ಪದ್ಯ ೫೨: ದುರ್ಯೋಧನನು ಯಾವುದು ತನ್ನ ಸಾಮ್ರಾಜ್ಯವೆಂದು ಹೇಳಿದನು?

ಅರಸ ಧರ್ಮಿಷ್ಠನು ಯುಧಿಷ್ಠಿರ
ಧರಣಿಪತಿಯುತ್ತಮನು ಪವನಜ
ನರರು ವಿನಯಾನ್ವಿತರು ನೀವೇ ಪುತ್ರವತ್ಸಲರು
ಧರಣಿಗಾಗಿನ್ನೈಸಲೇ ನೂ
ರ್ವರು ಕುಮಾರರು ಹೊರಗೆ ನಿಮ್ಮಯ
ಕರುಣವೇ ಸಾಮ್ರಾಜ್ಯ ನಮ್ಮನು ಬೀಳುಗೊಡಿರೆಂದ (ಸಭಾ ಪರ್ವ, ೧೩ ಸಂಧಿ, ೫೨ ಪದ್ಯ)

ತಾತ್ಪರ್ಯ:
ತನ್ನ ತಾಯಿಯೊಂದಿಗೆ ಮಾತನ್ನು ಮುಂದುವರಿಸುತ್ತಾ, ನಮ್ಮ ತಂದೆಯು ಧರ್ಮಿಷ್ಠನು, ಯುಧಿಷ್ಠಿರನು ಉತ್ತಮನಾದವನು, ಭೀಮಾರ್ಜುನರು ವಿನಯ ಸಂಪನ್ನರು, ನಿಮ್ಮ ನೂರು ಜನ ಮಕ್ಕಳಾದ ನಾವು ಭೂಮಿಗೆ ಭಾಗಕ್ಕೆ ಸಲ್ಲದವರಲ್ಲವೇ? ನಿಮ್ಮ ಕರುಣೆಯೇ ನಮಗೆ ಸಾಮ್ಯಾಜ್ಯ, ಅದೇ ಸಾಕು, ಹೊರಡಲು ಅಪ್ಪಣೆನೀಡಿ ಎಂದು ದುರ್ಯೋಧನನು ತನ್ನ ತಾಯಿಗೆ ಹೇಳಿದನು.

ಅರ್ಥ:
ಅರಸ: ರಾಜ; ಧರ್ಮಿಷ್ಠ: ಧರ್ಮ ಮಾರ್ಗದಲ್ಲಿ ನಡೆವವ; ಧರಣಿಪತಿ: ರಾಜ; ಧರಣಿ: ಭೂಮಿ; ಉತ್ತಮ: ಶ್ರೇಷ್ಠ; ಪವನಜ: ವಾಯುಪುತ್ರ (ಭೀಮ); ನರ: ಅರ್ಜುನ; ವಿನಯ: ಒಳ್ಳೆಯತನ, ಸೌಜನ್ಯ; ಅನ್ವಿತ: ಒಡಗೂಡಿದ; ಪುತ್ರ: ಮಕ್ಕಳು; ವತ್ಸಲ: ಪ್ರೀತಿಸುವ, ಒಲುಮೆಯಿಂದ ಕೂಡಿದ; ಐಸಲೇ: ಅಲ್ಲವೇ; ನೂರು: ಶತ; ಕುಮಾರ: ಮಕ್ಕಳು; ಹೊರಗೆ: ಆಚೆ; ಕರುಣ: ದಯೆ; ಸಾಮ್ರಾಜ್ಯ: ರಾಷ್ಟ್ರ; ಬೀಳುಗೊಡು: ಕಳಿಸು;

ಪದವಿಂಗಡಣೆ:
ಅರಸ +ಧರ್ಮಿಷ್ಠನು +ಯುಧಿಷ್ಠಿರ
ಧರಣಿಪತಿ+ಉತ್ತಮನು +ಪವನಜ
ನರರು +ವಿನಯಾನ್ವಿತರು+ ನೀವೇ +ಪುತ್ರ+ವತ್ಸಲರು
ಧರಣಿಗಾಗ್+ಇನ್+ಐಸಲೇ +ನೂ
ರ್ವರು +ಕುಮಾರರು +ಹೊರಗೆ +ನಿಮ್ಮಯ
ಕರುಣವೇ +ಸಾಮ್ರಾಜ್ಯ +ನಮ್ಮನು+ ಬೀಳುಗೊಡಿರೆಂದ

ಅಚ್ಚರಿ:
(೧) ಅರಸ, ಧರಣಿಪತಿ – ಸಮನಾರ್ಥಕ ಪದ
(೨) ಕರುಣೆಯನ್ನು ಹುಟ್ಟಿಸುವ ಮಾತು – ನಿಮ್ಮಯ ಕರುಣವೇ ಸಾಮ್ರಾಜ್ಯ ನಮ್ಮನು ಬೀಳುಗೊಡಿರೆಂದ