ಪದ್ಯ ೨೯: ಧರ್ಮಜನಿಗೆ ಯಾವಗ ಜ್ಞಾನಕಲಿಸುವೆನೆಂದು ಭೀಷ್ಮರು ಹೇಳಿದರು?

ಮಾನನಿಧಿ ಕೇಳ್ ಕೌರವಂಗಾ
ಧೀನವೆನ್ನಯ ತನು ವಿಧಾತ್ರಾ
ಧೀನವೆನ್ನಯ ಜೀವವದು ಕಾರಣದಿನಾಹವಕೆ
ನೀನು ಚಂತಿಸಬೇಡ ನನ್ನವ
ಸಾನಕಾಲಕೆ ಮತ್ತೆ ಬರಲು ನಿ
ದಾನವನು ನೆರೆ ಬುದ್ಧಿಗಲಿಸುವೆನೀಗ ಮರಳೆಂದ (ಭೀಷ್ಮ ಪರ್ವ, ೨ ಸಂಧಿ, ೨೯ ಪದ್ಯ)

ತಾತ್ಪರ್ಯ:
ಭೀಷ್ಮನು ಎಲೈ ಮಾನನಿಧಿಯಾದ ಧರ್ಮಜನೇ, ಅನ್ನದ ಹಂಗಿನಿಂದ ಈ ದೇಹವು ದುರ್ಯೋಧನನಿಗೆ ಅಧೀನ. ಆದರೆ ನನ್ನ ಜೀವನವು ಬ್ರಹ್ಮನ ಬರಹಕ್ಕಧೀನ. ಆದುದರಿಂದ ನೀನು ಚಿಮ್ತಿಸಬೇಡ, ನನ್ನ ಮರಣಕಾಲಕ್ಕೆ ನನ್ನ ಬಳಿ ಬಂದೆ, ನಾನು ನಿನಗೆ ಬುದ್ಧಿ ಕಲಿಸುತ್ತೇನೆ ಎಂದು ಧರ್ಮಜನಿಗೆ ಹೇಳಿದನು.

ಅರ್ಥ:
ಮಾನನಿಧಿ: ಮಾನವನ್ನೇ ಐಶ್ವರ್ಯವಾಗಿಕೊಂಡಿರುವವ; ಮಾನ: ಮರ್ಯಾದೆ, ಗೌರವ; ನಿಧಿ: ಐಶ್ವರ್ಯ; ಕೇಳು: ಆಲಿಸು; ಅಧೀನ: ಕೈಕೆಳಗಿರುವ; ತನು: ದೇಹ; ವಿಧಾತ್ರ: ಬ್ರಹ್ಮ; ಅಧೀನ: ವಶ; ಜೀವ: ಪ್ರಾಣ; ಕಾರಣ: ನಿಮಿತ್ತ, ಹೇತು; ಆಹವ: ಯುದ್ಧ; ಚಿಂತಿಸು: ಯೋಚನೆ; ಅವಸಾನ: ಅಂತ್ಯ; ಬರಲು: ಆಗಮಿಸು; ನಿದಾನ: ಸಾವಕಾಶ; ನೆರೆ: ಸಮೀಪ, ಹತ್ತಿರ; ಬುದ್ಧಿ: ತಿಳಿವು, ಅರಿವು; ಕಲಿಸು: ಹೇಳು; ಮರಳು: ತೆರಳು, ಹಿಂದಿರುಗು;

ಪದವಿಂಗಡಣೆ:
ಮಾನನಿಧಿ+ ಕೇಳ್ +ಕೌರವಂಗ್
ಅಧೀನವ್+ಎನ್ನಯ +ತನು +ವಿಧಾತ್ರ
ಅಧೀನವ್+ಎನ್ನಯ +ಜೀವವ್+ಅದು+ ಕಾರಣದಿನ್+ಆಹವಕೆ
ನೀನು +ಚಂತಿಸಬೇಡ +ನನ್
ಅವಸಾನಕಾಲಕೆ+ ಮತ್ತೆ+ ಬರಲು+ ನಿ
ದಾನವನು +ನೆರೆ +ಬುದ್ಧಿ+ಕಲಿಸುವೆನ್+ಈಗ+ ಮರಳೆಂದ

ಅಚ್ಚರಿ:
(೧)ಆಧೀನ ಪದದ ಬಳಕೆ – ೨,೩ ಸಾಲಿನ ಮೊದಲ ಪದ

ಪದ್ಯ ೪೬: ಅರ್ಜುನನು ಏಕೆ ಜೀವಿಸುವುದಿಲ್ಲವೆಂದ?

ಎಲೆ ವಿಧಾತ್ರಕೃತಾಪರಾಧ
ಸ್ಥಳಕೆ ದಂಡ ಪ್ರಾಪ್ತಿಯಲ್ಲದೆ
ವಿಲಸಿತದ ವೇದಾರ್ಥದಲಿ ಮನ್ವಾದಿ ಮಾರ್ಗದಲಿ
ಚಲಿಸಿದಾಚರಿಸಿದೊಡೆ ಧರ್ಮ
ಸ್ಥಳದೊಳೇನು ನಿಮಿತ್ತವಕಟಾ
ಗಳಿತ ಪೌರುಷನಾಗಿ ಬದುಕುವನಲ್ಲ ತಾನೆಂದ (ಅರಣ್ಯ ಪರ್ವ, ೯ ಸಂಧಿ, ೪೬ ಪದ್ಯ)

ತಾತ್ಪರ್ಯ:
ಹೇ ವಿಧಿಯೆ, ಬ್ರಹ್ಮನೇ, ನಾನು ಮಾಡಿಅ ಅಪರಾಧಕ್ಕೆ ಶಿಕ್ಷೆಯಾಗಬೇಕು, ಅದು ಬಿಟ್ಟು ಶ್ರೇಷ್ಠವಾದ ವೇದ ಮಾರ್ಗ, ಮನುವೇ ಮೊದಲಾದವರು ನಡೆದ ವಿಧಿಸಿದ ಮಾರ್ಗಕ್ಕೆ ಅನುಸಾರವಾಗಿ ಧರ್ಮದಿಂದ ನಡೆದರೆ ಯಾವ ಕಾರಣಕ್ಕಾಗಿ ನನಗೆ ಈ ಶಾಪ? ಪೌರುಷಹೀನನಾಗಿ ನಾನು ಬದುಕುವುದಿಲ್ಲ ಎಂದು ಅರ್ಜುನನು ಚಿಂತಿಸಿದನು.

ಅರ್ಥ:
ವಿಧಾತ್ರ: ಬ್ರಹ್ಮ; ಕೃತ: ಮಾಡಿದ; ಅಪರಾಧ: ತಪ್ಪು; ಸ್ಥಳ: ಜಾಗ, ನೆಲೆ; ದಂಡ: ಶಿಕ್ಷೆ, ದಂಡನೆ; ಪ್ರಾಪ್ತಿ: ದೊರಕುವುದು; ವಿಲಸಿತ: ಅರಳಿದ, ಶುದ್ಧ, ಪ್ರಫುಲ್ಲಿತ; ವೇದ: ಜ್ಞಾನ; ಮಾರ್ಗ: ದಾರಿ; ಚಲಿಸು: ನಡೆ; ಆಚರಿಸು: ನಡೆದುಕೊಳ್ಳು; ಧರ್ಮ: ಧಾರಣೆ ಮಾಡಿದುದು; ನಿಮಿತ್ತ: ಕಾರಣ; ಅಕಟಾ: ಅಯ್ಯೋ; ಅಗಳಿತ: ತೊರೆದ; ಪೌರುಷ: ಪುರುಷತ್ವ; ಬದುಕು: ಜೀವಿಸು;

ಪದವಿಂಗಡಣೆ:
ಎಲೆ+ ವಿಧಾತ್ರ+ಕೃತ+ಅಪರಾಧ
ಸ್ಥಳಕೆ +ದಂಡ +ಪ್ರಾಪ್ತಿ+ಅಲ್ಲದೆ
ವಿಲಸಿತದ +ವೇದಾರ್ಥದಲಿ +ಮನ್ವಾದಿ +ಮಾರ್ಗದಲಿ
ಚಲಿಸಿದ್+ಆಚರಿಸಿದೊಡೆ +ಧರ್ಮ
ಸ್ಥಳದೊಳ್+ಏನು +ನಿಮಿತ್ತವ್+ಅಕಟ
ಅಗಳಿತ +ಪೌರುಷನಾಗಿ +ಬದುಕುವನಲ್ಲ+ ತಾನೆಂದ

ಅಚ್ಚರಿ:
(೧) ಅರ್ಜುನನ ನೋವು – ಅಕಟಾಗಳಿತ ಪೌರುಷನಾಗಿ ಬದುಕುವನಲ್ಲ ತಾನೆಂದ

ಪದ್ಯ ೬೩: ಯಾವುದು ಮನುಷ್ಯನಿಗೆ ತಿಳಿಯಲಾಗದು?

ತುರಗ ಹೃದಯ ಧ್ವನಿಯ ಸಿಡಿಲಿನ
ಧರಧುರದ ಗರ್ಜನೆಯ ನಾರಿಯ
ರರಿವ ಪುರುಷನ ಭಾಗ್ಯ ದೇವತೆಯೊಲಿವ ಕಾಲವನು
ವರುಷದುದಯವ ಬರನ ಬರವನು
ವಿರಚಿಸುವೊಡೆ ವಿಧಾತ್ರಗಳವ
ಲ್ಲರಸ ಕೇಳ್ ಮಾನವರಿಗಿದು ಗೋಚರಿಸಲರಿದೆಂದ (ಉದ್ಯೋಗ ಪರ್ವ, ೩ ಸಂಧಿ, ೬೩ ಪದ್ಯ)

ತಾತ್ಪರ್ಯ:
ಕುದುರೆಯ ಕೇಕೆಯ ಧ್ವನಿಯ ಇಂಗಿತ, ಸಿಡಿಲಿನ ಗರ್ಜನೆ, ಸ್ತ್ರೀಯರ ಮನಸ್ಸಿನಲ್ಲಿರುವ ಯೋಚನೆ, ಪುರುಷನ ಭಾಗ್ಯದ ಉದಯ ಕಾಲ, ಮಳೆಯ ಆರಂಭ, ಬರಗಾಲದ ಆಗಮನ ಇವುಗಳು ಬ್ರಹ್ಮನಿಗೂ ಗೊತ್ತಿಲ್ಲವೆಂದ ಮೇಲೆ ಸಾಮಾನ್ಯ ಮನುಷ್ಯರಿಗೆ ಇದು ತಿಳಿಯಲು ಸಾಧ್ಯವೆ ಎಂದು ವಿದುರ ತನ್ನ ನೀತಿಯನ್ನು ತಿಳಿಸುತ್ತಾನೆ.

ಅರ್ಥ:
ತುರಗ: ಕುದುರೆ; ಹೃದಯ: ವಕ್ಷ; ಧ್ಚನಿ: ಶಬ್ದ; ಸಿಡಿಲು: ಎರಡು ಮೋಡಗಳ ಗುಂಪಿನ ನಡುವಿನ ಘರ್ಷಣೆಯ ಫಲವಾಗಿ ಜೋರಾದ ಶಬ್ದದೊಂದಿಗೆ ಗೋಚರಿಸುವ ವಿದ್ಯುತ್ಪ್ರವಾಹ, ಆರ್ಭಟಿಸು ; ಧರಧುರ: ಆರ್ಭಟ, ಕೋಲಾಹಲ; ಗರ್ಜನೆ: ಜೋರಾದ ಶಬ್ದ, ಆರ್ಭಟ; ನಾರಿ: ಹೆಣ್ಣು; ಅರಿ: ತಿಳಿ; ಭಾಗ್ಯ: ಮಂಗಳ, ಒಳ್ಳೆಯ; ದೇವತೆ: ಸುರರು; ಒಲಿವ: ಪ್ರೀತಿ, ಕರುಣೆ; ಕಾಲ: ಸಮಯ; ವರುಷ: ಸಂವತ್ಸರ; ಉದಯ: ಹುಟ್ಟು; ಬರ: ನೀರಿಲ್ಲದ ಸ್ಥಿತಿ; ಬರವ: ಆಗಮಿಸು; ವಿರಚಿಸು: ನಿರ್ಮಿಸು, ನೆರವೇರಿಸು, ರಚಿಸು; ವಿಧಾತ್ರ: ಬ್ರಹ್ಮ; ಅರಸ: ರಾಜ; ಮಾನವ: ಜನ, ನರ; ಗೋಚರ: ಕಣ್ಣಿಗೆ ಕಾಣುವ, ವೇದ್ಯವಾಗುವ; ಅರಿ: ತಿಳಿ;

ಪದವಿಂಗಡಣೆ:
ತುರಗ+ ಹೃದಯ +ಧ್ವನಿಯ +ಸಿಡಿಲಿನ
ಧರಧುರದ +ಗರ್ಜನೆಯ +ನಾರಿಯ
ರರಿವ +ಪುರುಷನ+ ಭಾಗ್ಯ+ ದೇವತೆಯೊಲಿವ +ಕಾಲವನು
ವರುಷದುದಯವ+ ಬರನ+ ಬರವನು
ವಿರಚಿಸುವೊಡೆ +ವಿಧಾತ್ರಗಳವಲ್
ಅರಸ+ ಕೇಳ್ +ಮಾನವರಿಗಿದು+ ಗೋಚರಿಸಲ್+ಅರಿದೆಂದ

ಅಚ್ಚರಿ:
(೧) ಬರನ ಬರುವನು, ಧರಧುರದ – ಪದಗಳ ಬಳಕೆ
(೨) ಧರಧುರ, ಗರ್ಜನೆ – ಜೋರಾದ ಶಬ್ದವನ್ನು ತಿಳಿಸುವ ಪದಗಳು

ಪದ್ಯ ೨೦: ಸೈನ್ಯರು ಉಭಯರಾಜರಡೆಗೆ ಹೇಗೆ ಬಂದರು?

ದೆಸೆಗಳೆಂಟರ ಮೂಲೆ ಬಿರಿಯಲು
ಪಸರಿಸಿತು ಹಳೆ ಬೊಮ್ಮಗಹುದೇ
ಹೊಸ ವಿಧಾತ್ರನ ಸೃಷ್ಠಿಯಿದು ಹೆಸರೇನು ಹೊರಳುವರೆ
ಕುಸಿಯನೇ ಕೂರುಮನು ಭಾರಕೆ
ನಸಿಯನೇ ನಾಗೇಂದ್ರನಾನೆಗ
ಳುಸುರು ಹದುಳವೆ ನೋಡೆನಲು ಬಂದುದು ನೃಪವ್ರಾತ (ಉದ್ಯೋಗ ಪರ್ವ, ೨ ಸಂಧಿ, ೨೦ ಪದ್ಯ)

ತಾತ್ಪರ್ಯ:
ಎಂಟು ದಿಕ್ಕುಗಳ ಮೂಲೆ ಬಿರಿದು ಹೋಗುವಂತೆ ಸೈನ್ಯಗಳು ಹೊರಟವು, ಹಳೆಯ ಬ್ರಹ್ಮನು ಇವನು ಸೃಷ್ಟಿಸಲಾರ. ಇದು ಹೊಸ ಬ್ರಹ್ಮನ ದೃಷ್ಟಿ. ಇದನು ಹೊತ್ತ ಕೂರ್ಮನು ಈ ಭಾರಕ್ಕೆ ಕುಸಿದು ಹೋಗದೇ ಬಿಡುವನೇ? ಆದಿಶೇಷನು ಇದನ್ನು ಹೊರಲಾರದೆ ವಿಮುಖನಾಗದೆ ಬಿಡುವನೇ? ಅಷ್ಟದಿಗ್ಗಜಗಳ ಉಸಿರಾಟ ಸರಿಯಿದೆ ಎನ್ನುವಂತೆ ಸೈನ್ಯಗಳು ಉಭಯರಾಜರೆಡೆಗೆ ಬಂದವು.

ಅರ್ಥ:
ದೆಸೆ: ದಿಕ್ಕು; ಮೂಲೆ: ಕೊನೆ, ತುದಿ; ಬಿರಿ:ಸೀಳು; ಪಸರಿಸು: ಹರಡು; ಹಳೆ: ಹಿಂದಿನ; ಬೊಮ್ಮ: ಬ್ರಹ್ಮ; ಹೊಸ: ನವೀನ; ವಿಧಾತ್ರ: ಬ್ರಹ್ಮ; ಸೃಷ್ಟಿ: ಹುಟ್ಟು; ಹೆಸರು: ನಾಮಧೇಯ; ಹೊಗಳು: ಪ್ರಶಂಶಿಸು; ಕುಸಿ: ಬೀಳು; ಕೂರುಮ: ಆಮೆ; ಭಾರ: ಹೊರೆ, ತೂಕ; ನಸಿ: ಹಾಳಾಗು, ನಾಶವಾಗು; ನಾಗೇಂದ್ರ: ಭುಜಗ; ಉಸುರು: ಶ್ವಾಸ; ಹದುಳ:ಸೌಖ್ಯ, ಕ್ಷೇಮ; ನೋಡು: ವೀಕ್ಷಿಸು; ನೃಪ: ರಾಜ; ವ್ರಾತ: ಗುಂಪು;

ಪದವಿಂಗಡಣೆ:
ದೆಸೆಗಳ್+ಎಂಟರ+ ಮೂಲೆ +ಬಿರಿಯಲು
ಪಸರಿಸಿತು +ಹಳೆ +ಬೊಮ್ಮಗ್+ಅಹುದೇ
ಹೊಸ +ವಿಧಾತ್ರನ +ಸೃಷ್ಟಿಯಿದು +ಹೆಸರೇನು +ಹೊರಳುವರೆ
ಕುಸಿಯನೇ +ಕೂರುಮನು +ಭಾರಕೆ
ನಸಿಯನೇ +ನಾಗೇಂದ್ರನಾನೆಗಳ್
ಉಸುರು +ಹದುಳವೆ +ನೋಡೆನಲು +ಬಂದುದು +ನೃಪವ್ರಾತ

ಅಚ್ಚರಿ:
(೧) ಬೊಮ್ಮ, ವಿಧಾತ್ರ – ಸಮನಾರ್ಥಕ ಪದ
(೨) ಕುಸಿಯನೇ, ನಸಿಯನೇ – ಪ್ರಾಸ ಪದ