ಪದ್ಯ ೨೭: ದುರ್ಯೋಧನನ ಗರ್ವದ ಉತ್ತರವು ಹೇಗಿತ್ತು?

ಅದರಲ್ಲಿ ಶುಭಾಶುಭದ ಫಲ
ಬೀದಿವರಿಸುವುದೈಸಲೇ ನಿಮ
ಗೀ ದುರಾಗ್ರಹವೇಕೆ ಕಾಂಬಿರಿ ಫಲವನಗ್ರದಲಿ
ಆದುದಾಗಲಿ ಹೋಗಿಯೆನೆ ದು
ರ್ಭೇದ ಗರ್ವ ಗ್ರಂಥಿಕಲುಷ ವಿ
ನೋದಶೀಲರು ಭುಜವ ಹೊಯ್ದರು ನೋಡಬಹುದೆನುತೆ (ಅರಣ್ಯ ಪರ್ವ, ೧೮ ಸಂಧಿ, ೨೭ ಪದ್ಯ)

ತಾತ್ಪರ್ಯ:
ದುರ್ಯೋಧನನ ಮೊಂಡತನದ ಉತ್ತರಕ್ಕೆ ಭೀಷ್ಮರು, ನೀವು ಮಾಡಿದ ಶುಭ ಮತ್ತು ಅಶುಭ ಕರ್ಮಗಳ ಫಲವು ನಿಮ್ಮನ್ನು ಅಕಾರ್ಯಕ್ಕೆ ಎಳೆದೊಯ್ಯುತ್ತದೆ, ಬೇಡವೆಂದರೂ ಹೋಗಿಯೇ ತೀರ್ವೆವೆಂಬ ಈ ದುರಾಗ್ರಹ ನಿಮಗೇಕೆ? ನಮಗೆ ತಿಳಿಯದು, ಆದದ್ದಾಗಲಿ ನೀವು ಹೋಗಿರಿ ಎಂದು ಹೇಳಲು, ದುರ್ಯೋಧನನು, ಪರಿಹರಿಸಲಾರದ ಗರ್ವದ ಗಂಟಿನ ಕೊಳೆಯಲ್ಲಿ ವಿನೋದವನ್ನು ಕಾಣುವ ಕೌರವನೂ ಪರಿವರದವರೂ ತೋಳುಕಟ್ಟಿ ನೋಡಬಹುದು ಎಂದು ಸಂತಸಪಟ್ಟರು.

ಅರ್ಥ:
ಶುಭ: ಮಂಗಳ; ಅಶುಭ: ಮಂಗಳಕರವಲ್ಲದ; ಫಲ: ಫಲಿತಾಂಶ; ಬೀದಿ: ಮಾರ್ಗ, ಹರಹು; ಐಸಲೇ: ಅಲ್ಲವೇ; ದುರಾಗ್ರಹ: ಹಟಮಾರಿತನ, ಮೊಂಡ; ಕಾಂಬು: ನೋಡು; ಅಗ್ರ: ಮುಂದೆ; ಹೋಗು: ತೆರಳು; ಭೇದ: ಬಿರುಕು, ಛಿದ್ರ; ಗರ್ವ: ಅಹಂಕಾರ; ಗ್ರಂಥಿ: ಕಟ್ಟು, ಬಂಧ; ಕಲುಷ: ಕಳಂಕ, ಸಿಟ್ಟಿಗೆದ್ದ; ವಿನೋದ: ಸಂತಸ; ಶೀಲ: ಗುಣ; ಭುಜ: ಬಾಹು; ಹೊಯ್ದು: ಹೊಡೆದು; ನೋಡು: ವೀಕ್ಷಿಸು;

ಪದವಿಂಗಡಣೆ:
ಅದರಲ್ಲಿ +ಶುಭ+ಅಶುಭದ +ಫಲ
ಬೀದಿವರಿಸುವುದ್+ಐಸಲೇ +ನಿಮಗ್
ಈ+ ದುರಾಗ್ರಹವೇಕೆ+ ಕಾಂಬಿರಿ+ ಫಲವನ್+ಅಗ್ರದಲಿ
ಆದುದಾಗಲಿ +ಹೋಗಿಯೆನೆ +ದು
ರ್ಭೇದ +ಗರ್ವ +ಗ್ರಂಥಿ+ಕಲುಷ+ ವಿ
ನೋದ+ಶೀಲರು +ಭುಜವ +ಹೊಯ್ದರು +ನೋಡಬಹುದೆನುತೆ

ಅಚ್ಚರಿ:
(೧) ಆಡುವ ಪದದ ಬಳಕೆ – ಆದುದಾಗಲಿ
(೨) ಕೌರವರನ್ನು ಬಣ್ಣಿಸುವ ಪರಿ – ದುರ್ಭೇದ ಗರ್ವ ಗ್ರಂಥಿಕಲುಷ ವಿನೋದಶೀಲರು ಭುಜವ ಹೊಯ್ದರು