ಪದ್ಯ ೧೪: ದ್ರೋಣನು ಯುದ್ಧಕ್ಕೆ ಹೇಗೆ ತಯಾರಾದನು?

ವಿನುತ ಸಂಧ್ಯಾವಂದನಾದಿಯ
ನನುಕರಿಸಿ ಹರಿಪದ ಪಯೋಜವ
ನೆನೆದು ವಿರಚಿತ ದೇವವಿಪ್ರಾನಳ ಸಮಾರ್ಚನನು
ಕನಕ ಕವಚವ ತೊಟ್ಟು ಗಡ್ಡದ
ಘನತೆಯನು ಗಂಟಿಕ್ಕಿ ವರಕಾಂ
ಚನಮಯದ ಯಜ್ಞೋಪವೀತವನಿಳುಹಿದನು ದ್ರೋಣ (ದ್ರೋಣ ಪರ್ವ, ೯ ಸಂಧಿ, ೧೪ ಪದ್ಯ)

ತಾತ್ಪರ್ಯ:
ದ್ರೋಣನು ಎದ್ದು ಸ್ನಾನ ಸಂಧ್ಯಾವಂದನೆ ಮೊದಲಾದವನ್ನು ಮಾದಿ, ಶ್ರೀಕೃಷ್ಣನ ಪಾದ ಕಮಲಗಳನ್ನು ಸ್ಮರಿಸಿದನು. ದೇವತೆಗಳು ಬ್ರಾಹ್ಮಣರನ್ನು ಅರ್ಚಿಸಿದನು. ಹೇಮ ಕವಚವನ್ನು ಧರಿಸಿ, ಗಡ್ಡವನ್ನು ಗಂಟಿಟ್ಟು, ಬಂಗಾರದ ಯಜ್ಞೋಪವೀತವನ್ನು ಕೆಳಗಿಳಿಸಿದನು.

ಅರ್ಥ:
ವಿನುತ: ನಿರ್ಮಲ; ಸಂಧ್ಯಾವಂದನ: ಸಂಧ್ಯೆಯ ಕಾಲದ ಪೂಜೆ; ಆದಿ: ಮುಂತಾದ; ಅನುಕರಿಸು: ಪ್ರತಿಫಲ ಕೊಡು; ಹರಿಪದ: ಕೃಷ್ಣನ ಪಾದ; ಪಯೋಜ: ಕಮಲ; ನೆನೆ: ಜ್ಞಾಪಿಸು, ಮನನ ಮಾದು; ವಿರಚಿತ: ನಿರ್ಮಿಸಿದ; ದೇವ: ಅಮರ; ವಿಪ್ರ: ಬ್ರಾಹ್ಮಣ; ಅರ್ಚಿಸು: ಪೂಜಿಸು; ಕನಕ: ಚಿನ್ನ; ಕವಚ: ಹೊದಿಕೆ; ತೊಟ್ಟು: ಧರಿಸು; ಗಡ್ಡ:ದವಡೆ; ಗಂಟು: ಸೇರಿಸಿ ಕಟ್ಟಿದುದು; ವರ: ಶ್ರೇಷ್ಠ; ಕಾಂಚನ: ಚಿನ್ನ; ಯಜ್ಞೋಪವೀತ: ಜನಿವಾರ; ಇಳುಹು: ಕೆಳಗೆ ಇಳಿಸು;

ಪದವಿಂಗಡಣೆ:
ವಿನುತ +ಸಂಧ್ಯಾವಂದನಾದಿಯನ್
ಅನುಕರಿಸಿ+ ಹರಿಪದ +ಪಯೋಜವ
ನೆನೆದು +ವಿರಚಿತ +ದೇವ+ವಿಪ್ರಾನಳ +ಸಮಾರ್ಚನನು
ಕನಕ +ಕವಚವ +ತೊಟ್ಟು +ಗಡ್ಡದ
ಘನತೆಯನು +ಗಂಟಿಕ್ಕಿ +ವರ+ಕಾಂ
ಚನಮಯದ +ಯಜ್ಞೋಪವೀತವನ್+ಇಳುಹಿದನು +ದ್ರೋಣ

ಅಚ್ಚರಿ:
(೧) ಪಾದಪದ್ಮ ಎಂದು ಹೇಳುವ ಪರಿ – ಪದಪಯೋಜ
(೨) ಕನಕ, ಕಾಂಚನ – ಚಿನ್ನದ ಸಮಾನಾರ್ಥಕ ಪದ