ಪದ್ಯ ೧೫: ದುರ್ಯೋಧನನು ಯಾವ ಪ್ರಶ್ನೆಯನ್ನು ಕೇಳಿದನು?

ಹಿಮದ ಹೊಯ್ಲಲಿ ಸೀದು ಸಿಕ್ಕಿದ
ಕಮಲವನದಂದದಲಿ ಹತವಿ
ಕ್ರಮದ ಕೀರ್ತಿಯ ಬಹಳಭಾರಕೆ ಬಳುಕಿದಾನನದ
ಸುಮುಖತಾ ವಿಚ್ಛೇದ ಕಲುಷ
ಸ್ತಿಮಿತರಿರವನು ಕಂಡು ನಾಳಿನ
ಸಮರಕೇನುದ್ಯೋಗವೆಂದನು ಕೃಪನ ಗುರುಸುತನ (ಶಲ್ಯ ಪರ್ವ, ೧ ಸಂಧಿ, ೧೫ ಪದ್ಯ)

ತಾತ್ಪರ್ಯ:
ಮಂಜಿನ ಹೊಡೆತಕ್ಕೆ ಸಿಕ್ಕು ಸೀದ ಕಮಲವನದಮ್ತೆ ತಮ್ಮ ಮಹಾಪರಾಕ್ರಮದ ಕಿರ್ತಿಯು ಭಂಗೊಂದಲಾಗಿ ಆ ನೋವಿನಿಂದ ಕುಸಿದು ವಿವರ್ಣವಾದ ಮುಖಗಳನ್ನು ಹೊತ್ತು ಸಂತೋಷವನ್ನು ತೊರೆದು ಶೋಕದಿಂದ ತಪ್ತರಾದ ತನ್ನ ವೀರರನ್ನು ಕಂಡು ದುರ್ಯೋಧನನು ಕೃಪಾಚಾರ್ಯ, ಅಶ್ವತ್ಥಾಮ, ನಾಳಿನ ಯುದ್ಧದ ಬಗೆಯೇನು ಎಂದು ಕೇಳಿದನು.

ಅರ್ಥ:
ಹಿಮ: ಮಂಜಿನಗಡ್ಡೆ; ಹೊಯ್ಲು: ಏಟು, ಹೊಡೆತ; ಸೀದು: ಕರಕಲಾಗು; ಕಮಲ: ತಾವರೆ; ವನ: ಕಾಡು; ಹತ: ಸಾವು; ವಿಕ್ರಮ: ಪರಾಕ್ರಮ; ಕೀರ್ತಿ: ಯಶಸ್ಸು; ಬಹಳ: ತುಂಬ; ಭಾರ: ಹೊರೆ, ತೂಕ; ಬಳುಕು: ನಡುಕ, ಕಂಪನ; ಆನನ: ಮುಖ; ಸುಮುಖ: ಸುಂದರವಾದ ಮುಖ; ವಿಚ್ಛೇದ: ತುಂಡು ಮಾಡುವಿಕೆ; ಕಲುಷ: ಕಳಂಕ; ಸ್ತಿಮಿತ: ಭದ್ರವಾದ ನೆಲೆ, ಸ್ಥಿರತೆ; ಕಂಡು: ನೋಡು; ಸಮರ: ಯುದ್ಧ; ಉದ್ಯೋಗ: ಕೆಲಸ; ಸುತ: ಪುತ್ರ;

ಪದವಿಂಗಡಣೆ:
ಹಿಮದ+ ಹೊಯ್ಲಲಿ +ಸೀದು +ಸಿಕ್ಕಿದ
ಕಮಲವನದಂದದಲಿ+ ಹತ+ವಿ
ಕ್ರಮದ +ಕೀರ್ತಿಯ +ಬಹಳ+ಭಾರಕೆ+ ಬಳುಕಿದ್+ಆನನದ
ಸುಮುಖತಾ +ವಿಚ್ಛೇದ +ಕಲುಷ
ಸ್ತಿಮಿತರಿರವನು +ಕಂಡು +ನಾಳಿನ
ಸಮರಕೇನ್+ಉದ್ಯೋಗವೆಂದನು +ಕೃಪನ +ಗುರುಸುತನ

ಅಚ್ಚರಿ:
(೧) ಉಪಮಾನದ ಪ್ರಯೋಗ: ಹಿಮದ ಹೊಯ್ಲಲಿ ಸೀದು ಸಿಕ್ಕಿದ ಕಮಲವನದಂದದಲಿ
(೨) ಕೌರವನ ಸ್ಥಿತಿ – ಹತವಿಕ್ರಮದ ಕೀರ್ತಿಯ ಬಹಳಭಾರಕೆ ಬಳುಕಿದಾನನದ

ಪದ್ಯ ೨೭: ಧರ್ಮಜನು ಅರ್ಜುನನಿಗೆ ಯಾವ ಪ್ರಶ್ನೆಗಳನ್ನು ಕೇಳಿದನು?

ಭಜಿಸಿದೈ ಭರ್ಗನನು ಶಾಂಭವ
ಯಜನ ಸಾರಸಮಾಧಿ ಶಿವಪದ
ರಜವ ಬೆರಸಿತೆ ಬಗೆಯಕುಣಿ ತೆವರಾಯ್ತೆ ತಡಿದೆಗೆದು
ವಿಜಯ ಶಬ್ದವು ಪಾರ್ಥಕೃತಿಯಲಿ
ಯಜಡವಲ್ಲಲೆ ವೈರಿ ರಾಯರ
ಕುಜನತಾ ವಿಚ್ಛೇದ ಸಾಧ್ಯವೆಯೆಂದನಾ ಭೂಪ (ಅರಣ್ಯ ಪರ್ವ, ೧೨ ಸಂಧಿ, ೨೭ ಪದ್ಯ)

ತಾತ್ಪರ್ಯ:
ಧರ್ಮರಾಜನು ಅರ್ಜುನನ್ನು ವಿಚಾರಿಸುತ್ತಾ, ಅರ್ಜುನ ಶಿವನನ್ನು ಭಜಿಸಿದ್ದಿಯಾ? ಶೈವಾಗಮೋಕ್ತ ಸಮಾಧಿಯು ಶಿವನ ಪಾದದ ಧೂಳನ್ನು ತೋರಿಸಿತೇ? ಮನಸ್ಸಿನ ಆಳದಲ್ಲಿದ್ದ ಬಯಕೆಯು ಮೇಲಕ್ಕೆ ಬಂದು ಫಲಿಸಿತೇ? ವಿಜಯವೆಂಬ ನಿನ್ನ ಹೆಸರು ಜಡವಾಗದೇ ಚೇತನಾತ್ಮಕವಾಗಿ ಸಾರ್ಥಕವಾಯಿತೇ? ಶತ್ರುರಾಜರ ಕುಜನತೆಯನ್ನು ಕತ್ತರಿಸಿ ಹಾಕಲು ಸಮರ್ಥರಾದವೇ? ಎಂದು ಹೇಳುತ್ತಾ ಧರ್ಮಜನ ಹರ್ಷಿಸಿದನು.

ಅರ್ಥ:
ಭಜಿಸು: ಆರಾಧಿಸು; ಭರ್ಗ: ಶಿವ; ಶಾಂಭವ: ಶಿವ; ಯಜನ: ಯಜ್ಞ, ಪೂಜೆ; ಸಾರ: ಶ್ರೇಷ್ಠ; ಸಮಾಧಿ: ಏಕಾಗ್ರತೆ, ತನ್ಮಯತೆ; ಶಿವ: ಶಂಕರ; ಪದ: ಪಾದ, ಚರಣ; ರಜ: ಧೂಳು; ಬೆರಸು: ಕೂಡಿಸು; ಬಗೆ: ಯೋಚಿಸು, ಎಣಿಸು; ಕುಣಿ: ಗುಂಡಿ, ಹಳ್ಳ; ತೆವರು: ಅಟ್ಟು, ಓಡಿಸು, ಹೆದರು; ತಡಿ: ಎಲ್ಲೆ, ಮಿತಿ, ಹತ್ತಿರ; ತೆಗೆ: ಈಚೆಗೆ ತರು; ವಿಜಯ: ಗೆಲುವು; ಶಬ್ದ: ಸದ್ದು, ಸಪ್ಪಳ; ಕೃತಿ: ರಚನೆ, ಕೆಲಸ; ಜಡ: ಅಚೇತನ; ವೈರಿ: ಶತ್ರು; ರಾಯ: ರಾಜ; ಕುಜನತೆ: ಕೆಟ್ಟ ಜನ; ವಿಚ್ಛೇದ: ಕಡಿ; ಸಾಧ್ಯ: ಕಾರ್ಯ ರೂಪಕ್ಕೆ ತರಬಹುದಾದುದು; ಭೂಪ: ರಾಜ;

ಪದವಿಂಗಡಣೆ:
ಭಜಿಸಿದೈ +ಭರ್ಗನನು +ಶಾಂಭವ
ಯಜನ+ ಸಾರ+ಸಮಾಧಿ +ಶಿವ+ಪದ
ರಜವ +ಬೆರಸಿತೆ+ ಬಗೆಯ+ಕುಣಿ +ತೆವರಾಯ್ತೆ ತ+ಡಿದೆಗೆದು
ವಿಜಯ +ಶಬ್ದವು +ಪಾರ್ಥ+ಕೃತಿಯಲಿ
ಅಜಡವಲ್ಲಲೆ +ವೈರಿ+ ರಾಯರ
ಕುಜನತಾ +ವಿಚ್ಛೇದ +ಸಾಧ್ಯವೆ+ಎಂದನಾ +ಭೂಪ

ಅಚ್ಚರಿ:
(೧) ಯಜನ ಕುಜನ; ರಜ, ಅಜ – ಪ್ರಾಸ ಪದಗಳು

ಪದ್ಯ ೨೨: ಕೌರವರು ಹೇಗೆ ತಯಾರಿನಡೆಸಿದ್ದರು?

ದ್ಯೂತಸಿದ್ಧಿಯ ಮಂತ್ರಪರ ವಿ
ದ್ಯಾತಿಶಯ ವಿಚ್ಛೇದ ರಕ್ಷೆ ವಿ
ಧೂತ ರಿಪುಮತಿ ಯಂತ್ರಪರಸನ್ಮೋಹನೌಷಧಿಯ
ಈತಗಳು ಮೇಳವಿಸಿದರು ನಿ
ರ್ಭೀತರಿವರಿದನೆತ್ತ ಬಲ್ಲರು
ಕೈತವದ ಕಣಿ ಕೌರವೇಶ್ವರ ಬಂದನರಮನೆಗೆ (ಸಭಾ ಪರ್ವ, ೧೪ ಸಂಧಿ, ೨೨ ಪದ್ಯ)

ತಾತ್ಪರ್ಯ:
ಕೌರವರು ದ್ಯೂತದಲ್ಲಿ ಗೆಲ್ಲುವ ಮಂತ್ರವನ್ನು ಜಪಿಸಿ ಸಿದ್ಧಿಮಾಡಿಕೊಂಡರು. ವಿರೋಧಿಗಳ ಉಪಾಸನೆಯನ್ನು ತುಂಡುಮಾಡುವಂತಹ ರಕ್ಷೆಯನ್ನು ಧರಿಸಿಕೊಂಡರು. ಎದುರಾಳಿಯ ಬುದ್ಧಿವಂತಿಕೆಯನ್ನು ತೊಡೆದುಹಾಕುವ ಯಂತ್ರವನ್ನು ಧರಿಸಿದರು. ಎದುರಾಳಿಯನ್ನು ಸನ್ಮೋಹನ ಮಾಡುವ ಔಷಧಿಯನ್ನು ಜೋಡಿಸಿಕೊಂಡರು. ಇದಾವುದರ ಅರಿವಿಲ್ಲದೆ ನಿರ್ಭೀತಿಯಿಂದ ಪಾಂಡವರು ಇದ್ದರು. ಇದೆಲ್ಲವೂ ಅವರಿಗೆ ಹೇಗೆ ತಾನೇ ತಿಳಿಯಬೇಕು. ಮೋಸದ ಗಣಿಯಾಗಿದ್ದ ದುರ್ಯೋಧನನು ಅರಮನೆಗೆ ಬಂದನು.

ಅರ್ಥ:
ದ್ಯೂತ: ಜೂಜು, ಪಗಡೆ; ಸಿದ್ಧಿ: ಸಾಧನೆ, ಗುರಿಮುಟ್ಟುವಿಕೆ; ಮಂತ್ರ: ವಿಚಾರ, ಆಲೋಚನೆ; ವಿದ್ಯ: ಜ್ಞಾನ; ಅತಿಶಯ: ಹೆಚ್ಚು; ವಿಚ್ಛೇದ: ತುಂಡು ಮಾಡುವಿಕೆ, ಕತ್ತರಿಸುವುದು; ರಕ್ಷೆ: ಕಾಪು, ರಕ್ಷಣೆ; ವಿಧೂತ: ಅಲ್ಲಾಡುವ, ತೊರೆದ; ರಿಪು: ವೈರಿ; ಮತಿ: ಬುದ್ಧಿ; ಯಂತ್ರ: ಉಪಕರಣ; ಪರ: ಇತರರು; ಸನ್ಮೋಹನ: ಆಕರ್ಷಣೆ, ಮೋಹ; ಔಷಧಿ: ಮದ್ದು; ಮೇಳವಿಸು: ಸಿದ್ಧಪಡಿಸು; ನಿರ್ಭೀತ: ಭಯವಿಲ್ಲದ; ಬಲ್ಲರು: ತಿಳಿ; ಕೈತವ: ಕಪಟ, ವಂಚನೆ; ಕಣಿ: ಗಣಿ; ಬಂದ: ಆಗಮಿಸು;

ಪದವಿಂಗಡಣೆ:
ದ್ಯೂತ+ಸಿದ್ಧಿಯ+ ಮಂತ್ರಪರ+ ವಿದ್ಯ
ಅತಿಶಯ +ವಿಚ್ಛೇದ +ರಕ್ಷೆ +ವಿ
ಧೂತ +ರಿಪುಮತಿ +ಯಂತ್ರ+ಪರ+ಸನ್ಮೋಹನ್+ಔಷಧಿಯ
ಈತಗಳು +ಮೇಳವಿಸಿದರು +ನಿ
ರ್ಭೀತರ್+ಇವರ್+ಇದನ್+ಎತ್ತ +ಬಲ್ಲರು
ಕೈತವದ +ಕಣಿ +ಕೌರವೇಶ್ವರ ಬಂದನ್+ಅರಮನೆಗೆ

ಅಚ್ಚರಿ:
(೧) ದುರ್ಯೋಧನನ ಗುಣಗಾನ – ಕೈತವದ ಕಣಿ
(೨) ಕ ಕಾರದ ತ್ರಿವಳಿ ಪದ – ಕೈತವದ ಕಣಿ ಕೌರವೇಶ್ವರ
(೩) ವಿದ್ಯಾತಿಶಯ, ವಿಧೂತ – ಪದಗಳ ಬಳಕೆ