ಪದ್ಯ ೩೩: ವೇದವ್ಯಾಸರು ಏನು ಹೇಳಿ ತಮ್ಮ ಆಶ್ರಮಕ್ಕೆ ತೆರಳಿದರು?

ಇದುವೆ ರೇಖಾಮಾತ್ರ ಸರ್ವಾಂ
ಗದಲಿ ನಿನ್ನಯ ಮರೆಯದಿರು ಕೊಂ
ಕೊದರೆ ಕರುಣಾಜಲಧಿ ಜೈಸಲುವುಂಟು ಹರಿ ನಿನಗೆ
ಬೆದರದಿರು ವಿಗಡಿಸುವ ವಿಷಯಾ
ಸ್ಪದದೊಳೆಂದು ಮುನೀಂದ್ರನೈವರು
ಸುದತಿ ಸಹಿತನಿಬರಿಗೆ ಬುದ್ಧಿಯ ಹೇಳಿ ಹೊರವಂಟ (ಸಭಾ ಪರ್ವ, ೧೨ ಸಂಧಿ, ೩೩ ಪದ್ಯ)

ತಾತ್ಪರ್ಯ:
ನಾನು ನಿಮಗೆ ತಿಳಿಸಿರುವುದು ಒಂದು ಗೆರೆಯಷ್ಟು ಮಾತ್ರ, ನಿನ್ನನ್ನು ಸರ್ವಾಂಗದಲ್ಲೂ ಮರೆಯದೆ ಎಚ್ಚರವಾಗಿಟ್ಟುಕೊಳ್ಳಬೇಕು. ಅಲ್ಪ ಮಾತ್ರವಾದರೂ ತಪ್ಪಿತೆಂದು ಹೆದರಬೇಡ, ನಿನ್ನ ಒಳ್ಳೆಯ ನಡತೆಯಿಂದ ನೀನು ಶ್ರೀಕೃಷ್ಣನ ಕೃಪಾಪಾತ್ರನಾಗಿ ಕಷ್ಟವನ್ನು ಜಯಿಸುವೆ. ನಿನಗೆ ವಿರುದ್ಧವಾಗಿ ಬರುವ ವಿಷಯಗಳಿಗೆ ಹೆದರಬೇಡ ಎಂದು ಹೇಳಿ ವ್ಯಾಸರು ಪಾಂಡವರಿಗೂ ದ್ರೌಪದಿಗೂ ಬುದ್ಧಿಯನ್ನು ಹೇಳಿ ತೆರಳಿದರು.

ಅರ್ಥ:
ರೇಖ: ಗೆರೆ; ಸರ್ವಾಂಗ: ಎಲ್ಲಾ ಅಂಗ/ದೇಹದ ಭಾಗ; ಮರೆ: ನೆನಪಿನಿಂದ ದೂರಮಾದು; ಕೊಂಕು: ವಕ್ರೋಕ್ತಿ, ವ್ಯಂಗ್ಯ; ಕರುಣ: ದಯೆ; ಜಲಧಿ: ಸಾಗರ; ಜೈಸಲು: ಗೆಲ್ಲಲು; ಹರಿ: ಕೃಷ್ಣ; ಬೆದರು: ಹೆದರು; ವಿಗಡ: ಶೌರ್ಯ, ಪರಾಕ್ರಮ; ವಿಷಯ: ಇಂದ್ರಿಯ ಗೋಚರವಾಗುವ; ಆಸ್ಪದ: ನೆಲೆ, ಅಶ್ರಯ; ಮುನಿ: ಋಷಿ; ಸುದತಿ: ಸುಂದರಿ, ಹೆಣ್ಣು; ಸಹಿತ: ಜೊತೆ;ಆನಿಬರಿಗೆ: ಅಷ್ಟು ಮಂದಿಗೆ; ಬುದ್ಧಿ: ತಿಳಿವು, ಅರಿವು; ಹೊರವಂಟ: ಹೊರಡು;

ಪದವಿಂಗಡಣೆ:
ಇದುವೆ +ರೇಖಾಮಾತ್ರ+ ಸರ್ವಾಂ
ಗದಲಿ+ ನಿನ್ನಯ +ಮರೆಯದಿರು +ಕೊಂ
ಕಿದರೆ+ ಕರುಣಾಜಲಧಿ+ ಜೈಸಲುವುಂಟು +ಹರಿ +ನಿನಗೆ
ಬೆದರದಿರು +ವಿಗಡಿಸುವ +ವಿಷಯ
ಆಸ್ಪದದೊಳ್+ಎಂದು +ಮುನೀಂದ್ರನ್+ಐವರು
ಸುದತಿ+ ಸಹಿತ್+ಅನಿಬರಿಗೆ+ ಬುದ್ಧಿಯ +ಹೇಳಿ+ ಹೊರವಂಟ

ಅಚ್ಚರಿ:
(೧) ದ್ರೌಪದಿಯನ್ನು ಸುದತಿ ಎಂದು ಕರೆದಿರುವುದು
(೨) ವ್ಯಾಸರ ಬುದ್ಧಿ ಮಾತು: ಬೆದರದಿರು ವಿಗಡಿಸುವ ವಿಷಯಾಸ್ಪದದೊಳೆಂದು; ಸರ್ವಾಂ
ಗದಲಿ ನಿನ್ನಯ ಮರೆಯದಿರು