ಪದ್ಯ ೫೪: ಧೀರ, ದಿಟ್ಟ, ಆಚಾರಹೀನನು ಯಾರು?

ನಾರಿಯರ ಕಡೆಗಣ್ಣ ಹೊಯ್ಲಿನ
ಧಾರೆಗಳುಕದನಾವನಾತನೆ
ಧೀರನಾತನೆ ದಿಟ್ಟನಬಲೆಯರುಬ್ಬುಗವಳದಲಿ
ಮೇರೆದಪ್ಪುವನೇ ವಿಕಾರಿ ವಿ
ಚಾರ ಪರನೆ ವಿನೀತನನ್ಯಾ
ಚಾರಯುತನಾಚಾರಹೀನನು ಫಣಿಪ ಕೇಳೆಂದ (ಅರಣ್ಯ ಪರ್ವ, ೧೪ ಸಂಧಿ, ೫೪ ಪದ್ಯ)

ತಾತ್ಪರ್ಯ:
ನಹುಷನು ಕೇಳಿದ ಪ್ರಶ್ನೆಗಳಿಗೆ ಯುಧಿಷ್ಠಿರನು ಉತ್ತರಿಸುತ್ತಾ, ಹೆಂಗಳ ಕಡೆಗಣ್ಣಿನ ನೋಟದ ಹೊಡೆತಕ್ಕೆ ಮನಸ್ಸಿನಲ್ಲಿ ಅಳುಕದವನೇ ಧೀರ, ಅವನೇ ಗಟ್ಟಿಗ, ನಾರಿಯರ ಮೋಹದಿಂದ ಉಬ್ಬಿ, ಶಿಷ್ಟರ ನಡತೆಯ ಮೇರೆಯನ್ನು ತಪ್ಪುವವನೇ ವಿಕಾರಿ, ವಿಚಾರವಮ್ತನೇ ವಿನೀತ, ಧರ್ಮಕ್ಕೆ ಸಮ್ಮತವಲ್ಲದ ಬೇರೆಯ ನಡತೆಯುಳ್ಳವನೇ ಆಚಾರಹೀನನೆಂದು ಯುಧಿಷ್ಠಿರ ನಹುಷನಿಗೆ ಹೇಳಿದನು.

ಅರ್ಥ:
ನಾರಿ: ಹೆಣ್ಣು; ಕಡೆಗಣ್ಣು: ಕುಡಿನೋಟ; ಹೊಯ್ಲು: ಹೊಡೆತ; ಧಾರೆ: ರಭಸ; ಅಳುಕು: ಹೆದರು; ಧೀರ: ಶೂರ; ದಿಟ್ಟ: ಗಟ್ಟಿಗ; ಅಬಲೆ: ಹೆಣ್ಣು; ಉಬ್ಬು: ಹಿಗ್ಗು; ಉಬ್ಬುಗವಳ: ದೊಡ್ಡ ತುತ್ತು; ಮೇರೆ: ಎಲ್ಲೆ, ಗಡಿ; ತಪ್ಪು: ಸರಿಯಿಲ್ಲದ; ವಿಕಾರಿ:ಮನಸ್ಸಿನ ವಿಕೃತಿ, ಕುರೂಪ; ವಿಚಾರ: ವಿಮರ್ಶೆ, ವಿವೇಕ; ವಿನೀತ: ಸೌಜನ್ಯದಿಂದ ಕೂಡಿದ ವ್ಯಕ್ತಿ; ಅನ್ಯ: ಬೇರೆ; ಆಚಾರ: ಒಳ್ಳೆಯ ನಡತೆ; ಹೀನ: ಕೆಟ್ಟದು; ಫಣಿಪ: ಹಾವಿನ ಒಡೆಯ; ಕೇಳು: ಆಲಿಸು;

ಪದವಿಂಗಡಣೆ:
ನಾರಿಯರ +ಕಡೆಗಣ್ಣ +ಹೊಯ್ಲಿನ
ಧಾರೆಗ್+ಅಳುಕದನ್+ಆವನ್+ಆತನೆ
ಧೀರನ್+ಆತನೆ +ದಿಟ್ಟನ್+ಅಬಲೆಯರ್+ಉಬ್ಬುಗವಳದಲಿ
ಮೇರೆ+ತಪ್ಪುವನೇ +ವಿಕಾರಿ +ವಿ
ಚಾರ +ಪರನೆ +ವಿನೀತನ್+ಅನ್ಯ
ಆಚಾರಯುತನ್+ಆಚಾರಹೀನನು +ಫಣಿಪ +ಕೇಳೆಂದ

ಅಚ್ಚರಿ:
(೧) ಧೀರ, ದಿಟ್ಟನ ಗುಣಗಳು – ನಾರಿಯರ ಕಡೆಗಣ್ಣ ಹೊಯ್ಲಿನಧಾರೆಗಳುಕದನಾವನಾತನೆ
ಧೀರನಾತನೆ ದಿಟ್ಟ

ಪದ್ಯ ೯೧: ತಾಂಬೂಲಧಾರಕನ ಲಕ್ಷಣಗಳೇನು?

ಮನ ವಚನ ಕಾಯದಲಿ ದಾತಾ
ರನ ಹಿತವನುಳ್ಳನ ವಿನೀತನ
ವಿನುತ ವನಿತಾನತಮುಖನ ನಿಷ್ಕಳಿತ ರೋಷಕನ
ಮುನಿವವರ ಬುದ್ಧಿಯಲಿ ಸಿಲುಕದ
ವನ ವಿಶೇಷ ಕಳಾಪ್ರವೀಣನ
ಜನಪ ಚಿತ್ತೈಸುವುದೆಲೈ ತಾಂಬೂಲಧಾರಕನ (ಉದ್ಯೋಗ ಪರ್ವ, ೩ ಸಂಧಿ, ೯೧ ಪದ್ಯ)

ತಾತ್ಪರ್ಯ:
ಮನಸ್ಸು, ಮಾತು, ದೇಹಗಳೆಂಬ ತ್ರಿಕರಣಗಳಲ್ಲೂ ತನ್ನೊಡೆಯನ ಹಿತವನ್ನು ಬಯಸುವವನೂ, ವಿಧೇಯನೂ, ಸ್ತ್ರೀಯರನ್ನು ಕಂಡ ಕೂಡಲೆ ತಲೆ ತಗ್ಗಿಸಿ ನಮಸ್ಕರಿಸುವವನೂ, ರೋಷವನ್ನು ತೊರೆದವನೂ, ಶತ್ರುಗಳ ಸಂಚಿಗೆ ಸಿಲುಕದವನೂ, ವಿಶೇಷ ಕಲಾ ಪ್ರವೀಣನೂ ಆದವನನ್ನು ತಾಂಬೂಲಧಾರಕನಾಗಿ ನೇಮಿಸುವುದು ಉತ್ತಮ ಎಂದು ವಿದುರನು ತನ್ನ ನೀತಿ ವಚನವನ್ನು ಹೇಳಿದನು.

ಅರ್ಥ:
ಮನ: ಮನಸ್ಸು; ವಚನ: ಮಾತು; ಕಾಯ: ದೇಹ; ದಾತಾರ: ಕೊಡುವವನು, ದಾನಿ, ಸಲಹುವ; ಹಿತ: ಒಳಿತು; ವಿನೀತ: ಸೌಜನ್ಯದಿಂದ ಕೂಡಿದ ವ್ಯಕ್ತಿ; ವಿನುತ: ಹೊಗಳಲ್ಪಟ್ಟ, ಸ್ತುತಿಗೊಂಡ; ವನಿತೆ: ಹೆಂಗಸು, ಸ್ತ್ರೀ; ಆನತ: ನಮಸ್ಕರಿಸುವ; ಮುಖ: ಆನನ; ನಿಷ್ಕಳಿತ: ಕಳಂಕವಿಲ್ಲದ; ರೋಷ: ಕೋಪ; ಮುನಿವವ: ಹೊಟ್ಟೆಕಿಚ್ಚು ಪಡು, ಮತ್ಸರಿಸುವವ; ಬುದ್ಧಿ: ತಿಳಿವು, ಅರಿವು; ಸಿಲುಕು: ಬಂಧನಕ್ಕೊಳಗಾಗು; ವಿಶೇಷ: ಅಸಾಮಾನ್ಯ; ಕಳಾ: ಕಲೆ; ಪ್ರವೀಣ: ಪಂಡಿತ; ಜನಪ: ರಾಜ; ಚಿತ್ತೈಸು: ಗಮನವಿಡು; ತಾಂಬೂಲ:ತಾಂಬೂಲವನ್ನು ಸಿದ್ಧಪಡಿಸುವವನು; ಧಾರಕ: ಧರಿಸಿದವನು, ಬೆಂಬಲಿಗ;

ಪದವಿಂಗಡಣೆ:
ಮನ +ವಚನ +ಕಾಯದಲಿ +ದಾತಾ
ರನ +ಹಿತವನುಳ್ಳನ +ವಿನೀತನ
ವಿನುತ +ವನಿತ+ಆನತ+ಮುಖನ +ನಿಷ್ಕಳಿತ+ ರೋಷಕನ
ಮುನಿವವರ+ ಬುದ್ಧಿಯಲಿ +ಸಿಲುಕದ
ವನ+ ವಿಶೇಷ +ಕಳಾಪ್ರವೀಣನ
ಜನಪ +ಚಿತ್ತೈಸುವುದೆಲೈ +ತಾಂಬೂಲಧಾರಕನ

ಅಚ್ಚರಿ:
(೧) ತ್ರಿಕರಣಗಳು – ಮನ, ವಚನ, ಕಾಯ
(೨) ‘ವ’ಕಾರದ ತ್ರಿವಳಿ ಪದ – ವಿನೀತನ ವಿನುತ ವನಿತಾನನ
(೩) ತಾಂಬೂಲಧಾರಕನಿಗೆ ೭ ರೀತಿಯ ಗುಣಗಳನ್ನು ಹೇಳಿರುವ ಪದ್ಯ

ಪದ್ಯ ೮೭: ಮಂತ್ರಿಯ ಲಕ್ಷಣಗಳೇನು?

ಸ್ಥೂಲ ಸೂಕ್ಷ್ಮ ಕೃತಜ್ಞನುತ್ಸವ
ಶೀಲನ ಕ್ರೋಧನನ ದೀರ್ಘವಿ
ಶಾಲಸೂತ್ರನು ವೃದ್ಧ ಸೇವಕ ಸತ್ಯ ವಾಕ್ಯುಚಿಯು
ಕಾಲವೇದಿ ವಿನೀತನವ್ಯಸ
ನಾಳಿ ಸೂರಿ ರಹಸ್ಯ ವಿಶ್ರುತ
ಪಾಲನಾನ್ವಿತ ಮಂತ್ರಿಯುಂಟೇ ರಾಯ ನಿನಗೆಂದ (ಉದ್ಯೋಗ ಪರ್ವ, ೩ ಸಂಧಿ, ೮೭ ಪದ್ಯ)

ತಾತ್ಪರ್ಯ:
ವಿದುರನು ಈ ಪದ್ಯದಲ್ಲಿ ಮಂತ್ರಿಯಲ್ಲಿರಬೇಕಾದ ಲಕ್ಷಣಗಳನ್ನು ತಿಳಿಸುತ್ತಾನೆ. ಯಾವ ವಿಷಯಕ್ಕೆ ಸಂಬಂಧಿಸಿದಹಾಗೆ ಸೂಕ್ಷ್ಮ, ಸ್ಥೂಲ ಕಾರಣಗಳೇನೆಂಬುದನ್ನು ಅರಿಯಬಲ್ಲವನೂ, ಚೈತನ್ಯದಿಂದ ಬಾಳುವವ, ಕೋಪವಿಲ್ಲದವನೂ, ಕೆಲಸ ಮಾಡುವುದರಲ್ಲಿ ವೃಥಾಕಾಲ ಹರಣ ಮಾಡದಿರುವವನೂ, ರಾಜಸೇವೆಯಲ್ಲಿ ಪರಿಣತಿಹೊಂದಿ ವೃದ್ಧನಾದವನೂ, ಶುಚಿಯಾದ ಮಾತನಾಡುವವನೂ, ಕಾಲಗತಿಯನ್ನು ಬಲ್ಲವನೂ, ವಿಧೇಯನೂ, ಯಾವ ವ್ಯಸನಗಳೂ ಇಲ್ಲದವನೂ, ವಿದ್ವಾಂಸನೂ, ಕೇಳಿದ ರಹಸ್ಯವನ್ನು ತನ್ನಲ್ಲೇ ಇಟ್ಟುಕೊಳ್ಳಬಲ್ಲವನೂ ಆದ ಮಂತ್ರಿಯು ನಿನ್ನ ಬಳಿ ಇರುವವನೇ ಎಂದು ವಿದುರ ಧೃತರಾಷ್ಟ್ರನನ್ನು ಪ್ರಶ್ನಿಸಿದ.

ಅರ್ಥ:
ಸ್ಥೂಲ: ಬಲವಾದ, ಗಟ್ಟಿಯಾದ; ಸೂಕ್ಷ್ಮ: ಕೋಮಲವಾದ; ಕೃತಜ್ಞ: ಉಪಕಾರವನ್ನು ನೆನೆಯುವವನು; ಉತ್ಸವ: ಸಂಭ್ರಮ; ಶೀಲ: ನಡತೆ, ಸ್ವಭಾವ; ಕ್ರೋಧ: ಕೋಪ; ದೀರ್ಘ: ಉದ್ದವಾದ; ವಿಶಾಲ: ವಿಸ್ತಾರ; ಸೂತ್ರ: ಸೂತ್ರರೂಪದಲ್ಲಿರುವ ಸಂಕ್ಷಿಪ್ತವಾದ ಹೇಳಿಕೆಯ-ಅರ್ಥ; ವೃದ್ಧ: ಹಿರಿಯ; ಸೇವಕ: ಉಪಚಾರಿ; ಸತ್ಯ: ನಿಜ; ವಾಕ್: ಮಾತು, ನುಡಿ; ಶುಚಿ: ನಿರ್ಮಲ; ಕಾಲ: ಸಮಯ; ವೇದಿ: ಪಂಡಿತ, ವಿದ್ವಾಂಸ; ವಿನೀತ: ಸೌಜನ್ಯದಿಂದ ಕೂಡಿದ ವ್ಯಕ್ತಿ, ನಮ್ರನಾಗಿರುವವ; ವ್ಯಸನ: ಚಾಳಿ; ಆಳಿ: ಉದಾಸೀನ; ಸೂರಿ:ಪಂಡಿತ, ವಿದ್ವಾಂಸ; ರಹಸ್ಯ: ಗುಟ್ಟು; ವಿಶ್ರುತ: ಪ್ರಖ್ಯಾತಿ ಹೊಂದಿದ; ಪಾಲನ: ಪಾಲಿಸುವ; ಅನ್ವಿತ: ಒಡಗೂಡಿದ, ವಿದ್ವಾಂಸ; ಮಂತ್ರಿ: ಸಚಿವ; ರಾಯ: ರಾಜ; ಅನನ: ನಾಶ

ಪದವಿಂಗಡಣೆ:
ಸ್ಥೂಲ + ಸೂಕ್ಷ್ಮ +ಕೃತಜ್ಞನ್+ಉತ್ಸವ
ಶೀಲನ +ಕ್ರೋಧ್+ಅನನ +ದೀರ್ಘ +ವಿ
ಶಾಲ+ ಸೂತ್ರನು + ವೃದ್ಧ + ಸೇವಕ +ಸತ್ಯ + ವಾಕ್+ಶುಚಿಯು
ಕಾಲವೇದಿ +ವಿನೀತನ್ +ಅವ್ಯಸನ್
ಆಳಿ +ಸೂರಿ +ರಹಸ್ಯ +ವಿಶ್ರುತ
ಪಾಲನ್+ಅನ್ವಿತ +ಮಂತ್ರಿಯುಂಟೇ +ರಾಯ +ನಿನಗೆಂದ

ಅಚ್ಚರಿ:
(೧) ೧೩ ಗುಣಗಳನ್ನು ಮಂತ್ರಿಯ ಲಕ್ಷಣವೆಂದು ತಿಳಿಸುವ ಪದ್ಯ