ಪದ್ಯ ೩೩: ಕೌರವನೇಕೆ ಉದ್ರೇಕಗೊಂಡನು?

ಜ್ಞಾನವಳಿದುದು ವೀರಪಣದಭಿ
ಮಾನ ಮಸೆದುದು ಮಂತ್ರನಿಷ್ಠೆಯ
ಮೌನ ಹಿಂಬೆಳೆಯಾಯ್ತು ಮೋಹಿದುದಾಹವವ್ಯಸನ
ದೀನಮನ ಹೊರಗಳೆದುದುದಕ
ಸ್ಥಾನಭಾವಕೆ ನಾಚಿದನು ತವ
ಸೂನು ತಳವೆಳಗಾದನಹಿತವಚೋವಿಘಾತದಲಿ (ಗದಾ ಪರ್ವ, ೫ ಸಂಧಿ, ೩೩ ಪದ್ಯ)

ತಾತ್ಪರ್ಯ:
ಎಲೈ ಧೃತರಾಷ್ಟ್ರ, ನಿನ್ನ ಮಗನ ತಿಳುವಳಿಕೆ ಮರೆಯಾಯಿತು, ವೀರಪ್ರತಿಜ್ಞೆ ಸ್ವಾಭಿಮಾನ ಹೆಚ್ಚಿತು. ಮಂತ್ರಜಪದಲ್ಲಿದ್ದ ಮೌನ ಹಿಂದಯಿತು. ಯುದ್ಧವ್ಯಸನ ಆವರಿಸಿತು. ದೈನ್ಯವು ಮಾಯವಾಯಿತು. ತಾನ ಅಡಗಿಕೊಂಡು ನೀರಿನ ಕೊಳದಲ್ಲಿರುವುದನ್ನು ನೆನೆದು ನಾಚಿಕೊಂಡನು. ಶತ್ರುಗಳ ಮಾತಿನ ಪೆಟ್ಟಿನಿಂದ ಉದ್ರೇಕಗೊಂಡನು.

ಅರ್ಥ:
ಜ್ಞಾನ: ಬುದ್ಧಿ, ತಿಳುವಳಿಕೆ; ಅಳಿ: ನಾಶ; ವೀರ: ಶೂರ; ಅಭಿಮಾನ: ಹೆಮ್ಮೆ, ಅಹಂಕಾರ; ಮಸೆ: ಹರಿತವಾದುದು; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ನಿಷ್ಠೆ: ದೃಢತೆ, ಸ್ಥಿರತೆ; ಮೌನ: ಸುಮ್ಮನಿರುವಿಕೆ, ನೀರವತೆ; ಹಿಂಬೆಳೆ: ಹಿಂದಾಗು, ಹಿಂದೆ ತಳ್ಳು; ಮೋಹ: ಆಸೆ; ಆಹವ: ಯುದ್ಧ; ವ್ಯಸನ: ಚಾಳಿ; ದೀನ: ದೈನ್ಯಸ್ಥಿತಿ; ಮನ: ಮನಸ್ಸು; ಹೊರಗೆ: ಆಚೆ; ಉದಕ: ನೀರು; ಸ್ಥಾನ: ನೆಲೆ; ಭಾವ: ಮನಸ್ಸು, ಚಿತ್ತ; ನಾಚು: ಲಜ್ಜೆ, ಸಿಗ್ಗು, ಅವಮಾನ; ಸೂನು: ಮಗ; ತಳವೆಲಗಾಗು: ತಲೆಕೆಳಗಾಗು; ಅಹಿತ: ವೈರಿ; ವಚೋ: ಮಾತು; ವಿಘಾತ: ಕೇಡು, ಹಾನಿ, ಏಟು;

ಪದವಿಂಗಡಣೆ:
ಜ್ಞಾನವ್+ಅಳಿದುದು +ವೀರಪಣದ್+ಅಭಿ
ಮಾನ +ಮಸೆದುದು +ಮಂತ್ರನಿಷ್ಠೆಯ
ಮೌನ +ಹಿಂಬೆಳೆಯಾಯ್ತು +ಮೋಹಿದುದ್+ಆಹವ+ವ್ಯಸನ
ದೀನಮನ+ ಹೊರಗಳೆದುದ್+ಉದಕ
ಸ್ಥಾನಭಾವಕೆ +ನಾಚಿದನು +ತವ
ಸೂನು +ತಳವೆಳಗಾದನ್+ಅಹಿತ+ವಚೋ+ವಿಘಾತದಲಿ

ಅಚ್ಚರಿ:
(೧) ಒಂದೇ ಪದದ ರಚನೆ – ತಳವೆಳಗಾದನಹಿತವಚೋವಿಘಾತದಲಿ
(೨) ಜ್ಞಾನ, ಮಾನ, ಮೌನ, ದೀನ, ಸ್ಥಾನ – ಪ್ರಾಸ ಪದಗಳು

ಪದ್ಯ ೨೬: ಯಾರಿಗೆ ಪರಲೋಕವು ಲಭಿಸುವುದಿಲ್ಲ -೩?

ಸ್ವಾಮಿಕಾರ್ಯ ವಿಘಾತಕಂಗತಿ
ಕಾಮುಕಗೆ ಮಿಥ್ಯಾಪವಾದಿಗೆ
ಭೂಮಿದೇವ ದ್ವೇಷಿಗತ್ಯಾಶಿಗೆ ಬಕವ್ರತಿಗೆ
ಗ್ರಾಮಣಿಗೆ ಪಾಷಂಡಗಾತ್ಮವಿ
ರಾಮಕಾರಿಗೆ ಕೂಟ ಸಾಕ್ಷಿಗೆ
ನಾಮಧಾರಿಗೆ ಪಾರ್ಥ ಕೇಳ್ ಪರಲೋಕವಿಲ್ಲೆಂದ (ಅರಣ್ಯ ಪರ್ವ, ೫ ಸಂಧಿ, ೨೬ ಪದ್ಯ)

ತಾತ್ಪರ್ಯ:
ಅರ್ಜುನ ಕೇಳು, ಸ್ವಾಮಿಕಾರ್ಯವನ್ನು ಕೆಡಿಸುವವನಿಗೆ, ಅತಿ ಕಾಮುಕನಿಗೆ, ಸುಳ್ಳು ಅಪವಾದವನ್ನು ಹೊರಿಸುವವನಿಗೆ, ಬ್ರಾಹ್ಮಣ ದ್ವೇಷಿಗೆ, ಅತಿ ಆಶೆಯನ್ನಿಟ್ಟು ಕೊಂಡವನಿಗೆ, ಅತಿ ಆಸೆಯನ್ನಿಟ್ಟುಕೊಂಡವನಿಗೆ, ಅನುಪಕಾರಿಗೆ, ಮೋಸಮಾಡುವವನಿಗೆ, ಡಂಭಾಚಾರಿಯಾದವನಿಗೆ, ಸುಳ್ಳು ಲೆಕ್ಕಗಳನ್ನು ಹೇಳುವ ಗ್ರಾಮದ ಒಡೆಯನಿಗೆ, ಪಾಷಂಡಿಗೆ, ಆತ್ಮವನ್ನು ಮರೆತವನಿಗೆ, ಸುಳ್ಳು ಸಾಕ್ಷಿಹೇಳುವವನಿಗೆ, ನಾಮಧಾರಿಗೆ ಸೋಗು ಹಾಕುವವನಿಗೆ ಪರಲೋಕವಿಲ್ಲೆಂದು ಧರ್ಮಜನು ಹೇಳಿದನು.

ಅರ್ಥ:
ಸ್ವಾಮಿ: ಒಡೆಯ; ಕಾರ್ಯ: ಕೆಲಸ; ವಿಘಾತ: ನಾಶ; ಅತಿ: ಬಹಳ; ಕಾಮುಕ: ಕಾಮಾಸಕ್ತನಾದವನು, ಲಂಪಟ; ಮಿಥ್ಯ: ಸುಳ್ಳು; ಅಪವಾದ: ನಿಂದೆ, ಆರೋಪ; ಭೂಮಿ: ಪೃಥ್ವಿ; ದೇವ: ಒಡೆಯ;ದ್ವೇಷಿ: ಶತ್ರು; ಅತ್ಯಾಶಿ: ಅತಿ ಆಸೆ ಪಡುವ; ಬಕ: ಕಪಟಿ, ವಂಚಕ; ಗ್ರಾಮ: ಹಳ್ಳಿ; ಪಾಷಂಡ: ಪಾಖಂಡ, ವೈದಿಕ ಸಂಪ್ರ ದಾಯಕ್ಕೆ ವಿರುದ್ಧವಾದ ಮತ; ಆತ್ಮ: ಜೀವ; ವಿರಾಮ: ಬಿಡುವು, ವಿಶ್ರಾಂತಿ; ಕೂಟ: ಒಡನಾಟ; ಸಾಕ್ಷಿ: ಪುರಾವೆ, ರುಜುವಾತು; ನಾಮಧಾರಿ: ಹರಿದಾಸ ದೀಕ್ಷೆ ಹೊಂದಿದವ, ವೈಷ್ಣವ; ಪರಲೋಕ: ಬೇರೆ ಲೋಕ;

ಪದವಿಂಗಡಣೆ:
ಸ್ವಾಮಿಕಾರ್ಯ+ ವಿಘಾತಕಂಗ್+ಅತಿ
ಕಾಮುಕಗೆ +ಮಿಥ್ಯ+ಅಪವಾದಿಗೆ
ಭೂಮಿದೇವ +ದ್ವೇಷಿಗ್+ಅತಿ+ಆಶಿಗೆ+ ಬಕವ್ರತಿಗೆ
ಗ್ರಾಮಣಿಗೆ +ಪಾಷಂಡಗ್+ಆತ್ಮ+ವಿ
ರಾಮಕಾರಿಗೆ +ಕೂಟ +ಸಾಕ್ಷಿಗೆ
ನಾಮಧಾರಿಗೆ +ಪಾರ್ಥ +ಕೇಳ್ +ಪರಲೋಕವಿಲ್ಲೆಂದ

ಅಚ್ಚರಿ:
(೧) ವಿಘಾತ, ಕಾಮುಕ, ಅಪವಾದಿ, ದ್ವೇಷಿ, ಬಕವ್ರತಿ, ಪಾಷಂಡ,ವಿರಾಮಕಾರಿ, ನಾಮಧಾರಿ – ಮನುಷ್ಯರ ಸ್ವಭಾವಗಳನ್ನು ಹೇಳುವ ಪದ್ಯ

ಪದ್ಯ ೫೬: ದುರ್ಯೋಧನನು ಏನು ಹೇಳಿ ಹೊರಟನು?

ಮಾತು ಸೊಗಸದಲಾ ವೃಥಾ ನೀ
ವೇತಕೆನ್ನನು ಕರೆಸಿದಿರಿ ನಿ
ಮ್ಮಾತಗಳು ಭೀಮಾರ್ಜುನರು ಸಹಿತೀ ಮಹೀತಳವ
ತಾತ ನೀವಾಳುವುದು ತಾಯೆ ಸು
ನೀತನಾ ಧರ್ಮಜನು ಧರ್ಮ ವಿ
ಘಾತಕರು ನಾವೆಮ್ಮ ಕಳುಹುವುದೆನುತ ಹೊರವಂಟ (ಸಭಾ ಪರ್ವ, ೧೩ ಸಂಧಿ, ೫೬ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ತಂದೆ ತಾಯಿಯನ್ನು ಭಾವುಕವಾಗಿ ತನ್ನ ಬಳಿ ಸಳೆಯಲು ತನ್ನ ಮಾತನ್ನು ಮುಂದುವರಿಸುತ್ತಾ, ನನ್ನ ಮಾತು ನಿಮಗೆ ಹಿತವೆನಿಸುತ್ತಿಲ್ಲ, ನನ್ನನ್ನೇಕೆ ಸುಮ್ಮನೆ ಇಲ್ಲಿಗೆ ಕರೆಸಿದಿರಿ? ಅಪ್ಪ, ನಿಮ್ಮವರಾದ ಭೀಮಾರ್ಜುನರೊಡನೆ ಈ ಭೂಮಿಯನ್ನು ನೀವೇ ಆಳಿರಿ, ಅಮ್ಮಾ, ಧರ್ಮಜನು ನ್ಯಾಯಮಾರ್ಗದಲ್ಲಿ ಸುಶಿಕ್ಷಿತನು, ನಿಮ್ಮ ಮಕ್ಕಳಾದ ನಾವು ಅಧರ್ಮದವರು, ಧರ್ಮದಿಂದ ದೂರವುಳಿದವರು, ಅವರೊಂದಿಗೆ ನೀವು ಈ ಭೂಮಿಯನ್ನು ಆಳಿರಿ, ನಮಗೆ ತೆರಳಲು ಅಪ್ಪಣೆ ನೀಡಿ ಎಂದು ಹೇಳಿ ತೆರಳಿದನು.

ಅರ್ಥ:
ಮಾತು: ವಾಣಿ; ಸೊಗಸು: ಚೆಂದ; ವೃಥ: ಸುಮ್ಮನೆ; ಕರೆಸು: ಬರೆಮಾಡು; ಸಹಿತ: ಜೊತೆ; ಮಹೀತಳ: ಭೂಮಿ; ತಾತ: ತಂದೆ; ಆಳು: ಅಧಿಕಾರ ನಡೆಸು; ತಾಯಿ: ಮಾತೆ; ಸುನೀತ: ಒಳ್ಳೆಯ ನಡತೆ; ವಿಘಾತ: ಕೇಡು, ಹಾನಿ; ಕಳುಹು: ಕಳಿಸು, ಬೀಳ್ಕೊಡು; ಹೊರವಂಟ: ತೆರಳು;

ಪದವಿಂಗಡಣೆ:
ಮಾತು+ ಸೊಗಸದಲಾ+ ವೃಥಾ +ನೀ
ವೇತಕ್+ಎನ್ನನು +ಕರೆಸಿದಿರಿ+ ನಿ
ಮ್ಮಾತಗಳು+ ಭೀಮಾರ್ಜುನರು +ಸಹಿತೀ +ಮಹೀತಳವ
ತಾತ +ನೀವಾಳುವುದು +ತಾಯೆ +ಸು
ನೀತನ್+ಆ+ಧರ್ಮಜನು +ಧರ್ಮ +ವಿ
ಘಾತಕರು +ನಾವೆಮ್ಮ +ಕಳುಹುವುದ್+ಎನುತ +ಹೊರವಂಟ

ಪದ್ಯ ೪೦: ಸೈನ್ಯದಲ್ಲಿ ಯಾವ ಭಾವನೆ ಮೂಡಿದ್ದವು?

ಮೊದಲಲೆರಡೊಡ್ಡಿನಲಿ ಸುಮ್ಮಾ
ನದ ಸಘಾಡವ ದಂಡೆನೀಗಳು
ತುದಿಗೆ ಬರೆವರೆ ಕಂಡೆನಿವರವರೆರಡು ಥಟ್ಟಿನಲಿ
ತುದಿವೆರಳ ಕಂಬನಿಯ ಬಳಸಿದ
ಬೆದರುಗಳ ಕುಕ್ಕುಳಿಸಿದುತ್ಸಾ
ಹದ ವಿಘಾತಿಯ ನಟ್ಟ ಚಿಂತೆಯನರಸ ಕೇಳೆಂದ (ಕರ್ಣ ಪರ್ವ, ೨೬ ಸಂಧಿ, ೪೦ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ, ಕರ್ಣಾರ್ಜುನರ ಕಾಳಗ ಆರಂಭವಾದಗ ಎರಡು ಸೈನ್ಯಗಳಲ್ಲೂ ಸಂತಸ, ಸಂಭ್ರಮಗಳು ಕಾಣಿಸುತ್ತಿದ್ದವು. ಈಗಲೋ ಎರಡು ಸೈನ್ಯದಲ್ಲಿ ಬೆದರಿಕೆ, ಕಂಬನಿ, ಸಂತಸದ ಕುಸಿತ, ದುಗುಡ, ಯಾವುದೋ ತೊಂದರೆ, ಚಿಂತೆಗಳು ಅವರ ಮನಸ್ಸಿನಲ್ಲಿ ಕಂಡುಬರುತ್ತಿವೆ.

ಅರ್ಥ:
ಮೊದಲು: ಆದಿ; ಒಡ್ಡು: ಸೈನ್ಯ, ಗುಂಪು; ಸುಮ್ಮಾನ:ಸಂತೋಷ, ಹಿಗ್ಗು; ಸಘಾಡ: ರಭಸ, ವೇಗ; ಕಂಡು: ನೋಡು; ತುದಿ: ಅಗ್ರ, ಮುಂದೆ; ಬರೆವರೆ: ಬಂದರೆ; ತುದಿವೆರಳು: ಬೆರಳ ಕೊನೆ; ಕಂಬನಿ: ಕಣ್ಣೀರು; ಬಳಸು: ಆವರಿಸುವಿಕೆ; ಬೆದರು: ಭಯ, ಅಂಜಿಕೆ; ಕುಕ್ಕುಳಿಸು: ಕುದಿ, ತಳಮಳಿಸು; ಉತ್ಸಾಹ: ಶಕ್ತಿ, ಬಲ; ವಿಘಾತಿ: ಹೊಡೆತ, ವಿರೋಧ; ನಟ್ಟ: ನಡು, ಒಳಹೋಕು; ಚಿಂತೆ: ಯೋಚನೆ; ಅರಸ; ರಾಜ; ಕೇಳು: ಆಲಿಸು;

ಪದವಿಂಗಡಣೆ:
ಮೊದಲಲ್+ಎರಡ್+ಒಡ್ಡಿನಲಿ+ ಸುಮ್ಮಾ
ನದ +ಸಘಾಡವ +ದಂಡೆನ್+ಈಗಳು
ತುದಿಗೆ+ ಬರೆವರೆ+ ಕಂಡೆನ್+ಇವರ್+ಅವರ್+ಎರಡು+ ಥಟ್ಟಿನಲಿ
ತುದಿವೆರಳ+ ಕಂಬನಿಯ +ಬಳಸಿದ
ಬೆದರುಗಳ +ಕುಕ್ಕುಳಿಸಿದ್+ಉತ್ಸಾ
ಹದ+ ವಿಘಾತಿಯ +ನಟ್ಟ+ ಚಿಂತೆಯನ್+ಅರಸ+ ಕೇಳೆಂದ

ಅಚ್ಚರಿ:
(೧) ಸುಮ್ಮಾನ, ಬೆದರು, ಉತ್ಸಾಹ, ವಿಘಾತ, ಚಿಂತೆ – ಭಾವನೆಗಳನ್ನು ವರ್ಣಿಸುವ ಪದಗಳು

ಪದ್ಯ ೧೫: ಅರ್ಜುನನು ಧರ್ಮಜನಿಗೆ ಏನು ಉತ್ತರವನ್ನು ನೀಡಿದನು?

ಜೀಯ ಖಾತಿಯಿದೇಕೆ ಕರ್ಣನ
ಕಾಯಿದುಳುಹಿದೆನೊಂದು ಬಾರಿ ವಿ
ಘಾತದಲಿ ಘಟ್ಟಿಸುವೆನೀಗಳೆ ಹಾಯ್ಕು ವೀಳೆಯವ
ರಾಯದಳಗಿಳವೆನ್ನ ಕೂಡೆ ನ
ವಾಯಿಯೇ ಕಲಿ ಕರ್ಣನಾಯುಷ
ಹೋಯಿತಿದೆಯೆಂದೊರಸಿದನು ವಾಮಾಂಘ್ರಿಯಲಿ ನೆಲನ (ಕರ್ಣ ಪರ್ವ, ೧೬ ಸಂಧಿ, ೧೫ ಪದ್ಯ)

ತಾತ್ಪರ್ಯ:
ಅರ್ಜುನನು ಧರ್ಮಜನಿಗೆ ಉತ್ತರಿಸುತ್ತಾ, ಒಡೆಯಾ ಏಕೆ ಕೋಪಗೊಳ್ಳುವೆ? ಒಂದು ಬಾರಿ ಅವನನ್ನು ಕಾದು ಜೀವಸಹಿತ ಬಿಟ್ಟಿದ್ದೇನೆ, ಈಗಲೇ ಹೋಗಿ ಬಡಿದು ಕೊಲ್ಲುತ್ತೇನೆ. ವೀಳೆಯವನ್ನು ಕೋಡು, ಶತ್ರು ಸೇನೆ ನನ್ನೆದಿರಿನಲ್ಲಿ ಏನು ಮಾಡೀತು? ಕರ್ಣನ ಆಯಸ್ಸು ಇದೋ ಮುಗಿಯಿತು ಎಂದು ಎಡಗಾಲಿನಲ್ಲಿ ನೆಲವನ್ನು ಘಟ್ಟಿಸಿದನು.

ಅರ್ಥ:
ಜೀಯ: ಒಡೆಯ; ಖಾತಿ: ಕೋಪ, ಕ್ರೋಧ; ಕಾಯಿದು: ಕಾದು, ಹೋರಾಡು; ಉಳುಹಿದೆ: ಉಳಿಸಿದೆ; ಬಾರಿ: ಸಲ, ಸರದಿ; ವಿಘಾಯ: ಗಾಯ, ಪೆಟ್ಟು; ಘಟ್ಟಿಸು: ಗಟ್ಟಿಯಾಗಿ ತುಳಿ, ಹೊಡೆ; ಹಾಯ್ಕು: ಹೊಡೆ; ವೀಳೆ: ತಾಂಬೂಲ; ರಾಯದಳ: ಸೈನ್ಯ; ಕೂಡೆ: ಜೊತೆ; ನವಾಯಿ: ಹೊಸರೀತಿ, ಠೀವಿ; ಕಲಿ: ಶೂರ; ಆಯುಷ: ಜೀವಿಸುವ ಕಾಲ; ಹೋಯಿತು: ಅಳಿ, ದೂರಹೋಗು; ಒರಸು: ಸಾರಿಸು, ನಾಶಮಾಡು; ವಮಾಂಘ್ರಿ: ಎಡಗಾಲಿನಲ್ಲಿ; ನೆಲ: ಭೂಮಿ;

ಪದವಿಂಗಡಣೆ:
ಜೀಯ +ಖಾತಿಯಿದೇಕೆ +ಕರ್ಣನ
ಕಾಯಿದುಳುಹಿದೆನ್+ಒಂದು +ಬಾರಿ +ವಿ
ಘಾತದಲಿ +ಘಟ್ಟಿಸುವೆನ್+ಈಗಳೆ +ಹಾಯ್ಕು +ವೀಳೆಯವ
ರಾಯದಳಗಿಳವ್+ಎನ್ನ +ಕೂಡೆ +ನ
ವಾಯಿಯೇ +ಕಲಿ +ಕರ್ಣನ್+ಆಯುಷ
ಹೋಯಿತಿದೆಯೆಂದ್+ಒರಸಿದನು +ವಾಮಾಂಘ್ರಿಯಲಿ +ನೆಲನ

ಅಚ್ಚರಿ:
(೧) ಅರ್ಜುನನ ಪರಾಕ್ರಮದ ನುಡಿ: ವಿಘಾತದಲಿ ಘಟ್ಟಿಸುವೆನೀಗಳೆ ಹಾಯ್ಕು ವೀಳೆಯವ

ಪದ್ಯ ೮೧: ಕೃಷ್ಣನು ಜರಾಸಂಧನನ್ನು ಯುದ್ಧಕ್ಕೆ ಹೇಗೆ ಕೆಣಕಿದನು?

ಇದುವೆ ಪಿತ್ತದ ವಿಕಳವೋ ಮ
ದ್ಯದ ವಿಕಾರವೊ ಭಂಗಿ ತಲೆಗೇ
ರಿದುದೊ ಭಟನಾದರೆ ವಿಘಾತದಲೇಳು ಕಾಳಗಕೆ
ಸದನ ನಿನ್ನದು ಸೂಳೆಯರಮುಂ
ದೊದರಿ ಫಲವೇನೆದ್ದು ಬಾ ಭಾ
ಳದಲಿ ಬರೆದುದ ತೊಡೆವೆನೆಂದನು ದಾನವಧ್ವಂಸಿ (ಸಭಾ ಪರ್ವ, ೨ ಸಂಧಿ, ೮೧ ಪದ್ಯ)

ತಾತ್ಪರ್ಯ:
ಜರಾಸಂಧನ ಮಾತಿಗೆ ಅದೇ ಧಾಟಿಯಲ್ಲಿ ಉತ್ತರಿಸಿದ ಕೃಷ್ಣ, ಎಲೋ ನೀನೇನು ಪಿತ್ತವೇರಿ ಬಡಬದಿಸುತ್ತಿದ್ದಿಯೆ? ಮದ್ಯಸೇವನೆಯಿಂದ ತಲೆಕೆಟ್ಟು ಮಾತಾಡುತ್ತಿದ್ದೀಯಾ? ಭಂಗಿಯನ್ನು ಸೇದಿದ್ದು ತಲೆಗೇರಿತೋ? ವೀರನಾದರೆ ನಮ್ಮೆದುರಾಗಿ ಯುದ್ಧಕ್ಕೇಳು. ಇದು ನಿನ್ನ ಮನೆ ಹಾಗೆಂದು ನಿನ್ನ ದಾಸಿಯರ ಮುಂದೆ ಒದರಿ ಏನು ಪ್ರಯೋಜನ? ಯುದ್ಧಕ್ಕೆ ಬಾ ನಿನ್ನ ಹಣೆಬರಹವನ್ನು ತೊಡೆದು ಹಾಕುತ್ತೇನೆ, ಎಂದನು.

ಅರ್ಥ:
ಪಿತ್ತ: ಕೋಪ, ಸಿಟ್ಟು, ಮರುಳುತನ; ವಿಕಳ: ಭ್ರಮೆ, ಭ್ರಾಂತಿ; ಮದ್ಯ: ಹೆಂಡ, ಮಾದಕ ಪಾನೀಯ; ವಿಕಾರ: ಮನಸ್ಸಿನ ವಿಕೃತಿ, ಕುರೂಪ; ಭಂಗಿ: ಅಮಲೇರಿಸುವ ಒಂದು ವನಸ್ಪತಿ, ಗಾಂಜಾ; ತಲೆ: ಶಿರಸ್ಸು; ಏರು: ಹೆಚ್ಚಾಗು; ಭಟ: ಶೂರ, ಪರಾಕ್ರಮಿ; ವಿಘಾತ: ನಾಶ, ಧ್ವಂಸ; ಕಾಳಗ: ಯುದ್ಧ; ಸದನ: ಮನೆ; ಸೂಳೆ: ದಾಸಿ; ಒದರು: ಹೇಳು; ಫಲ: ಪರಿಣಾಮ, ಫಲಿತಾಂಶ; ಭಾಳ: ಹಣೆ; ತೊಡೆ: ಒರಸು,ಅಳಿಸು; ದಾನವ: ರಾಕ್ಷಸ; ಧ್ವಂಸ: ನಾಶಮಾಡು;

ಪದವಿಂಗಡಣೆ:
ಇದುವೆ+ ಪಿತ್ತದ +ವಿಕಳವೋ +ಮ+
ದ್ಯದ +ವಿಕಾರವೊ +ಭಂಗಿ +ತಲೆಗೇ
ರಿದುದೊ +ಭಟನಾದರೆ +ವಿಘಾತದಲ್+ಏಳು +ಕಾಳಗಕೆ
ಸದನ +ನಿನ್ನದು +ಸೂಳೆಯರ+ಮುಂದ್
ಒದರಿ +ಫಲವೇನ್+ಎದ್ದು +ಬಾ +ಭಾ
ಳದಲಿ+ ಬರೆದುದ +ತೊಡೆವೆ+ನೆಂದನು +ದಾನವ+ಧ್ವಂಸಿ

ಅಚ್ಚರಿ:
(೧) ವಿಕಳವೋ, ವಿಕಾರವೊ, ವಿಘಾತ – “ವಿ” ಕಾರದ ಪದಗಳ ಬಳಕೆ
(೨) ಶೂರನನ್ನು ಕೆಣಕುವ ಬಗೆ – ಸೂಳೆಯರಮುಂದೊದರಿ ಫಲವೇನು
(೩) ತನ್ನ ಪೌರುಷವನ್ನು ತೋರುವ ಬಗೆ – ಭಾಳದಲಿ ಬರೆದುದ ತೊಡೆವೆ