ಪದ್ಯ ೩೫: ದ್ರೋಣರ ಹಿರಿಮೆ ಎಂತಹುದು?

ಪ್ರಭೆಯದಾರಿಗೆ ಸೂರ್ಯನಿದಿರಿನೊ
ಳಭವನಿರೆ ತಾನಾರು ಭುವನಕೆ
ವಿಭುಗಳೈ ವೈಕುಂಠನಿದಿರಿನೊಳಾರು ದೇವತೆಯೈ
ವಿಭವ ನದಿಗಳಿಗುಂಟೆ ಜಲಧಿಯ
ರಭಸದಿದಿರಲಿ ನಮ್ಮ ಬಲದಲಿ
ಸುಭಟರಾರೈ ದ್ರೋಣನಿರುತಿರಲೆಂದನಾ ಕರ್ಣ (ದ್ರೋಣ ಪರ್ವ, ೧ ಸಂಧಿ, ೩೫ ಪದ್ಯ)

ತಾತ್ಪರ್ಯ:
ಸೂರ್ಯನಿದಿರಲ್ಲಿ ತೇಜಸ್ವಿಗಳಾರು? ಶಿವನಲ್ಲದೆ ಲೋಕಕ್ಕೆ ವಿಭುಗಳಾರು? ವಿಷ್ಣುವಿನಿದಿರಲ್ಲಿ ಇನ್ನಾವ ದೇವತೆ? ಸಮುದ್ರದಿದಿರಿನಲ್ಲಿ ಯಾವ ನದಿ ನಿಲ್ಲಲು ಸಾಧ್ಯ? ದ್ರೋಣನಿರಲು ನಮ್ಮ ಸೈನ್ಯದಲ್ಲಿ ಸುಭಟರು ಇನ್ನಾರು ಎಂದು ದ್ರೋಣರ ಹಿರಿಮೆಯನ್ನು ಕರ್ಣನು ಹೇಳಿದನು.

ಅರ್ಥ:
ಪ್ರಭೆ: ಪ್ರಕಾಶ; ಎದುರು: ಮುಂದೆ; ಅಭವ: ಶಿವ; ಭುವನ: ಭೂಮಿ; ವಿಭು: ಒಡೆಯ, ಅರಸು; ನದಿ: ಸರೋವರ; ವೈಕುಂಠ: ವಿಷ್ಣುವಿನ ವಾಸಸ್ಥಾನ; ಇದಿರು: ಎದುರು; ದೇವತೆ: ದೈವ; ವಿಭವ: ಸಿರಿ, ಸಂಪತ್ತು; ಜಲಧಿ: ಸಾಗರ; ರಭಸ: ವೇಗ; ಬಲ: ಶಕ್ತಿ; ಸುಭಟ: ಪರಾಕ್ರಮಿ;

ಪದವಿಂಗಡಣೆ:
ಪ್ರಭೆಯದಾರಿಗೆ +ಸೂನ್+ಇದಿರಿನೊಳ್
ಅಭವನಿರೆ+ ತಾನಾರು+ ಭುವನಕೆ
ವಿಭುಗಳೈ +ವೈಕುಂಠನಿದಿರಿನೊಳ್+ಆರು +ದೇವತೆಯೈ
ವಿಭವ+ ನದಿಗಳಿಗುಂಟೆ +ಜಲಧಿಯ
ರಭಸದ್+ಇದಿರಲಿ +ನಮ್ಮ +ಬಲದಲಿ
ಸುಭಟರಾರೈ+ ದ್ರೋಣನ್+ಇರುತಿರಲ್+ಎಂದನಾ +ಕರ್ಣ

ಅಚ್ಚರಿ:
(೧) ಉಪಮಾನದ ಪ್ರಯೋಗ – ಪ್ರಭೆಯದಾರಿಗೆ ಸೂರ್ಯನಿದಿರಿನೊಳ್; ಅಭವನಿರೆ ತಾನಾರು ಭುವನಕೆ
ವಿಭುಗಳೈ; ವೈಕುಂಠನಿದಿರಿನೊಳಾರು ದೇವತೆಯೈ; ವಿಭವ ನದಿಗಳಿಗುಂಟೆ ಜಲಧಿಯ ರಭಸದಿದಿರಲಿ

ಪದ್ಯ ೯: ಭೀಷ್ಮನನ್ನು ಕೃಷ್ಣನು ಹೇಗೆ ವರ್ಣಿಸುತ್ತಾನೆ?

ಆದಡರ್ಜುನ ನೋಡು ಸೈನ್ಯ ಮ
ಹೋದಧಿಯ ಮಧ್ಯದಲಿ ಮೆರೆವವ
ನಾ ದುರಂತ ಪರಾಕ್ರಮನು ಗಂಗಾಕುಮಾರಕನು
ಕಾದಲರಿದಪನಖಿಲಬಲ ವಿಭು
ವಾದನಿವನತಿಬಲನು ಕಾಲನ
ಸಾಧಿಸಿದ ಛಲದಂಕಮಲ್ಲನು ಭೀಷ್ಮ ನೋಡೆಂದ (ಭೀಷ್ಮ ಪರ್ವ, ೩ ಸಂಧಿ, ೯ ಪದ್ಯ)

ತಾತ್ಪರ್ಯ:
ಹಾಗಾದರೆ ಅರ್ಜುನ ನೋದು, ಕೌರವ ಸೈನ್ಯದ ಮಹಾ ಸಾಗರದ ಮಧ್ಯದಲ್ಲಿ ಅಪರಿಮಿತ, ನಿಸ್ಸೀಮ ಪರಾಕ್ರಮಿಯಾದ ಭೀಷ್ಮನಿದ್ದಾನೆ. ಅವನೊಡನೆ ಕಾದುವುದು ಅಸಾಧ್ಯ. ಅವನು ಕೌರವರ ಸೇನಾಧಿಪತಿ, ಅವನು ಅತಿಬಲ, ಯಮನನ್ನೂ ಗೆದ್ದ ಛಲದಂಕ, ನೋಡು ಭೀಷ್ಮನನ್ನು ಎಂದು ಕೃಷ್ಣನು ಹೇಳಿದನು.

ಅರ್ಥ:
ನೋಡು: ವೀಕ್ಷಿಸು; ಸೈನ್ಯ: ಸೇನೆ; ಮಹೋದಧಿ: ದೊಡ್ಡ ಸಾಗರ; ಮಧ್ಯ: ನಡುವೆ; ಮೆರೆ: ಹೊಳೆ, ಪ್ರಕಾಶಿಸು; ದುರಂತ: ಕೊನೆಯಿಲ್ಲದುದು; ಪರಾಕ್ರಮ: ಶೂರ; ಕುಮಾರ: ಮಗ; ಕಾದು: ಹೋರಾಡು; ಅರಿ: ತಿಳಿ; ಅತಿಬಲ: ಬಹಳ ಪರಾಕ್ರಮಿ; ವಿಭು: ಒಡೆಯ, ಅರಸು; ಅಖಿಲ: ಎಲ್ಲಾ; ಬಲ: ಸೈನ್ಯ; ಕಾಲ: ಸಮಯ, ಯಮ; ಸಾಧಿಸು: ಪಡೆ, ದೊರ ಕಿಸಿಕೊಳ್ಳು; ಛಲ: ದೃಢ ನಿಶ್ಚಯ; ಮಲ್ಲ: ಶೂರ;

ಪದವಿಂಗಡಣೆ:
ಆದಡ್+ಅರ್ಜುನ +ನೋಡು +ಸೈನ್ಯ +ಮ
ಹೋದಧಿಯ+ ಮಧ್ಯದಲಿ +ಮೆರೆವವನ್
ಆ+ ದುರಂತ +ಪರಾಕ್ರಮನು +ಗಂಗಾ+ಕುಮಾರಕನು
ಕಾದಲ್+ಅರಿದ್+ಅಪನ್+ಅಖಿಲ+ಬಲ+ ವಿಭು
ವಾದನ್+ಇವನ್+ಅತಿಬಲನು+ ಕಾಲನ
ಸಾಧಿಸಿದ +ಛಲದಂಕ+ಮಲ್ಲನು+ ಭೀಷ್ಮ +ನೋಡೆಂದ

ಅಚ್ಚರಿ:
(೧) ಭೀಷ್ಮನನ್ನು ಹೊಗಳುವ ಪರಿ: ವಿಭು ವಾದನಿವನತಿಬಲನು ಕಾಲನ ಸಾಧಿಸಿದ ಛಲದಂಕಮಲ್ಲನು ಭೀಷ್ಮ

ಪದ್ಯ ೩೪: ಭೂಮಿಗೆ ಅಧಿಪತಿಯಾರು?

ಆರಜೋಗುಣಕಬುಜಭವನ ವಿ
ಕಾರಿ ತನ್ನ ಶರೀರದರ್ಧವ
ನಾರಿಯನು ಮಾಡಿದನು ಶತರೂಪಾಭಿಧಾನದಲಿ
ಸೇರಿಸಿದನರ್ಧದಲಿ ಮನುವನು
ದಾರ ಚರಿತನು ಸಕಲ ಧರ್ಮದ
ಸಾರವನು ವಿಸ್ತರಿಸಿದನು ಮನು ಭುವನ ವಿಭುವಾಗಿ (ಅರಣ್ಯ ಪರ್ವ, ೧೫ ಸಂಧಿ, ೩೪ ಪದ್ಯ)

ತಾತ್ಪರ್ಯ:
ರಜೋಗುಣದ ಬ್ರಹ್ಮನು ತನ್ನ ಶರೀರದ ಅರ್ಧದಿಂದ ಶತರೂಪೆಯನ್ನು ಸೃಷ್ಟಿಸಿದನು. ಇನ್ನರ್ಧದಿಂದ ಮನುವನ್ನು ಸೃಷ್ಟಿಸಿದನು. ಮನುವು ಭೂಮಿಗೆ ಅಧಿಪತಿಯಾಗಿ ಧರ್ಮವನ್ನು ವಿಸ್ತರಿಸಿದನು.

ಅರ್ಥ:
ರಜಸ್ಸು: ಮೂರು ಗುಣಗಳಲ್ಲಿ ಒಂದು; ಗುಣ: ನಡತೆ, ಸ್ವಭಾವ; ಅಬುಜಭವ: ಬ್ರಹ್ಮ; ವಿಕಾರ: ಬದಲಾವಣೆ, ಮಾರ್ಪಾಟು; ಶರೀರ: ದೇಹ; ಅರ್ಧ: ಒಂದರ ಎರಡನೇ ಭಾಗ; ನಾರಿ: ಹೆಣ್ಣು; ಶತ: ನೂರು; ರೂಪ: ಆಕಾರ; ಅಭಿಧಾನ: ಹೆಸರು; ಸೇರಿಸು: ಜೋಡಿಸು; ಮನು:ಮನುಷ್ಯ ಕುಲದ ಮೂಲಪುರುಷ; ಉದಾರ: ತ್ಯಾಗ ಬುದ್ಧಿಯುಳ್ಳವನು; ಚರಿತ: ನಡೆದುದು; ಸಕಲ: ಎಲ್ಲಾ; ಧರ್ಮ: ಧಾರಣೆ ಮಾಡಿದುದು; ಸಾರ: ರಸ; ವಿಸ್ತರ: ಹಬ್ಬುಗೆ, ವಿಸ್ತಾರ; ಭುವನ: ಲೋಕ, ಜಗತ್ತು; ವಿಭು:ಒಡೆಯ, ಅರಸು;

ಪದವಿಂಗಡಣೆ:
ಆ+ರಜೋಗುಣಕ್+ಅಬುಜಭವನ+ ವಿ
ಕಾರಿ +ತನ್ನ +ಶರೀರ್+ಅರ್ಧವ
ನಾರಿಯನು +ಮಾಡಿದನು +ಶತರೂಪ+ಅಭಿಧಾನದಲಿ
ಸೇರಿಸಿದನ್+ಅರ್ಧದಲಿ +ಮನುವನ್
ಉದಾರ +ಚರಿತನು +ಸಕಲ +ಧರ್ಮದ
ಸಾರವನು +ವಿಸ್ತರಿಸಿದನು+ ಮನು +ಭುವನ +ವಿಭುವಾಗಿ

ಅಚ್ಚರಿ:
(೧) ಮನುವಿನ ಕಾರ್ಯ – ಸೇರಿಸಿದನರ್ಧದಲಿ ಮನುವನುದಾರ ಚರಿತನು ಸಕಲ ಧರ್ಮದ ಸಾರವನು ವಿಸ್ತರಿಸಿದನು ಮನು ಭುವನ ವಿಭುವಾಗಿ

ಪದ್ಯ ೧೨೬: ದ್ರೌಪದಿಯು ಕೃಷ್ಣನನ್ನು ಹೇಗೆ ಪ್ರಾರ್ಥಿಸಿದಳು – ೧೫?

ಆರಿಗೊರಲುವೆನೈ ಖಳಾಪ
ಸ್ಮಾರವಿದೆ ಸೆರೆವಿಡಿದು ತನ್ನಸು
ವಾರಿಗೆಯು ವೈರಾಗ್ಯ ಗಡ ಮತ್ಪ್ರಾಣ ವಿಭುಗಳಿಗೆ
ಘೋರತರ ಭವದುರಿತ ತರುವಿನ
ಬೇರ ಸುಡುವೀ ನಿನ್ನ ನಾಮಕೆ
ನಾರಿಯಕ್ಕೆಯ ನಿಲಿಸಲೇನರಿದೆಂದಳಿಂದುಮುಖಿ (ಸಭಾ ಪರ್ವ, ೧೫ ಸಂಧಿ, ೧೨೬ ಪದ್ಯ)

ತಾತ್ಪರ್ಯ:
ವೈರಿಯಾದ, ದುಷ್ಟನಾದ ಈ ದುಶ್ಯಾಸನನೆಂಬ ಮೂರ್ಛಾರೋಗವು ನನ್ನ ಪ್ರಾಣವನ್ನು ಸೆರೆಹಿಡಿದಿದೆ, ನನ್ನನ್ನು ರಕ್ಷಿಸಬೇಕಾದ ನನ್ನ ಪ್ರಭುಗಳಿಗೆ ವೈರಾಗ್ಯದಲ್ಲಿ ಮುಳುಗಿದ್ದಾರೆ. ಸಂಸಾರವೆಂಬ ಪಾಪವೃಕ್ಷದ ಬೇರನ್ನೇ ಸುಡಬಲ್ಲ ನಿನ್ನ ನಾಮಕ್ಕೆ ನನ್ನ ದುಃಖವನ್ನು ನಿವಾರಣೆ ಮಾಡುವುದು ಸಾಧ್ಯವಾಗುವುದಿಲ್ಲವೇ ಎಂದು ದ್ರೌಪದಿಯು ಕೃಷ್ಣನಲ್ಲಿ ಮೊರೆಯಿಟ್ಟಳು.

ಅರ್ಥ:
ಅರಿ: ವೈರಿ; ಒರಲು: ಗೋಳಿಡು; ಖಳ: ದುಷ್ಟ; ಅಪಸ್ಮಾರ: ಮೂರ್ಛೆರೋಗ, ಮರೆವು; ಸೆರೆ: ಬಂಧನ; ಅಸು: ಪ್ರಾಣ; ವಾರಿ: ಕಟ್ಟುವ ಸ್ಥಳ; ವೈರಾಗ್ಯ: ಅನಾಸಕ್ತಿ, ವಿರಕ್ತಿ; ಗಡ: ಅಲ್ಲವೇ; ಪ್ರಾಣ: ಜೀವ; ವಿಭು:ಒಡೆಯ, ಅರಸು; ಘೋರ: ಉಗ್ರ, ಭಯಂಕರ; ಭವ: ಇರುವಿಕೆ, ಅಸ್ತಿತ್ವ; ತರು: ಮರ; ಬೇರ: ಬೇರು, ಬುಡ; ಸುಡು: ಬೆಂಕಿಯಿಡು, ದಹಿಸು; ನಾಮ: ಹೆಸರು; ನಾರಿ: ಹೆಣ್ಣು; ಅಕ್ಕೆ: ಅಳುವಿಕೆ; ನಿಲಿಸು: ತಡೆ ಅರಿ: ತಿಳಿ; ಇಂದುಮುಖಿ: ಚಂದ್ರನಂತ ಮುಖ;

ಪದವಿಂಗಡಣೆ:
ಆರಿಗ್+ಒರಲುವೆನೈ+ ಖಳ+ಅಪ
ಸ್ಮಾರವಿದೆ+ ಸೆರೆವಿಡಿದು+ ತನ್+ಅಸು
ವಾರಿಗೆಯು +ವೈರಾಗ್ಯ +ಗಡ +ಮತ್ಪ್ರಾಣ+ ವಿಭುಗಳಿಗೆ
ಘೋರತರ +ಭವದುರಿತ+ ತರುವಿನ
ಬೇರ+ ಸುಡುವೀ +ನಿನ್ನ+ ನಾಮಕೆ
ನಾರಿ+ಅಕ್ಕೆಯ+ ನಿಲಿಸಲೇನ್+ಅರಿದ್+ಎಂದಳ್+ಇಂದುಮುಖಿ

ಅಚ್ಚರಿ:
(೧) ವಾರಿ, ನಾರಿ – ಪ್ರಾಸ ಪದ
(೨) ಅಪಸ್ಮಾರ, ಅಸುವಾರಿ – ಪದಗಳ ಬಳಕೆ
(೩) ಕೃಷ್ಣನ ಮಹಿಮೆ – ಘೋರತರ ಭವದುರಿತ ತರುವಿನಬೇರ ಸುಡುವೀ ನಿನ್ನ ನಾಮಕೆ

ಪದ್ಯ ೨೧: ಶ್ರೀಕೃಷ್ಣನು ಯಾವುದರಿಂದ ಗುಪ್ತನಾಗಿದ್ದಾನೆ?

ಒಂದೆನಿಸಿ ತೋರುವನು ಎರಡರೊ
ಳೊಂದಿ ಮೆರೆವನು ಮೂರು ನೆಲೆಯಲಿ
ನಿಂದು ನಾಲ್ಕನು ಬಳಸಿ ವಿಭುವಾಗೈದು ಠಾಣದಲಿ
ಹಿಂದೆ ಮುಂದೆಡಬಲದ ಬಹುವಿಧ
ದಿಂದ ಮಾಯಾಗುಪ್ತನಾಗಿ ಮು
ಕುಂದ ತೋರುವನೀತನಂತೆಯನನರಿವರಾರೆಂದ (ಸಭಾ ಪರ್ವ, ೧೦ ಸಂಧಿ, ೨೧ ಪದ್ಯ)

ತಾತ್ಪರ್ಯ:
ಇವನು ಎರಡನೆಯದಿಲ್ಲದ ಏಕಮಾತ್ರ ವಸ್ತುವು. ಇವನು ಈಶ್ವರನಾಗಿ ಕಾರಣವೂ ಮಾಯೋಪಾಧಿಯಿಂದ ಜಗತ್ತೆಂಬ ಕಾರ್ಯವೂ ಆಗಿ ತೋರುತ್ತಾನೆ. ಇವನು ಸತ್ವ ರಜ, ತಮೋಗುಣಗಳೆಂಬ ಪುರುಷಾರ್ಥಗಳನ್ನು ಬಳಸುತ್ತಾನೆ. ಐದು ಇಂದಿರ್ಯಗಳ ವಿಭುವು ಇವನು. ಹಿಂದೆ, ಮುಂದೆ ಎಡ ಬಲ ಮೇಲೆ ಕೆಳಗೆ ಇವನೇ ಇರುವನಾದರೂ ಮಾಯೆಯಿಂದ ಗುಪ್ತನಾಗಿದ್ದಾನೆ. ಇವನು ಅನಂತನು ಎಂದು ಭೀಷ್ಮರು ಕೃಷ್ಣನನ್ನು ವರ್ಣಿಸಿದರು.

ಅರ್ಥ:
ಒಂದು: ಏಕ; ತೋರು: ಗೋಚರ, ಕಾಣಿಸು; ಎರಡು: ದ್ವಿ, ದ್ವಂದ್ವ, ಯುಗಳ; ಮೆರೆ: ಪ್ರಕಾಶಿಸು; ನೆಲೆ: ಆಶ್ರಯ, ಆಧಾರ; ನಾಲ್ಕು: ತುರಿಯ; ಬಳಸು: ಉಪಯೋಗಿಸು; ವಿಭು: ಎಲ್ಲಕಡೆ ಇರುವಂತಹುದು; ಠಾಣ: ಸ್ಥಳ; ಹಿಂದೆ: ನಡೆದ; ಮುಂದೆ: ಆಗುವ; ಎಡ: ವಾಮ; ಬಹು: ಬಹಳ; ವಿಧ: ಪ್ರಾಕಾರ; ಮಾಯ: ಭ್ರಾಂತಿ, ಕಾಣದಾಗುವಿಕೆ; ಗುಪ್ತ: ಗುಟ್ಟು, ರಹಸ್ಯ; ಅರಿ: ತಿಳಿ;

ಪದವಿಂಗಡಣೆ:
ಒಂದೆನಿಸಿ +ತೋರುವನು +ಎರಡರೊಳ್
ಒಂದಿ +ಮೆರೆವನು+ ಮೂರು +ನೆಲೆಯಲಿ
ನಿಂದು +ನಾಲ್ಕನು +ಬಳಸಿ+ ವಿಭುವಾಗ್+ಐದು +ಠಾಣದಲಿ
ಹಿಂದೆ +ಮುಂದ್+ಎಡ+ಬಲದ +ಬಹುವಿಧ
ದಿಂದ +ಮಾಯಾ+ಗುಪ್ತನಾಗಿ +ಮು
ಕುಂದ +ತೋರುವನ್+ಈತ್+ಅನಂತೆಯನನ್+ಅರಿವರಾರೆಂದ

ಅಚ್ಚರಿ:
(೧) ಮೂರು – ಗುಣಗಳು – ಸತ್ವ, ರಜ ತಮಸ್ಸು
(೨) ನಾಲ್ಕು – ಪುರುಷಾರ್ಥಗಳು
(೩) ಐದು – ಇಂದ್ರಿಯಗಳು – ಕಣ್ಣು, ನಾಲಗೆ, ಕಿವಿ, ಸ್ಪರ್ಷ, ಮೂಗು
(೪) ವಿರುದ್ಧ ಪದ – ಹಿಂದೆ, ಮುಂದೆ; ಎಡ, ಬಲ;

ಪದ್ಯ ೧೭: ದೇವತೆಗಳು ಯಾರನ್ನು ಸಾರಥಿಯಾಗಲು ಒಪ್ಪಿಸಿದರು?

ಮಾವ ಕೇಳೈ ಬಳಿಕ ಹರಿದುದು
ದೇವಕುಲ ಪರಮೇಷ್ಠಿಯಲ್ಲಿಗೆ
ಭಾವವನು ಬಿನ್ನೈಸಿದರು ನಿಜರಾಜಕಾರಿಯದ
ಆ ವಿಭುವನೊಡಬಡಿಸಿದರು ದಿವಿ
ಜಾವಳಿಗಳಿಂದಿನಲಿ ಕರ್ಣಗೆ
ನೀವು ಸಾರಥಿಯಾದಡಭಿಮತಸಿದ್ಧಿ ತನಗೆಂದ (ಕರ್ಣ ಪರ್ವ, ೭ ಸಂಧಿ, ೧೭ ಪದ್ಯ)

ತಾತ್ಪರ್ಯ:
ಮಾವ ಕೇಳು, ದೇವತೆಗಳು ಸೃಷ್ಟಿಕರ್ತ ಬ್ರಹ್ಮನ ಬಳಿ ಹೋಗಿ ಶಿವನ ರಥಕ್ಕೆ ಸಾರಥಿಯಾಗಲು ಬೇಡಿಕೊಂಡು, ರಾಜಕಾರ್ಯವನ್ನು ತಿಳಿಸಿ ಸಾರಥಿಯಾಗಲು ಒಪ್ಪಿಸಿದರು. ಈ ದಿನವು ನೀವು ಕರ್ಣನ ರಥಕ್ಕೆ ಸಾರಥಿಯಾಗಲೊಪ್ಪಿದರೆ ನಮ್ಮ ಅಭಿಮತ ಸಿದ್ಧಿಸುತ್ತದೆ ಎಂದು ದುರ್ಯೋಧನನು ತಿಳಿಸಿದನು.

ಅರ್ಥ:
ಮಾವ: ತಾಯಿಯ ಸಹೋದರ; ಕೇಳು: ಆಲಿಸು; ಬಳಿಕ: ನಂತರ; ಹರಿ:ಗತಿ, ಯೋಚಿಸು; ದೇವಕುಲ: ಸುರರು; ಪರಮೇಷ್ಠಿ: ಬ್ರಹ್ಮ; ಭಾವ: ಅಭಿಪ್ರಾಯ, ಇಂಗಿತ; ಬಿನ್ನೈಸು: ಹೇಳು, ಬೇಡು; ನಿಜ: ದಿಟ; ರಾಜಕಾರಿಯ: ರಾಜಕಾರಣ; ವಿಭು: ಬ್ರಹ್ಮ, ಸರ್ವವ್ಯಾಪಿ; ಒಡಬಡಿಸಿ: ಒಪ್ಪಿಸಿ; ದಿವಿಜಾವಳಿ: ದೇವರ ಗುಂಪು; ಇಂದು: ಇವತ್ತು; ಸಾರಥಿ: ರಥವನ್ನು ಓಡಿಸುವವ; ಅಭಿಮತ: ಅಭಿಪ್ರಾಯ; ಸಿದ್ಧಿ: ಸಾಧಿಸು;

ಪದವಿಂಗಡಣೆ:
ಮಾವ +ಕೇಳೈ +ಬಳಿಕ +ಹರಿದುದು
ದೇವಕುಲ +ಪರಮೇಷ್ಠಿಯಲ್ಲಿಗೆ
ಭಾವವನು +ಬಿನ್ನೈಸಿದರು+ ನಿಜರಾಜ+ಕಾರಿಯದ
ಆ +ವಿಭುವನ್+ಒಡಬಡಿಸಿದರು +ದಿವಿ
ಜಾವಳಿಗಳ್+ಇಂದಿನಲಿ +ಕರ್ಣಗೆ
ನೀವು +ಸಾರಥಿಯಾದಡ್+ಅಭಿಮತಸಿದ್ಧಿ+ ತನಗೆಂದ

ಅಚ್ಚರಿ:
(೧) ದೇವಕುಲ, ದಿವಿಜಾವಳಿ – ಸುರರ ಗುಂಪು ಎಂದು ಹೇಳುವ ಪದಗಳು
(೨) ಪರಮೇಷ್ಠಿ, ವಿಭು – ಬ್ರಹ್ಮನನ್ನು ಕರೆಯಲು ಬಳಸಿದ ಪದ

ಪದ್ಯ ೩೮: ಗಮಕಿಗಳು ಹೇಗೆ ಪ್ರಶಂಸೆ ಪಡೆಯುತ್ತಿದ್ದರು?

ನುಡಿದು ತಲೆದೂಗಿಸುವ ಮರೆಗ
ನ್ನಡಕೆ ಹಾ ಹಾಯೆನಿಸಿ ಮೆಚ್ಚನು
ಪಡೆದ ವಾಗ್ಮಿಗಳೋದಿ ಹೊಗಳಿಸಿಕೊಂಬ ಗಮಕಿಗಳು
ಕೊಡುವ ಪದ್ಯಕೆ ಸುಪ್ರಮೇಯದ
ಗಡಣಕಬುಜಭವಾದಿ ವಿಭುಗಳು
ಬಿಡಿಸಲರಿದೆನಿಪತುಳ ತಾರ್ಕಿಕ ಜನಗಳೊಪ್ಪಿದರು (ಉದ್ಯೋಗ ಪರ್ವ, ೮ ಸಂಧಿ, ೩೮ ಪದ್ಯ)

ತಾತ್ಪರ್ಯ:
ಮಾತನಾಡಿ ಅಹುದುದಹುದೆಂದು ತಲೆದೂಗಿಸಿ ರಹಸ್ಯವಾದ ಕನ್ನಡಕೆ ಹಾ ಹಾ ಎಂದು ಹೇಳಿ ಹೊಗಳಿಕೆಯನ್ನು ಪಡೆದು ವಾಗ್ಮಿಗಳು, ಓದಿ ಹೊಗಳಿಕೆಯನ್ನು ಪಡೆದ ಗಮಕಿಗಳು, ಕೊಡುವ ಪದ್ಯಕೆ ಸರಿಯಾಗಿ ವಿವೇಚಿಸಿ, ಪದಗಳನ್ನು ಕೂಡಿಸಿ ತಾವರೆಯ ಇರುವಿಕೆಯನ್ನು ತೋರುವ ಪ್ರಭು, ಬಿಡಿಸಿ ಅರ್ಥೈಸುವ ತಾರ್ಕಿಕ ಜನಗಳನ್ನು ಸಭೆಯಲ್ಲಿ ಒಪ್ಪಿದರು.

ಅರ್ಥ:
ನುಡಿ: ಮಾತು; ತಲೆ: ಶಿರ; ದೂಗಿಸು: ಅಲ್ಲಾಡಿಸು; ಮರೆಗನ್ನಡ: ರಹಸ್ಯವಾದ ಕನ್ನಡ; ಮೆಚ್ಚು: ಒಲುಮೆ, ಪ್ರೀತಿ; ಪಡೆ: ಸೈನ್ಯ, ಬಲ; ವಾಗ್ಮಿ: ಚೆನ್ನಾಗಿ ಮಾತನಾಡುವವನು; ಓದಿ: ತಿಳಿದು; ಹೊಗಳು: ಪ್ರಶಂಶಿಸು; ಗಮಕಿ: ಪದ್ಯಗಳನ್ನು ಹಾಡುವವರು; ಕೊಡು: ನೀಡು; ಪದ್ಯ: ಕಾವ್ಯ; ಪ್ರಮೇಯ: ವಿವೇಚಿಸಬೇಕಾದ, ಅಳೆಯಬಹುದಾದ; ಗಡಣ:ಕೂಡಿಸುವಿಕೆ; ಅಬುಜ: ತಾವರೆ; ಭವ: ಇರುವಿಕೆ, ಅಸ್ತಿತ್ವ; ವಿಭು:ದೇವರು, ಸರ್ವತ್ರವ್ಯಾಪ್ತ, ರಾಜ, ಪ್ರಭು; ಬಿಡಿಸು: ಕಳಚು, ಸಡಿಲಿಸು; ಅರಿ: ತಿಳಿ; ಅತುಳ: ಬಹಳ; ತಾರ್ಕಿಕ: ತರ್ಕಶಾಸ್ತ್ರವನ್ನು ತಿಳಿದವನು; ಜನ: ಮನುಷ್ಯ; ಒಪ್ಪು: ಸಮ್ಮತಿಸು;

ಪದವಿಂಗಡಣೆ:
ನುಡಿದು +ತಲೆದೂಗಿಸುವ+ ಮರೆ+
ಕನ್ನಡಕೆ +ಹಾ +ಹಾಯೆನಿಸಿ +ಮೆಚ್ಚನು
ಪಡೆದ+ ವಾಗ್ಮಿಗಳ್+ಓದಿ+ ಹೊಗಳಿಸಿಕೊಂಬ+ ಗಮಕಿಗಳು
ಕೊಡುವ +ಪದ್ಯಕೆ +ಸುಪ್ರಮೇಯದ
ಗಡಣಕ್+ಅಬುಜ+ಭವಾದಿ +ವಿಭುಗಳು
ಬಿಡಿಸಲ್+ಅರಿದ್+ಎನಿಪ್+ಅತುಳ +ತಾರ್ಕಿಕ +ಜನಗಳ್+ಒಪ್ಪಿದರು

ಅಚ್ಚರಿ:
(೧) ವಾಗ್ಮಿ, ಗಮಕಿ, ವಿಭು, ತಾರ್ಕಿಕ – ಜನಗಳ ಬಳಕೆ