ಪದ್ಯ ೨: ಯುದ್ಧದಲ್ಲಿ ಯಾರು ಜಯಿಸುವರು?

ಎತ್ತಲೊಲೆವುದು ಧರ್ಮಬಲ ತಾ
ನತ್ತ ಲೊಲೆವುದು ದೈವ ದೈವವ
ದೆತ್ತ ಲೊಲೆದಿಹುದತ್ತ ವಿಜಯಶ್ರೀಯ ಕುಡಿನೋಟ
ಹೆತ್ತ ನಿನ್ನೊಡಲಿಂಗೆ ತಂಪಿನ
ತೆತ್ತಿಗನೊ ಮೇಣ್ ಬಹಳ ತಾಪದ
ಮುತ್ತಯನೊ ಕುರುರಾಯನೆಲೆ ಧೃತರಾಷ್ಟ್ರ ಕೇಳೆಂದ (ದ್ರೋಣ ಪರ್ವ, ೪ ಸಂಧಿ, ೨ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ಕೇಳು, ಧರ್ಮದ ಬಲ ಯಾವ ಕಡೆಗಿದೆಯೋ, ದೈವಬಲವು ಅತ್ತಕಡೆಗಿರುತ್ತದೆ. ದೈವದ ಒಲುಮೆ ಎಲ್ಲಿರುವುದೋ, ಅತ್ತಕಡೆಗೆ ವಿಜಯಲಕ್ಷ್ಮಿಯು ಒಲವಿನ ಕುಡಿನೋಟವನ್ನು ಬೀರುತ್ತಾಳೆ. ಕೌರವನು ನಿನ್ನ ಒಡಲಿಗೆ ತಂಪನ್ನು ತರುವವನೋ, ತಾಪವನ್ನುಂಟು ಮಾದುವವನೋ ಹೇಳು ಎಂದು ಸಂಜಯನು ಕೇಳಿದನು.

ಅರ್ಥ:
ಒಲವು: ಪ್ರೀತಿ; ಧರ್ಮ: ಧಾರಣೆ ಮಾಡಿದುದು; ಬಲ: ಶಕ್ತಿ; ದೈವ: ಭಗವಂತ; ವಿಜಯ: ಗೆಲುವು; ಕುಡಿನೋಟ: ಓರೆಕಣ್ಣಿನ ದೃಷ್ಟಿ; ಹೆತ್ತು: ಹುಟ್ಟಿಸು; ಒಡಲು: ದೇಹ; ತಂಪು: ತಣಿವು; ತೆತ್ತಿಗ: ಬಂಧು, ನಂಟ; ಮೇಣ್: ಇನ್ನು, ಮತ್ತು; ಬಹಳ: ತುಂಬ; ತಾಪ: ಬಿಸಿ, ಸೆಕೆ; ಮುತ್ತು: ಕವಿ, ಆವರಿಸು; ರಾಯ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಎತ್ತಲ್+ಒಲೆವುದು +ಧರ್ಮಬಲ +ತಾ
ನತ್ತಲ್+ ಒಲೆವುದು +ದೈವ +ದೈವವದ್
ಎತ್ತಲ್ +ಒಲೆದಿಹುದ್+ಅತ್ತ +ವಿಜಯಶ್ರೀಯ +ಕುಡಿನೋಟ
ಹೆತ್ತ +ನಿನ್ನೊಡಲಿಂಗೆ +ತಂಪಿನ
ತೆತ್ತಿಗನೊ +ಮೇಣ್ +ಬಹಳ +ತಾಪದ
ಮುತ್ತಯನೊ +ಕುರುರಾಯನ್+ಎಲೆ +ಧೃತರಾಷ್ಟ್ರ +ಕೇಳೆಂದ

ಅಚ್ಚರಿ:
(೧) ವಿಜಯ ಒಲೆಯುವ ಪರಿ – ಎತ್ತಲೊಲೆವುದು ಧರ್ಮಬಲ ತಾನತ್ತ ಲೊಲೆವುದು ದೈವ ದೈವವ
ದೆತ್ತ ಲೊಲೆದಿಹುದತ್ತ ವಿಜಯಶ್ರೀಯ ಕುಡಿನೋಟ

ಪದ್ಯ ೪೭: ಕೌರವ ಸೈನ್ಯ ಏಕೆ ದುಃಖಿಸಿತು?

ವಾಯದಲಿ ಕೌರವರ ವಿಜಯ
ಶ್ರೀಯ ಸೆರೆವೋಯಿತ್ತು ಶಿವ ಶಿವ
ಕಾಯಲಾಪವರಿಲ್ಲಲಾ ಗುರುಸೂನು ಮೊದಲಾದ
ನಾಯಕರು ದುಷ್ಕೀರ್ತಿ ನಾರಿಯ
ನಾಯಕರು ಸುಪಲಾಯನದ ನಿ
ರ್ಣಾಯಕರು ಮಝ ಪೂತುರೆಂದುದು ನಿಖಿಳ ಪರಿವಾರ (ಕರ್ಣ ಪರ್ವ, ೧೩ ಸಂಧಿ, ೪೭ ಪದ್ಯ)

ತಾತ್ಪರ್ಯ:
ಮೋಸದಲಿ ಕೌರವನ ವಿಜಯಲಕ್ಷ್ಮೀ ಸೆರೆಯಾದಳಲ್ಲಾ ಶಿವ ಶಿವಾ, ಕಾಪಾಡಬೇಕಾದ ಪರಾಕ್ರಮಿಗಳಾದ ಅಶ್ವತ್ಥಾಮ ಮೊದಲಾದ ನಾಯಕರು ಅಪಕೀರ್ತಿ ನಾರಿಯ ಒಡೆಯರಾದರಲ್ಲಾ! ಭಲೇ ಭೇಷ್ ಮೊದಲೇ ಇವರೆಲ್ಲರೂ ತಮ್ಮ ಕೈಲಾಗದೆಂದು ನಿರ್ಣಯಿಸಿ ಪಲಾಯನ ಮಾಡಿದರು ಎಂದು ಕೌರವರ ಸೈನ್ಯದ ಪರಿವಾರದವರು ವ್ಯಥೆಪಟ್ಟರು.

ಅರ್ಥ:
ವಾಯ: ಕಾರಣ, ಸುಳ್ಳು, ಮೋಸ; ವಿಜಯ: ಗೆಲುವು, ಜಯ; ಶ್ರೀ: ಲಕ್ಷ್ಮಿ; ಸೆರೆ: ಬಂಧನ; ಕಾಯಲು: ಕಾಪಾಡಲು; ಕಾಯಲಾಪು: ಕಾಯಲು ಶಕ್ತನಾಗು; ಗುರುಸೂನು: ಆಚಾರ್ಯರ ಮಗ (ಅಶ್ವತ್ಥಾಮ); ಮೊದಲಾದ: ಮುಂತಾದ; ನಾಯಕ: ಒಡೆಯ; ದುಷ್ಕೀರ್ತಿ: ಅಪಖ್ಯಾತಿ; ನಾರಿ: ಹೆಣ್ಣು; ಸುಪಲಾಯನ: ಓಡಿಹೋಗು; ನಿರ್ಣಾಯಕ: ನಿರ್ಧಾರ ಮಾಡುವ; ಮಝ: ಭಲೆ; ಪೂತು: ಪಾಯ್ಕು, ಭೇಷ್; ನಿಖಿಳ: ಎಲ್ಲಾ; ಪರಿವಾರ: ಸುತ್ತಲಿನವರು, ಪರಿಜನ;

ಪದವಿಂಗಡಣೆ:
ವಾಯದಲಿ +ಕೌರವರ +ವಿಜಯ
ಶ್ರೀಯ +ಸೆರೆವೋಯಿತ್ತು +ಶಿವ+ ಶಿವ
ಕಾಯಲಾಪವರ್+ಇಲ್ಲಲಾ +ಗುರುಸೂನು +ಮೊದಲಾದ
ನಾಯಕರು +ದುಷ್ಕೀರ್ತಿ +ನಾರಿಯ
ನಾಯಕರು+ ಸುಪಲಾಯನದ +ನಿ
ರ್ಣಾಯಕರು+ ಮಝ +ಪೂತುರೆಂದುದು +ನಿಖಿಳ+ ಪರಿವಾರ

ಅಚ್ಚರಿ:
(೧) ನಾಯಕರನ್ನು ವಿವರಿಸುವ ಬಗೆ – ನಾಯಕರು ದುಷ್ಕೀರ್ತಿ ನಾರಿಯ ನಾಯಕರು ಸುಪಲಾಯನದ ನಿರ್ಣಾಯಕರು ಮಝ

ಪದ್ಯ ೫: ಶಲ್ಯನು ಯಾವ ಎಚ್ಚರದ ನುಡಿಯನ್ನು ದುರ್ಯೋಧನನಿಗೆ ತಿಳಿಸಿದನು?

ನಿಮ್ಮ ವಿಜಯಶ್ರೀಯ ಕಡೆಗ
ಣ್ಣೆಮ್ಮ ಮುಖದಲಿ ಮರಿದುದಾದಡೆ
ನಮ್ಮ ಕೊರತೆಯದೇಕೆ ಕರಸೈ ಸೂತನಂದನನ
ನಮ್ಮ ಹೇಳಿಕೆ ಯಾವುದದನೀ
ತಮ್ಮ ಮೀರಿದು ನಡೆದನಾದಡೆ
ನಮ್ಮ ವಾಘೆಯ ಬೀಳುಕೊಡುವೆವು ರಾಯ ಕೇಳೆಂದ (ಕರ್ಣ ಪರ್ವ್, ೮ ಸಂಧಿ, ೫ ಪದ್ಯ)

ತಾತ್ಪರ್ಯ:
ದುರ್ಯೋಧನ ನಿನ್ನ ವಿಜಯಲಕ್ಷ್ಮಿಯ ಕುಡಿನೋಟ ನಮ್ಮ ಮುಖದತ್ತ ಬೀರುವುದಾದರೆ ನಮ್ಮ ಮಾನಕ್ಕೆ ಕುಂದಾದರೂ ಪರವಾಗಿಲ್ಲ, ನೀನು ಹೇಳಿದಂತೆ ನಡೆದುಕೊಳ್ಳುತ್ತೇನೆ, ಬರೆಮಾಡು ಕರ್ಣನನ್ನು, ಆದರೆ ಒಂದು ಮಾತು ನಮ್ಮ ಮಾತನ್ನು ಮೀರಿದೊಡನೆ ನಾವು ಲಗಾಮನ್ನು ಬಿಟ್ಟು ಹೋಗುತ್ತೇವೆ ಎಂದು ಎಚ್ಚರದ ನುಡಿಯನ್ನು ಶಲ್ಯನು ದುರ್ಯೋಧನನಿಗೆ ತಿಳಿಸಿದನು.

ಅರ್ಥ:
ವಿಜಯ: ಗೆಲುವು; ವಿಜಯಶ್ರೀ: ವಿಜಯಲಕ್ಷ್ಮಿ; ಕಡೆಗಣ್ಣು: ಓರೆನೋಟ; ಮುಖ: ಆನನ; ಮರಿದು: ಎಳೆಯದು; ಕೊರತೆ: ನ್ಯೂನ್ಯತೆ; ಕರಸೈ: ಬರೆಮಾಡು; ಸೂತ: ಸಾರಥಿ; ನಂದನ: ಮಗ; ಹೇಳಿಕೆ: ಅಭಿಪ್ರಾಯ; ಮೀರಿ: ದಾಟಿ; ವಾಘೆ: ಲಗಾಮು; ಬೀಳುಕೊಡು: ತೊರೆದು ಬಿಡು; ರಾಯ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ನಿಮ್ಮ +ವಿಜಯಶ್ರೀಯ +ಕಡೆಗಣ್
ಎಮ್ಮ +ಮುಖದಲಿ +ಮರಿದುದ್+ಆದಡೆ
ನಮ್ಮ +ಕೊರತೆಯದೇಕೆ +ಕರಸೈ+ ಸೂತನಂದನನ
ನಮ್ಮ +ಹೇಳಿಕೆ +ಯಾವುದ್+ಅದನ್+ಈ
ತಮ್ಮ +ಮೀರಿದು +ನಡೆದನ್+ಆದಡೆ
ನಮ್ಮ +ವಾಘೆಯ +ಬೀಳುಕೊಡುವೆವು+ ರಾಯ +ಕೇಳೆಂದ

ಅಚ್ಚರಿ:
(೧) ನಿಮ್ಮ, ಎಮ್ಮ, ನಮ್ಮ, ತಮ್ಮ – ಪ್ರಾಸ ಪದಗಳೂ
(೨) ಗೆಲುವು ನಮ್ಮನ್ನು ನೋಡಿದರೆ ಎನ್ನುವ ಪರಿ – ನಿಮ್ಮ ವಿಜಯಶ್ರೀಯ ಕಡೆಗಣ್ಣೆಮ್ಮ ಮುಖದಲಿ ಮರಿದುದಾದಡೆ ನಮ್ಮ ಕೊರತೆಯದೇಕೆ