ಪದ್ಯ ೨೨: ಧೃತರಾಷ್ಟ್ರನು ಯಾರನ್ನು ಕರೆಸುವೆನೆಂದನು?

ಅಹುದು ಮಂತ್ರವಿದೆಂದು ಚಿತ್ತಕೆ
ಬಹರೆ ಕಳುಹಿ ಮನುಷ್ಯರನು ಕರೆ
ಸಹಿತರನು ವಿದುರಾದಿಗಳ ಕೊಂಡೆಯಕೆ ಕಿವಿಗೊಡದೆ
ಕುಹಕವುಂಟೇ ನಮ್ಮ ಕಳುಹುವು
ದಹ ಮತವ ಬೆಸಸೆನಲಿ ನಿಮ್ಮೊಳು
ಕುಹಕವುಂಟೇ ಮಗನೆ ಕರೆಸುವೆನೀಗ ಪಾಂಡವರ (ಸಭಾ ಪರ್ವ, ೧೭ ಸಂಧಿ, ೨೨ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ಕುತಂತ್ರದ ವಿಚಾರವನ್ನು ಧೃತರಾಷ್ಟ್ರನ ಮುಂದಿಟ್ಟು, ನಾನು ಹೇಳುವುದು ಸರಿಯೆನ್ನಿಸಿದರೆ, ಆಳುಗಳನ್ನು ಕಳಿಸಿ ಪಾಂಡವರನ್ನು ಕರೆಸು, ವಿದುರನೇ ಮೊದಲಾದವರ ಚಾಡಿಮಾತುಗಳನ್ನು ಕೇಳಬೇಡ. ಇದು ವಂಚನೆಯೆನ್ನಿಸಿದರೆ ನಮ್ಮನ್ನು ಕಳಿಸಿಬಿಡು ಎಂದು ದುರ್ಯೋಧನನು ಹೇಳಲು, ಧೃತರಾಷ್ಟ್ರನು ನಿಮ್ಮಲ್ಲಿ ಮೋಸವೇ ಎಂದು ಹೇಳಿ ಅವರ ವಿಚಾರಕ್ಕೆ ಒಪ್ಪಿಗೆ ಸೂಚಿಸುವ ಪರಿಯಲ್ಲಿ ಪಾಂಡವರನ್ನು ಕರೆಸುತ್ತೇನೆಂದನು.

ಅರ್ಥ:
ಮಂತ್ರ: ವಿಚಾರ; ಚಿತ್ತ: ಮನಸ್ಸು; ಬಹರು: ಬರುವುದು; ಕಳುಹು: ಕಳಿಸು, ಬೀಳ್ಕೊಡು; ಮನುಷ್ಯ: ಸೇವಕ, ನರ; ಕರೆ: ಬರೆಮಾಡು; ಸಹಿತ: ಜೊತೆ; ಆದಿ: ಮೊದಲಾದ; ಕೊಂಡೆ: ಕೊಕ್ಕೆ; ಕಿವಿಗೊಡದೆ: ಆಲಿಸಬೇಡ; ಕುಹಕ: ಮೋಸ, ವಂಚನೆ; ಕಳುಹು: ಬೀಳ್ಕೊಡು; ಮತ: ವಿಚಾರ; ಬೆಸ: ಕಾರ್ಯ; ಬೆಸಸು: ಅಪ್ಪಣೆಮಾಡು; ಕರೆಸು: ಬರೆಮಾಡು; ಅಹಿತ: ವೈರಿ;

ಪದವಿಂಗಡಣೆ:
ಅಹುದು +ಮಂತ್ರವಿದೆಂದು +ಚಿತ್ತಕೆ
ಬಹರೆ +ಕಳುಹಿ +ಮನುಷ್ಯರನು +ಕರೆಸ್
ಅಹಿತರನು +ವಿದುರಾದಿಗಳ+ ಕೊಂಡೆಯಕೆ+ ಕಿವಿಗೊಡದೆ
ಕುಹಕವುಂಟೇ +ನಮ್ಮ +ಕಳುಹುವುದ್
ಅಹ+ ಮತವ +ಬೆಸಸೆನಲಿ+ ನಿಮ್ಮೊಳು
ಕುಹಕವುಂಟೇ +ಮಗನೆ +ಕರೆಸುವೆನ್+ಈಗ +ಪಾಂಡವರ

ಅಚ್ಚರಿ:
(೧) ಪಾಂಡವರನ್ನು ಅಹಿತರು ಎಂದು ಕರೆದಿರುವುದು
(೨) ಕುಹಕವುಂಟೇ ಪದದ ಬಳಕೆ, ೪, ೬ ಸಾಲಿನ ಮೊದಲ ಪದ