಸರು +ನಿನಗಿವರ +ಕೇಣಿಗೆ
ತೆರಹುಗೊಡು +ನೀನೆಂದು +ಮಾದ್ರೀ+ತನುಜ +ಮಗುಳೆಚ್ಚ

ಅಚ್ಚರಿ:
(೧) ಶಕುನಿಯನ್ನು ಜರೆದ ಪರಿ – ತಾ ಮರೆವೆನೇ ಭವದೀಯ ರಚಿತ ವಿಕಾರ ವಿಭ್ರಮವ
(೨) ಪತತ್ರಿ ಪದದ ಬಳಕೆ – ನೆರೆ ಪತತ್ರಿಗಳಿವೆ ಪತತ್ರಿಯ ಮರುವೆಸರು

ಪದ್ಯ ೨: ಅರ್ಜುನನ ವಿವೇಕವು ಹೇಗೆ ಕೆಲಸಮಾಡಿತು?

ಮರುಳ ದೇವಾರ್ಚನೆಯೊ ಕನಸಿನ
ಸಿರಿಯೊ ಶಿಶುವಿನ ಕೈಯ ರತ್ನವೊ
ಹರಿಯ ಹೂಮಾಲೆಯೊ ಮದೀಯ ವಿವೇಕ ವಿಭ್ರಮವೊ
ಹರನನೀ ಚರ್ಮಾಕ್ಷಿಯಲಿ ಗೋ
ಚರಿಸೆ ಬೇಡಿದುದಂಬು ಮರ್ತ್ಯದೊ
ಳಿರವು ಮಝುಭಾಪ್ಪೆನ್ನ ಪುಣ್ಯವೆನುತ್ತ ಬಸುಸುಯ್ದ (ಅರಣ್ಯ ಪರ್ವ, ೮ ಸಂಧಿ, ೨ ಪದ್ಯ)

ತಾತ್ಪರ್ಯ:
ಹುಚ್ಚನು ಮಾಡಿದ ಪೂಜೆಯೋ, ಕನಸಿನಲ್ಲಿ ದೊರೆತ ಐಶ್ವರ್ಯವೋ, ಮಗುವಿನ ಕೈಗೆ ಸಿಕ್ಕ ಬೆಲೆಬಾಳುವ ರತ್ನವೋ, ಹರಿದುಹೋದ ಹೂವಿನ ಹಾರವೋ, ಆನೆಯ ಸೊಂಡಿಲಿಗೆ ಸಿಕ್ಕ ಹೂಮಾಲೆಯೋ ಎನ್ನುವಂತೆ ನನ್ನ ವಿವೇಕವು ಕೆಲಸಮಾಡಿತು. ಈ ನನ್ನ ಕಣ್ಣಿನಿಂದಲೇ ಶಿವನನ್ನು ನೋಡಿ, ಅಸ್ತ್ರವನ್ನು ಬೇಡಿ ಬಿಟ್ಟೆ. ನನ್ನ ಪುಣ್ಯವು ಇನ್ನೆಂತಹ ಹೆಚ್ಚಿನದಾಗಿದ್ದೀತು ಎಂದು ನಿಟ್ಟುಸಿರು ಬಿಟ್ಟನು.

ಅರ್ಥ:
ಮರುಳ: ತಿಳಿಗೇಡಿ, ದಡ್ಡ; ದೇವಾರ್ಚನೆ: ದೇವತಾ ಪೂಜೆ; ಕನಸು: ಸ್ವಪ್ನ; ಸಿರಿ: ಐಶ್ವರ್ಯ; ಶಿಶು: ಮಗು; ಕೈ: ಹಸ್ತ; ರತ್ನ: ಮಣಿ; ಹರಿ: ಕಡಿ, ಕತ್ತರಿಸು; ಹೂಮಾಲೆ: ಪುಷ್ಮಹಾರ; ಮದೀಯ: ನನ್ನ; ವಿವೇಕ: ಯುಕ್ತಾಯುಕ್ತ ವಿಚಾರ; ವಿಭ್ರಮ: ಅಲೆದಾಟ, ಸುತ್ತಾಟ; ಹರ: ಶಂಕರ; ಚರ್ಮ: ತೊಗಲು; ಅಕ್ಷಿ: ಕಣ್ಣು; ಗೋಚರ: ಕಾಣುವುದು; ಅಂಬು: ನೀರು; ಮರ್ತ್ಯ: ಮನುಷ್ಯ; ಇರವು: ಇರುವಿಕೆ, ವಾಸ; ಮಝ: ಭಲೆ; ಪುಣ್ಯ: ಸದಾಚಾರ; ಬಿಸುಸುಯ್: ನಿಟ್ಟುಸಿರುಬಿಡು;

ಪದವಿಂಗಡಣೆ:
ಮರುಳ+ ದೇವಾರ್ಚನೆಯೊ +ಕನಸಿನ
ಸಿರಿಯೊ +ಶಿಶುವಿನ+ ಕೈಯ +ರತ್ನವೊ
ಹರಿಯ +ಹೂಮಾಲೆಯೊ +ಮದೀಯ +ವಿವೇಕ+ ವಿಭ್ರಮವೊ
ಹರನನ್+ಈ+ ಚರ್ಮ+ಅಕ್ಷಿಯಲಿ +ಗೋ
ಚರಿಸೆ +ಬೇಡಿದುದ್+ಅಂಬು +ಮರ್ತ್ಯದೊಳ್
ಇರವು +ಮಝುಭಾಪ್ಪೆನ್ನ +ಪುಣ್ಯವೆನುತ್ತ+ ಬಸುಸುಯ್ದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಮರುಳ ದೇವಾರ್ಚನೆಯೊ, ಕನಸಿನ ಸಿರಿಯೊ, ಶಿಶುವಿನ ಕೈಯ ರತ್ನವೊ, ಹರಿಯ ಹೂಮಾಲೆಯೊ