ಪದ್ಯ ೨೨: ಧೃತರಾಷ್ಟ್ರನ ಅಭಿಪ್ರಾಯವೇನು?

ಸಿರಿಗೆ ಸಫಲತೆಯಹುದು ನಾನಿದ
ನರಿಯೆ ನೀವವರಿದ್ದ ವಿಪಿನಾಂ
ತರಕೆ ಗಮಿಸುವುದುಚಿತವೇ ಮನಮುನಿಸುನೆರೆಬಲಿದು
ಕೆರಳಿದರೆ ಕಾಳಹುದು ಭೀಮನ
ದುರುಳತನವೀ ಕೌರವೇಂದ್ರನ
ಹುರುಡು ಹೊರೆಯೇರುವುದು ಮತವಲ್ಲೆಂದನಂಧನೃಪ (ಅರಣ್ಯ ಪರ್ವ, ೧೮ ಸಂಧಿ, ೨೨ ಪದ್ಯ)

ತಾತ್ಪರ್ಯ:
ಪಾಂಡವರಿಗೆ ಹೊಟ್ಟೆಕಿಚ್ಚು ತರಿಸಿ ನಿಮ್ಮ ಐಶ್ವರ್ಯವು ಸಫಲವಾಗುವುದು ಹೇಗೆಂದು ನನಗೆ ಅರ್ಥವಾಗುತ್ತಿಲ್ಲ ಎಂದು ಧೃತರಾಷ್ಟ್ರನು ಹೇಳಿದನು. ಕಾಡಿನೊಳಗಿರುವ ಪಾಂಡವರ ಬಳಿಗೆ ಹೋಗುವುದು ಸರಿಯೆ? ಮನಸ್ಸಿನ ಕೋಪದ ಕಿಚ್ಚು ಕೆರಳಿದರೆ ಕೆಡಕಾಗುವುದಿಲ್ಲವೇ? ಭೀಮನ ದುರುಳತನವೂ ದುರ್ಯೋಧನನ ಮತ್ಸರವೂ ಹೆಚ್ಚುತ್ತದೆ. ಇದು ನನಗೆ ಇಷ್ಟವಿಲ್ಲ ಎಂದು ಧೃತರಾಷ್ಟ್ರನು ಅಸಮ್ಮತಿಯನ್ನು ಹೊರಹಾಕಿದನು.

ಅರ್ಥ:
ಸಿರಿ: ಐಶ್ವರ್ಯ; ಸಫಲತೆ: ಸಾರ್ಥಕ, ಯಶಸ್ಸು; ಅರಿ: ತಿಳಿ; ವಿಪಿನ: ಕಾಡು; ಅಂತರಕೆ: ಒಳಗೆ; ಗಮಿಸು: ಹೋಗು; ಉಚಿತ: ಸರಿಯಾದ; ಮನ: ಮನಸ್ಸು; ಮುನಿಸು: ಸಿಟ್ಟು; ನೆರೆ: ಸಮೀಪ, ಹತ್ತಿರ; ಬಲಿದು: ಹೆಚ್ಚಾಗು; ಕೆರಳು: ಉದ್ರಿಕ್ತವಾಗು; ಕಾಳಹ: ಯುದ್ಧ; ದುರುಳ: ದುಷ್ಟವಾದ; ಹುರುಡು: ಪೈಪೋಟಿ, ಸ್ಪರ್ಧೆ; ಹೊರೆ: ಭಾರ; ಏರು: ಹೆಚ್ಚಾಗು; ಮತ: ಅಭಿಪ್ರಾಯ; ಅಂಧ: ಕುರುಡ; ನೃಪ: ರಾಜ;

ಪದವಿಂಗಡಣೆ:
ಸಿರಿಗೆ+ ಸಫಲತೆ+ಅಹುದು +ನಾನ್+ಇದನ್
ಅರಿಯೆ +ನೀವ್+ಅವರಿದ್ದ+ ವಿಪಿನಾಂ
ತರಕೆ+ ಗಮಿಸುವುದ್+ಉಚಿತವೇ +ಮನ+ಮುನಿಸು+ನೆರೆ+ಬಲಿದು
ಕೆರಳಿದರೆ+ ಕಾಳಹುದು +ಭೀಮನ
ದುರುಳತನವ್+ಈ+ ಕೌರವೇಂದ್ರನ
ಹುರುಡು +ಹೊರೆ+ಏರುವುದು +ಮತವಲ್ಲೆಂದನ್+ಅಂಧನೃಪ

ಅಚ್ಚರಿ:
(೧) ಧೃತರಾಷ್ಟ್ರನ ಚಿಂತೆ – ಭೀಮನ ದುರುಳತನವೀ ಕೌರವೇಂದ್ರನ ಹುರುಡು ಹೊರೆಯೇರುವುದು

ಪದ್ಯ ೪೩: ಭೀಮನು ಸಂತೋಷ ಪಡಲು ಕಾರಣವೇನು?

ಧರಣಿಪತಿ ಕೇಳ್ ಬಹಳ ವಿಪಿನಾಂ
ತರವನಂತವ ಕಳೆದು ಬರೆಬರೆ
ಸರಸಿಜದ ಮೋಹರದ ಮುಂದೈತಪ್ಪ ಪರಿಮಳದ
ಮೊರೆವ ತುಂಬಿಯ ಥಟ್ಟುಗಳ ತನಿ
ವರಿವ ತಂಪಿನ ತುರಗಲಿನ ತ
ತ್ಸರಸಿಯನು ದೂರದಲಿ ಕಂಡುಬ್ಬಿದನು ಕಲಿಭೀಮ (ಅರಣ್ಯ ಪರ್ವ, ೧೧ ಸಂಧಿ, ೪೩ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಭೀಮನು ಅನೇಕ ವನಗಳನ್ನು ದಾಟಿ ಮುನ್ನಡೆದು ಬರುತ್ತಿರಲು, ದೂರದಲ್ಲಿ ಕಮಲ ಪುಷ್ಪಗಳ ಸಮೂಹದ ಮೇಲೆ ಹಾದು ಬರುವ ಸುಗಂಧ, ಹೂಗಳಿಗೆ ಮುತ್ತುವ ದುಂಬಿಗಳ ದಂಡು ಮತ್ತು ತಂಪು ತುಂಬಿದ ಸೌಗಂಧಿಕ ಕುಸುಮ ಸರೋವರವನ್ನು ಕಂಡು ಸಂತೋಷದಿಂದ ಹಿಗ್ಗಿದನು.

ಅರ್ಥ:
ಧರಣಿಪತಿ: ರಾಜ; ಧರಣಿ: ಭೂಮಿ; ಪತಿ: ಒಡೆಯ; ಕೇಳ್: ಆಲಿಸು; ಬಹಳ: ತುಂಬ; ವಿಪಿನ: ಕಾಡು; ಅಂತರ: ದೂರ; ಅಂತ: ಕೊನೆ; ಕಳೆದು: ತೊರೆ, ನಿವಾರಣೆ; ಬರೆ: ಆಗಮಿಸು; ಸರಸಿಜ: ಕಮಲ ಮೋಹರ: ಗುಂಪು, ಸಮೂಹ; ತುಂಬು: ಭರ್ತಿ; ಥಟ್ಟು: ಗುಂಪು; ತನಿ: ಚೆನ್ನಾಗಿ ಬೆಳೆದುದು; ತಂಪು: ತಣಿವು, ಶೈತ್ಯ; ತುರಗ: ವೇಗವಾಗಿ ಚಲಿಸುವುದುತ; ಸರಸಿ: ಸರೋವರ; ದೂರ: ಬಹಳ ಅಂತರ; ಕಂಡು: ನೋಡಿ; ಉಬ್ಬು: ಹಿಗ್ಗು; ಕಲಿ: ಶೂರ; ಐತಪ್ಪ: ಬರುತ್ತಿರುವ;

ಪದವಿಂಗಡಣೆ:
ಧರಣಿಪತಿ +ಕೇಳ್ +ಬಹಳ+ ವಿಪಿನಾಂ
ತರವನ್+ಅಂತವ +ಕಳೆದು +ಬರೆಬರೆ
ಸರಸಿಜದ+ ಮೋಹರದ+ ಮುಂದ್+ಐತಪ್ಪ+ ಪರಿಮಳದ
ಮೊರೆವ+ ತುಂಬಿಯ +ಥಟ್ಟುಗಳ+ ತನಿ
ವರಿವ+ ತಂಪಿನ +ತುರಗಲಿನ +ತ
ತ್ಸರಸಿಯನು +ದೂರದಲಿ +ಕಂಡುಬ್ಬಿದನು+ ಕಲಿ+ಭೀಮ

ಅಚ್ಚರಿ:
(೧) ತ ಕಾರದ ಸಾಲು ಪದ – ತುಂಬಿಯ ಥಟ್ಟುಗಳ ತನಿವರಿವ ತಂಪಿನ ತುರಗಲಿನ ತತ್ಸರಸಿಯನು